ಕಾಂತಾರ ರಿಷಬ್ ಶೆಟ್ಟಿ ಸೇರಿ ನೂರಾರು ಕಲಾವಿದರ 'ರಂಗಸೌರಭ' ನಮ್ಮ ನಾಟಕ ಪ್ರೀತಿಯ ಕೂಸು: ಪ್ರಮೋದ್‌ ಶೆಟ್ಟಿ

25 ವರ್ಷಗಳನ್ನು ಪೂರೈಸಿದ ರಂಗಸೌರಭ ನಾಟಕ ತಂಡದ ಬೆಳ್ಳಿ ಹಬ್ಬದ ಸಂಭ್ರಮದ ಕಥೆ ಇದು. ರಿಷಬ್ ಶೆಟ್ಟಿಯವರಂತಹ ಕಲಾವಿದರನ್ನು ಬೆಳಕಿಗೆ ತಂದ ಈ ತಂಡ, ರಂಗಭೂಮಿಯ ಮಹತ್ವವನ್ನು ಸಾರುತ್ತದೆ.


ಅದು 99-2000 ಸಮಯ. ಪಿಯುಸಿ ಓದ್ತಿದ್ದ ಮಕ್ಕಳೆಲ್ಲ ಸೇರಿ ಒಂದು ರಂಗತಂಡ ಕಟ್ಟಿದರು. ಡಿಗ್ರಿ ಮುಗಿಸುತ್ತಿದ್ದಂತೇ ಅದನ್ನು ಸ್ವತಂತ್ರ ತಂಡವಾಗಿ ರಿಜಿಸ್ಟ್ರೇಶನ್‌ ಮಾಡಿಸಿದರು. ಈ ತಂಡ ಹುಟ್ಟಿ 25 ವರ್ಷಗಳಾಗಿವೆ. ಅಂದಿನ ಮಕ್ಕಳು ಕನ್ನಡದ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ರಿಷಬ್‌ ಶೆಟ್ಟಿ ಇದೇ ತಂಡದಲ್ಲಿ ಅಭಿನಯಿಸಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಪ್ರಮೋದ್‌ ಶೆಟ್ಟಿ ಹಾಗೂ ಗೆಳೆಯರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊನ್ನೆ ತಾನೇ ಈ ತಂಡ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್‌ ಕಾಲೇಜು ನಾಟಕ ಸ್ಪರ್ಧೆ ಹಿನ್ನೆಲೆಯಲ್ಲಿ ಪ್ರಮೋದ್‌ ಶೆಟ್ಟಿ ಹಂಚಿಕೊಂಡ ‘ರಂಗಸೌರಭ’ದ ನೆನಪು, ವರ್ತಮಾನ ಹಾಗೂ ಭವಿಷ್ಯ..

70ರ ದಶಕದಲ್ಲಿ ನನ್ನ ಅಪ್ಪ ಟೌನ್‌ಹಾಲ್‌ನಲ್ಲಿ ಕ್ಯಾಂಟೀನ್‌ ಇಟ್ಟಿದ್ದರು. ಒಂದು ಟೀಗೂ ದುಡ್ಡಿಲ್ಲದ ಓಡಾಡುತ್ತಿದ್ದ ಪ್ರಕಾಶ್‌ ರೈ ಮೊದಲಾದವರ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ನಾನು ನಾಟಕದಲ್ಲಿ ಆಸಕ್ತಿ ತೋರಿಸುವಾಗ, ನೀನು ನಾಟ್ಕ ಗೀಟ್ಕ ಅಂತ ಹೋದ್ರೆ ಕೈಕಾಲ್ ಮುರಿದು ಹಾಕ್ತೀನಿ --ಮಗನೇ ಎಂದು ಬೈದಿದ್ದರು’.

Latest Videos

ಪ್ರಮೋದ್‌ ಶೆಟ್ಟಿ ಹೇಳುವ ಈ ಮಾತು ಅವರು ಚಿಕ್ಕವರಿದ್ದಾಗ ಅಥವಾ ಹುಟ್ಟುವ ಮೊದಲಿನ ರಂಗಭೂಮಿ ಸ್ಥಿತಿ ಹೇಗಿತ್ತು ಎಂಬುದಕ್ಕೆ ಪುರಾವೆಯ ಹಾಗಿದೆ. ಆದರೆ ಅವತ್ತು ಚಾ ಕುಡಿಯಲೂ ಕಾಸಿಲ್ಲದೇ ಓಡಾಡುತ್ತಿದ್ದ ಪ್ರಕಾಶ್‌ ರೈ ಇಂದು ದೇಶ, ವಿದೇಶಗಳ ಪ್ರಸಿದ್ಧ ನಟ. ನಾಟ್ಕ ಮಾಡ್ತೀನಿ ಅಂದಾಗ ಅಪ್ಪನ ಕೈಯಲ್ಲಿ ತಾರಾಮಾರ ಬೈಯಿಸಿಕೊಂಡ ಪ್ರಮೋದ್‌ ಶೆಟ್ಟಿ ಬಹುಬೇಡಿಕೆಯ ಕಲಾವಿದ. ನಾಟಕ ತಂಡದಲ್ಲೇ ಅಭಿನಯದ ಕನಸು ಕಟ್ಟಿಕೊಂಡ ರಿಷಬ್ ಜಗತ್ತೇ ಹೆಮ್ಮೆಯಿಂದ ನೋಡುವ ಸೂಪರ್‌ಸ್ಟಾರ್‌.

ಇಷ್ಟಾದರೂ ಇಂದಿಗೂ, ಯಾರಾದರೂ ‘ರಂಗಭೂಮಿಯಲ್ಲಿದ್ದೇವೆ’ ಅಂದಾಕ್ಷಣ ಬರುವ ಮರುಪ್ರಶ್ನೆಯೇ ಹೊಟ್ಟೆಪಾಡಿಗೆ ಏನು ಮಾಡಿಕೊಂಡಿದ್ದೀರಿ ಅನ್ನುವುದು. ಯಾಕೆಂದರೆ ರಂಗಭೂಮಿ ಅಂದಿಗೂ ಇಂದಿಗೂ ಮೆಟ್ಟಿಲಾಗಷ್ಟೇ ಉಳಿದಿದೆ. ಇದರ ಮೂಲಕ ಸಿನಿಮಾ, ಮನರಂಜನಾ ಕ್ಷೇತ್ರಕ್ಕೆ ಅಡಿಇಟ್ಟರಷ್ಟೇ ಹೆಸರು, ದುಡ್ಡು ಎಂಬ ಸ್ಥಿತಿ ಇದೆ. ಆದರೂ ಸಿನಿಮಾದಲ್ಲಿ ಎಷ್ಟೇ ದೊಡ್ಡ ಹೆಸರು ಮಾಡಿದರೂ ಹಲವರ ಮೊದಲ ಪ್ರೀತಿ ರಂಗಭೂಮಿಯೇ. ಸಿನಿಮಾದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಅವರ ರಂಗಪ್ರೀತಿ ಮಾಸುವುದಿಲ್ಲ.

ಇದಕ್ಕೆ ಸಾಕ್ಷಿಯಂತಿರುವುದು ಪ್ರಮೋದ್‌ ಶೆಟ್ಟಿ ಮತ್ತು ಸ್ನೇಹಿತರು ಕಟ್ಟಿಬೆಳೆಸಿದ ‘ರಂಗಸೌರಭ’ ನಾಟಕ ತಂಡ. ಈ ತಂಡದ ವತಿಯಿಂದ ಇತ್ತೀಚೆಗೆ ‘ಸೌರಭ’ ಎಂಬ ರಾಜ್ಯಮಟ್ಟದ ಅಂತರ್‌ ಕಾಲೇಜು ನಾಟಕ ಸ್ಪರ್ಧೆ ನಡೆಯಿತು. ಇದರಲ್ಲಿ ರಾಜ್ಯಾದ್ಯಂತದ ಸುಮಾರು 50 ಕಾಲೇಜುಗಳ 1800 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರವೀಂದ್ರ ಕಲಾಕ್ಷೇತ್ರದ ತುಂಬ ರಂಗ ಕಲರವ ಕಾವೇರುತ್ತಿದ್ದರೆ ಉದ್ಘಾಟನೆಗೆ ಬಂದ ಹಿರಿಯ ನಟ, ರಂಗಭೂಮಿ ಹಿನ್ನೆಲೆಯ ಅನಂತ್‌ನಾಗ್‌ ಬಹಳ ಭಾವುಕವಾಗಿ ತಮ್ಮ ರಂಗಭೂಮಿ ದಿನಗಳನ್ನು ನೆನಪಿಸಿಕೊಂಡರು.

ಇದನ್ನೂ ಓದಿ: ಹೀಗ್ ಆಗಿತ್ತಾ ದೇವ್ರೇ..; ಕಿರಿಕ್ ಪಾರ್ಟಿ ಟೈಮ್‌ನಲ್ಲಿ ನಡೆದ ಸೀಕ್ರೆಟ್ ಘಟನೆ ಹಂಚಿಕೊಂಡ ರಿಷಬ್ ಶೆಟ್ಟಿ!

‘ಅವು ನನ್ನ ಶಾಲಾದಿನಗಳು. ಆ ಹೊತ್ತಿಗೆ ಬದುಕು ಅಸಹನೀಯವಾಗಿತ್ತು. ಆತ್ಮವಿಶ್ವಾಸ ದಿನೇ ದಿನೇ ಕ್ಷೀಣಿಸುತ್ತಿತ್ತು. ಆಗ ಬೆಳಕಿನಂತೆ ಬಂದು ನನ್ನನ್ನು ಮೇಲೆತ್ತಿ ಪೊರೆದದ್ದು ರಂಗಭೂಮಿ. ಅದು ತಂದುಕೊಟ್ಟ ಆತ್ಮವಿಶ್ವಾಸವೇ ಇಂದು ನನ್ನನ್ನು ಈ ಮಟ್ಟಿಗೆ ಬೆಳೆಸಿದೆ’ ಎಂಬರ್ಥದ ಮಾತುಗಳನ್ನು ಹೇಳಿದರು. ಕಾರ್ಯಕ್ರಮದುದ್ದಕ್ಕೂ ರಂಗ ಪಯಣದ ನೆನಪಿನಲ್ಲೇ ಇದ್ದ ಅವರು ವಾಪಾಸ್‌ ಹೊರಟಾಗ ಪ್ರಮೋದ್‌ ಶೆಟ್ಟಿ ಅವರನ್ನು ಹತ್ತಿರಕ್ಕೆ ಕರೆದರಂತೆ. ‘ಎಲ್ಲಿ ರಂಗಭೂಮಿಗೆ ಧನ್ಯವಾದ ಹೇಳದೇ ಹೋಗಿ ಬಿಡ್ತೀನೋ ಅಂತ ಭಯ ಇತ್ತು. ಈ ಥರದ ವೇದಿಕೆ ಕೊಟ್ಟು ರಂಗಭೂಮಿಗೆ ಧನ್ಯವಾದ ಹೇಳೋದಕ್ಕೆ ಅವಕಾಶ ಮಾಡಿಕೊಟ್ಟದ್ದಕ್ಕೆ ನಾನು ನಿನಗೆ ಥ್ಯಾಂಕ್ಸ್‌ ಹೇಳ್ತೀನಿ’ ಎಂದರಂತೆ.

‘ಇದಕ್ಕಿಂತ ಇನ್ನೇನು ಬೇಕು ನನಗೆ.. ಇದಕ್ಕಿಂತ ಸಾರ್ಥಕ ಕ್ಷಣ ಸಿಗೋದು ಸಾಧ್ಯವಿಲ್ಲ’ ಎಂದು ಆ ಕ್ಷಣವನ್ನು ಭಾವುಕವಾಗಿ ನೆನೆಸಿಕೊಳ್ಳುತ್ತಾರೆ ಪ್ರಮೋದ್‌. ಈ ಅಂತರ್‌ಕಾಲೇಜು ನಾಟಕೋತ್ಸವದಲ್ಲಿ ಸುಮಾರು 18 ಕಾಂಪಿಟೀಶನ್‌ಗಳಿದ್ದವು. ಮುಖ್ಯವಾಗಿ ನಾಟಕ ಸ್ಪರ್ಧೆ, ರಂಗಗೀತೆ ದೃಶ್ಯಾವಳಿ, ಮೂಕಾಭಿನಯ, ಸಮೂಹಗಾಯನ, ಜಾನಪದ ನೃತ್ಯ, ಪೇಂಟಿಂಗ್‌, ರಂಗ ರಸಪ್ರಶ್ನಾವಳಿ, ರಂಗಭೂಮಿ ಮೇಲೆ ಚರ್ಚಾ ಸ್ಪರ್ಧೆ, ಪ್ರಬಂಧ, ನಾಟಕ ವಿಮರ್ಶೆ ಮೊದಲಾದ ಸ್ಪರ್ಧೆಗಳು. ಅದರಲ್ಲಿ ಪೇಂಟಿಂಗ್‌ ಸ್ಪರ್ಧೆ ವಿಶಿಷ್ಠವಾಗಿತ್ತು.

‘ಮೊದಲು ನಾಟಕದ ಒಂದು ಭಾಗವನ್ನು ಸುಮಾರು ಮುಕ್ಕಾಲು ಗಂಟೆ ಓದಿದೆವು. ಆ ಬಳಿಕ ಅವರು ತಮ್ಮ ಮನಸ್ಸಿಗೆ ಬರುವ ಪೇಂಟಿಂಗ್‌ ಮಾಡಬೇಕಿತ್ತು. ನಾವು ನೋಡುತ್ತಿರುವಂತೇ ನಮ್ಮ ಕಣ್ಣೆದುರಿನಲ್ಲಿ ಕುಂಚದಲ್ಲಿ ರಂಗಪ್ರಪಂಚವೊಂದು ಸೃಷ್ಟಿಯಾಯಿತು. ಇದರ ಜೊತೆಗೆ ರಂಗದೃಶ್ಯಾವಳಿ ಎಂಬ ಸ್ಪರ್ಧೆಯಿತ್ತು. ಇದರ ಅವಧಿ ಇದ್ದದ್ದು ಕೇವಲ 10 ನಿಮಿಷ. ಆದರೆ ಅಷ್ಟು ಕಡಿಮೆ ಅವಧಿಯಲ್ಲೇ 60-70 ಕಾಲೇಜು ಹುಡುಗ, ಹುಡುಗಿಯರು ರಂಗದಲ್ಲಿ ನಾಟಕ ದೃಶ್ಯವೊಂದಕ್ಕೆ ಜೀವ ತುಂಬಿದ ರೀತಿ ಬಹಳ ವಿಶಿಷ್ಠವಾಗಿತ್ತು’ ಎಂದು ಆ ಕ್ಷಣಗಳನ್ನು ಪ್ರಮೋದ್‌ ನೆನೆಯುತ್ತಾರೆ.

ಹೀಗೆ 18 ಸ್ಪರ್ಧೆಗಳಲ್ಲೂ ಹೊಸತನವಿತ್ತು. ಕಾಲೇಜು ಮಕ್ಕಳ ಕ್ರಿಯೇಟಿವಿಟಿ ಹೊರತೆಗೆಯುವ ಪ್ರಯತ್ನವಿತ್ತು. 1800 ಮಕ್ಕಳು 10 ದಿನಗಳ ಕಾಲ ಪ್ರೇಕ್ಷಕರನ್ನು ವೈವಿಧ್ಯಮಯ ರಂಗ ಅಭಿವ್ಯಕ್ತಿಯ ಮೂಲಕ ಕಾಲ, ದೇಶಗಳಾಚೆ ಕರೆದೊಯ್ದರು. ಈ ಕಾರ್ಯಕ್ರಮವನ್ನು ಸುಮಾರು 5000 ಜನ ವೀಕ್ಷಿಸಿದರು. ಇದೂ ರಂಗಭೂಮಿಗೆ ಹೊಸ ಭರವಸೆ. ಈ ಸ್ಪರ್ಧೆಗಳದ್ದು ಒಂದು ಕಥೆಯಾದರೆ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡಿದ ಸ್ಮರಣಿಕೆಗಳದ್ದು ಮತ್ತೊಂದು ಕಥೆ. ಇದರ ಹಿಂದೆ ಪ್ರಮೋದ್‌ ಹಾಗೂ ಗೆಳೆಯರ ಪರಿಶ್ರಮವಿದೆ, ಆರ್‌ ಎಂ ಹಡಪದ್‌ ಅವರಂಥಾ ಕಲಾವಿದರ ಸೃಜನಶೀಲತೆ ಇದೆ. ಮಹತ್ವದ ಪ್ರಶಸ್ತಿಗಳನ್ನು ಲೋಹದಲ್ಲಿ ಕೆತ್ತಿರುವುದು ವಿಶೇಷ.

‘ಸಮಗ್ರವಾಗಿ ನೀಡುವ ಚಾಂಪಿಯನ್‌ಶಿಪ್‌ ಟ್ರೋಫಿ ಸುಮಾರು 60 ಕೆಜಿ ತೂಕದ್ದು. ಬಾದಾಮಿಯಲ್ಲಿ ಮಹಾನಟ ಎಂಬ ವಾಸ್ತುಶಿಲ್ಪ ಇದೆ. ನಾವು ಈಗ ಬಳಸುವ ನಟರಾಜನ ಕಲಾಕೃತಿ ಚೆನ್ನೈಯಲ್ಲಿ ಸೃಷ್ಟಿಯಾದದ್ದು. ಆದರೆ ಅದಕ್ಕೂ ಮೊದಲು ಇದ್ದದ್ದು ಈ ಮಹಾನಟ ಎಂಬ ಪರಿಕಲ್ಪನೆ. ಇದರ ಬಗ್ಗೆ ಕರ್ನಾಟಕದ ಐತಿಹಾಸಿಕ ನೃತ್ಯರೂಪಕವಿದೆ. ಈ ಮಹಾನಟನ ಅದ್ಭುತ ಕಲಾಕೃತಿಯನ್ನು ಹಡಪದ್‌ ಅವರು ಚಾಂಪಿಯನ್‌ಶಿಪ್‌ ಸ್ಮರಣಿಕೆಯಾಗಿ ರೂಪಿಸಿದ್ದಾರೆ. 2ನೇ ಚಾಂಪಿಯನ್‌ಶಿಪ್‌ನಲ್ಲಿ ರೋಮನ್‌ ಥೇಟರ್‌ ಹಿನ್ನೆಲೆಯಲ್ಲಿ ನಿಂತಿರುವ ಮಹಾನ್‌ ರಂಗಭೂಮಿ ಹಾಗೂ ಸಿನಿಮಾ ಕಲಾವಿದ ಸುಬ್ಬಯ್ಯ ನಾಯ್ಡು ಪ್ರತಿಮೆ ಇದೆ. ಮೂರನೇ ಪ್ರಶಸ್ತಿ ಶಂಕರ್‌ನಾಗ್‌ ಮೇಲಿದೆ. ಹಿಂದೆ ಪ್ರತಿಭಟನೆಯೊಂದಕ್ಕಾಗಿ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಒಬ್ಬರೇ ನಾಟಕ ಮಾಡಿದ್ದವರು ಶಂಕರ್‌ನಾಗ್‌. ಅಂಥಾ ದೈತ್ಯ ಪ್ರತಿಭೆಯನ್ನು ಸಂಕೇತಿಸುವ ಪ್ರಶಸ್ತಿ ಇದು. ಅದೇ ರೀತಿ ನಾಟಕ ಕ್ಷೇತ್ರದ ಸಮಗ್ರ ಪ್ರಶಸ್ತಿಗೆ 2.5 ಅಡಿ ಎತ್ತರದ ಕರ್ನಾಟಕದ ಮ್ಯಾಪ್‌, ಎರಡನೇ ಬಹುಮಾನಕ್ಕೆ ಬಿ ವಿ ಕಾರಂತರು ಹಾರ್ಮೋನಿಯಂ ನುಡಿಸುವ ಕಲಾಕೃತಿ, ಮೂರನೆಯ ಬಹುಮಾನ ಪರ್ವತವಾಣಿ ಹೆಸರಲ್ಲಿದೆ’ ಎಂದು ಪ್ರಮೋದ್‌ ಶೆಟ್ಟಿ ವಿವರ ನೀಡುತ್ತಾರೆ.

ಹೀಗೆ ನಾನಾ ವಿಭಾಗಗಳಲ್ಲಿ 98 ರಿಂದ 110 ಪ್ರಶಸ್ತಿಗಳನ್ನು ವೇದಿಕೆ ಮೇಲೆ ಪ್ರದಾನ ಮಾಡಲಾಗಿದೆ. ರಂಗಭೂಮಿಯ ಹಿನ್ನೆಲೆಯ ಕಲಾವಿದರ ಹೆಸರಿನಲ್ಲಿ ಈ ಪ್ರಶಸ್ತಿ ಇದೆ. ಪುನೀತ್‌ ರಾಜ್‌ಕುಮಾರ್‌, ರಾಜು ಅನಂತಸ್ವಾಮಿ, ಬಿ ಜಯಶ್ರೀ, ರಿಷಬ್‌ ಶೆಟ್ಟಿ, ಅಚ್ಯುತ ಕುಮಾರ್‌, ಗಿರಿಜಾ ಲೋಕೇಶ್‌ ಮೊದಲಾದವರ ಹೆಸರಿನಲ್ಲಿ ಅವರನ್ನು ಸ್ಫೂರ್ತಿಯಾಗಿಟ್ಟು ಈ ಗೌರವ ನೀಡಲಾಗುತ್ತದೆ. ಇನ್ನೊಂದು ವಿಶೇಷ ಅಂದರೆ ಅತ್ಯುತ್ತಮ ಹವ್ಯಾಸಿ ನಾಟಕ ತಂಡಗಳ ಹೆಸರಿನಲ್ಲೂ ಪ್ರಶಸ್ತಿ ಇದೆ.

ಇದನ್ನೂ ಓದಿ: ನನ್ನ ಯೋಗ್ಯತೆ ಇವಾಗ ಗೊತ್ತಾಗಲಿ; ರಂಗಿತರಂಗ ಚಿತ್ರಕ್ಕೆ ಬಂದ ಸಂಭಾವನೆ ಹಿಂದಿನ ಸತ್ಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ!

ರಂಗಸೌರಭ ನಾಟಕ ತಂಡ ರಾಜ್ಯಮಟ್ಟದ ಈ ಅಂತರ್‌ ಕಾಲೇಜು ನಾಟಕ ಸ್ಪರ್ಧೆ ಆರಂಭಿಸಿದ್ದು 2020ರಲ್ಲಿ. ಅಲ್ಲಿಯವರೆಗೂ ಪ್ರತೀ 5 ವರ್ಷಕ್ಕೊಮ್ಮೆ ವಿಶಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ತಂಡ ರಂಗಭೂಮಿಯಲ್ಲಿ ಹೊಸ ಬೆಳೆ ಬೆಳೆಯುವ ನಿಟ್ಟಿನಲ್ಲಿ ಶುರು ಮಾಡಿದ್ದೇ ಈ ರಾಜ್ಯಮಟ್ಟದ ಅಂತರ್‌ ಕಾಲೇಜು ನಾಟಕ ಸ್ಪರ್ಧೆ - ‘ಸೌರಭ’. ಆರಂಭದಲ್ಲಿ ಭಾರತ ಯಾತ್ರಾ ಕೇಂದ್ರದ ನಾಗರಾಜ ಮೂರ್ತಿ ಅವರು ಇದಕ್ಕೆ ಬೆನ್ನುಲುಬಾಗಿದ್ದರು. ಸದ್ಯ ರಂಗಸೌರಭ ಸ್ವತಂತ್ರ್ಯವಾಗಿ ಈ ಸ್ಪರ್ಧೆ ನಡೆಸುತ್ತಿದೆ.

ಮುಂದಿನ ವರ್ಷಗಳಲ್ಲಿ ಇದಕ್ಕೆ ಇನ್ನಷ್ಟು ಬಣ್ಣ ತುಂಬುವ ಹುರುಪಿನಲ್ಲಿದ್ದಾರೆ ಪ್ರಮೋದ್ ಶೆಟ್ಟಿ ಹಾಗೂ ಗೆಳೆಯರು. ರಂಗಭೂಮಿಯಲ್ಲೂ ದುಡಿಮೆ ಕಂಡುಕೊಳ್ಳಬಹುದು ಎಂಬುದನ್ನು ಸಾಕಾರಗೊಳಿಸುವ ಪ್ರಯತ್ನದಲ್ಲೂ ತೊಡಗಿಸಿಕೊಂಡಿದ್ದಾರೆ. ‘ಈಗಷ್ಟೇ ಬದುಕಿಗೆ ತೆರೆದುಕೊಳ್ಳುತ್ತಿರುವ ಯುವಕರಿಗೆ ರಂಗ ಪ್ರೀತಿ ಮೂಡಿಸಬೇಕು. ಅನಂತ್‌ನಾಗ್‌ ಅವರ ಬದುಕಿನಲ್ಲಾದಂತೆ ರಂಗಭೂಮಿ, ಆತ್ಮವಿಶ್ವಾಸ ಎಂಬ ಬೆಳಕನ್ನು ಎಲ್ಲರೆದೆಯಲ್ಲಿ ಪಸರಿಸುತ್ತದೆ’ ಎಂಬ ಪ್ರಮೋದ್‌ ಶೆಟ್ಟಿ ಮಾತೇ ಒಟ್ಟಾರೆ ರಂಗಭೂಮಿಯ ಆಶಯವನ್ನೂ, ಆ ಉದ್ದೇಶಕ್ಕಾಗಿ ತುಡಿಯುತ್ತಿರುವ ರಂಗಸೌರಭ ತಂಡದ ಅಂತರಂಗವನ್ನೂ ತೆರೆದಿಡುತ್ತದೆ.

ಕನ್ನಡಪ್ರಭ ಹೆಸರಲ್ಲಿ ಸಾಹಿತ್ಯ ಪ್ರಶಸ್ತಿ: 
ಸಾಹಿತ್ಯಕ್ಕೆ ಸಂಬಂಧಿಸಿ ರಂಗಭೂಮಿಯ ಭಿನ್ನ ಆಯಾಮಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕಾಲೇಜಿಗೆ ‘ಕನ್ನಡಪ್ರಭ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ‘ಕನ್ನಡಪ್ರಭ’ ಹೆಸರು ಹೊತ್ತಿರುವ ವಿಶಿಷ್ಠ ಫಲಕವನ್ನು ವಿಜೇತರಿಗೆ ನೀಡಿ ಅಭಿನಂದಿಸುವ ಪರಂಪರೆಯನ್ನು ಪ್ರಮೋದ್‌ ಶೆಟ್ಟಿ ಹಾಗೂ ಸ್ನೇಹಿತರು ಹುಟ್ಟುಹಾಕಿದ್ದಾರೆ. ಈ ಬಗ್ಗೆ ವಿವರಿಸುವ ಪ್ರಮೋದ್‌ ಶೆಟ್ಟಿ, ‘ಸಾಹಿತ್ಯದ ವಿಚಾರಕ್ಕೆ ಬಂದರೆ ಸದಾ ಮುನ್ನೆಲೆಯಲ್ಲಿರುವ ಮುಂಚೂಣಿಯ ದಿನಪತ್ರಿಕೆ ಕನ್ನಡಪ್ರಭ ನಮ್ಮೆಲ್ಲರ ಅಚ್ಚುಮೆಚ್ಚು. ಹೀಗಾಗಿ ಕನ್ನಡಪ್ರಭದ ಹೆಸರಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ’ ಎನ್ನುತ್ತಾರೆ.

ರಿಷಬ್‌ ಪ್ರತಿಭೆಗೆ ನೀರೆರೆದ ರಂಗತಂಡ: 
ರಿಷಬ್‌ ಶೆಟ್ಟಿ ಕಾಲೇಜು ದಿನಗಳಲ್ಲಿ ರಂಗಸೌರಭ ತಂಡದಲ್ಲಿದ್ದವರು. ಅವರು ‘ಘಾಶಿರಾಮ್‌ ಕೊತ್ವಾಲ್‌’ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಆಗ ರಾಜ್ಯಮಟ್ಟದ ಅಂತರ್‌ಕಾಲೇಜು ಸ್ಪರ್ಧೆಯಲ್ಲಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಪ್ರಮೋದ್‌ ಶೆಟ್ಟಿ, ‘ಕಾಕನ ಕೋಟೆ’ ನಾಟಕದ ನಾಯಕನ ಪಾತ್ರದಲ್ಲಿ ಮಿಂಚಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ: ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?

100ನೇ ಪ್ರದರ್ಶನದತ್ತ ಗಂಗಾವತರಣ:
ರಂಗಸೌರಭ ತಂಡದ ಪ್ರಸಿದ್ಧ ನಾಟಕ ದ ರಾ ಬೇಂದ್ರೆ ಕುರಿತಾದ ‘ಗಂಗಾವತರಣ’ . ರಾಜೇಂದ್ರ ಕಾರಂತ್‌ ನಿರ್ದೇಶನದ ಈ ನಾಟಕ ಬೇಂದ್ರೆಯವರ ಬಗೆಗೆ ಇದೆ. ಇದೀಗ 100ನೇ ಪ್ರದರ್ಶನದತ್ತ ಮುನ್ನುಗ್ಗುತ್ತಿದೆ. ಪ್ರಮೋದ್‌ ಶೆಟ್ಟಿ ಜೊತೆಗೆ ಕಿರುತೆರೆಯ ಜನಪ್ರಿಯ ನಟ ವಲ್ಲಭ್‌ ಸೂರಿ, ಸುಪ್ರಿಯಾ ಶೆಟ್ಟಿ, ರಾಕೇಶ್‌ ರಾಜ್‌ಕುಮಾರ್‌, ಸುನೀತ್‌ ಮೊದಲಾದವರು ನಟಿಸುತ್ತಿದ್ದಾರೆ. ‘ಮೈಸೂರು ಮಲ್ಲಿಗೆ’, ‘ಕಾಕನಕೋಟೆ’, ‘ಮಾದಾರಿ ಮಾದಯ್ಯ’, ಪೃಥ್ವಿರಾಜ್‌ ಕವತ್ತಾರ್ ನಿರ್ದೇಶನದ ‘ಮಾತೃಕಾ ನಾಟಕ’, ಸಿ ಬಸವಲಿಂಗಯ್ಯ ನಿರ್ದೇಶನದ ‘ಸಾವು ಬಂತು ಸಾವು’ ಈ ತಂಡದ ಪ್ರಸಿದ್ಧ ನಾಟಕಗಳು. ಸದ್ಯ ರಂಗಾಸಕ್ತ ಯುವಕರಿಗಾಗಿ ರಂಗಭೂಮಿ ವರ್ಕ್‌ಶಾಪ್‌ ಮಾಡಿಸಿದ ರಂಗಸೌರಭ ಅವರಿಂದ, ‘ಒಪೆರಾ ಹೌಸ್’, ಬೇಂದ್ರೆ ಅವರ ‘ರೈಲುಭೂತ’ ನಾಟಕ ಮಾಡಿಸುತ್ತಿದೆ. ಇದಲ್ಲದೇ ಹೊಸ ನಾಟಕದ ತಯಾರಿಯೂ ಆರಂಭವಾಗಿದೆ.

ಮನರಂಜನಾ ಮಾಧ್ಯಮದಲ್ಲಿ ರಂಗಸೌರಭದ ನೂರಾರು ಕಲಾವಿದರು:
ರಂಗಸೌರಭ ತಂಡದಲ್ಲಿ ನಾಟಕ ಮಾಡುತ್ತಿದ್ದ 400ಕ್ಕೂ ಹೆಚ್ಚು ಕಲಾವಿದರು ಇಂದು ಮನೋರಂಜನಾ ಮಾಧ್ಯಮದಲ್ಲಿ ಜೀವನ ಕಂಡುಕೊಂಡಿದ್ದಾರೆ. ಹೆಸರು ಮಾಡಿದ್ದಾರೆ. ಅವರೆಲ್ಲರೂ ಇಂದಿಗೂ ತಮಗೆ ನಟನೆಯ ಮೊದ ಮೊದಲ ಪಾಠಗಳನ್ನು ಹೇಳಿದ ರಂಗಸೌರಭ ತಂಡವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

click me!