
1. ಒಬ್ಬ ದೀಪಾವಳಿಗೆ ಉರಿಸಲೆಂದು ಹಣತೆಗಳನ್ನು ಹೊತ್ತು ನಡೆದಿದ್ದ. ಅವನಿಗೆ ಬುದ್ಧಿವಂತನೊಬ್ಬ ಎದುರಾದ. ಕೇಳಿದ- ಅರೆ, ಈ ಹಣತೆಗಳಲ್ಲಿದ್ದ ಬೆಳಕು ಎಲ್ಲಿಗೆ ಹೋಯಿತು? ಹೇಳು!
ಆಗ ಆ ಹಣತೆಗಳನ್ನು ಹೊತ್ತು ತರುತ್ತಿದ್ದವನು, ಮೂಟೆಯನ್ನು ಕೆಳಗಿಳಿಸಿ, ಒಂದು ಹಣತೆಯನ್ನು ತೆಗೆದುಕೊಂಡು, ಅದರ ಬತ್ತಿಗೆ ಬೆಳಕನ್ನು ಹಚ್ಚಿ ಹೇಳಿದ- ನೋಡು, ಈ ಹಣತೆಯ ಬೆಳಕು ಎಲ್ಲಿಂದ ಬಂತು ಅಂತ ಹೇಳು. ಅಲ್ಲಿಗೇ ಈ ಬೆಳಕು ಹೋಗಿತ್ತು ಎಂದು ತಿಳಿ.
ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಮೋದಿ
2. ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದ ಹೋರಾಟಗಾರನೊಬ್ಬನನ್ನು ಬ್ರಿಟಿಷರು ಬಂಧಿಸಿ ಸೆರೆಮನೆಗೆ ಹಾಕಿದರು. ದೀಪಾವಳಿಗೆ ಅವನಿಗೆ ಬಿಡುಗಡೆ ಸಿಗಲಿಲ್ಲ. ಆಗ ಆತನ ಪತ್ನಿ ಅವನಿಗೆ ಪತ್ರ ಬರೆದಳು- ನೀನು ಸೆರೆಮನೆಯಲ್ಲಿರುವೆ, ಆದ್ದರಿಂದ ನಾನೂ ಈ ಸಲ ದೀಪಾವಳಿ ಆಚರಿಸಲಾರೆ. ನನಗೆ ಈ ದೀಪಾವಳಿ ಕತ್ತಲಿನಂತೆ ಭಾಸವಾಗುತ್ತಿದೆ.
ಅದಕ್ಕೆ ಆ ಕೈದಿ ಉತ್ತರ ಬರೆದ- ನಾನು ಸರೆಮನೆಯಲ್ಲಿರುವುದೇನೋ ನಿಜವೇ. ಆದರೆ ನಾನು ಹಗಲು ಕಿಟಕಿಯ ನಡುವಿನಿಂದ ತೂರಿ ಬರುವ ಸೂರ್ಯನ ಬೆಳಕಿನಲ್ಲಿ ಬಿಡುಗಡೆಯ ಭರವಸೆ ತೂರಬರುವುದನ್ನು ಕಾಣುತ್ತೇನೆ. ರಾತ್ರಿ ಇಲ್ಲಿ ಬಂದು ಬೀಳುವ ಚಂದ್ರನ ಬೆಳಕಿನ ಚೂರನ್ನು ನೋಡುತ್ತ ದೇಶದ ಸ್ವಾತಂತ್ರ್ಯವೂ ಒಂದಲ್ಲ ಒಂದು ದಿನ ಹೀಗೇ ಮೂಡಿಬರಲಿದೆ ಎಂದು ಭರವಸೆಯ ಆನಂದ ಅನುಭವಿಸುತ್ತಿದ್ದೇನೆ.
ಇದನ್ನು ಓದಿದ ಯೋಧನ ಪತ್ನಿಗೆ ಆ ಸಲದ ದೀಪಾವಳಿ ಪ್ರಿಯವಾಯಿತು.
ದೀಪಾವಳಿಗೆ ಸುಲಭ ಇಎಂಐ ಪ್ಲ್ಯಾನ್ ಘೋಷಿಸಿದ ಕಂಪಾಸ್
3. ಈ ಸಲ ಪಟಾಕಿ ಇಲ್ವಾ ಪಪ್ಪಾ- ಮಗಳು ಬೇಸರದಿಂದ ಕೇಳಿದಳು.
ಇಲ್ಲ ಮಗಳೇ, ಸರಕಾರ ನಿಷೇಧ ಮಾಡಿದೆ. ಕೊರೊನಾ ಕಾಯಿಲೆಯವರಿಗೆ ತೊಂದರೆ ಆಗಬಾರದಲ್ಲ? ಅಪ್ಪ ಹೇಳಿದ.
ಹಾಗಾದರೆ ಕೊರೊನಾ ಕಾಯಿಲೆ ಎಲ್ಲಾ ಹೋಗಿ ಎಲ್ಲರೂ ಗುಣಮುಖರಾದ ಮೇಲೆ ನಾವು ಪಟಾಕಿ ಹೊಡೆಯೋಣಾ? ಮಗಳು ಕೇಳಿದಳು.
ಅಂದಿನಿಂದ ಎಲ್ಲ ಅಪ್ಪ-ಅಮ್ಮ- ಮಕ್ಕಳು ಪಟಾಕಿ ಹೊಡೆಯುವ ಆ ಶುಭ ದಿನಕ್ಕಾಗಿ ಕಾಯುತ್ತಿದ್ದಾರೆ.
4.ಆ ಮಹಾರಾಜನಿಗೆ ಒಬ್ಬಳೇ ಮಗಳು. ದುರದೃಷ್ಟವಶಾತ್ ಆಕೆ ಹುಟ್ಟುಕುರುಡಿ. ಕುರುಡಿಯಲ್ವೇ, ಏನೂ ಗೊತ್ತಾಗೊಲ್ಲ ಎಂದು ಆಕೆಯನ್ನು ಅರಮನೆಯಲ್ಲೇ ಇಟ್ಟಿದ್ದ ರಾಜ. ಆಕೆಗೆ ಹೊರಗೆ ಹೋಗಲು ಅವಕಾಶವನ್ನೇ ಕೊಡ್ತಾ ಇರಲಿಲ್ಲ. ಒಮ್ಮೆ ಆಕೆ ದಂಡನಾಯಕನ ಮಗನ ಜೊತೆ ಅರಮನೆಯ ಹೊರಗಿನ ಒಂದು ಪಾಳು ಮನೆಯಲ್ಲಿ ಸರಸದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಳು. ರಾಜನಿಗೆ ಆಶ್ಚರ್ಯವಾಯಿತು.
ಆಕೆಯನ್ನು ಕರೆಸಿ ಕೇಳಿದ- ಎಲಾ, ನೀನು ಹುಟ್ಟುಕುರುಡಿ, ನಿನಗೆ ಇದು ಹೇಗೆ ಸಾಧ್ಯವಾಯಿತು? ಅರಮನೆಯಲ್ಲೂ ಆಚೆಗೂ ಕಾವಲಿರುವ ಹತ್ತಾರು ಭಟರ ಕಣ್ಣು ತಪ್ಪಿಸಿ, ಪಾಳು ಮನೆಗೆ ಹೋಗಿ ಆತನನ್ನು ಕೂಡಲು ಹೇಗೆ ಸಾಧ್ಯವಾಯಿತು?
ದೀಪಾವಳಿ: ಅದೃಷ್ಟಕ್ಕಾಗಿ ಹೀಗ್ ಮಾಡಿ
ಆಕೆ ಹೇಳಿದಳು- ಅದೇನೋ ಗೊತ್ತಿಲ್ಲ ಅಪ್ಪಾ, ಆತನ ಪ್ರೀತಿ ನನ್ನನ್ನು ಆ ಹೊತ್ತಿಗೆ ಕರೆಯುತ್ತಿತ್ತು. ಆತನ ಕಂಗಳ ಬೆಳಕಿನಲ್ಲಿ ದಾರಿ ಕಾಣಿಸುತ್ತಿತ್ತು. ನಾನು ಕುರುಡಿ ಎಂಬುದನ್ನೂ ಮರೆತು ನಡೆಯತೊಡಗುತ್ತಿದ್ದೆ. ದಾರಿ ತಾನಾಗಿಯೇ ಕಾಣಿಸುತ್ತಿತ್ತು ಒಂದು ದಿನವೂ ಸಿಕ್ಕಿಬೀಳಲಿಲ್ಲ, ಎಡವಲೂ ಇಲ್ಲ ಬೀಳಲೂ ಇಲ್ಲ. ಅಷ್ಟೇ.
ರಾಜ ಆಕೆಯ ಪ್ರೀತಿಯ ಗಾಢತೆಯನ್ನು ಅರಿತ. ಆಕೆಗೂ ದಂಡನಾಯಕನ ಮಗನಿಗೂ ಮದುವೆ ಮಾಡಿದ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.