ಧಿನಿಧಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಸಾಧನೆ ಮಾಡಿದ ಸ್ಟಾರ್ ಈಜುಪಟು. 2019ರಲ್ಲಿ ಪದಕ ಬೇಟೆ ಆರಂಭಿಸಿದ್ದ ಧಿನಿಧಿ ಈ ವರೆಗೂ ರಾಜ್ಯ, ರಾಷ್ಟ್ರ ಮಟ್ಟದ ಕೂಟಗಳಲ್ಲಿ 100ಕ್ಕೂ ಹೆಚ್ಚು ಚಿನ್ನ ಸೇರಿ 130ಕ್ಕೂ ಹೆಚ್ಚು ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕೆಂಬುವುದು ಪ್ರತಿಯೊಬ್ಬ ಅಥ್ಲೀಟ್‌ಗಳ ಬಯಕೆ, ಕನಸು. ಲಕ್ಷಾಂತರ ಮಂದಿ ಒಲಿಂಪಿಕ್ಸ್ ಕನಸು ಕಂಡು, ಅದಕ್ಕಾಗಿ ಜೀವನಪೂರ್ತಿ ಪ್ರಯತ್ನಿಸಿದರೂ ಅದರಲ್ಲಿ ಯಶಸ್ಸು ಸಿಗುವುದು ಕೆಲವೇ ಮಂದಿಗೆ. ಆದರೆ ಬೆಂಗಳೂರಿನ 14 ವರ್ಷದ ಯುವ ಈಜುಪಟು ಧಿನಿಧಿ ದೇಸಿಂಘು ಅವರ ಪಾಲಿಗೆ ಒಲಿಂಪಿಕ್ಸ್ ಎಂಬ ಬಹುದೊಡ್ಡ ಭಾಗ್ಯ ಬಯಸಿದ್ದಕ್ಕಿಂತಲೂ ಬೇಗನೇ ಒಲಿದಿದೆ.
undefined
ಈಜುಕೊಳದಲ್ಲಿ ಹೊಸ ಚರಿತ್ರೆಯನ್ನೇ ಬರೆಯುತ್ತಿರುವ ಧಿನಿಧಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ ಕನಸು ಕಂಡವರು. ಅದಕ್ಕಾಗಿ ಕಠಿಣ ಪರಿಶ್ರಮದಲ್ಲಿದ್ದವರು. ಆದರೆ ತಮ್ಮ ಈಜುಕೊಳದಲ್ಲಿ ತಮ್ಮ ಅಮೋಘ ಸಾಧನೆಯಿಂದಾಗಿ ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.
ಡಾಲ್ಫಿನ್‌ನಂತೆಯೇ ಈಜುಕೊಳಕ್ಕೆ ನೆಗೆಯುವ ಧಿನಿಧಿ ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2028ರ ಒಲಿಂಪಿಕ್ಸ್‌ಗೆ ಆಯ್ಕೆಯಾಗಬೇಕೆಂಬ ದೃಢ ನಿರ್ಧಾರ ಮಾಡಿಕೊಂಡಿದ್ದ ಧಿನಿಧಿ, ಯುನಿವರ್ಸಾಲಿಟಿ ಕೋಟಾ(ಭಾರತಕ್ಕೆ ಸಿಕ್ಕ ಕೋಟಾ) ಅಡಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅವರು ಕರ್ನಾಟಕದ ಮತ್ತೋರ್ವ ಈಜುಪಟು ಶ್ರೀಹರಿ ನಟರಾಜ್ ಜೊತೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸಲ ಭಾರತದ ಅತಿ ಕಿರಿಯ ಹಾಗೂ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ 2ನೇ ಅತಿ ಕಿರಿಯ ಒಲಿಂಪಿಯನ್ ಎಂಬ ಖ್ಯಾತಿಯೂ ಧಿನಿಧಿಗಿದೆ.
ನಮೋಗೆ ಬಿಸಿಸಿಐ ಜರ್ಸಿ ಗಿಫ್ಟ್ ಓಕೆ, ನಂ.1 ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
‘2028ರ ಒಲಿಂಪಿಕ್ಸ್‌ಗಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದಳು. ಅವಳ ಪರಿಶ್ರಮದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೇ ಆಯ್ಕೆಯಾಗಿದ್ದಾರೆ. ಇದು ಸಂಪೂರ್ಣ ಅನಿರೀಕ್ಷಿತವಾದರೂ ಅವಶ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ’ ಎಂದು ಧಿನಿಧಿಯ ತಾಯಿ ಜೆಸಿತಾ ದೇಸಿಂಘು ‘ಕನ್ನಡಪ್ರಭ’ ಜೊತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅಪರೂಪದ ಪ್ರತಿಭೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿರುವ ಜೆಸಿತಾ ಹಾಗೂ ಗೂಗಲ್ ಸಂಸ್ಥೆಯ ಹಾರ್ಡ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ದೇಸಿಂಘು ಪಿಎಸ್ ದಂಪತಿ ಪುತ್ರಿ ಧಿನಿಧಿಗೆ ಬಾಲ್ಯದಲ್ಲೇ ಈಜಿನಲ್ಲಿ ಎಲ್ಲಿಲ್ಲದ ಉತ್ಸಾಹ. ಧಿನಿಧಿಯಲ್ಲಿ ಪ್ರತಿಭೆ ಕಂಡ ಪೋಷಕರು 8ನೇ ವರ್ಷದಲ್ಲೇ ಈಜು ಕಲಿಸುತ್ತಾರೆ.
ಒಲಂಪಿಕ್ ವಿಜೇತರು ಗೆದ್ದ ಪದಕವನ್ನು ಕಚ್ಚೋದ್ಯಾಕೆ?
2018ರಲ್ಲಿ ಈಜು ಕಲಿಕೆ ಆರಂಭಿಸಿದ ಧಿನಿಧಿ 2019ರಲ್ಲಿ ಮೈಸೂರಿನಲ್ಲಿ ನಡೆದ ಕಿರಿಯರ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 6 ಚಿನ್ನದ ಪದಕ ಕೊರಳಿಗೇರಿಸಿಕೊಂಡ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಆ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿನ್ನ ಗೆದ್ದಿರುವ ಧಿನಿಧಿ, ಒಲಿಂಪಿಕ್ಸ್‌ನಲ್ಲಿ 200 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
6 ಗಂಟೆ ಅಭ್ಯಾಸ: ಸದ್ಯ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧಿನಿಧಿ, ಡಾಲ್ಫಿನ್ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶಾಲೆ ನಡುವೆಯೂ ಪ್ರತಿ ದಿನ 5-6 ಗಂಟೆ ಈಜುಕೊಳದಲ್ಲೇ ಕಾಲ ಕಳೆಯುತ್ತಾರೆ. ಬೆಳಗ್ಗೆ 4-5 ಗಂಟೆಯಿಂದ 7 ಗಂಟೆ ವರೆಗೆ, ಸಂಜೆ 5ರಿಂದ 8 ಗಂಟೆ ವರೆಗೂ, ಕೋಚ್‌ಗಳಾದ ನಿಹಾರ್ ಅಮೀನ್ ಹಾಗೂ ಮಧುಕುಮಾರ್ ಜೊತೆ ಅಭ್ಯಾಸ ನಡೆಸುತ್ತಾರೆ.
100+ ಚಿನ್ನ, 130ಕ್ಕೂ ಹೆಚ್ಚು ಪದಕ ಸಾಧನೆ!
ಧಿನಿಧಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಸಾಧನೆ ಮಾಡಿದ ಸ್ಟಾರ್ ಈಜುಪಟು. 2019ರಲ್ಲಿ ಪದಕ ಬೇಟೆ ಆರಂಭಿಸಿದ್ದ ಧಿನಿಧಿ ಈ ವರೆಗೂ ರಾಜ್ಯ, ರಾಷ್ಟ್ರ ಮಟ್ಟದ ಕೂಟಗಳಲ್ಲಿ 100ಕ್ಕೂ ಹೆಚ್ಚು ಚಿನ್ನ ಸೇರಿ 130ಕ್ಕೂ ಹೆಚ್ಚು ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಕಳೆದ ವರ್ಷ ನ್ಯಾಷನಲ್ ಗೇಮ್ಸ್‌ನಲ್ಲಿ 7 ಚಿನ್ನ, ರಾಷ್ಟ್ರೀಯ ಹಿರಿಯ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 2022 ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 4 ಪದಕ ಸೇರಿ ತಾವು ಸ್ಪರ್ಧಿಸಿದ ಬಹುತೇಕ ಕೂಟಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. 2022ರ ಏಷ್ಯನ್ ಗೇಮ್ಸ್, ಈ ವರ್ಷ ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಇತ್ತೀಚೆಗಷ್ಟೇ ಸಿಂಗಾಪುರ ಕೂಟದಲ್ಲೂ ಕಂಚು ಗೆದ್ದಿದ್ದಾರೆ.
ಒಲಿಂಪಿಕ್ಸ್ ದೊಡ್ಡ ಗೌರವ
14 ವರ್ಷದಲ್ಲೇ ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುವುದು ನನ್ನ ಪಾಲಿಗೆ ದೊಡ್ಡ ಗೌರವ. ಇದು ನನ್ನ ಈಜು ಪಯಣದ ಮೊದಲ ಹೆಜ್ಜೆ ಎಂದು ಭಾವಿಸುತ್ತೇನೆ. - ಧಿನಿಧಿ ದೇಸಿಂಘು, ಈಜುಪಟು
ಪ್ರಯತ್ನಕ್ಕೆ ಸಿಕ್ಕ ಫಲ
ಧಿನಿಧಿಯ ಪ್ರಯತ್ನಕ್ಕೆ ಸಿಕ್ಕ ಫಲ ಇದು. 14 ವರ್ಷದಲ್ಲೇ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ಸಣ್ಣ ಸಾಧನೆಯೇನಲ್ಲ. 2 ವರ್ಷಗಳಿಂದಲೂ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದೇವೆ. ಒಲಿಂಪಿಕ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. - ಮಧುಕುಮಾರ್, ಕೋಚ್