‘ಕರ್ನಾಟಕ ಉದ್ಯೋಗ ನೀತಿ: 2022-25’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ತೀರ್ಮಾನ
ಬೆಂಗಳೂರು(ಜು.23): ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಆಧರಿಸಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚುವರಿ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಉದ್ಯೋಗ ನೀತಿ: 2022-25’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ. ಹೆಚ್ಚುವರಿ ಹೂಡಿಕೆ ಮಾಡುವ ಕೈಗಾರಿಕಾ ಸಂಸ್ಥೆಗಳ ಆಧಾರದ ಮೇಲೆ ಕನ್ನಡಿಗರಿಗೆ ಶೇ.2.5ರಿಂದ ಶೇ.3ರಷ್ಟುಉದ್ಯೋಗ ನೀಡುವ ನೀತಿ ಇದಾಗಿದೆ. ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆಯನ್ನು ಆಧರಿಸಿ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗ ನೀಡುವುದನ್ನು ನೀತಿಯ ಮೂಲಕ ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಹೆಚ್ಚುವರಿ ಉದ್ಯೋಗಗಳನ್ನು ಒದಗಿಸುವ ಹೂಡಿಕೆದಾರರಿಗೆ ಹೆಚ್ಚುವರಿ ಪ್ರೋತ್ಸಾಹ ನೀಡುವ ಸಂಬಂಧ ಹೊಸ ನೀತಿ ಜಾರಿಗೊಳಿಸಲು ಉದ್ದೇಶವೂ ಸರ್ಕಾರಕ್ಕಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
undefined
ಎರಡೇ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯ ಕೈಗಾರಿಕಾ ಚಿತ್ರಣವೇ ಬದಲು: ಸಚಿವ ಸೋಮಣ್ಣ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಚ್ಚುವರಿ ಹೂಡಿಕೆಯ ಆಧಾರಕ್ಕೆ ಅನುಗುಣವಾಗಿ ಹೆಚ್ಚುವರಿ ಉದ್ಯೋಗ ನೀಡಲು ಉದ್ಯೋಗ ನೀತಿ ರೂಪಿಸಲಾಗಿದೆ. ಎ, ಬಿ ಸೇರಿದಂತೆ ಎಲ್ಲಾ ಶ್ರೇಣಿಯಲ್ಲಿಯೂ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ. ಮಧ್ಯಮ ಕೈಗಾರಿಕೆಗಳು 25 ಕೋಟಿ ರು.ಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡುವ ವೇಳೆ ಶೇ.20-25ರಷ್ಟುಹೆಚ್ಚುವರಿ ಉದ್ಯೋಗ ಸೃಷ್ಟಿಸಬೇಕಾಗುತ್ತದೆ. ಅಲ್ಲದೇ, 100 ಕೋಟಿ ರು.ಗಿಂತ ಹೆಚ್ಚು ಹೂಡಿಕೆ ಮಾಡಿದರೆ ಶೇ.30ರಿಂದ 35ರಷ್ಟುಹೊಸ ಉದ್ಯೋಗಗಳನ್ನು ಸೃಷ್ಟಿಮಾಡಬೇಕು ಎಂದು ವಿವರಿಸಿದರು.
ವರ್ಗೀಕರಣ:
ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳನ್ನು ವರ್ಗೀಕರಣ ಮಾಡಲಾಗಿದೆ. ಉದ್ಯೋಗ ನೀತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಲಕ್ಕೆ ತಕ್ಕಂತೆ ಪರಿಶೀಲನೆ ನಡೆಸಲಿದೆ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ನೀತಿ ಇದೆ. ಆದರೂ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ಹಂತದ ಉದ್ಯೋಗವನ್ನು ಕಲ್ಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಜು.5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ಯೋಗ ನೀತಿ ಕರಡು ಸಿದ್ಧಪಡಿಸಲಾಗಿದ್ದು, ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರಲಿದೆ. ಉದ್ಯೋಗಕ್ಕಾಗಿ ನಿರಂತರ ಬೇಡಿಕೆಯನ್ನು ಖಾತ್ರಿಪಡಿಸುವ ಪ್ರಾಮುಖ್ಯತೆ ಮತ್ತು ರಾಜ್ಯದಲ್ಲಿ ನುರಿತ ಕಾರ್ಮಿಕ ಬಲದ ಲಭ್ಯತೆಯನ್ನು ಖಾತ್ರಿಪಡಿಸುವ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ನೀತಿಯು ಉದ್ಯೋಗ ಸೃಷ್ಟಿಯ ಬೇಡಿಕೆ ಮತ್ತು ಪೂರೈಕೆಯನ್ನು ಈಡೇರಿಸಲಿದೆ.