ಜಪಾನ್ ನಲ್ಲಿ ಹೊಸ ಉದ್ಯೋಗವೊಂದು ಸೃಷ್ಟಿಯಾಗಿದೆ. ಇವರ ಕೆಲಸ ಕಚೇರಿಗಳಿಗೆ ತೆರಳಿ ಅಲ್ಲಿನ ಉದ್ಯೋಗಿಗಳನ್ನು ಅಳಿಸುವುದು, ಅವರೊಂದಿಗೆ ತಾವೂ ಅಳುವುದು. ಈ ಮೂಲಕ ಉದ್ಯೋಗಿಗಳ ಒತ್ತಡ ಕಡಿಮೆಗೊಳಿಸುವ ವಿನೂತನ ಕಾರ್ಯ ಆರಂಭವಾಗಿದೆ.
ಮನಸ್ಸಿಗೆ ಹಿಂಸೆಯಾದಾಗ, ಬೇಸರವಾದಾಗ, ದೈಹಿಕವಾಗಿ ನೋವಾದಾಗ ಸಹಜವಾಗಿ ಅಳು ಬರುತ್ತದೆ. ಅಳುವುದು ಮನುಷ್ಯ ಸಹಜ ನಡವಳಿಕೆ. ಕೆಲವರಿಗೆ ಅಳು ಸರಕ್ಕನೆ ನುಗ್ಗಿದರೆ, ಕೆಲವರಿಗೆ ಸ್ವಲ್ಪ ತಡೆದು ಅಳು ಬರಬಹುದು, ಒಟ್ಟಿನಲ್ಲಿ ಅಳದ ಮನುಷ್ಯರಿಲ್ಲ. ಕಣ್ಣೀರು ಬಂದಾಗ ಎಷ್ಟೇ ನೋವಿನಲ್ಲಿದ್ದರೂ ಮನಸ್ಸಿಗೆ ಚೂರು ಹಿತವೆನಿಸುತ್ತದೆ. ಅತೀವ ದುಃಖದ ಸನ್ನಿವೇಶಗಳನ್ನು ಹೊರತುಪಡಿಸಿ, ಅತ್ತಾಗ ಮನಸ್ಸಿಗೆ ಸಮಾಧಾನವೆನ್ನಿಸುತ್ತದೆ. ಅಂದರೆ, ಅಳುವುದು ಆರೋಗ್ಯಕ್ಕೆ ಉತ್ತಮವೇ ಆಗಿದೆ. ಈ ಮನೋವೈಜ್ಞಾನಿಕ ಕಾರಣವನ್ನೇ ಇಟ್ಟುಕೊಂಡು ಜಪಾನ್ ಕಂಪೆನಿಗಳು “ಅಳುವ ಸುಂದರ ಉದ್ಯೋಗಿʼಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಳುವುದೂ ಒಂದು ವೃತ್ತಿಪರ ಕಾರ್ಯವಾಗಬಲ್ಲದು ಎಂದು ಜಪಾನ್ ಕಂಪೆನಿಯೊಂದು ತೋರಿಸಿಕೊಟ್ಟಿದೆ. ಹಿಂದೆ, ಯಾರಾದರೂ ಮೃತರಾದಾಗ ಮನೆಗೆ ಬಂದು ಅಳುವ ಹೆಂಗಸರನ್ನು ಹಣ ಕೊಟ್ಟು ಕರೆಸುವ ಪದ್ಧತಿಯಿತ್ತು. ಉಳ್ಳವರು ಸತ್ತಾಗ ಮನೆಗೆ ಬಂದು ಅವರ ಮೃತದೇಹದ ಮುಂದೆ ಕುಳಿತು ಅಳುವುದೇ ಇವರ ಕೆಲಸವಾಗಿತ್ತು. ಆದರೆ, ಇದು ಸ್ವಲ್ಪ ವಿಭಿನ್ನ ರೀತಿಯ ಕೆಲಸ. ಕಚೇರಿಯ ಅಧಿಕ ಕೆಲಸದಿಂದ ನೊಂದವರನ್ನು ಅಳಿಸುವ ಮೂಲಕ ಅವರನ್ನು ಹಗುರಾಗಿಸುವ ವೃತ್ತಿ.
ಎಲ್ಲರಿಗೂ ತಿಳಿದಿರುವಂತೆ ಜಪಾನ್ (Japan) ಜನ ಸಿಕ್ಕಾಪಟ್ಟೆ ಶ್ರಮಜೀವಿಗಳು. ಹಾಗೆಯೇ, ಉದ್ಯೋಗದ ಒತ್ತಡ (Work Pressure) ಜಪಾನ್ ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು. ದೀರ್ಘ ಕೆಲಸದ ಅವಧಿ (Long Working Hour) ಹಾಗೂ ಉದ್ಯೋಗಿಗಳಿಂದ ನಿರೀಕ್ಷೆ ಹೆಚ್ಚಾಗಿರುವುದರಿಂದ ಉದ್ಯೋಗಿಗಳಿಗೆ (Workers) ಒತ್ತಡವೂ ಹೆಚ್ಚು. ಇದು ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಗಮನಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಪಾನ್ ಕಂಪೆನಿಗಳು ವಿನೂತನ ಹಾಗೂ ಅಸಾಂಪ್ರದಾಯಿಕ ಮಾರ್ಗವನ್ನು ಕಂಡುಕೊಳ್ಳುತ್ತಿವೆ. ಉದ್ಯೋಗಿಗಳಿಗೆ ಭಾವನಾತ್ಮಕ ಬೆಂಬಲ (Emotional Support) ನೀಡುವ ಉದ್ದೇಶದಿಂದ “ಸುಂದರ ಅಳುವ ಹುಡುಗʼರನ್ನು ನೇಮಕ ಮಾಡಿಕೊಳ್ಳುತ್ತಿವೆ. ಈ ವೃತ್ತಿಯ ಹೆಸರು “ಸುಂದರ ಅಳುವ ಹುಡುಗರು (Beautiful Weeping Boys)ʼ. ಇದಕ್ಕೆ ಸೇರಬೇಕು ಅಂದ್ರೆ ಯುವಕರಾಗಿರಬೇಕು, ಆಕರ್ಷಕರಾಗಿರಬೇಕು. ಇವರನ್ನು ಇಕೆಮೆಶೊ ದಾನ್ಷಿ ಎಂದು ಕರೆಯಲಾಗುತ್ತದೆ. ಅಂದರೆ, “ಹ್ಯಾಂಡ್ ಸಮ್ ಟಿಯರ್ ಫುಲ್ ಬಾಯ್ಸ್ʼ ಎಂದರ್ಥ.
ವಾಟ್ಸಾಪ್ ಗ್ರೂಪ್‌ನಲ್ಲಿ ನಡೆಸ್ತಿದ್ದ ಬಿಸಿನೆಸ್‌ಗೆ 1600 ಕೋಟಿ ಹೂಡಿಕೆ ಮಾಡಿದ ಮುಕೇಶ್ ಅಂಬಾನಿ, ಬಂದ ಲಾಭವೆಷ್ಟು?
undefined
ಆರು ರೀತಿಯ “ಅಳುವ ಹುಡುಗರುʼ
ಹಿರೊಕಿ ಟೆರೈ ಎನ್ನುವ ಸಂಸ್ಥೆಯೊಂದು ಅಳುವಿನ ಬಗ್ಗೆ ಕಾರ್ಯಾಗಾರ ನಡೆಸುವ ಮೂಲಕ ತರಬೇತಿ ನೀಡುತ್ತದೆ. ಅಳುವ ಉದ್ಯೋಗಿಗಳನ್ನು ಪೂರೈಸುವ ಸೇವೆಯನ್ನೂ ಇದು ಆರಂಭಿಸಿದೆ. ಅಳುವುದು ಮಾನಸಿಕ (Mental) ಆರೋಗ್ಯಕ್ಕೆ (Health) ಪೂರಕವಾಗಿದೆ. ಥೆರಪಿಯಂತೆ ಇದು ಕೆಲಸ ಮಾಡುತ್ತದೆ. ಸಾಮಾಜಿಕ ಸಂಬಂಧ (Social Relation) ಚೆನ್ನಾಗಿರುವುದಕ್ಕೂ ಅಳು ಕೊಡುಗೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಈ ಸೇವೆ ಆರಂಭವಾಗಿದ್ದು, ಗ್ರಾಹಕರು ಆರು ಮಾದರಿಯ “ಅಳುವ ಹುಡುಗರʼನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿಯೊಂದು ಮಾದರಿಯೂ ಭಿನ್ನವಾಗಿದ್ದು, ಡೆಂಟಿಸ್ಟ್, ಫ್ಯುನೆರಲ್ ಡಿರೆಕ್ಟರ್, ಶೂ ಶೈನರ್ ಇತ್ಯಾದಿ ಹೆಸರುಗಳನ್ನಿಡಲಾಗಿದೆ. ಗ್ರಾಹಕರು ಇವರಲ್ಲಿ ಯಾರು ಬೇಕೆಂದು ಆಯ್ಕೆ ಮಾಡಿ ಸಮಯ ನಿಗದಿ ಮಾಡಿಕೊಳ್ಳಬಹುದು. ಬಳಿಕ, ಇವರು ನಿಗದಿತ ಸಮಯಕ್ಕೆ ಕಚೇರಿಗೆ ಬಂದು, ದುಃಖಭರಿತ ಸನ್ನಿವೇಶಗಳ ವೀಡಿಯೋ ತೋರಿಸುತ್ತಾರೆ. ದುಃಖದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಉದ್ಯೋಗಿಗಳು ಅಳಲು ಆರಂಭಿಸಿದಾಗ ತಾವೂ ಅಳುತ್ತ ಅವರ ನೋವಿನಲ್ಲಿ ಭಾಗಿಯಾಗುತ್ತಾರೆ. ಟಿಶ್ಯೂ ಹಿಡಿದುಕೊಂಡು ಅವರ ಕಣ್ಣೀರನ್ನು ಒರೆಸುತ್ತಾರೆ. ಈ ಉದ್ಯೋಗಕ್ಕೆ ಸರಿಸುಮಾರು 4,400 ಡಾಲರ್ ವೇತನ ನಿಗದಿ ಮಾಡಲಾಗಿದೆ.
ಆಟದಲ್ಲಿ ಮಾತ್ರವಲ್ಲ ಇನ್ವೆಸ್ಟ್‌ಮೆಂಟ್‌ನಲ್ಲೂ ಕಿಂಗ್ ನಮ್ಮ ಕೊಹ್ಲಿ!
ಅಳುವುದು ಆರೋಗ್ಯಕ್ಕೆ ಉತ್ತಮ
ಉದ್ಯೋಗಿಗಳು ಸಾಮೂಹಿಕವಾಗಿ ತಮ್ಮ ಅಳುವನ್ನು ವ್ಯಕ್ತಪಡಿಸುವ ಮೂಲಕ ನಿರ್ಭಯವಾಗಿ ಭಾವನೆಗಳನ್ನು (Feelings) ಹೊರಹಾಕುವ ಅಭ್ಯಾಸ ಮಾಡಿಸಲಾಗುತ್ತದೆ. ಮುಕ್ತವಾಗಿ ಭಾವನೆಗಳನ್ನು ಹೊರಹಾಕಲು ಸುರಕ್ಷಿತ ವಾತಾವರಣ ನಿರ್ಮಿಸಲಾಗುತ್ತದೆ. ಹಿರೊಕಿ ಟೆರೈ (Hiroki Terai) ಪ್ರಕಾರ, ಅಳುವುದರಿಂದ ಮನಸ್ಸು ಹಗುರವಾಗುತ್ತದೆ. ಹಿಂಜರಿಕೆಯಿಲ್ಲದೆ ಕಾರ್ಯದ ಸ್ಥಳದಲ್ಲೂ ಅಳುವುದರಿಂದ ಮೂಡ್ (Mood) ಉತ್ತಮವಾಗಿ, ಉದ್ಯೋಗಿಗಳ ನಡುವೆ ಸಾಮರಸ್ಯ ಹೆಚ್ಚುತ್ತದೆ. ಈ ಸೇವೆ ಆರಂಭಿಸಿದಾಗಿನಿಂದ ಟೆರೈ ಕಂಪೆನಿಗೆ ಇದು ಅನುಭವಕ್ಕೆ ಬಂದಿದೆ. ಪ್ರಸ್ತುತ, ಈ ಸೇವೆಗೆ ಜಪಾನಿನ ನಾಗರಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶ್ಲಾಘಿಸಿದರೆ, ಕೆಲವರು ಈ ಕಾರ್ಯದ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ, ಒತ್ತಡದ (Stress), ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬೆಂಬಲದ ಅಗತ್ಯ ಇರುವುದನ್ನು ಈ ಸೇವೆ ತಿಳಿಸುತ್ತದೆ.