ಆಸ್ಪ್ರೇಲಿಯನ್‌ ಓಪನ್‌: ಜೋಕೋ, ಹಾಲೆಪ್‌ ಗೆಲುವಿನ ಓಟ

By Web DeskFirst Published Jan 20, 2019, 9:21 AM IST
Highlights

ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್  4ನೇ ಸುತ್ತು ಪ್ರವೇಶಿಸಿದ್ದರೆ, ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಸಮಂತಾ ಸ್ಟೋಸರ್‌ ಜೋಡಿ ಗೆಲುವಿನ ಸಿಹಿ ಕಂಡಿದೆ. ಇಲ್ಲಿದೆ ಹೈಲೈಟ್ಸ್.
 

ಮೆಲ್ಬರ್ನ್(ಜ.20):  ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ ಕಳೆಗಟ್ಟುತ್ತಿದೆ. ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿಗೆ ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಹಾಗೂ ವಿಶ್ವ ನಂ.1, ರೊಮೇನಿಯಾದ ಸಿಮೋನಾ ಹಾಲೆಪ್‌ ಪ್ರವೇಶಿಸಿದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಪಡೆಯಲು ಈ ಇಬ್ಬರು ಆಟಗಾರ್ತಿಯರು ಸೆಣಸಲಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.1, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಸಹ 4ನೇ ಸುತ್ತಿಗೆ ಪ್ರವೇಶಿಸಿದ್ದು, ದಾಖಲೆಯ 7ನೇ ಆಸ್ಪ್ರೇಲಿಯನ್‌ ಓಪನ್‌ ಗೆಲ್ಲುವತ್ತ ದಿಟ್ಟಹೆಜ್ಜೆ ಇರಿಸಿದ್ದಾರೆ.

ಇದನ್ನೂ ಓದಿ: ರೋಜರ್ ಫೆಡರರ್ ಭೇಟಿಯಾದ ವಿರುಷ್ಕಾ ಜೋಡಿ!

ಪಂದ್ಯಾವಳಿಯ 6ನೇ ದಿನವಾದ ಶನಿವಾರ, ಹಾಲೆಪ್‌ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾರ ಹಿರಿಯ ಸಹೋದರಿ ವೀನಸ್‌ ವಿಲಿಯಮ್ಸ್‌ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಮೊದಲೆರಡು ಪಂದ್ಯಗಳಲ್ಲಿ ಸೋಲಿನ ದವಡೆಯಿಂದ ಪಾರಾಗಿದ್ದ ಹಾಲೆಪ್‌ ಮೊದಲ ಬಾರಿಗೆ ಪರಿಣಾಮಕಾರಿಯಾಗಿ ತೋರಿದರು.

ಉಕ್ರೇನ್‌ನ ಯುವ ಆಟಗಾರ್ತಿ ಡಯಾನ ಯಸೆತ್ರಮ್ಸಾ  ವಿರುದ್ಧ 6-2, 6-1 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದ ಸೆರೆನಾ, ತಾವು 8ನೇ ಆಸ್ಪ್ರೇಲಿಯನ್‌ ಓಪನ್‌ ಗೆಲ್ಲಲು ಪಣತೊಟ್ಟಿರುವುದಾಗಿ ತಿಳಿಸಿದರು. 3 ಪಂದ್ಯಗಳಿಂದ ಕೇವಲ 9 ಗೇಮ್‌ಗಳನ್ನು ಮಾತ್ರ ಸೋತಿರುವ ಸೆರೆನಾ ಪ್ರಚಂಡ ಲಯದಲ್ಲಿದ್ದು, ಹಾಲೆಪ್‌ ವಿರುದ್ಧದ ಕಾದಾಟ ಅಭಿಮಾನಿಗಳ ಕುತೂಹಲ ಕೆರಳಿಸಿದೆ. 3ನೇ ಶ್ರೇಯಾಂಕಿತೆ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ, 4ನೇ ಶ್ರೇಯಾಂಕಿತೆ ಜಪಾನಿನ ನೋಮಿ ಒಸಾಕ, 6ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೊಲೀನಾ ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿಗೆ ಪ್ರವೇಶಿಸಿರುವ ಪ್ರಮುಖರು.

ಇದನ್ನೂ ಓದಿ: ಪ್ಲೇಯರ್ಸ್ ಲಾಂಜ್‌ಗೆ ತೆರಳಲು ಫೆಡರರ್‌ಗೆ ಪ್ರವೇಶ ನಿರಾಕರಣೆ-ಮುಂದೇನಾಯ್ತು?

ಜೋಕೋಗೆ ಸುಲಭ ಜಯ: 14 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಹಾಗೂ ಅಗ್ರಶ್ರೇಯಾಂಕಿತ ಆಟಗಾರ ಜೋಕೋವಿಚ್‌, 3ನೇ ಸುತ್ತಿನಲ್ಲಿ ಕೆನಡಾದ ಡೆನಿಸ್‌ ಶಾಪೊವಲೋವ್‌ ವಿರುದ್ಧ 6-3, 6-4, 4-6, 6-0 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 4ನೇ ಸುತ್ತಿನಲ್ಲಿ ಜೋಕೋವಿಚ್‌ ಮತ್ತೊಬ್ಬ ಉದಯೋನ್ಮುಖ ಆಟಗಾರ ರಷ್ಯಾದ ಡಾನಿಲ್‌ ಮೆಡ್ವೆಡೆವ್‌ ವಿರುದ್ಧ ಸೆಣಸಲಿದ್ದಾರೆ. 4ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಆಸ್ಪ್ರೇಲಿಯಾದ ಅಲೆಕ್ಸ್‌ ಬೋಲ್ಟ್‌ ವಿರುದ್ಧ ಗೆದ್ದು ಮೊದಲ ಬಾರಿಗೆ 4ನೇ ಸುತ್ತಿಗೆ ಪ್ರವೇಶಿಸಿದರು.

ಇದನ್ನೂ ಓದಿ: ಮರ್ರೆ ವಿದಾಯ: ಕಣ್ಣೀರಿಡುತ್ತಾ ನಿವೃತ್ತಿ ಪ್ರಕಟಿಸಿದ ಮಾಜಿ ನಂ.1 ಟೆನಿಸಿಗ

ಮಿಶ್ರ ಡಬಲ್ಸ್‌: ಪೇಸ್‌ ಜೋಡಿ ಶುಭಾರಂಭ
ಪುರುಷರ ಡಬಲ್ಸ್‌ನ ಮೊದಲ ಸುತ್ತಲ್ಲೇ ಸೋಲುಂಡ ಲಿಯಾಂಡರ್‌ ಪೇಸ, ಮಿಶ್ರ ಡಬಲ್ಸ್‌ನಲ್ಲಿ ತಮ್ಮ ಜತೆಗಾರ್ತಿ ಆಸ್ಪ್ರೇಲಿಯಾದ ಸಮಂತಾ ಸ್ಟೋಸರ್‌ರೊಂದಿಗೆ 2ನೇ ಸುತ್ತಿಗೇರಿದ್ದಾರೆ. ಮೊದಲ ಸುತ್ತಿನಲ್ಲಿ ಪೇಸ್‌ ಜೋಡಿ ನೆದರ್‌ಲೆಂಡ್ಸ್‌ನ ಕೂಲ್‌ಹಾಫ್‌ ಹಾಗೂ ಚೆಕ್‌ ಗಣರಾಜ್ಯದ ಪೆಶ್ಕೆ ವಿರುದ್ಧ 6-4, 7-5 ಸೆಟ್‌ಗಳಲ್ಲಿ ಜಯಗಳಿಸಿತು. ಆದರೆ ರೋಹನ್‌ ಬೋಪಣ್ಣ ಹಾಗೂ ಚೀನಾದ ಯಾಂಗ್‌ ಜೋಡಿ ಮೊದಲ ಸುತ್ತಲ್ಲೇ ಪರಾಭವಗೊಂಡಿತು.
 

click me!