Latest Videos

ಸ್ಯಾಂಡಲ್‌ವುಡ್ Vs ಸ್ಟಾರ್ಸ್‌: ಟಿಕೆಟ್ ದರ ಇಳಿಸಿ, ಉದ್ಯಮ ಉಳಿಸಿ

By Kannadaprabha NewsFirst Published May 24, 2024, 6:47 PM IST
Highlights

ಕನ್ನಡ ಚಿತ್ರರಂಗದ ಪುನರುತ್ಥಾನ ಮತ್ತು ಜೀರ್ಣೋದ್ಧಾರದ ಸಲುವಾಗಿ ಕಳೆದ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸಭೆ ಸೇರಿ ಚಿತ್ರರಂಗದ ಒಳಿತಿಗಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದೆ. 

ಕನ್ನಡ ಚಿತ್ರರಂಗದ ಪುನರುತ್ಥಾನ ಮತ್ತು ಜೀರ್ಣೋದ್ಧಾರದ ಸಲುವಾಗಿ ಕಳೆದ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ, ಸಭೆ ಸೇರಿ ಚಿತ್ರರಂಗದ ಒಳಿತಿಗಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದೆ. ಸ್ಟಾರ್‌ಗಳು ಹೆಚ್ಚು ಸಿನಿಮಾ ಮಾಡಬೇಕು, ಆಗ ಥೇಟರುಗಳಿಗೆ ಸಿನಿಮಾ ಸಿಗುತ್ತದೆ, ಚಿತ್ರರಂಗ ಉಳಿಯುತ್ತದೆ ಎಂದು ನಾಲ್ಕೈದು ದಿನಗಳ ಹಿಂದೆ ಆರಂಭವಾದ ಮಾತುಕತೆಯ ಮುಂದುವರಿದ ಭಾಗವಾಗಿ ಈ ಕೆಳಗಿನ ಅಂಶಗಳನ್ನು ಸರ್ಕಾರದ ಮುಂದಿಡಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳಗಳಲ್ಲಿ ಸಿನಿಮಾಗಳ ಪ್ರವೇಶದರ ಕಡಿಮೆಯಿದೆ. ದಕ್ಷಿಣದ ರಾಜ್ಯಗಳ ಪೈಕಿ ಬೆಂಗಳೂರಿನಲ್ಲಿ ಟಿಕೆಟ್ ಬೆಲೆ ಅತ್ಯಂತ ಹೆಚ್ಚು. ಇದನ್ನು ಕಡಿಮೆ ಮಾಡಬೇಕು. ಸ್ಟಾರ್ ಸಿನಿಮಾಗಳು ಬಂದಾಗ ಮಲ್ಟಿಪ್ಲೆಕ್ಸ್ ಟಿಕೆಟ್ ದರ ಸಾವಿರ ರುಪಾಯಿ ದಾಟುವುದೂ ಉಂಟು. ನಿರ್ಮಾಪಕರೇ ಎಷ್ಟೋ ಸಲ ಹೆಚ್ಚಿನ ದರ ವಿಧಿಸಿ ಗಳಿಗೆ ಹೆಚ್ಚಿಸಿಕೊಳ್ಳಲು ನೋಡುತ್ತಾರೆ. ಇದನ್ನು ನಿಲ್ಲಿಸಬೇಕು ಮತ್ತು ಮಲ್ಟಿಪ್ಲೆಕ್ಸ್ ಟಿಕೆಟ್ ದರ ರು. 200 ಮೀರಬಾರದು. ಓಟಿಟಿಗಳು ಚಿತ್ರಗಳನ್ನು ಖರೀದಿಸುವುದನ್ನು ನಿಲ್ಲಿಸಿವೆ. ಇದಕ್ಕೆ ಪ್ರತಿಯಾಗಿ ಕೇರಳ ಸರ್ಕಾರ, ಓಟಿಟಿ ಆರಂಭಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಓಟಿಟಿ ಆರಂಭಿಸಿ ಕನ್ನಡ ಚಿತ್ರಗಳನ್ನು ಸರ್ಕಾರವೇ ಖರೀದಿಸಬೇಕು.

ವೆಟ್ರಿವೇಲ್‌ ಷಣ್ಮುಗ ಸುಂದರ ಪಾತ್ರದಲ್ಲಿ ಮಿಂಚಿದ ರಾಜ್‌ ಬಿ ಶೆಟ್ಟಿ!

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ತೆರಿಗೆ ವಿನಾಯಿತಿ ನೀಡಬೇಕು: ಈ ಅಂಶಗಳನ್ನು ಸರ್ಕಾರದ ಬಳಿ ಮಾತನಾಡಲು ಕನ್ನಡ ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ ಎನ್ ಸುರೇಶ್ ತಿಳಿಸಿದ್ದಾರೆ. ಇದರ ಜತೆಗೇ ಸ್ಟಾರ್ ನಟರು ವರ್ಷಕ್ಕೆ 2-3 ಸಿನಿಮಾ ಮಾಡಬೇಕು ಎಂಬ ಬೇಡಿಕೆಯನ್ನೂ ವಾಣಿಜ್ಯ ಮಂಡಳಿ ಸ್ಟಾರುಗಳ ಮುಂದಿಟ್ಟಿದೆ. ಇದನ್ನು ಚರ್ಚಿಸಲು ಕಲಾವಿದರ ಸಂಘದ ಸಭೆ ಕರೆದು ಚರ್ಚಿಸಲಾಗುವುದು ಎಂದು ಕಲಾವಿದರ ಸಂಘದ ಅಧ್ಯಕ್ಷ ರಾಕ್ ಲೈನ್ ವೆಂಕಟೇಶ್. ಇದು ಹೀರೋಗಳ ಮುಂದೆ ಇಟ್ಟಿರುವ ಬೇಡಿಕೆ. ಈ ಬಗ್ಗೆ ಸದ್ಯದಲ್ಲೇ ಕಲಾವಿದರ ಸಂಘದ ವತಿಯಿಂದ ಸಭೆ ಕರೆದು ಚರ್ಚಿಸಲಾಗುವುದು ಎಂದು ಕಲಾವಿದರ ಸಂಘದ ರಾಕ್‌ಲೈನ್ ವೆಂಕಟೇಶ್, ವಾಣಿಜ್ಯ ಮಂಡಳಿಗೆ ತಿಳಿಸಿದ್ದಾರೆ. ಈ ಸಭೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಂ ಎನ್ ಸುರೇಶ್ ಹೇಳಿದ್ದಾರೆ.

ಥಿಯೇಟರ್‌ಗೆ ಸಿನಿಮಾ ಮಾಡಿ, ಸ್ಟಾರ್‌ಗಳು ಸಂಭಾವನೆ ಕಡಿಮೆ ಮಾಡಿಕೊಳ್ಳಿ, ಬಿ ಕೆ ಗಂಗಾಧರ್‌: ಸ್ಟಾರ್‌ ನಟರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿರುವುದು ಕನ್ನಡದಲ್ಲಿ ಮಾತ್ರವಲ್ಲ, ಎಲ್ಲಾ ಭಾಷೆಗಳಲ್ಲೂ ಇದೇ ಪರಿಸ್ಥಿತಿ. ಸಹಜವಾಗಿ ಚಿತ್ರಮಂದಿರಗಳಿಗೆ ಸಿನಿಮಾಗಳು ಇಲ್ಲದಂತಾಗಿದೆ. ಚಿತ್ರ ನಿರ್ಮಾಣದ ಮೇಲೆ ಕಂಟ್ರೋಲ್‌ ಇಲ್ಲ. ಇದು ಐದು ವರ್ಷಗಳ ಹಿಂದಿನಿಂದ ಆರಂಭವಾದ ಬೆಳವಣಿಗೆ. ಅಂದರೆ ಆಗ ಓಟಿಟಿ, ಸ್ಯಾಟಲೈಟ್‌, ಡಬ್ಬಿಂಗ್‌ ... ಮುಂತಾದ ಮೂಲಗಳಿಂದ ಸಿನಿಮಾಗಳಿಗೆ ಕೋಟಿ ಕೋಟಿ ಬರುತ್ತದೆ ಎನ್ನುವ ಆಸೆ ಬಿತ್ತಲಾಯಿತು. ಇದಕ್ಕೆ ತಕ್ಕಂತೆ ಒಂದಿಷ್ಟು ಸಿನಿಮಾಗಳು ಬ್ಯುಸಿನೆಸ್‌ ಕೂಡ ಮಾಡಿದವು. ಉಳಿದವರೂ ಕೂಡ ನಾವು ಅದೇ ರೀತಿ ವ್ಯಾಪಾರ ಮಾಡಬಹುದು ಎಂದುಕೊಂಡು ನಿರ್ಮಾಣದ ವೆಚ್ಚ ಮೂರು, ನಾಲ್ಕು ಪಟ್ಟು ಜಾಸ್ತಿ ಮಾಡಿದರು. ಇದೇ ಹಂತದಲ್ಲಿ ಹೀರೋಗಳ ಸಂಭಾವನೆ ದುಪ್ಪಟ್ಟಾಯಿತು.

ಈಗ ಓಟಿಟಿ, ಸ್ಯಾಟಲೈಟ್‌, ಡಬ್ಬಿಂಗ್‌ ಬ್ಯುಸಿನೆಸ್‌ ಬಾಗಿಲು ಸಂಪೂರ್ಣವಾಗಿ ಮುಚ್ಚಿದೆ. ಪ್ಯಾನ್‌ ಇಂಡಿಯಾ ಗುಂಗು ಸೇರಿಕೊಂಡು 50- 100 ಕೋಟಿಯಲ್ಲೇ ಸಿನಿಮಾ ಮಾಡಬೇಕು ಎನ್ನುವಂತಾಗಿದೆ. 60-70 ದಿನಗಳಲ್ಲಿ ಮುಗಿಯುತ್ತಿದ್ದ ಒಂದು ಸಿನಿಮಾ ಶೂಟಿಂಗ್‌ 250 ರಿಂದ 300 ದಿನಕ್ಕೆ ಬಂದಿದೆ. ಇದರಿಂದ ಒಂದು ಚಿತ್ರದ ನಿರ್ಮಾಣದ ಬಂಡವಾಳದ ಅರ್ಧಕ್ಕಿಂತ ಹೆಚ್ಚು ಬಡ್ಡಿಯೇ ಸೇರಿಕೊಳ್ಳುತ್ತಿದೆ. ಥಿಯೇಟರ್‌ಗಳ ಹೊರತಾದ ಬ್ಯುಸಿನೆಸ್‌ ಇಲ್ಲ. ಆದರೆ, ಥಿಯೇಟರ್‌ಗಳಿಗೆ ಸಿನಿಮಾ ಮಾಡಲಿಕ್ಕೆ ಯಾರೂ ರೆಡಿ ಇಲ್ಲ. ನಿರ್ಮಾಪಕ ಏನು ಮಾಡಬೇಕು?

ಓಟಿಟಿ, ಡಬ್ಬಿಂಗ್‌, ಸ್ಯಾಟಲೈಟ್‌ನಿಂದ ಕೋಟಿ ಕೋಟಿ ಬರುತ್ತದೆಂಬ ಲೆಕ್ಕಾಚಾರದಿಂದ ಆಚೆ ಬರಬೇಕು. ಪ್ಯಾನ್‌ ಇಂಡಿಯಾ ಎಂಬ ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಮನಸ್ಥಿತಿ ಬದಲಾಗಬೇಕು. ಐದು ಹತ್ತು ವರ್ಷಗಳ ಹಿಂದೆ ಥಿಯೇಟರ್‌ಗಳಿಗೆ ಅಂತ ಸಿನಿಮಾ ಮಾಡುತ್ತಿದ್ದೆವಲ್ಲಾ, ಈಗ ಮತ್ತೆ ಅದೇ ರೀತಿಯ ಸಿನಿಮಾ ಶುರು ಮಾಡಬೇಕು. ಥಿಯೇಟರ್‌ ಸಿನಿಮಾ ಅಂದಾಗ ಸಹಜವಾಗಿ ಬಜೆಟ್‌ ಕಂಟ್ರೋಲ್‌ಗೆ ಬರುತ್ತದೆ. ಆಗ 5, 10, 20 ಕೋಟಿ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ. ಇದಲ್ಲದರ ಜತೆಗೆ ತಮ್ಮ ಚಿತ್ರಕ್ಕೆ ಬೇರೆ ಬೇರೆ ಬ್ಯುಸಿನೆಸ್‌ನಿಂದ ದೊಡ್ಡ ಮೊತ್ತ ಬರುತ್ತದೆಂದು ಭಾವಿಸಿ ಹೀರೋಗಳು ದುಪ್ಪಟ್ಟು ಮಾಡಿಕೊಂಡಿರುವ ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು.

ಸ್ಟಾರ್‌ ಸಿನಿಮಾಗಳು ಫ್ಲಾಪ್‌ ಆದ್ರೂ ಥಿಯೇಟರ್‌ಗಳು ಉಳಿಯುತ್ತವೆ, ಸಂದೇಶ್‌ ನಾಗರಾಜ್‌: ಒಬ್ಬರಿಗೊಬ್ಬರು ಕಮ್ಯೂನಿಕೇಷನ್‌ ತಪ್ಪಿದೆ. ಕಲಾವಿದರು, ನಿರ್ಮಾಪಕರು, ವಾಣಿಜ್ಯ ಮಂಡಳಿ ಇವರು ದೂರ ದೂರವೇ ಇದ್ದಾರೆ. ಇದು ಬದಲಾಗಬೇಕು. ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಬರಬೇಕು. ಈಗ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿರುವುದು ಸರಿ ಇದೆ. ಸ್ಟಾರ್‌ ಹೀರೋಗಳು ವರ್ಷಕ್ಕೆ ಕನಿಷ್ಠ 3 ಚಿತ್ರಗಳನ್ನಾದರೂ ಮಾಡಬೇಕು ಎನ್ನುವುದು ನನ್ನ ವಾದ ಕೂಡ. ಯಾಕೆಂದರೆ ಸ್ಟಾರ್‌ ನಟರ ಚಿತ್ರಗಳು ಸೋತರೂ ಕೂಡ ಒಂದೊಂದು ಸಿನಿಮಾ ನಾಲ್ಕು ವಾರ ಥಿಯೇಟರ್‌ಗಳನ್ನು ಸಾಕುತ್ತದೆ. ಹೀಗೆ ಥಿಯೇಟರ್‌ಗಳನ್ನು ಸಾಕಿದರೆ ಚಿತ್ರರಂಗವನ್ನು ಸಾಕಿದಂತೆಯೇ. ಸಿನಿಮಾದಿಂದ ಮಾತ್ರ ಜನರಿಗೆ ಮನರಂಜನೆ ಸಿಗುತ್ತದೆ ಎನ್ನುವುದು ತಪ್ಪು. ಬೇರೆ ಬೇರೆ ವೇದಿಕೆಗಳಲ್ಲಿ ಮನರಂಜನೆ ಸಿಗುತ್ತದೆ. 

ಆ ಎಲ್ಲ ಮನರಂಜನೆಯ ಮಾಧ್ಯಮಗಳ ಜತೆಗೆ ನಾವು ಸಿನಿಮಾ ಮಾಡುತ್ತಿದ್ದೇವೆ ಎಂದ ಮೇಲೆ ಕಂಟೆಂಟ್‌ ಮುಖ್ಯವಾಗುತ್ತದೆ. ಜನ ಚಿತ್ರಮಂದಿರಕ್ಕೆ ಬರಬೇಕು ಎಂದರೆ ಕಂಟೆಂಟ್‌ ಕಡೆ ಗಮನ ಕೊಡಬೇಕು. ಕೆಲವೊಮ್ಮೆ ನಮಗೆ ಇಂಥ ಚಿತ್ರವೇ ಬೇಕು, ಕತೆ ಹೀಗೇ ಇರಬೇಕು ಎಂದು ಹೀರೋಗಳು ಮಧ್ಯ ಪ್ರವೇಶಿಸುವುದೂ ಇದೆ. ಇದರಿಂದ ಸಿನಿಮಾಗಳು ಸೋತಿವೆ ಕೂಡ. ಆದರೆ, ಸೋಲನ್ನು ಹೊತ್ತುಕೊಳ್ಳುವುದು ನಿರ್ಮಾಪಕ ಮಾತ್ರ. ಮೊದಲು ಓಟಿಟಿ, ಟಿವಿ, ಡಬ್ಬಿಂಗ್‌ ಬ್ಯುಸಿನೆಸ್‌ ಇತ್ತು. ಆಗ ಹೀರೋಗಳ ಸಂಭಾವನೆ ಎಷ್ಟೇ ಇದ್ದರೂ ಯಾರಿಗೂ ಭಾರ ಎನಿಸುತ್ತಿರಲಿಲ್ಲ. ಈಗ ಅದು ದುಬಾರಿ ಆಗಿದೆ. ಹಾಗಂತ ಸಂಭಾವನೆ ಕಡಿಮೆ ಮಾಡಿಕೊಂಡು ನಮಗೆ ಸಿನಿಮಾ ಮಾಡಿ ಅಂತ ನಾನು ಸ್ಟಾರ್‌ಗಳಿಗೆ ಹೇಳುತ್ತಿಲ್ಲ. ನೀವೇ ಆದರೂ ವರ್ಷಕ್ಕೆ 3-4 ಸಿನಿಮಾ ನಿರ್ಮಾಣ ಮಾಡಿ. ಚಿತ್ರರಂಗ ಉಳಿಯುತ್ತದೆ.

ಮೊದಲು ಚಿತ್ರರಂಗದ ಮಾತೃಸಂಸ್ಥೆ ವ್ಯವಸ್ಥೆ ಬದಲಾಗಬೇಕು, ಟಿ ಆರ್‌ ಚಂದ್ರಶೇಖರ್‌: ಈಗ ಚಿತ್ರರಂಗದಲ್ಲಿರುವ ಸಮಸ್ಯೆ ಹೊಸತಲ್ಲ. ತುಂಬಾ ಹಳೆಯದು. ಈಗಿನ ಬೆಳವಣಿಗೆಗಳ ಬಗ್ಗೆ ಹೇಳುವುದಕ್ಕಿಂತ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎನ್ನುವ ವ್ಯಕ್ತಿಗಳು ಕೂತಿರುವ ವ್ಯವಸ್ಥೆ ಬದಲಾಗಬೇಕು. ಅಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉದ್ದೇಶ ಏನು, ಅದರ ಬೈಲಾದಲ್ಲಿ ಏನಿದೆಯೋ ಅದು ಈಡೇರುತ್ತಿಲ್ಲ. ಸಕ್ರಿಯವಾಗಿ ಸಿನಿಮಾ ಮಾಡುವ ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ಇರಬೇಕಿತ್ತು. ಆದರೆ ಅಲ್ಲಿರುವವರು ಯಾವುದೋ ಕಾಲದಲ್ಲಿ ಸಿನಿಮಾ ಮಾಡಿದವರು. ಅವರಿಗೆ ಈಗಿನ ಪರಿಸ್ಥಿತಿ ಗೊತ್ತಿಲ್ಲ.

ರಾಜಕಾರಣದಲ್ಲಿ ಮೇಲ್ಮನೆ, ಕೆಳಮನೆ ಅಂತಿದೆ. ವಾಣಿಜ್ಯ ಮಂಡಳಿಯಲ್ಲೂ ಅಂತ ವ್ಯವಸ್ಥೆ ಬರಬೇಕು. ಅನುಭವಿಗಳು, ಬುದ್ಧಿವಂತರು, ಸಕ್ರಿಯ ನಿರ್ಮಾಪಕರನ್ನು ನಾಮನಿರ್ದೇಶನ ಮಾಡಬೇಕು. ಅವರು ಚಿತ್ರರಂಗದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಕೆಲಸ ಮಾಡುವಂತೆ ಮಾಡಬೇಕು. ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡಬೇಕು ಎನ್ನುವ ಉತ್ಸಾಹದಿಂದ ನಾನು ಚಿತ್ರರಂಗಕ್ಕೆ ಬಂದೆ. ಆದರೆ, ಇಲ್ಲಿನ ವ್ಯವಸ್ಥೆ ನೋಡಿ ಬೇಜಾರಾಗಿದೆ. ನಾನು ಮಾತ್ರವಲ್ಲ, ಚಿತ್ರರಂಗಕ್ಕೆ ಬರುತ್ತಿರುವ ನಿರ್ಮಾಪಕರು ಒಂದೆರಡು ಸಿನಿಮಾಗಳಿಗೆ ಸೀಮಿತ ಆಗುತ್ತಿರುವುದು ಯಾಕೆ ಎಂಬುದನ್ನು ಪತ್ತೆ ಮಾಡಿ. ನಟರು, ನಿರ್ಮಾಪಕರು, ತಂತ್ರಜ್ಞರು ಪಾಲುದಾರಿಕೆಯ ಭಾವನೆಯಲ್ಲಿ ಸಿನಿಮಾ ಮಾಡಬೇಕು.

'ಹಾಗೆ ಸುಮ್ಮನೆ' ಹೊಸ ಲುಕ್‌ ಎಂದ ಸೋನು ಗೌಡ: ಏನಮ್ಮಾ ಸೀರೆನಾ ಪ್ಯಾಂಟ್ ಮಾಡ್ಕೋಂಡಿದ್ಯಾ ಅನ್ನೋದಾ!

ಇಷ್ಟದ ನಟರನ್ನು ನೋಡಲು ಥಿಯೇಟರ್‌ಗೆ ಜನ ಬರುತ್ತಾರೆ, ಉದಯ್‌ ಮೆಹ್ತಾ: ಜನರ ಮುಂದೆ ಓಟಿಟಿ, ಟಿವಿ ರೂಪದಲ್ಲಿ ಒಂದು ದೊಡ್ಡ ಸಿನಿಮಾ ಲೈಬ್ರೆರಿಯೇ ಇದೆ. ಅದು ಎಚ್‌ ಡಿ ಕ್ವಾಲಿಟಿಯಲ್ಲೇ ಇದೆ. ಯಾವಾಗ ಬೇಕಾದರೂ ಆ ಲೈಬ್ರೆರಿಗೆ ಹೋಗಿ ಜನ ಸಿನಿಮಾ ನೋಡಬಹುದು. ಇಂಥ ವ್ಯವಸ್ಥೆಯಲ್ಲಿ ಜನ ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎಂದರೆ ಬರುತ್ತಾರೆ. ಯಾವಾಗ ಎಂದರೆ ತಾನು ಇಷ್ಟಪಟ್ಟ ನಟ, ನಟಿಯ ಸಿನಿಮಾ ಬಂದಾಗ ಅದನ್ನು ನೋಡಲು ಚಿತ್ರಮಂದಿರಗಳಿಗೆ ಬರುತ್ತಾರೆ ಎಂಬುದು ಈಗಾಗಲೇ ಸಾಬೀತು ಆಗಿದೆ. ಕಳೆದ ವರ್ಷದ ಸಿನಿಮಾಗಳ ಪಟ್ಟಿಯನ್ನು ತೆಗೆದುಕೊಂಡರೂ ಗೊತ್ತಾಗುತ್ತದೆ. ಅಂಥ ನಟರ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಇವರ ಜತೆಗೆ ಹೊಸಬರ ಅಥವಾ ಪ್ರಯೋಗಾತ್ಮಕ ಚಿತ್ರಗಳು ಶೇ.3 ರಿಂದ 4ರಷ್ಟು ಗೆದ್ದರೆ ಚಿತ್ರರಂಗ ಬ್ಯಾಲೆನ್ಸ್‌ ಆಗುತ್ತದೆ.

click me!