ಹರ್ಷಲ್ ಪಟೇಲ್, ರಾಹುಲ್ ಚಹರ್ ಮಿಂಚಿನ ದಾಳಿ: ಪಂಜಾಬ್‌ ತಂಡಕ್ಕೆ ಸಿಎಸ್‌ಕೆ ಸ್ಪರ್ಧಾತ್ಮಕ ಗುರಿ

By Naveen Kodase  |  First Published May 5, 2024, 5:21 PM IST

ಇಲ್ಲಿನ ಹಿಮಾಚಲ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡನೇ ಓವರ್‌ನಲ್ಲೇ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ರಹಾನೆ 9 ರನ್ ಗಳಿಸಿ ಆರ್ಶದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.


ಧರ್ಮಶಾಲಾ(ಮೇ.05): ಹರ್ಷಲ್ ಪಟೇಲ್, ರಾಹುಲ್ ಚಹರ್ ಮಾರಕ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿದ್ದು, ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. ಹರ್ಷಲ್ ಪಟೇಲ್ ಹಾಗೂ ರಾಹುಲ್ ಚಹರ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

ಇಲ್ಲಿನ ಹಿಮಾಚಲ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡನೇ ಓವರ್‌ನಲ್ಲೇ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ರಹಾನೆ 9 ರನ್ ಗಳಿಸಿ ಆರ್ಶದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಗಾಯಕ್ವಾಡ್ ಹಾಗೂ ಡ್ಯಾರೆಲ್ ಮಿಚೆಲ್ 32 ಎಸೆತಗಳಲ್ಲಿ 57 ರನ್‌ಗಳ ಜತೆಯಾಟವಾಡಿತು. ಗಾಯಕ್ವಾಡ್ 32 ರನ್ ಗಳಿಸಿ ರಾಹುಲ್‌ ಚಹರ್‌ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಕ್ರೀಸ್‌ಗಿಳಿದ ಶಿವಂ ದುಬೆ ಶೂನ್ಯ ಸುತ್ತಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಇನ್ನು ಡ್ಯಾರೆಲ್ ಮಿಚೆಲ್ 30 ರನ್ ಗಳಿಸಿ ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು.

Tap to resize

Latest Videos

ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ 17 ರನ್ ಗಳಿಸಿ ಸ್ಯಾಮ್ ಕರ್ರನ್‌ಗೆ ವಿಕೆಟ್ ಒಪ್ಪಿಸಿದರೆ, 11 ರನ್ ಗಳಿಸಿದ್ದ ಮಿಚೆಲ್ ಸ್ಯಾಂಟ್ನರ್ ಅವರಿಗೆ ರಾಹುಲ್ ಚಹರ್ ಪೆವಿಲಿಯನ್ ಹಾದಿ ತೋರಿಸಿದರು. ಶಾರ್ದೂಲ್ ಠಾಕೂರ್ 17 ರನ್ ಗಳಿಸಿ ಹರ್ಷಲ್ ಪಟೇಲ್‌ಗೆ ಎರಡನೇ ಬಲಿಯಾದರು. ಇನ್ನು ಇದರ ಬೆನ್ನಲ್ಲೇ ಎಂ ಎಸ್ ಧೋನಿಯನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಪಟೇಲ್ ಯಶಸ್ವಿಯಾದರು.

ಇನ್ನು ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರವೀಂದ್ರ ಜಡೇಜಾ 26 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 43 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಪಂಜಾಬ್ ಕಿಂಗ್ಸ್ ತಂಡದ ಪರ ಶಿಸ್ತುಬದ್ದ ದಾಳಿ ನಡೆಸಿದ ರಾಹುಲ್ ಚಹರ್ 23 ರನ್ ನೀಡಿ 3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 24 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಆರ್ಶದೀಪ್ ಸಿಂಗ್ 2 ಹಾಗೂ ನಾಯಕ ಸ್ಯಾಮ್ ಕರ್ರನ್ ಒಂದು ವಿಕೆಟ್ ಕಬಳಿಸಿದರು.
 

click me!