ಮಾನವತೆಯ ಮಹಾ ಬೆಳಕು ಶ್ರೀ ಚೈತನ್ಯ ಮಹಾಪ್ರಭುಗಳು: ಹರಿನಾಮ ಸಂಕೀರ್ತನೆಯೇ ಮೋಕ್ಷಗಾಮಿ ಮಾರ್ಗ

ಶ್ರೀ ಚೈತನ್ಯರು ಜನರನ್ನು ಆಕರ್ಷಿಸಿ ಮರುಳು ಮಾಡುವ ಪವಾಡ ಪುರುಷರಾಗಲಿಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ಕೃಷ್ಣಭಕ್ತಿಯ ದೀಪವನ್ನು ಬೆಳಗಿಸುವ ಮೂಲಕ ಆಧ್ಯಾತ್ಮಿಕ ರಾಯಭಾರಿಯಾದರು. ಜನರು ತಾವಿರುವಲ್ಲಿಯೇ, ತಾವಿರುವಂತೆಯೇ ಭಗವಂತನನ್ನು ತಲುಪುವಭಕ್ತಿಯ ಪಥವನ್ನು ತೋರಿದರು. ಹೀಗೆ ಮಾಡುವಲ್ಲಿ ಅವರೊಳಗೆ ಯಾವುದೇ ಕೃತ್ರಿಮತೆ ಇರಲಿಲ್ಲ.


ಡಾ। ರೋಹಿಣಾಕ್ಷ ಶಿರ್ಲಾಲು, ಸಹಾಯಕ ಪ್ರಾಧ್ಯಾಪಕರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ಭಕ್ತಿಮಾರ್ಗದ ಮೂಲಕ ಇಡೀ ಭರತಖಂಡವನ್ನು ಬೆಳಗಿದ ಸಾರ್ವಕಾಲಿಕ ಶ್ರೇಷ್ಠ ಸಂತರೆಂದರೆ ಶ್ರೀ ಚೈತನ್ಯ ಮಹಾಪ್ರಭುಗಳು. ಬಂಗಾಳದ ನೆಲದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಹಚ್ಚಿದ ಭಕ್ತಿಯ ಆಂದೋಲನದ ದೀಪವು ಮುಂದೆ ಇಡೀ ಭಾರತಕ್ಕೆ ಬೆಳಕಾಯಿತು. ನವದ್ವೀಪದಿಂದ ಆರಂಭಗೊಂಡ ಸಾಮೂಹಿಕ ನಾಮಸಂಕೀರ್ತನೆಯ ಪ್ರಖರ ಬೆಳಕು ಲೋಕವನ್ನೆಲ್ಲಾ ಪಸರಿಸಿತು. ವಿಶ್ವಂಭರನೆಂಬ ಆಧ್ಯಾತ್ಮಿಕ ಸಾಧಕನೋರ್ವ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಸಮಗ್ರ ಮಾನವತೆಯನ್ನು ಬೆಳಗಿ, ಎಲ್ಲ ಕಾಲಕ್ಕೂ ಆತ್ಮೋದ್ಧಾರದ ಸರಳ ದಾರಿ ಶುದ್ಧಭಕ್ತಿ ಎನ್ನುವುದನ್ನು ಎಲ್ಲರಿಗೆ ತೋರಿಸಿಕೊಟ್ಟನು. ಶ್ರೀ ಚೈತನ್ಯರು ಕಲಿಯುಗದಲ್ಲಿ ಹರಿನಾಮ ಸಂಕೀರ್ತನೆಯೇ ಮೋಕ್ಷಗಾಮಿ ಮಾರ್ಗವೆಂದು ತಿಳಿಸಿ, ಅದನ್ನು ಭಾರತದಾದ್ಯಂತ ಪ್ರಚುರಪಡಿಸಿದರು. ಭಕ್ತಿಗೆ ಯಾವುದೇ ಭೇದವಿಲ್ಲ ಎನ್ನುವುದನ್ನು ಪ್ರಾಯೋಗಿಕ ರೂಪದಲ್ಲಿ ಸಾಧಿಸಿ ತೋರಿಸಿದರು. 

Latest Videos

ಶ್ರೀ ಚೈತನ್ಯರ ಜೀವನಯಾತ್ರೆಯನ್ನು ಗಾಢವಾಗಿ ಅವಲೋಕಿಸಿದರೆ ಅದು ಪತಿತರನ್ನೂ ಸಹ ಉದ್ಧರಿಸಿದ, ಅಮಂಗಳಕರ ಎಂದು ದೂರವಿಟ್ಟವರಿಗೂ ಕೂಡ ಆತ್ಮೋದ್ಧಾರದ ದಾರಿ ತೋರಿದ ಮುಕ್ತಿಯಾತ್ರೆಯೇ ಆಗಿದೆ. ಹಾಗಾಗಿ ಶ್ರೀ ಚೈತನ್ಯರೆಂದರೆ ಭಕ್ತಿಮಾರ್ಗದ ಮೇರು ದಾರ್ಶನಿಕ ವ್ಯಕ್ತಿತ್ವ ಎನ್ನುವುದರಲ್ಲಿ ಎರಡು ಮಾತಿಲ್ಲ! ಶ್ರೀ ಚೈತನ್ಯರನ್ನು, 15-16ನೇ ಶತಮಾನದ ತೀವ್ರ ವಿಪ್ಲವದ ಕಾಲದಲ್ಲಿ, ಭಾರತಕ್ಕೆ ಚೈತನ್ಯವನ್ನು ತುಂಬಿದ ಚೇತನ ಎಂದರೆ ಅತಿಶಯೋಕ್ತಿಯಲ್ಲ! ಹರೇಕೃಷ್ಣ ಮಹಾಮಂತ್ರದ ಮೂಲಕಸಾಮಾನ್ಯ ಭಕ್ತರೂ ಭಗವಂತನನ್ನು ತಲುಪಲು ಸಾಧ್ಯ ಎಂಬ ಹೊಸ ದಾರಿಯೊಂದನ್ನು ಅವರು ತೋರಿದರು. ಭಕ್ತರ ಪಾಲಿಗೆ ಶ್ರೀ ಚೈತನ್ಯರು ಭಗವಾನ್ ಶ್ರೀ ಕೃಷ್ಣನ ಅವತಾರವೇ. ಆದರೆ ಶ್ರೀ ಚೈತನ್ಯರ ಜೀವನವನ್ನು ನೋಡಿದರೆ, ಅವರು ಶ್ರೀ ಕೃಷ್ಣನನ್ನು ಉತ್ಕಟವಾಗಿ ಹಂಬಲಿಸುವ ಭಕ್ತ! 

ಅರಸೀಬೀದಿಯ ಅರಸಿ ಅಕ್ಕಾದೇವಿಯ ‘ಬಂಗಾರ’ದ ಕಥೆಗಳು: ಚೆಲುವೆ, ಯೋಧೆ ಆಗಿದ್ದ ದೇವಿ!

ಹೀಗಾಗಿ ಶ್ರೀ ಚೈತನ್ಯರೆಂದರೆ ಭಕ್ತ ಮತ್ತು ಭಗವಂತ ಎನ್ನುವ ಸಾಮಾನ್ಯ ಗ್ರಹಿಕೆಯನ್ನು ಮೀರಿದ ಆದರೆ ಎರಡನ್ನೂ ಒಳಗೊಂಡ ಒಂದು ಮಹಾ ಬೆಳಕು! ಬಾಲ್ಯಕಾಲದ ಬಾಲಲೀಲೆ, ತುಂಟಾಟದ ಆಚೆಗೆ ಮಿಂಚಿದ್ದು ಅಲೌಕಿಕತೆಯ ಛಾಯೆಯೇ. ಈ ಲೀಲೆಯೊಳಗೆ ಚಿಗುರಿ, ಮುಂದೆ ಆಧ್ಯಾತ್ಮ ವಟವೃಕ್ಷ ಸದೃಶವಾದವರು ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ತೋರಿದ ಸಂಕೀರ್ತನೆಯ ಮಾರ್ಗ ಸಾಮೂಹಿಕತೆಯದ್ದು. ಆ ಕಾಲದ ಸಾಮಾಜಿಕ ಕಟ್ಟುಪಾಡುಗಳಲ್ಲಿ ಜಾತಿಯೂ ಸೇರಿದಂತೆ ಅನೇಕ ಸಂಗತಿಗಳು ಇಂತಹ ಸಾಮೂಹಿಕತೆಯನ್ನು ಮರೆಯಿಸಿದ್ದವು. ಆದರೆ ಸಾಮೂಹಿಕತೆಯು ಸಂಕುಚಿತತೆಗಳನ್ನು, ಮೇಲರಿಮೆ - ಕೀಳರಿಮೆಗಳನ್ನು ನಿವಾರಿಸಬಲ್ಲ ಸಿದ್ಧೌಷಧ. ಶ್ರೀ ಚೈತನ್ಯರು ಇದೇ ಔಷಧವನ್ನು ಶ್ರೀ ಹರಿನಾಮ ಸಂಕೀರ್ತನೆಯ ಮೂಲಕ ಸಮಾಜದ ಸರ್ವರಿಗೂ ನೀಡಿದರು. ಅದು ಸಮಾಜದಲ್ಲಿ ಸ್ವೀಕಾರವೂ ಆಯಿತು. ಸಂಪೂರ್ಣ ಭಕ್ತಿಮಾರ್ಗದಲ್ಲೇ ಪ್ರಜ್ವಲಿಸಿದ ಚೈತನ್ಯರ ಬದುಕು, ಭಕ್ತಿ ಮತ್ತು ಆಧ್ಯಾತ್ಮದ ಹೊಸ ಮಾರ್ಗವನ್ನೇ ಆರಂಭಿಸಿತು.

ಕೃಷ್ಣಪ್ರಜ್ಞೆಯನ್ನು ಜಾಗೃತಿ: ಆಧ್ಯಾತ್ಮಿಕತೆಯ ತವರು ನೆಲದಂತಿರುವ ಭಾರತಕ್ಕೆ ತನ್ನ ನಿಜಸತ್ವದ ಸ್ಮತಿ ನಷ್ಟವಾಗಿ ಲೌಕಿಕತೆಯಲ್ಲೇ ಮೆರೆಯುತ್ತಿದ್ದಾಗ, ಶ್ರೀ ಚೈತನ್ಯರು ಭಾರತದಾದ್ಯಂತ ಸಂಚರಿಸಿ ಜನತೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಾಗೃತಿಗೊಳಿಸುವ ಮಹಾನ್ ಕಾರ್ಯವನ್ನು ಕೈಗೊಂಡರು. ದೇಶ, ಭಾಷೆ, ಜಾತಿ, ವರ್ಗ, ವರ್ಣ, ಧರ್ಮದ ಯಾವ ಗಡಿರೇಖೆಗಳೂ ಇಲ್ಲದೇ, ಮುಕ್ತವಾದ ಆಧ್ಯಾತ್ಮದ ಬೆಳಕು ಎಲ್ಲೆಡೆಯೂ ಸಂಚರಿಸುವಂತೆ ಮಾಡಿದರು. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ, ಉಚ್ಛ-ನೀಚ, ಬಡವ-ಶ್ರೀಮಂತರೆನ್ನುವ ಯಾವ ಸಂಕುಚಿತತೆಗಳೂ ಇಲ್ಲದೇ, ಭಗವಂತನ ನಾಮಸಂಕೀರ್ತನೆಯ ಮೂಲಕ ಜನರನ್ನು ಬೆಸೆದರು. ಬಹುಮುಖಿ ವ್ಯಕ್ತಿತ್ವದ ಚೈತನ್ಯರ ಆಧ್ಯಾತ್ಮಿಕ ಸಾಧನೆಯಷ್ಟೇ ಅಲ್ಲ, ಸಾಮಾಜಿಕ ಪ್ರಜ್ಞೆಯೂ ಅಷ್ಟೇ ಸಂವೇದನಾಶೀಲವಾದುದು. 

ಶ್ರೀಕೃಷ್ಣನೊಂದಿಗೆ ಬೆಸೆಯುವ ಭಕ್ತಿಯ ಮೇರುಭಕ್ತನಾಗಿ, ಸಾಧಕರಿಗೆ ದಾರಿ ತೋರುವ ಗುರುವಾಗಿ, ಭಕ್ತಿಯ ಚಿಂತನೆಗೆ ವ್ಯಾಖ್ಯಾನ ಬರೆದ ದಾರ್ಶನಿಕನಾಗಿ ಮಾತ್ರವಲ್ಲ, ಸಮಾಜದಲ್ಲಿ ಜನ್ಮಕಾರಣವಾಗಿ ಬಂದ ಜಾತಿಯ ಹೆಸರಿನಲ್ಲಿ ತುಳಿಯಲ್ಪಟ್ಟ, ಸ್ಪರ್ಶಕ್ಕೆ ಮೈಲಿಗೆಯಾಗಿ ದೂರವೇ ಉಳಿದಂತಿದ್ದ ಸಮಾಜದ ಆರ್ತರ ಆರ್ತತೆಗೆ ಕಿವಿಯಾಗಿ, ಧ್ವನಿಯಾಗಿ ಕೃಷ್ಣನಾಮದಲ್ಲಿ ಯಾರೂ ಮೈಲಿಗೆಯಲ್ಲ, ಎಲ್ಲರೂ ಭಗವಂತನ ಸಮೀಪವರ್ತಿಗಳೇ ಎನ್ನುವ ಸಮಾಜಮುಖಿ ದರ್ಶನದೊಂದಿಗೆ ಸಮಾಜಕ್ಕೆ ಚೈತನ್ಯವನ್ನು ತುಂಬುವಲ್ಲಿ ಶ್ರೀ ಚೈತನ್ಯರ ಪಾತ್ರ ಅಪಾರವಾದುದು. ಚೈತನ್ಯರು, ಹರಿನಾಮ ಸಂಕೀರ್ತನೆಗೆ ಶ್ರೇಣಿಯಾಧರಿತ ಜಾತಿಯ ವ್ಯವಸ್ಥೆಯ ಯಾವ ಹಂಗೂ ಇಲ್ಲದ ಒಂದು ಮುಕ್ತ ಮಾರ್ಗವನ್ನು ಅವಿಶ್ರಾಂತವಾಗಿ ಪ್ರಚುರ ಪಡಿಸಿ, ಭಗವಂತನನ್ನು ತಲುಪುವ ದಾರಿಗೆ ಅಡ್ಡವಾಗಿ ಸಮಾಜವು ತನ್ನ ಅಜ್ಞಾನದಿಂದ ತಾನೇ ಹಾಕಿಕೊಂಡಿದ್ದ ಬೇಲಿಗಳನ್ನು ಕಿತ್ತುಹಾಕಿ, ಭಕ್ತಿಯೊಂದೇ ಪಥವೆನ್ನುವುದನ್ನು ತೋರಿದರು. 

ಇದು ಆಧ್ಯಾತ್ಮಿಕ ಪರಂಪರೆಯಿಂದ ಹೊರಗುಳಿದಿದ್ದ ಎಲ್ಲರನ್ನೂ ಶ್ರೀಕೃಷ್ಣ ನಾಮಸಂಕೀರ್ತನೆಯ ಮೂಲಕ ಒಳಗೊಳ್ಳುವ ದಾರಿಯಾಯಿತು. ಶ್ರೀ ಚೈತನ್ಯ ಮಹಾಪ್ರಭುಗಳು ಅಚಿಂತ್ಯಭೇದಾಭೇದ ತತ್ವವನ್ನು ರೂಪಿಸಿದ್ದಾರೆ. ಭಗವಂತನ ಪವಿತ್ರನಾಮ ಸಂಕೀರ್ತನೆಯಿಂದ ನಾವು ಭಗವಂತನ ಸಾನ್ನಿಧ್ಯವನ್ನು ಪಡೆಯಬಹುದು. ಭಗವಂತನ ನಾಮ ಎನ್ನುವುದು ಆತನ ಶಬ್ದಾವತಾರವಾಗಿದೆ. ಆತನ ಪವಿತ್ರ ಸ್ವರೂಪಕ್ಕೂ, ಪವಿತ್ರವಾದ ಹೆಸರಿಗೂ ಯಾವುದೇ ಭೇದವಿಲ್ಲ. ಅವನ ನಾಮ ಸಂಕೀರ್ತನೆಯ ಶಬ್ದತರಂಗವು ಅವನದ್ದೇ ಆಗಿ, ಅವನೇ ಆಗಿರುತ್ತಾನೆ ಎನ್ನುವ ತತ್ವವನ್ನೇ ತಮ್ಮ ಜೀವನಯಾತ್ರೆಯಲ್ಲಿ ಪ್ರಚಾರ ಮಾಡುವ ಮೂಲಕ ಭಗವಂತನ ಆರಾಧನೆಗೆ ಒಂದು ಮುಕ್ತ ಮಾರ್ಗವಿದೆ ಎನ್ನುವುದನ್ನು ತೋರಿದರು.

ಪ್ರತಿಯೊಬ್ಬರ ಹೃದಯದಲ್ಲೂ ಕೃಷ್ಣಭಕ್ತಿ ದೀಪ: ಶ್ರೀ ಚೈತನ್ಯರು ಜನರನ್ನು ಆಕರ್ಷಿಸಿ ಮರುಳು ಮಾಡುವ ಪವಾಡ ಪುರುಷರಾಗಲಿಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ಕೃಷ್ಣಭಕ್ತಿಯ ದೀಪವನ್ನು ಬೆಳಗಿಸುವ ಮೂಲಕ ಆಧ್ಯಾತ್ಮಿಕ ರಾಯಭಾರಿಯಾದರು. ಜನರು ತಾವಿರುವಲ್ಲಿಯೇ, ತಾವಿರುವಂತೆಯೇ ಭಗವಂತನನ್ನು ತಲುಪುವಭಕ್ತಿಯ ಪಥವನ್ನು ತೋರಿದರು. ಹೀಗೆ ಮಾಡುವಲ್ಲಿ ಅವರೊಳಗೆ ಯಾವುದೇ ಕೃತ್ರಿಮತೆಇರಲಿಲ್ಲ. ಭಕ್ತಿ ಎನ್ನುವ ಹೃದಯದ ಭಾಷೆಯನ್ನು, ಭಾವನೆಯನ್ನು ತಟ್ಟಿ ಜಾಗೃತಗೊಳಿಸಿದ ಅವರುಭಕ್ತಿಪಥದ ಅಗ್ರಗಣ್ಯ ಯಾತ್ರಿಕರಾದರು. ಮೌಢ್ಯಕ್ಕೆ, ಮಾಯಾವಾದಕ್ಕೆ ಬೀಳದಂತೆ ದಾರ್ಶನಿಕ ಎಚ್ಚರವನ್ನೂ ಬೋಧಿಸಿದರು. ತಾವು ಸ್ವತಃ ಭಕ್ತಿಯ ಉತ್ತುಂಗ ಶಿಖರದ ಸ್ವಾದಸುಖವನ್ನು ಅನುಭವಿಸುತ್ತಲೇ, ಅದೇ ಸುಖವನ್ನು ತಮ್ಮ ಜತೆಗೆ ಬಂದವರಿಗೂ ಪರಿಚಯಿಸಿದರು. ತಾವು ನಡೆದೆಡೆಯಲ್ಲೆಲ್ಲಾ ಭಕ್ತಿಯ ರಸದೌತಣವನ್ನು ಉಣಬಡಿಸಿದರು.

ಜನಸಾಮಾನ್ಯರನ್ನು ಭಕ್ತಿಯ ಮಾರ್ಗಕ್ಕೆ ಸೆಳೆದಂತೆ, ಪಂಡಿತರು-ವಿದ್ವಜ್ಜನರನ್ನೂ ಕೂಡ ಸಹಪಥಿಕರನ್ನಾಗಿಸಿಕೊಂಡರು. ಭಕ್ತಿಗೆ ಮಣಿದವರು ಒಂದೆಡೆಯಾದರೆ, ಚೈತನ್ಯರ ತರ್ಕಕ್ಕೆ ತಲೆಬಾಗಿದವರು ಇನ್ನೊಂದೆಡೆ. ಹೀಗೆ ಸರಳವೂ, ಆದರೆ ಅಷ್ಟೇ ತಾರ್ಕಿಕವೂ ಆದ ಈ ಯಾತ್ರೆಯು ಭಾರತದ ಉತ್ತರದಿಂದ ದಕ್ಷಿಣದವರೆಗೂ ಮತ್ತು ಪೂರ್ವದಿಂದ ಪಶ್ಚಿಮದವರೆಗೂ ಸಾಗಿ, ಮಧ್ಯಕಾಲೀನ ಭಾರತದ ಮಾನವ ಸಮಾಜದ ಆತ್ಮೋದ್ಧಾರದ ಯಾತ್ರೆಯಾಯಿತು. ಸಮಾಜದಲ್ಲಿ ಬೆಸೆಯುವ ವ್ಯವಸ್ಥೆಗಳು ದುರ್ಬಲವಾಗಿ ಹೆಚ್ಚುಕಡಿಮೆ ನಿಷ್ಕ್ರಿಯಗೊಂಡಿದ್ದ ಕಾಲಕ್ಕೆ ಭಕ್ತಿಪಥದ ಹರಿನಾಮ ಸಂಕೀರ್ತನೆಯು ಬೆಸುಗೆಯ ಸೂತ್ರವಾಯಿತು. ಶ್ರೀ ಚೈತನ್ಯರು ಅದರ ಸೂತ್ರದಾರರಾದರು. ಅವರು ಸಂಘರ್ಷದ ದಾರಿ ತುಳಿಯಲಿಲ್ಲ, ಕ್ರಾಂತಿಯ ಮಾತುಗಳನ್ನಾಡಲಿಲ್ಲ. ಆದರೆ ಅವರ ಕೃಷ್ಣಭಕ್ತಿ ಕಾರ್ಯವೇ ಒಂದು ಕ್ರಾಂತಿಯಾಯಿತು.ಅವರದ್ದು ಹೃದಯವನ್ನು ಹರಿನಾಮದಿಂದಲೇ ಆದ್ರಗೊಳ್ಳುವಂತೆ ಮಾಡಿದ ಸಂವೇದನಾಶೀಲ ನಡೆ. ಅವರ ಈ ಯಾತ್ರೆಯು ಪ್ರಜಾಪೀಡಕ ಜಗಾಯಿ-ಮಾಧಾಯಿಯರನ್ನು ವಿವೇಕದ ದಾರಿ ತೋರಿ ವಿನೀತರನ್ನಾಗಿಸಿತು,ಸಾಕಾರ ಮಲ್ಲಿಕನ ಕೀಳರಿಮೆಯನ್ನು ಕಳೆದು ಸನಾತನ ಗೋಸ್ವಾಮಿಯನ್ನಾಗಿಸಿ, ಅವನಿಗೆ ಆಧ್ಯಾತ್ಮದ ಉತ್ತುಂಗದ ದರ್ಶನವಾಗುವಂತೆ ಮಾಡಿತು!

ಬೆಂಗಳೂರಿಗೆ ಸಡ್ಡು: ಹೊಸೂರಲ್ಲಿ ತಮಿಳುನಾಡು ಹೊಸ ಐಟಿ ಪಾರ್ಕ್‌

ಪುಸ್ತಕ ರೂಪ ಪಡೆದ ಶ್ರೀ ಚೈತನ್ಯರ ಜೀವನ: ಇಂತಹ ಮಹಾನ್ ಚೇತನವಾದ ಶ್ರೀ ಚೈತನ್ಯ ಮಹಾಪ್ರಭುಗಳ ಬದುಕನ್ನೂ, ಅವರ ಆಧ್ಯಾತ್ಮಿಕ ಸಾಧನೆಯನ್ನೂ ಪರಿಚಯಿಸಿಕೊಡುವ ಒಂದು ಬೃಹತ್ ಕಾದಂಬರಿಯು ಕನ್ನಡದಲ್ಲಿ ಈಗ ಪ್ರಕಟವಾಗಿದೆ. ಡಾ। ನಾ.ಮೊಗಸಾಲೆಯವರು ಬರೆದಿರುವ ವಿಶ್ವಂಭರ ಕಾದಂಬರಿಯು ಶ್ರೀ ಚೈತನ್ಯರ ಜೀವನ ದರ್ಶನದ ಸಾರ್ಥಕ ನಿರೂಪಣೆಯಾಗಿದೆ. ಈ ಕಾದಂಬರಿಯು ಚೈತನ್ಯ ಮಹಾಪ್ರಭುಗಳ ಸಾರ್ವಕಾಲಿಕ ಬೋಧನೆಗಳನ್ನು ಅತ್ಯಂತ ಸುಂದರವಾಗಿ ಕಥನ ರೂಪದಲ್ಲಿ ಕಟ್ಟಿಕೊಟ್ಟಿದೆ. ವಿಶ್ವಂಭರನಾಗಿ ಜನಿಸಿ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಪರಿಸಮಾಪ್ತಿಯನ್ನು ಹೊಂದುವವರೆಗಿನ ಸಮಸ್ತ ಕಥನವೂ ಹೃದಯಂಗಮವಾಗಿ ಈ ಕಾದಂಬರಿಯಲ್ಲಿ ವರ್ಣಿಸಲ್ಪಟ್ಟಿದೆ. ಸುಮಾರು 580 ಪುಟಗಳ ಈ ಬೃಹತ್ ಕಾದಂಬರಿಯು, ಕಾದಂಬರಿಯ ಗಾತ್ರದಲ್ಲಿ, ಅಕ್ಷರಗಳಲ್ಲಿ ಹಿಡಿದಿಡಲಾಗದಷ್ಟು ಬೃಹತ್ ವ್ಯಕ್ತಿತ್ವವನ್ನು ಕಿಂಚಿತ್ತೂ ಚ್ಯುತಿಯಾಗದಂತೆ ನಿರೂಪಿಸಿರುವುದು ಕನ್ನಡದ ಓದುಗರಿಗೆ ಮಹಾನ್ ಆಧ್ಯಾತ್ಮಿಕ ಸಾಧಕನನ್ನು ಅರಿಯುವ ಒಂದು ಯೋಗ್ಯ ಭೂಮಿಕೆಯನ್ನು ಒದಗಿಸುತ್ತಿದೆ. ಕೃಷ್ಣಭಕ್ತಿಯ ಪಥದಲ್ಲಿ ಸಾಗುತ್ತಾಮಾನವತೆಯನ್ನು ಬೆಳಗಿದ ಶ್ರೀ ಚೈತನ್ಯರ ಜೀವನ ಮತ್ತು ಬೋಧನೆಗಳು ನಮ್ಮೆಲ್ಲರ ಭಕ್ತಿಯ ಪಥಗಳಲ್ಲೂ ಬೆಳಕನ್ನು ಚೆಲ್ಲಲಿ!

click me!