ಏಷ್ಯನ್ ಗೇಮ್ಸ್: ಬೆಳ್ಳಿ ಗೆದ್ದ 15ರ ಪೋರ ವಿಹಾನ್ ಬದುಕಿನ ರೋಚಕ ಕಥೆ ನಿಮಗೆ ಗೊತ್ತಾ..?

By Web DeskFirst Published Aug 24, 2018, 5:33 PM IST
Highlights

ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಘಟಾನುಘಟಿ ಶೂಟರ್’ಗಳನ್ನು ಹಿಂದಿಕ್ಕಿ ಹತ್ತನೆಯ ಕ್ಲಾಸ್ ಪೋರ ರಜತ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಆದರೆ ಈ ಸಾಧನೆ ಅಷ್ಟು ಸುಲಭವಾಗಿ ಸಾಧ್ಯವಾಗಿದ್ದಲ್ಲ, ಶೂಟಿಂಗ್ ಅಭ್ಯಾನ ನಡೆಸಲು ಪ್ರತಿನಿತ್ಯ 200 ಕಿಲೋ ಮೀಟರ್ ಪ್ರಯಾಣ ಮಾಡುತ್ತಿದ್ದರಂತೆ ವಿಹಾನ್.

ನವದೆಹಲಿ[ಆ.24]: ಭಾರತೀಯ ಶೂಟಿಂಗ್’ನಲ್ಲಿ ಕಿರಿಯರ ಕ್ರಾಂತಿ ಆರಂಭವಾಗಿದೆ. ಇಂಡೋನೇಷ್ಯಾದ ಜಕಾರ್ತನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ 15 ವರ್ಷದ ಶಾರ್ದುಲ್ ವಿಹಾನ್ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್’ನಲ್ಲಿ ಬೆಳ್ಳಿ ಮುಡಿಗೇರಿಸಿಕೊಂಡಿದ್ದಾರೆ. ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಘಟಾನುಘಟಿ ಶೂಟರ್’ಗಳನ್ನು ಹಿಂದಿಕ್ಕಿ ಹತ್ತನೆಯ ಕ್ಲಾಸ್ ಪೋರ ರಜತ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಆದರೆ ಈ ಸಾಧನೆ ಅಷ್ಟು ಸುಲಭವಾಗಿ ಸಾಧ್ಯವಾಗಿದ್ದಲ್ಲ, ಶೂಟಿಂಗ್ ಅಭ್ಯಾನ ನಡೆಸಲು ಪ್ರತಿನಿತ್ಯ 200 ಕಿಲೋ ಮೀಟರ್ ಪ್ರಯಾಣ ಮಾಡುತ್ತಿದ್ದರಂತೆ ವಿಹಾನ್.

ದಿನ 200 ಕಿ.ಮೀ ಪ್ರಯಾಣ! 

ಮೀರತ್‌ನ ಮೋದಿಪುರಂನಲ್ಲಿರುವ ದಯಾವತಿ ಮೋದಿ ಅಕಾಡೆಮಿಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಶಾರ್ದೂಲ್, ಆರ್ಥಿಕವಾಗಿ ಮುಂದಿರುವ ಕುಟುಂಬದವರು. ಹೀಗಾಗಿ, ಅವರ ಅಭ್ಯಾಸಕ್ಕೆ ಬೇಕಿರುವ ಸೌಕರ್ಯಗಳಿಗೆ ಕೊರತೆ ಇಲ್ಲ. ಆದರೆ ಹಣವಿದ್ದ ಮಾತ್ರಕ್ಕೆ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ರೈಲಿನಲ್ಲಿ ಮೀರತ್‌ನಿಂದ ಹೊರಟು 94 ಕಿ.ಮೀ ದೂರದಲ್ಲಿರುವ ದೆಹಲಿಯ ಕರ್ಣಿ ಶೂಟಿಂಗ್ ರೇಂಜ್‌ಗೆ ಆಗಮಿಸುವ ಶಾರ್ದೂಲ್, ರಾತ್ರಿ 9ಕ್ಕೆ ಮನೆ ತಲುಪುತ್ತಾರೆ. ಅಭ್ಯಾಸಕ್ಕಾಗಿ ದಿನ ಹೆಚ್ಚೂ ಕಡಿಮೆ 200 ಕಿ.ಮೀ ಪ್ರಯಾಣ ಮಾಡುತ್ತಾರೆ. 15 ವರ್ಷದ ಯುವಕನೊಬ್ಬ ಇಷ್ಟೊಂದು ಪರಿಶ್ರಮ ವಹಿಸುತ್ತಾರೆ ಎನ್ನುವ ವಿಷಯ ಅಚ್ಚರಿಗೆ ಕಾರಣವಾಗಿದೆ. ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್‌ನಲ್ಲೂ ಅದೃಷ್ಟ ಪರೀಕ್ಷೆ ನಡೆಸಿದ್ದ ಶಾರ್ದೂಲ್, ಅಂತಿಮವಾಗಿ ಶೂಟಿಂಗನ್ನು ವೃತ್ತಿ ಬದುಕಾಗಿ ಆಯ್ಕೆ ಮಾಡಿಕೊಂಡರು. ಅವರ ಆಯ್ಕೆಗೆ ಫಲ ಸಿಕ್ಕಿದೆ.

ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಬೆಳ್ಳಿ ಗೆದ್ದು ಇತಿಹಾಸ ಬರೆದ 15ರ ಪೋರ

ಸರ್ಕಾರವಿಟ್ಟ ನಂಬಿಕೆ ಉಳಿಸಿಕೊಂಡ ವಿಹಾನ್! 

ಜುಲೈನಲ್ಲಿ ಕೇಂದ್ರ ಸರ್ಕಾರ ಟಾರ್ಗೆಟ್ ಒಲಿಂಪಿಕ್ ಪೋಡಿಯಂ(ಟಾಪ್ಸ್) ಯೋಜನೆಯಡಿ 9 ಶೂಟರ್‌ಗಳಿಗೆ ಒಟ್ಟು ₹50 ಲಕ್ಷ ನೆರವು ನೀಡಿತ್ತು. ಈ ಪೈಕಿ ಶಾರ್ದೂಲ್‌ಗೆ ಅತಿಹೆಚ್ಚು (₹8.6 ಲಕ್ಷ) ನೆರವು ದೊರೆತಿತ್ತು. ಅಭ್ಯಾಸಕ್ಕೆಂದು ವಿಹಾನ್ ಇಟಲಿಗೆ ತೆರಳಿದ್ದರು. ಕಳೆದ ವರ್ಷ ರಾಷ್ಟ್ರೀಯ ಶೂಟಿಂಗ್ ಕೂಟದಲ್ಲಿ 4 ಪದಕ ಗೆದ್ದು ಸರ್ಕಾರದ ಗಮನ ಸೆಳೆದಿದ್ದರು.
 

click me!