Asianet News Samvad: ದೇಶದಲ್ಲಿ ಕ್ರೀಡಾ ಕ್ರಾಂತಿಗೆ ಮೌಲ್ಯಗಳ ಶಿಕ್ಷಣ ಅಗತ್ಯವೆಂದ ಅಭಿನವ್ ಬಿಂದ್ರಾ

By Kannadaprabha NewsFirst Published Jul 3, 2022, 11:25 AM IST
Highlights

* ಕ್ರೀಡಾ ಕ್ಷೇತ್ರದಲ್ಲಿ ಮೌಲ್ಯಶಿಕ್ಷಣದ ಕುರಿತಂತೆ ಬೆಳಕು ಚೆಲ್ಲಿದ ಅಭಿನವ್ ಬಿಂದ್ರಾ
* ಅಭಿನವ್ ಬಿಂದ್ರಾ ದೇಶಕ್ಕೆ ಒಲಿಂಪಿಕ್ಸ್‌ ಕ್ರೀಡಾಕೂಟದ ವೈಯುಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಸಾಧಕ
*  ಏಷ್ಯಾನೆಟ್‌ ನ್ಯೂಸ್‌ ಜೊತೆಗಿನ ‘ಸಂವಾದ’ದಲ್ಲಿ ಮನಬಿಚ್ಚಿ ಮಾತನಾಡಿರುವ ಅಭಿನವ್ ಬಿಂದ್ರಾ

ಬೆಂಗಳೂರು(ಜು.03): ಒಲಿಂಪಿಕ್ಸ್‌ನ ವೈಯಕ್ತಿಕ ಕ್ರೀಡೆಗಳ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಪ್ರತಿಮ ಸಾಧಕ ಅಭಿನವ್‌ ಬಿಂದ್ರಾ (Abhinav Bindra). ಭಾರತವನ್ನು ಶೂಟಿಂಗ್‌ ಕ್ರೀಡೆಯಲ್ಲಿ ಜಾಗತಿಕ ಮಟ್ಟಕ್ಕೆ ಸ್ಪರ್ಧೆಯೊಡ್ಡುವಂತೆ ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ಈಗ ತೊಡಗಿಕೊಂಡಿದ್ದಾರೆ. ಏಷ್ಯಾನೆಟ್‌ ನ್ಯೂಸ್‌ ಜೊತೆಗಿನ ‘ಸಂವಾದ’ದಲ್ಲಿ ಮಾತನಾಡಿರುವ ಅವರು ಭಾರತದ ಕ್ರೀಡಾ ಕ್ಷೇತ್ರ ಹೇಗೆ ಬೆಳೆಯಬೇಕು ಎಂಬುದರ ಕುರಿತು ಬೆಳಕು ಚೆಲ್ಲಿದ್ದಾರೆ.

- ಕೆಲ ದಿನಗಳ ಹಿಂದಷ್ಟೇ ಭಾರತೀಯ ಕ್ರೀಡಾ ಶಿಕ್ಷಣದಲ್ಲಿ ಒಲಿಂಪಿಕ್‌ ಮೌಲ್ಯಗಳ ಶಿಕ್ಷಣ ಯೋಜನೆ (ಒವಿಇಎಸ್‌) ಪರಿಚಯಿಸಿದ್ದೀರಿ. ಭಾರತದ ಕ್ರೀಡಾ ಸಂಸ್ಕೃತಿಯ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ?

ಸ್ಪರ್ಧೆಯಲ್ಲಿ ಗೆಲ್ಲುವುದು ಸೋಲುವುದಕ್ಕಿಂತ ಹೆಚ್ಚಾಗಿ ಕ್ರೀಡೆಯು ಅನೇಕ ವಿಷಯಗಳನ್ನು ಕಲಿಸುವ ಶಕ್ತಿ ಹೊಂದಿದೆ. ಕ್ರೀಡೆಯು ಗೆಲ್ಲುವುದು ಮಾತ್ರವಲ್ಲ, ಸೋಲನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಕಲಿಸುತ್ತದೆ. ಕ್ರೀಡೆಯು ಬದ್ಧತೆ, ಪ್ರಾಮಾಣಿಕತೆ, ಸಮಾಜದಲ್ಲಿ ಹೇಗೆ ಬದುಕಬೇಕು, ಉತ್ತಮ ಆಲಿಸುವಿಕೆಯ ಲಾಭ ಹೀಗೆ ಎಲ್ಲವನ್ನೂ ಕಲಿಸುತ್ತದೆ. ಗುರಿಗಳನ್ನು ನಿಗದಿ ಮಾಡಿಕೊಳ್ಳುವುದು ಹೇಗೆ, ಆ ಗುರಿಗಳನ್ನು ತಲುಪುವುದು ಹೇಗೆ ಎನ್ನುವುದನ್ನೂ ತಿಳಿಸುತ್ತದೆ. ಕ್ರೀಡೆಯು ನಮ್ಮ ಯುವ ಸಮಾಜವನ್ನು ಉತ್ತಮ ರೀತಿಯಲ್ಲಿ ರೂಪಿಸಲು ದೊಡ್ಡ ಮಟ್ಟದಲ್ಲಿ ಸಹಕಾರಿ. ಎಲ್ಲರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ಒಲಿಂಪಿಯನ್ನರ ಮೌಲ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ಪಾಲಿಸುವುದರೊಂದಿಗೆ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ವಿಶ್ವದ ಶ್ರೀಮಂತ ರಾಷ್ಟ್ರಗಳು ಕ್ರೀಡೆಯಲ್ಲೂ ಪವರ್‌ ಹೌಸ್‌ಗಳಾಗಿವೆ. ಆ ದೇಶಗಳು ಆರ್ಥಿಕವಾಗಿ ಬೆಳೆಯುವಲ್ಲಿ ಕ್ರೀಡೆಯ ಪಾತ್ರವೂ ಇದೆ ಎಂದು ನಾನು ನಂಬುತ್ತೇನೆ. ಇದೇ ಉದ್ದೇಶದಿಂದ ಒಡಿಶಾದ 100 ಶಾಲೆಗಳಲ್ಲಿ ಒವಿಇಎಸ್‌ ಯೋಜನೆ ಪರಿಚಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಾಲಾ ಪಠ್ಯದಲ್ಲಿ ಈ ಯೋಜನೆಯನ್ನು ಸೇರ್ಪಡೆಗೊಳಿಸುವುದರಿಂದ 70 ಲಕ್ಷ ಮಕ್ಕಳಿಗೆ ಉಪಯೋಗವಾಗಲಿದೆ.

- ಮಕ್ಕಳಲ್ಲಿ ಸ್ಪರ್ಧೆ ವೈರತ್ವ ಮೂಡಿಸಬಾರದು ಎಂದು ನೀವು ಹೇಳುತ್ತಿರುತ್ತೀರಿ. ಕ್ರೀಡೆ ಹಾಗೂ ಅದರ ಮೌಲ್ಯಗಳ ಬಗ್ಗೆ ಮಕ್ಕಳು, ಪೋಷಕರಲ್ಲಿ ತಿಳುವಳಿಕೆ ಎಷ್ಟುಮುಖ್ಯ?

ಕ್ರೀಡೆಯಲ್ಲಿ ಗೆಲುವೊಂದೇ ಎಲ್ಲವೂ ಅಲ್ಲ. ಗೆಲುವು ಮುಖ್ಯ, ಆದರೆ ಅದಕ್ಕಾಗಿ ಮೌಲ್ಯಗಳನ್ನು ಮರೆಯಬಾರದು. ಒಲಿಂಪಿಕ್ಸ್‌ನಲ್ಲಿ 10000ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಗಿಳಿಯುತ್ತಾರೆ. ಆದರೆ ಕೇವಲ 300 ಮಂದಿ ಮಾತ್ರ ಚಿನ್ನದ ಪದಕಗಳೊಂದಿಗೆ ಮರಳುತ್ತಾರೆ. ಹಾಗಾದರೆ ಉಳಿದವರು ಪರಾಜಿತರು ಎಂದರ್ಥವಲ್ಲ. ಅವರು ಅನೇಕ ಅನುಭವಗಳನ್ನು, ಪಾಠಗಳನ್ನು ಕಲಿತು ಹಿಂದಿರುಗುತ್ತಾರೆ. ಗೆಲ್ಲುವ ಛಲ, ಸ್ಥೈರ್ಯ ಇರಬೇಕೇ ಹೊರತು, ಸಹ ಸ್ಪರ್ಧಿಗಳೊಂದಿಗೆ ವೈರತ್ವವಾಗಿ ಮಾರ್ಪಾಡಾಗಬಾರದು. ಪೋಷಕರು, ಮಕ್ಕಳು, ಮಾಧ್ಯಮಗಳು, ಅಭಿಮಾನಿಗಳು ಎಲ್ಲರೂ ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಿದೆ.

- ಕ್ರೀಡೆಯಲ್ಲಿ ಹೆಚ್ಚೆಚ್ಚು ಯುವಕರು ಪಾಲ್ಗೊಳ್ಳುವಂತೆ, ಕ್ರೀಡೆಯನ್ನು ಜೀವನದ ಭಾಗವಾಗಿ ರೂಪಿಸಿಕೊಳ್ಳುವಂತೆ ಉತ್ತೇಜಿಸುವ ಕೆಲಸವಾಗಬೇಕಿದೆಯೇ?

ಖಂಡಿತವಾಗಿಯೂ ಹೌದು. ಶೂಟಿಂಗ್‌ ಕ್ರೀಡೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಭಾರತ ಪದಕ ಗೆಲ್ಲಲಿಲ್ಲ. ಆದರೆ ದೇಶದಲ್ಲಿ ಹೊಸ ಹೊಸ ಶೂಟಿಂಗ್‌ ಪ್ರತಿಭೆಗಳು ಹೊರಹೊಮ್ಮುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ನಮ್ಮ ಶೂಟರ್‌ಗಳು ಪದಕ ಸಾಧನೆ ಮಾಡುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಸ್ಪರ್ಧಿಸಿದ ಶೂಟರ್‌ಗಳ ಜೊತೆಗೆ ಹೊಸ ತಂಡವೂ ಸಿದ್ಧಗೊಂಡಿದೆ. ಯಾವುದೇ ಕ್ರೀಡೆಯಾಗಲಿ ಏಕಾಏಕಿ ಲಕ್ಷಾಂತರ ಮಂದಿ ಆಡಲು ಶುರು ಮಾಡುವುದಿಲ್ಲ. ಕ್ರೀಡೆಯತ್ತ ಆಸಕ್ತಿ ತೋರಲು ಕೆಲ ಯೋಜನೆಗಳನ್ನು ರೂಪಿಸಬೇಕಿದೆ. ಮೊದಲು ಕ್ರೀಡೆಯನ್ನು ಹವ್ಯಾಸವಾಗಿ ಆರಂಭಿಸಲು ಪ್ರೋತ್ಸಾಹಿಸಬೇಕು. ಆಗಷ್ಟೇ ಕ್ರೀಡೆ ಬೆಳೆಯಲು ಸಾಧ್ಯ.

- ಭಾರತೀಯ ಶೂಟರ್‌ಗಳು ವಿಶ್ವ ಚಾಂಪಿಯನ್‌ಶಿಪ್‌, ವಿಶ್ವಕಪ್‌ಗಳಲ್ಲಿ ಗೆದ್ದರೂ ಒಲಿಂಪಿಕ್ಸ್‌ನಲ್ಲಿ ಒತ್ತಡ ನಿಭಾಯಿಸುವಲ್ಲಿ ಎಡವಿದರು. ನಮ್ಮ ಯುವ ಶೂಟರ್‌ಗಳಿಗೆ ನಿಮ್ಮ ಸಲಹೆಗಳೇನು?

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಾವು ಪದಕ ಗೆಲ್ಲಲಿಲ್ಲ ನಿಜ. ಆದರೆ ಪದಕದ ಹೊರತಾಗಿ ನಮ್ಮವರ ಪ್ರದರ್ಶನ ಹೇಗಿತ್ತು ಎನ್ನುವುದನ್ನು ನೋಡುವುದು ಮುಖ್ಯ. ಕಳೆದೊಂದು ದಶಕದಲ್ಲಿ ಭಾರತೀಯ ಶೂಟಿಂಗ್‌ ಹಲವು ಪಟ್ಟು ಅಭಿವೃದ್ಧಿ ಕಂಡಿದೆ. ಇದರಲ್ಲಿ ಎರಡನೇ ಮಾತಿಲ್ಲ. ಒಲಿಂಪಿಕ್ಸ್‌ ಎನ್ನುವುದು ಸಾಮಾನ್ಯ ಕ್ರೀಡಾಕೂಟವಲ್ಲ. ಅದೊಂದು ಬಹಳ ವಿಶೇಷವಾದ ಕ್ರೀಡಾಕೂಟ. ಅದಕ್ಕಾಗಿ ವಿಶೇಷ ತಯಾರಿಯ ಅಗತ್ಯವಿದೆ ಎನ್ನುವುದನ್ನು ಮರೆಯಬಾರದು. ಒತ್ತಡದೊಂದಿಗೆ ಮುನ್ನಡೆಯುವುದನ್ನು ಕರಗತ ಮಾಡಿಕೊಳ್ಳಬೇಕು. ಜೊತೆಗೆ ಕೌಶಲ್ಯ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ, ಹಿನ್ನಡೆಯಾದಾಗ ಸಾಧ್ಯವಾದಷ್ಟುಬೇಗ ಚೇತರಿಕೆ ಕಾಣುವುದರಲ್ಲಿ ಚುರುಕುತನ ಅಗತ್ಯ. ತಾಂತ್ರಿಕ, ವೈಜ್ಞಾನಿಕ ಜ್ಞಾನವೂ ಬಹಳ ಮುಖ್ಯ. ವಿಶ್ವ ಚಾಂಪಿಯನ್‌ಶಿಪ್‌, ವಿಶ್ವಕಪ್‌ಗಳಿಗೆ ಹೋಲಿಸಿದರೆ ಇಲ್ಲಿ ಸ್ಪರ್ಧಾಳುಗಳು ಕಡಿಮೆ ಆದರೆ ಸ್ಪರ್ಧೆಯ ತೀವ್ರತೆ ಹೆಚ್ಚು. ಹೀಗಾಗಿ ಶೇ.100ಕ್ಕಿಂತ ಹೆಚ್ಚಿನ ಪರಿಶ್ರಮ ಹಾಕಿದರೆ ಮಾತ್ರ ಯಶಸ್ಸು ಸಿಗಲಿದೆ.

- ಭಾರತ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದರೂ ಡೋಪಿಂಗ್‌ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇತ್ತೀಚೆಗೆ ಅಂಜು ಬಾಬಿ ಜಾಜ್‌ರ್‍ ವಿದೇಶಗಳಿಂದ ಕ್ರೀಡಾಪಟುಗಳು ನಿಷೇಧಿತ ಮದ್ದು ತರುತ್ತಿದ್ದಾರೆ ಎಂದು ಆರೋಪಿಸಿದ್ದರು. ನೀವೇನು ಹೇಳಿತ್ತೀರಿ?

ಇದೇ ಕಾರಣಕ್ಕೆ ಕ್ರೀಡಾಪಟುಗಳಲ್ಲಿ ಮೌಲ್ಯಗಳನ್ನು ಹೆಚ್ಚಿಸಬೇಕು ಎಂದು ನಾನು ಹೇಳುತ್ತಿರುವುದು. ಹೇಗಾದರೂ ಸರಿ ಗೆಲ್ಲಲೇಬೇಕು, ಗೆದ್ದರಷ್ಟೇ ಬೆಲೆ ಎಂದು ಒತ್ತಡ ಹೇರಿದಾಗ ಕ್ರೀಡಾಳುಗಳು ಡೋಪಿಂಗ್‌ ಮೊರೆ ಹೋಗಬಹುದು. ಹೀಗಾಗಿ ಕ್ರೀಡೆಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು, ಶಿಕ್ಷಣ ನೀಡುವುದು ಅಗತ್ಯ. ಕಳೆದ ಒಲಿಂಪಿಕ್ಸ್‌ನಲ್ಲಿ ನಾವು 7 ಪದಕ ಗೆದ್ದೆವು. ಆದರೆ ಅತಿಹೆಚ್ಚು ಡೋಪಿಂಗ್‌ ಪ್ರಕರಣಗಳ ಪಟ್ಟಿಯಲ್ಲಿ ಈಗಲೂ ನಾವು ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿದ್ದೇವೆ. ಇದು ಉತ್ತಮ ಬೆಳವಣಿಗೆಯಲ್ಲ.

ಡೋಪಿಂಗ್‌ ಪ್ರಕರಣದಲ್ಲಿ ಹೆಚ್ಚಳ, ಭಾರತ ತಲೆತಗ್ಗಿಸುವ ಸಂಗತಿ: ಅಭಿನವ್‌ ಬಿಂದ್ರಾ

- ನಿಮಗೆ ತಿಳಿದಿರುವಂತೆ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಶೂಟಿಂಗ್‌, ಆರ್ಚರಿ, ಕುಸ್ತಿ ಕ್ರೀಡೆಗಳನ್ನು ಕೈಬಿಡಲಾಗಿದೆ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಪ್ರತಿಭಟನೆಗೂ ಮನ್ನಣೆ ಸಿಕ್ಕಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದು ಬೇಸರದ ಸಂಗತಿ. ಆದರೆ ವಿಶ್ವ ಫೆಡರೇಶನ್‌ಗಳು ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕು. ಸೂಕ್ತ ವ್ಯಕ್ತಿಗಳೊಂದಿಗೆ ಚರ್ಚಿಸಬೇಕು. ಕ್ರೀಡೆಯು ಪ್ರಸ್ತುತತೆ ಉಳಿಸಿಕೊಂಡರೆ ಮಾತ್ರ ಉಳಿಯಲು ಸಾಧ್ಯ. ಕ್ರೀಡೆಯಲ್ಲಿ ವೃತ್ತಿಪರವಾಗಿ ಮುಂದುವರಿಯಲು ತಗಲುವ ವೆಚ್ಚದ ನಿರ್ವಹಣೆ, ಬೇಕಿರುವ ಸಾಮಗ್ರಿಗಳನ್ನು ಒದಗಿಸುವುದು, ಸೂಕ್ತ ಅಭ್ಯಾಸಕ್ಕೆ ವ್ಯವಸ್ಥೆ, ನಿರಂತರ ಸ್ಪರ್ಧೆಗಳ ಆಯೋಜನೆ ಆಗಬೇಕಿದೆ. ಇದೆಲ್ಲವನ್ನು ಆಯಾ ಕ್ರೀಡೆಗಳ ವಿಶ್ವ ಸಂಸ್ಥೆ ಇಲ್ಲವೇ ಫೆಡರೇಶನ್‌ಗಳು ನೋಡಿಕೊಳ್ಳಬೇಕಿದೆ. ಕೇವಲ ಇ-ಮೇಲ್‌ನಲ್ಲಿ ಪ್ರತಿಭಟನೆ ಸಲ್ಲಿಸಿದರೆ ಪ್ರಯೋಜನವಿಲ್ಲ.

- ಕ್ರೀಡಾಪಟುಗಳ ಮಾನಸಿಕ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದವರ ಪೈಕಿ ನೀವೂ ಒಬ್ಬರು. ಕ್ರೀಡಾಪಟುಗಳ ಮಾನಸಿಕ ಆರೋಗ್ಯ ಸುಧಾರಿಸಲು ಏನೇನು ಕೆಲಸಗಳು ಆಗಬೇಕಿದೆ?

ಈ ವಿಚಾರವೂ ಮತ್ತೆ ಮೌಲ್ಯಗಳತ್ತಲೇ ಬೆರಳು ಮಾಡುತ್ತದೆ. ಕ್ರೀಡಾಪಟುಗಳು ಒತ್ತಡ ನಿರ್ವಹಣೆ, ವೈಫಲ್ಯಗಳು ಎದುರಾದಾಗ ಹೇಗೆ ಎದುರಿಸಬೇಕು, ಗಾಯದಿಂದ ಚೇತರಿಕೆ ಕಾಣುವುದು ನಿಧಾನವಾದರೆ ಏನು ಮಾಡಬೇಕು ಎನ್ನುವ ಸೂಕ್ಷ್ಮ ವಿಷಯಗಳನ್ನು ಅರಿತು ಅಭ್ಯಾಸ ಮಾಡಿಕೊಳ್ಳಬೇಕು. ಮಾನಸಿಕ ಆರೋಗ್ಯ ಏರುಪೇರಾದರೆ ಕ್ರೀಡೆಯಲ್ಲಿ ಮುಂದುವರಿಯುವುದು ಕಷ್ಟಸಾಧ್ಯ. ಹೀಗಾಗಿ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

- ನಿವೃತ್ತಿಯ ಬಳಿಕವೂ ನೀವು ಕ್ರೀಡೆಯೊಂದಿಗೆ ಸಂಬಂಧ ಮುಂದುವರಿಸುತ್ತಿದ್ದೀರಿ. ನಿಮ್ಮ ಮುಂದಿನ ಯೋಜನೆಗಳೇನು?

ಕ್ರೀಡೆ ನನಗೆ ಎಲ್ಲವನ್ನೂ ನೀಡಿದೆ. ನಾನು ನನ್ನಿಂದ ಸಾಧ್ಯವಾಗಿದ್ದನ್ನು ಕ್ರೀಡೆಗೆ ಹಿಂದಿರುಗಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಒಲಿಂಪಿಕ್‌ ಯೋಜನೆಗಳಲ್ಲಿ ತೊಡಗಿಸಿಕೊಂಡು ಭಾರತ ಒಲಿಂಪಿಕ್ಸ್‌ನಲ್ಲಿ ಹೆಚ್ಚೆಚ್ಚು ಪದಕಗಳನ್ನು ಗೆಲ್ಲಲು ನನ್ನಿಂದ ಏನು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ.

click me!