ಭ್ರೂಣ ಹತ್ಯೆಕೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Nov 27, 2023, 3:30 AM IST
Highlights

‘ಭ್ರೂಣ ಪತ್ತೆ ಹಾಗೂ ಭ್ರೂಣ ಹತ್ಯೆಯಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಭ್ರೂಣ ಹತ್ಯೆಯಂತಹ ಪಾಪದ ಕೆಲಸಗಳನ್ನು ತಡೆಯಲು ಸದ್ಯದಲ್ಲೇ ಒಂದು ಸಭೆ ನಡೆಸಿ ಸೂಕ್ತ ಕ್ರಮದ ನಿರ್ಣಯ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ನ.27): ‘ಭ್ರೂಣ ಪತ್ತೆ ಹಾಗೂ ಭ್ರೂಣ ಹತ್ಯೆಯಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಭ್ರೂಣ ಹತ್ಯೆಯಂತಹ ಪಾಪದ ಕೆಲಸಗಳನ್ನು ತಡೆಯಲು ಸದ್ಯದಲ್ಲೇ ಒಂದು ಸಭೆ ನಡೆಸಿ ಸೂಕ್ತ ಕ್ರಮದ ನಿರ್ಣಯ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಭಾರತ ಸಂವಿಧಾನ ದಿನದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು.

ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವ ಬಗ್ಗೆ ಮಾಹಿತಿ ಕೇಳಿದ್ದೇನೆ. ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅದರ ಬಗ್ಗೆ ಒಂದು ಸಭೆ ಮಾಡಿ ಸೂಕ್ತ ಕ್ರಮದ ನಿರ್ಣಯ ಮಾಡುತ್ತೇವೆ ಎಂದರು. ತೆಲಂಗಾಣ ಚುನಾವಣೆ ಬಗ್ಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ನಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಮಗೆ ಮಾಹಿತಿ ಇರುವ ಪ್ರಕಾರ ಅಲ್ಲಿ ಶೇ .100ಕ್ಕೆ 100ರಷ್ಟು ನಾವು ಗೆಲ್ಲುತ್ತೇವೆ. ಕಾಂಗ್ರೆಸ್‌ ಸ್ಪಷ್ಟ ಬಹುಮತದಿಂದ ತೆಲಂಗಾಣ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos

ಮುಂದಿನ ಬಾರಿಯೂ ಕಾಂಗ್ರೆಸ್‌ ಬರಲಿ ಅಂತ ಜನ ಹೇಳ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಒಂದು ತಂಡ ಹೊರಟಿದೆ ಎಂಬ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿಕೆಗೆ, ‘ಪಾಪ ಅವರು ಈಗ ವಿಪಕ್ಷ ನಾಯಕರು. ಏನೇನೋ ಮಾತನಾಡ್ತಾರೆ, ಮಾತನಾಡಲಿ ಬಿಡಿ’ ಎಂದರು. ಜಾತಿ ಗಣತಿ ವರದಿ ಕುರಿತು ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದರಾಮಯ್ಯ, ‘ಅದರ ಬಗ್ಗೆ ಆಮೇಲೆ ಮಾತನಾಡುತ್ತೇನೆ’ ಎಂದಷ್ಟೇ ತಿಳಿಸಿದರು.

ತುಳು ರಾಜ್ಯದ ಹೆಚ್ಚುವರಿ ಭಾಷೆ ಮಾಡಲು ಯತ್ನ: ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರಂಭಗೊಂಡ ಎರಡು ದಿನಗಳ ‘ಬೆಂಗಳೂರು ಕಂಬಳ’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ತುಳುನಾಡಿನವರು ಎಲ್ಲೇ ಹೋದರು ತುಳು ಮಾತನಾಡುತ್ತಾರೆ. ಅವರು ಮಾತನಾಡುವಾಗ ನಾವು ಕಣ್ ಕಣ್ ಬಿಟ್ಟು ನೋಡಬೇಕಾಗುತ್ತದೆ. ಮಾತೃಭಾಷೆ ಬಗ್ಗೆ ಅವರಿಗೆ ಅತೀವ ಅಭಿಮಾನ, ಪ್ರೀತಿ ಇದೆ. ಎಲ್ಲೇ ಹೋದರೂ ತುಳುವಿನಲ್ಲೇ ಮಾತನಾಡುತ್ತಾರೆ. ತುಳುವಿಗೆ ರಾಜ್ಯದ ಹೆಚ್ಚುವರಿ ಭಾಷೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಚರ್ಚಿಸುತ್ತೇನೆ. ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ. ಕಂಬಳ ಸಮಿತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಜಾಗದ ಬೇಡಿಕೆ ಇದ್ದು, ನೀಡಲಾಗುವುದು’ ಎಂದು ಭರವಸೆ ನೀಡಿದರು. ‘ಭತ್ತ ಬೆಳೆಯುತ್ತಿದ್ದ ರೈತರು, ವ್ಯವಸಾಯ ಇಲ್ಲದಾಗ ಮನರಂಜನಾ ಚಟುವಟಿಕೆಯ ಭಾಗವಾಗಿ ಜಾನುವಾರುಗಳ ಉತ್ಸವ ಮಾಡುತ್ತಿದ್ದರು. ಗದ್ದೆಯಲ್ಲಿ ಮಣ್ಣನ್ನು ಹದ ಮಾಡಿ ಕೋಣವನ್ನು ಓಡಿಸುವ ಕ್ರೀಡೆಯಲ್ಲಿ ತೊಡಗಿಸಿಕೊಂಡು ಖುಷಿ ಪಡುತ್ತಿದ್ದರು. ಕೋಣ ಓಡಿಸುವವರು ಒಳ್ಳೆಯ ಅಥ್ಲೀಟ್ ಆಗಿರಬೇಕು. ಶಕ್ತಿವಂತರಾಗಿರಬೇಕು. ಇಲ್ಲದಿದ್ದರೆ ಕೆಸರು ಮಣ್ಣಿನಲ್ಲಿ ಓಡಲು ಆಗುವುದಿಲ್ಲ’ ಎಂದು ಸಿಎಂ ನುಡಿದರು.

ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಕಾಲೆಳೆದ ಸಿಎಂ ಸಿದ್ದರಾಮಯ್ಯ: ಕಾರಣವೇನು?

‘ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಕರಾವಳಿ ಜನರ ಕ್ರೀಡೆಯನ್ನು ಹಲವಾರು ಜನ ಮೈಗೂಡಿಸಿಕೊಂಡಿದ್ದಾರೆ. ಇದಕ್ಕೆ ಜನರೂ ಪ್ರೋತ್ಸಾಹ ನೀಡಿದ್ದಾರೆ. ಉಡುಪಿ, ಮಂಗಳೂರಲ್ಲಿ ಜನಪ್ರಿಯವಾಗಿದೆ. ಕೋಣ ಓಡಿಸುವುದು ಬಡವರ ಕ್ರೀಡೆಯಾಗಿತ್ತು. ಆದರೆ ಈಗ ಶ್ರೀಮಂತರ ಕ್ರೀಡೆಯಾಗಿದೆ. ವರ್ಷಕ್ಕೆ 15 ಲಕ್ಷ ರು. ಖರ್ಚು ಮಾಡುವವರಿದ್ದಾರೆ. ಹೀಗಾಗಿ, ಕೋಣ ಸಾಕುವುದು ಕಷ್ಟದ ಕೆಲಸ. ಕರಾವಳಿ ಕ್ರೀಡೆ ಬೆಂಗಳೂರಿಗೆ ಪರಿಚಯಿಸಿರುವುದು ಶ್ಲಾಘನೀಯ. ಪ್ರತಿ ವರ್ಷ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಲಿ. ಇದು ಜನಸಾಮಾನ್ಯರ ಕ್ರೀಡೆಯಾಗಿ ಬೆಳೆಯಬೇಕು’ ಎಂದು ಸಿಎಂ ಹೇಳಿದರು.

click me!