
ಪ್ರೀತಿಗಾಗಿ ಯುವಕ ಯುವತಿಯರು ಇಲೆಕ್ಟ್ರಿಕ್ ಕಂಬ, ಮೊಬೈಲ್ ಟವರ್ ಏರುವಂತಹ ಘಟನೆಗಳು ದೇಶದ ಹಲವು ಕಡೆಗಳಲ್ಲಿ ಆಗಾಗ ನಡೆಯುತ್ತಲೇ ಇವೆ. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಳು ತನ್ನ ಗೆಳೆಯ ತನ್ನನ್ನು ಮದುವೆಯಾಗಬೇಕು ಎಂದು ಒತ್ತಾಯಿಸಿ ಹೈಟೆನ್ಸನ್ ಇಲೆಕ್ಟ್ರಿಸಿಟಿ ಟವರ್ ಏರಿದ್ದಾಳೆ. ಅಪಾಯಕಾರಿ ಟವರ್ ಮೇಲೇರಿ ಕುಳಿತ ಆಕೆಯನ್ನು ಕೆಳಗಿಳಿಸುವುದಕ್ಕೆ ಪೊಲೀಸರು ಹರಸಾಹಸ ಮಾಡವೇಕಾಯ್ತು. ಬಿಹಾರದ ವೈಶಾಲಿಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಕೈಯಲ್ಲಿ ಮೊಬೈಲ್ ಹಿಡಿದು 1.32 ಲಕ್ಷ ವೋಲ್ಟ್ ಕರೆಂಟ್ ಹರಿದಾಡುವ ಕರೆಂಟ್ ಟವರ್ ಏರಿ ಸಾಯುವ ಬೆದರಿಕೆ ಹಾಕಿದ್ದಳು.
ಬಿಹಾರದ ವೈಶಾಲಿ ಜಿಲ್ಲೆಯ ಮಹ್ನಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 100 ಅಡಿ ಎತ್ತರದ ವಿದ್ಯುತ್ ಟವರ್ ಏರಿದ ಯುವತಿ ತನ್ನ ಮದುವೆಯ ಬೇಡಿಕೆ ಈಡೇರಿಸದೇ ಹೋದಲ್ಲಿ ಮೇಲಿಂದ ಕೆಳಗೆ ಹಾರಿ ಪ್ರಾಣ ಬಿಡುವುದಾಗಿ ಬೆದರಿಸುತ್ತಿದ್ದಳು. ಯುವತಿ ಯುವಕನೋರ್ವನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗಲು ನಿರ್ಧರಿಸಿದ್ದಳು. ಆದರೆ ಯುವಕ ಆಕೆಯನ್ನು ಮದುವೆಯಾಗುವುದಕ್ಕೆ ನಿರಾಕರಿಸಿದ್ದ ಎನ್ನಲಾಗಿದೆ. ಹೀಗಾಗಿ ಟವರ್ ಏರಿದ ಯುವತಿ ಸುಮಾರು 9 ಗಂಟೆಗಳ ಕಾಲ ಟವರ್ ಮೇಲಿಂದ ಕೆಳಗಿಳಿಯದೇ ಹೈಡ್ರಾಮಾ ಸೃಷ್ಟಿಸಿದ್ದರಿಂದ ಅಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ಇದನ್ನೂ ಓದಿ: ಎಐ ಯುಗದಲ್ಲಿ ಬೆಳಗಿದ ಬ್ಲೂ ಕಾಲರ್ ಬದುಕು: ಸಾಫ್ಟ್‌ವೇರ್ ಉದ್ಯೋಗಿಗಳಿಗಿಂತ ಬಡಗಿ, ಪ್ಲಂಬರ್‌ಗಳೇ ಈಗ 'ಕಿಂಗ್'!
ಮಹಿಳೆಯೊಬ್ಬಳು ಟವರ್ ಏರಿದ್ದಾಳೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಮುಂದೆ ದೊಡ್ಡ ಅನಾಹುತವಾಗಬಹುದು ಎಂಬ ಭೀತಿಯಿಂದ ಸ್ಥಳಕ್ಕೆ ಅಧಿಕಾರಿಗಳು ಪೊಲೀಸರು ಭೇಟಿ ನೀಡಿದ್ದು, ವಿದ್ಯುತ್ ನಿಗಮಕ್ಕೂ ಕೂಡಲೇ ಮಾಹಿತಿ ನೀಡಲಾಗಿತ್ತು. ಹೀಗಾಗಿ ಆ ಟವರ್‌ಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಸ್ಥಳೀಯ ಪೊಲೀಸರು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಅನೇಕರು ಘಟನಾ ಸ್ಥಳಕ್ಕೆ ತಲುಪಿ ಯುವತಿಯ ಮನವೊಲಿಸುವ ಪ್ರಯತ್ನ ಮಾಡಿದರು. ಪೊಲೀಸ್ ಅಧಿಕಾರಿಗಳು ಹಲವು ಗಂಟೆಗಳಿಂದ ಮಾಡಿದ ಮನವಿಗೂ ಆಕೆ ಒಪ್ಪದೇ ಅಲ್ಲೇ ಗಟ್ಟಿಯಾಗಿ ಕುಳಿತಿದ್ದಲ್ಲದೇ ಆಗಾಗ ಸಾಯುವುದಾಗಿ ಬೆದರಿಕೆ ಹಾಕುತ್ತಲೇ ಇದ್ದಳು.
ಯುವತಿ ಯಾವುದಕ್ಕೂ ಬಗ್ಗದೇ ಹೋದಾಗ ಪೊಲೀಸರು ವಿಭಿನ್ನ ದಾರಿ ಹಿಡಿದಿದ್ದು, ಮೈಕ್ರೋಫೋನ್ ಬಳಸಿ ಒಬ್ಬ ಪೊಲೀಸ್ ಅಧಿಕಾರಿ ಆಕೆಗೆ ಭಾವುಕವಾಗಿ ಮನವಿ ಮಾಡಿದ್ದಾರೆ. ನೀವು ಕೆಳಗಿಳಿದು ಬಾರದೇ ಹೋದರೆ ನಮ್ಮ ಉದ್ಯೋಗ ಹೋಗುತ್ತದೆ. ನೀನು ಕೆಳಗಿಳಿದು ಬಂದರೆ ಒಂದು ಗಂಟೆಯೊಳಗೆ ನೀನು ಪ್ರೀತಿಸಿದ ಹುಡುಗನನ್ನು ಹುಡುಕಿ ಆಕೆಯ ಜೊತೆ ಮದುವೆ ಮಾಡಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಆಕೆಗೆ ಭರವಸೆ ನೀಡಿದರು.
ಮಗಳೇ ನೀನು ನನ್ನ ಉದ್ಯೋಗ ಹೋಗಬೇಕೆಂದು ಬಯಸಿರುವೆಯಾ, ತಕ್ಷಣ ಕೆಳಗಿಳಿದು ಬಾ, ನಾನು ನಿನಗೆ ಭರವಸೆ ನೀಡುವೆ. ನೀನು ಕೆಳಗಿಳಿದು ಬಂದರೆ ಒಂದು ಗಂಟೆಯೊಳಗೆ ನಿನ್ನ ಮದುವೆ ಆಗುವಂತೆ ನಾನು ನೋಡಿಕೊಳ್ಳುವೆ ಎಂದು ಪೊಲೀಸ್ ಅಧಿಕಾರಿ ಆಕೆಗೆ ಭರವಸೆ ನೀಡಿದ್ದಾರೆ. ಹಾಗೆಯೇ ಮತ್ತೊಬ್ಬ ಪೊಲೀಸ್ ಅಧಿಕಾರಿ, ಆಕೆಯೊಮದಿಗೆ ಫೋನ್ ಮೂಲಕ ನೇರವಾಗಿ ಮಾತನಾಡಿದ್ದು, ಆಕೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಆದರೂ ಯುವತಿ ಕೆಳಗಿಳಿದು ಬರುವುದಕ್ಕೆ ಒಪ್ಪದೇ ಮೇಲೆಯೇ ಕುಳಿತಿದ್ದಳು.
ಕಡೆಗೆ ಪೊಲೀಸರು ಆಕೆಯ ರಕ್ಷಣೆಗಾಗಿ 100 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಿದರು. ಸಮಯ ಹೋದಂತೆ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿತ್ತು. ಆಕೆಯ ರಕ್ಷಣೆಗಾಗಿ ಹೆಚ್ಚುವರಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಯ್ತು. ಅಲ್ಲದೇ ಆಕೆಯ ಜೊತೆ ಮಾತುಕತೆಯನ್ನು ಮುಂದುವರೆಸಲಾಯ್ತು. ಕೊನೆಗೆ ಪೊಲೀಸರು ಆಕೆಯ ಪ್ರೇಮಿಯನ್ನು ಸ್ಥಳಕ್ಕೆ ಕರೆಸಿದ್ದು, ಆತ ಸ್ಥಳಕ್ಕೆ ಬಂದ ನಂತರವೇ ಆಕೆ ಇಲೆಕ್ಟ್ರಿಕ್ ಟವರ್‌ನಿಂದ ಕೆಳಗಿಳಿಯುವುದಕ್ಕೆ ಒಪ್ಪಿದ್ದಾಳೆ. ಈಕೆಯ ಡ್ರಾಮಾದಿಂದಾಗಿ 4 ಪೊಲೀಸ್ ಠಾಣೆಯ 100ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು. ನಂತರ ಆಕೆಯನ್ನು ಕೊನೆಗೂ ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಆದರೆ ಆಕೆಗೆ ಕೊಟ್ಟ ಭರವಸೆಯಂತೆ ಪೊಲೀಸರು ಮದುವೆ ಮಾಡಿಸಿಲ್ಲ, ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ನಡೆದಿವೆ.
ಇದನ್ನೂ ಓದಿ: 21ನೇ ವಯಸ್ಸಿಗೆ ಅಕ್ಷರಾಭ್ಯಾಸ: ಏರ್‌ಪೋರ್ಟ್ ಸ್ಟಾಫ್ ಆಗಿ ಬದುಕು ಬಲಿಸಿಕೊಂಡ ಮನೆಗೆಲಸದ ಹುಡುಗಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.