ಡಿವೋರ್ಸ್‌ ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ: ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ

Published : Apr 08, 2026, 11:39 AM IST
Family lavish welcome for divorced daughter

ಸಾರಾಂಶ

ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶರ ಕಥೆ ವೈರಲ್ ಆಗಿತ್ತು. ಆದರೆ, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಯುವತಿಯ ಮಾಜಿ ಪತಿಯ ಕುಟುಂಬವು ತಮ್ಮ ಮೇಲಾದ ದೌರ್ಜನ್ಯ ಮತ್ತು ಸಾಮಾಜಿಕ ಅವಮಾನದ ಬಗ್ಗೆ ಮಾತನಾಡಿದ್ದಾರೆ. 

ಡಿವೋರ್ಸ್‌ ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ

ನವದೆಹಲಿ: ಕೆಲ ದಿನಗಳ ಹಿಂದೆ ಕೌಟುಂಬಿಕ ಕಲಹದ ನಂತರ ತನ್ನ ಪುತ್ರಿಯನ್ನು ಮಾಜಿ ನ್ಯಾಯಾಧೀಶರೊಬ್ಬರು ಬಹಳ ಅದ್ಧೂರಿಯಾಗಿ ಮನೆಗೆ ಬರ ಮಾಡಿಕೊಂಡ ಘಟನೆ ನಡೆದಿತ್ತು. ಇದರ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಡಿವೋರ್ಸ್ ಎಂದರೆ ಸಮಾಜದಲ್ಲಿ ಕೆಡುಕು ಎಂಬ ಭಾವನೆ ಇದೆ. ಡಿವೋರ್ಸ್ ಆದ ಹೆಣ್ಣು ಮಕ್ಕಳನ್ನು ಆಕೆಯ ಪೋಷಕರು ಕೂಡ ಸ್ವೀಕರಿಸುವುದಿಲ್ಲ, ಹೀಗಾಗಿ ಹೆಣ್ಣು ಮಕ್ಕಳು ಬೇರೆ ದಾರಿ ಕಾಣದೇ ಸಾವಿನ ದಾರಿ ಹಿಡಿಯುತ್ತಿದ್ದರು.ಆದರೆ ಒಲ್ಲದ ಸಂಬಂಧದಲ್ಲಿ ಇದ್ದು ಸಾಯುವ ಬದಲು ಡಿವೋರ್ಸ್ ತುಂಬಾ ಒಳ್ಳೆಯದು. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಧೀಶರು ತಮ್ಮ ಪುತ್ರಿಯನ್ನು ಅದ್ದೂರಿಯಾಗಿ ಬರಮಾಡಿಕೊಂಡಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂಬೆಲ್ಲಾ ಮಾತುಗಳು, ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಈ ಪ್ರಕರಣದ ಹಿಂದಿನ ಮತ್ತೊಂದು ಮುಖ ಈಗ ಬಯಲಾಗಿದೆ.

ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ

ಡಿವೋರ್ಸ್ ಪಡೆದ ಮಹಿಳೆಯ ಈ ಡಿವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ತಿಳಿಸಿದ್ದು, ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. @DeepikaBhardwaj ಎಂಬುವವರು ಈ ಬಗ್ಗೆ ಪೋಸ್ಟ್ ಮಾಡಿದ್ದು, ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ನಾನು ನಿವೃತ್ತ ಸುಬೇದಾರ್ ಶ್ಯಾಮ್ ಕಿಶೋರ್ ಅಗ್ನಿಹೋತ್ರಿ ಅವರೊಂದಿಗೆ ಮಾತನಾಡಿದೆ. ಇವರು ಮೇಜರ್ ಗೌರವ್ ಅಗ್ನಿಹೋತ್ರಿ ಅವರ ತಂದೆ ಡಿವೋರ್ಸ್‌ ಪಡೆದ ಪ್ರಣೀತಾ ಅವರ ಮಾಜಿ ಪತಿ, ಪ್ರಣೀತಾ ನಿವೃತ್ತ ನ್ಯಾಯಾಧೀಶ ಜ್ಞಾನೇಂದ್ರ ಶರ್ಮಾ ಅವರ ಮಗಳು, ಇವರು ವಿಚ್ಛೇದನದ ನಂತರ ತಮ್ಮ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ಸುದ್ದಿಯಲ್ಲಿದ್ದಾರೆ.

ಸುಳ್ಳು ಕೇಸ್, ವಂಚನೆಯ ಆರೋಪ ಹೊರಿಸಿದ ಮಾವ

ಮಾತುಕತೆ ವೇಳೆ ಶ್ಯಾಮ್ ಕಿಶೋರ್ ಜಿ ನನ್ನ ಜೊತೆ ಈ ವಿಚಾರದ ಬಗ್ಗೆ ಹಲವು ವಿಚಾರಗಳನ್ನು ಹೇಳಿದ್ದರು. ಪ್ರಣೀತಾ ಕುಟುಂಬದ ಈ ಸಾಮಾಜಿಕ ಮಾಧ್ಯಮ ಪ್ರದರ್ಶನದಿಂದ ನಮ್ಮ ಕುಟುಂಬವು ಅಪಾರ ಅಪಹಾಸ್ಯಕ್ಕೆ ಒಳಗಾಗಿದೆ. ನಮ್ಮ ವಿರುದ್ಧ ಹರಡುತ್ತಿರುವ ಸುಳ್ಳುಗಳನ್ನು ಕೇಳಿ ನಾವು ಕಣ್ಣೀರು ಹಾಕುತ್ತಿದ್ದೇವೆ. ಈ ಮದುವೆಯ ಉದ್ದಕ್ಕೂ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿದ್ದು ಪ್ರಣೀತಾ ಮತ್ತು ಅವರ ಕುಟುಂಬ. ನಾವು ಅವಳನ್ನು ಮಗಳಂತೆ ನೋಡಿಕೊಂಡೆವು ಆದರೆ ಅವರಿಗೆ ಕೆಲವು ವಿಭಿನ್ನ ಯೋಜನೆಗಳಿದ್ದವು.

ಈ ಮದುವೆಯು ಸಂಪೂರ್ಣವಾಗಿ ವರದಕ್ಷಿಣೆ ಇಲ್ಲದೆ ನಡೆಯಿತು ಮತ್ತು ಭಿನ್ನಾಭಿಪ್ರಾಯಗಳು ಮದುವೆಯ ದಿನದಿಂದಲೇ ಪ್ರಾರಂಭವಾಯಿತು. ಅವರು ಎಲ್ಲವನ್ನೂ ತಮ್ಮ ಇಚ್ಛೆಯಂತೆ ಮಾಡಲು ಬಯಸಿದ್ದರು. ಮದುವೆಯಾದ ಒಂದು ವರ್ಷದೊಳಗೆ ಅವರು ನಮ್ಮೆಲ್ಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದರು ಮತ್ತು ಜ್ಞಾನೇಂದ್ರ ಶರ್ಮಾ ನಮ್ಮನ್ನು ಜೈಲಿಗೆ ಕಳುಹಿಸುವುದಾಗಿ ನಮ್ಮೆಲ್ಲರನ್ನೂ ಬೆದರಿಸುತ್ತಿದ್ದರು. ಅವರು 25000 ರೂಪಾಯಿ ನೀಡಿ ಆರೋಪಗಳಿಗೆ ತಕ್ಕನಾದ ನಕಲಿ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದರು.

ನಂತರ ನನ್ನ ಮಗ ಉತ್ತರಾಖಂಡದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದರು, ನಂತರ ತನಿಖೆ ಆರಂಭಿಸಲಾಯಿತು ಮತ್ತು ಶರ್ಮಾ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಂಡು ಬಂದಾಗ, ಅವರಿಗೆ ರಾಜೀನಾಮೆ ನೀಡಲು ಅಥವಾ ಈ ವಿಷಯವನ್ನು ಇತ್ಯರ್ಥಪಡಿಸಲು ಕೇಳಲಾಯಿತು. ಈ ಪ್ರಕರಣ ಅವರ ವಿರುದ್ಧ ತಿರುಗುತ್ತಿದೆ ಎಂದು ತಿಳಿದಾಗ ಪ್ರಣೀತಾ ಹಿಂತಿರುಗಿದಳು.

ನಾವು ನಮ್ಮ ಮಗನನ್ನು ಭೇಟಿ ಮಾಡಲು ಹೋದಾಗಲೆಲ್ಲಾ, ಅವಳು ನಮ್ಮೊಂದಿಗೆ ಜಗಳವಾಡುತ್ತಿದ್ದಳು ಮತ್ತು ನಮ್ಮನ್ನು ಅಲ್ಲಿರುವುದಕ್ಕೆ ಬಿಡುತ್ತಿರಲಿಲ್ಲ, ನನ್ನ ಮಗನ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಾನು ಎಲ್ಲದಕ್ಕೂ ಹೊಂದಿಕೊಂಡೆ. ಇದೆಲ್ಲದರ ನಡುವೆ, ಪ್ರಣೀತಾಳ ಸಹೋದರ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದನು. ನನ್ನ ಮಗ ಅವನನ್ನು ನೋಡಿಕೊಳ್ಳಲು ದಿನಗಟ್ಟಲೆ ಆಸ್ಪತ್ರೆಯಲ್ಲಿದ್ದನು. ಆದರೆ ಆತನ ಸ್ವಂತ ಕುಟುಂಬದವರಿಗೆ ಆತನ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ, ಚಿಕಿತ್ಸೆ ಫಲಿಸದೇ ಆತ( ಪ್ರಣೀತಾಳ ಸಹೋದರ) ನಂತರ ನಿಧನನಾದನು.

ಇದೆಲ್ಲದರ ನಡುವೆ ಕಳೆದ ವರ್ಷ, ಪ್ರಣೀತಾ ಗಂಡು ಮಗುವಿಗೆ ಜನ್ಮ ನೀಡಿದಳು. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೆವು. ಆದರೆ ನಮ್ಮ ಮೊಮ್ಮಗ ಜನಿಸಿದ ದಿನ, ಪ್ರಣೀತಾಳ ತಾಯಿ ತನ್ನ ಮಗ ಈ ಮೂಲಕ ಹಿಂತಿರುಗಿದ್ದಾನೆ ಎಂದು ಹೇಳಿಕೊಳ್ಳಲು ಪ್ರಾರಂಭಿಸಿದಳು. ನಾವು ನಮ್ಮ ಮೊಮ್ಮಗನೊಂದಿಗೆ ಇರಲು ಸಾಧ್ಯವಾಗಲಿಲ್ಲ. ನಂತರ ಒಂದು ದಿನ ಅವರು ಮಗುವಿನ ಮುಂಡನ ಕಾರ್ಯ ಮಾಡುವುದಾಗಿ ಘೋಷಿಸಿದರು. ಆದರೆ ಮಗುವಿನ ತಂದೆಯ ಕುಟುಂಬವಾಗಿ ಅದನ್ನು ಮಾಡುವುದು ನಮ್ಮ ಹಕ್ಕು ಎಂದು ನಾವು ಹೇಳಿದೆವು ಅವರು ಜಗಳವಾಡಲು ಪ್ರಾರಂಭಿಸಿದರು ಮತ್ತು ತಕ್ಷಣ ವಿಚ್ಛೇದನವನ್ನು ಕೇಳಿದರು. ಆದರೆ ನನ್ನ ಮಗನಿಗೆ ವಿಚ್ಛೇದನ ಬೇಕಾಗಿರಲಿಲ್ಲ ಆದರೆ ನಾವು ಸಹ ದಣಿದಿದ್ದೆವು. ಹಾಗಾಗಿ ನಾವು ಒಪ್ಪಿಕೊಂಡೆವು.

ಅವರು ಈ ಪ್ರಕರಣದಲ್ಲಿ ಜೀವನಾಂಶ ತೆಗೆದುಕೊಂಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ನಾನು ನನ್ನ ಸೊಸೆಯ ಹೆಸರಿಗೆ ನನ್ನ 3 ಬಿಘಾ ಭೂಮಿಯನ್ನು ವರ್ಗಾಯಿಸಿದ್ದೇನೆ. ಅವರು ನನ್ನ ಮಗನ ಕಾರನ್ನು ಇಟ್ಟುಕೊಂಡಿದ್ದಾರೆ. 55ರಿಂದ 60 ಲಕ್ಷ ಮೌಲ್ಯದ ನಮ್ಮ ಆಭರಣಗಳು ಅವಳ ಬಳಿ ಇವೆ. ಇದರ ಜೊತೆಗೆ ನಾವು ಎಂದಿಗೂ ಜೀವನಾಂಶ ನೀಡಲು ನಿರಾಕರಿಸಲಿಲ್ಲ. ನಮ್ಮ ಮೊಮ್ಮಗನ ಜೀವನದಲ್ಲಿ ನಮಗೆ ಯಾವುದೇ ಉಪಸ್ಥಿತಿ ಇರಬಾರದು ಎಂದು ಅವರು ವಿಚ್ಛೇದನ ಪಡೆದಿದ್ದಾರೆ. ಅವರು ನಮ್ಮಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸಿದ್ದಾರೆ. ಭೇಟಿಯ ಹಕ್ಕನ್ನು ಸಹ ಮರೆತು ನನ್ನ ಮಗನಿಗೆ ವಿಚ್ಛೇದನಕ್ಕೆ ಒಪ್ಪಿಕೊಳ್ಳಲು ಅವರು ಹೇಳಿದರು.

ಇದನ್ನೂ ಓದಿ: ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಕೋಮಾದಲ್ಲಿ: ಕೋಂ ನಗರದಲ್ಲಿ ಚಿಕಿತ್ಸೆ

ಇದು ಶಾಂತಿಯನ್ನು ತರಬಹುದೇನೋ ಎಂದು ಯೋಚಿಸಿ ನಾವು ಅವರ ಬೇಡಿಕೆಗಳಿಗೆ ಒಪ್ಪಿಕೊಂಡೆವು. ಆದರೆ ನಾವು ಅವರನ್ನು ನಂಬಿದ್ದು ತಪ್ಪು. ಅವರು ಪರಸ್ಪರ ಒಪ್ಪಿಗೆಯ ವಿಚ್ಛೇದನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ನನ್ನ ಕುಟುಂಬವು ಈಗ ಭಾರತದಾದ್ಯಂತ ಅವಮಾನಿಸಲ್ಪಡುತ್ತಿದೆ. ಈ ಅವಮಾನದಿಂದಾಗಿ ನನ್ನ ಹೆಂಡತಿ ಅಳು ನಿಲ್ಲಿಸುತ್ತಿಲ್ಲ. ಇತ್ತ ನನ್ನ ಮಗನಿಗೆ ಆತನ ಫೋಟೋಗಳು ಮತ್ತು ಅವನ ಘಟಕದ ವಿವರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದನ್ನು ಹೇಗೆ ಎದುರಿಸಬೇಕೆಂದು ತಿಳಿದಿಲ್ಲ ಎಂದು ಪ್ರಣೀತಾ ಮಾವ ಕಣ್ಣೀರಿಟ್ಟಿದ್ದಾರೆ.

ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಜನ ಪ್ರಕರಣಕ್ಕಿರುವ ಮತ್ತೊಂದು ಮುಖದ ಬಗ್ಗೆ ತಿಳಿದು ಆಘಾತ ವ್ಯಕ್ತಪಡಿಸಿದ್ದಾರೆ. ಆಕೆಯ ತಂದೆ ನಿವೃತ್ತ ಜಡ್ಜ್ ಆಗಿದ್ದು, ಅವರು ಕಾನೂನನ್ನು ದುರುಪಯೋಗಪಡಿಸಿಕೊಂಡು 2 ಕುಟುಂಬವನ್ನು ಹಾಳು ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇಂದಿನ ಕಾಲದಲ್ಲಿ ಹುಡುಗರು ಬದುಕುವುದು ಕಷ್ಟ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹೋರ್ಮುಜ್ ಜಲಸಂಧಿ ತೆರೆಯಬೇಕೆಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೊತ್ತುವಳಿಗೆ ರಷ್ಯಾ, ಚೀನಾ ಬ್ರೇಕ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹುಡುಗಿಯರೇ ಹುಷಾರ್​: ನಿಮ್ಮನ್ನು ಟ್ರ್ಯಾಪ್​ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋಡಿ
ಮದುವೆ ಮಾಡಿಸುವಂತೆ ಹೈಟೆನ್ಷನ್ ಟವರ್ ಏರಿ 9 ಗಂಟೆ ಹೈಡ್ರಾಮಾ: ಯುವತಿಯ ಪ್ರೇಮ ಹಠಕ್ಕೆ ಪೊಲೀಸರು ಸುಸ್ತೋ ಸುಸ್ತು!