ಪದೇ ಪದೇ ದೆಹಲಿಗೆ ಬೆಲ್ಲದ್ ಭೇಟಿ, ಲಿಂಗಾಯತ ನಾಯಕರಿಗೆ ಟೆನ್ಷನ್ ಯಾಕೆ..?

By Kannadaprabha NewsFirst Published Jun 19, 2021, 10:01 AM IST
Highlights

- ಪದೇ ಪದೇ ಬೆಲ್ಲದ್ ದೆಹಲಿ ಭೇಟಿ, ಹಿಂದಿದೆ ರಾಜಕೀಯ ಲೆಕ್ಕಾಚಾರ

- ಮುಂದಿನ ಲಿಂಗಾಯತ ನಾಯಕರಾಗಲು ಈಗಿನಿಂದಲೇ ಸಿದ್ಧತೆ..?

-  ಲಿಂಗಾಯತ ನಾಯಕರಿಗೆ ಟೆನ್ಷನ್‌ ಶುರು

ಬೆಂಗಳೂರು (ಜೂ. 19): ಕಳೆದ ಮೂರು ದಿನಗಳ ಸರಣಿ ಸಭೆಗಳ ನಂತರ ಏನಾದರೂ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ಆದರೆ ಅರುಣ ಸಿಂಗ್‌ ಮತ್ತು ಅರವಿಂದ ಬೆಲ್ಲದ ಎಂಬ ಎರಡು ಹೆಸರುಗಳು ಹಳ್ಳಿಹಳ್ಳಿಗಳಿಗೆ ತಲುಪಿವೆ. 2009ರ ಬಂಡಾಯದಲ್ಲಿ ಅಪ್ಪ ಚಂದ್ರಕಾಂತ ಬೆಲ್ಲದ ಯಡಿಯೂರಪ್ಪ ಜೊತೆಗಿದ್ದರು.

ಆದರೆ ಹೊಸ ತಲೆಮಾರಿನ ಅರವಿಂದ ಬೆಲ್ಲದ ಕಳೆದ ಒಂದು ವರ್ಷದಲ್ಲಿ ಕಟ್ಟಾ ಯಡಿಯೂರಪ್ಪ ವಿರೋಧಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅರವಿಂದ ಬೆಲ್ಲದ ಸಂಘದ ಜೊತೆ ನಿಧಾನವಾಗಿ ಸಂಬಂಧ ಬೆಳೆಸಿಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಯಡಿಯೂರಪ್ಪ ನಂತರ ಲಿಂಗಾಯತ ನಾಯಕ ಆಗಬೇಕು ಎಂದು ಇಷ್ಟುಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳಲ್ಲಿ ಯೋಗೇಶ್ವರ್‌ ಸಖ್ಯ ಬೆಳೆದ ನಂತರ ದಿಲ್ಲಿ ಯಾತ್ರೆಗಳು ಜಾಸ್ತಿ ಆಗಿವೆ.

ಯೋಗಿಯೊಬ್ಬರನ್ನೇ ನೆಚ್ಚಿಕೊಂಡರೆ ಮತ್ತೆ ಗೆಲ್ಲಲು ಅಸಾಧ್ಯವೆಂದು ಮೋದಿ ಹೊಸ ದಾಳ!

ಎರಡು ತಿಂಗಳ ಹಿಂದೆ ಯೋಗೇಶ್ವರ್‌ ಮತ್ತು ಬೆಲ್ಲದ ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯದ ಸ್ವಾಮೀಜಿಯೊಬ್ಬರನ್ನು ಭೇಟಿಯಾದ ನಂತರ ದಿಲ್ಲಿ ಯಾತ್ರೆಗಳು ಜಾಸ್ತಿ ಆಗಿವೆಯಂತೆ. ಅರುಣ ಸಿಂಗ್‌ ಎದುರು ಒಬ್ಬ ಶಾಸಕ ಬೆಲ್ಲದರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂದು ಕೇಳಿದಾಗ ಸಿಂಗ್‌ ‘ಪೊಲಿಟಿಕಲಿ ಇದು ಸಾಧ್ಯ ಉಂಟಾ’ ಎಂದು ಹೇಳಿದರಂತೆ. ಬೆಲ್ಲದ ಓಡಾಟದಿಂದ ಯಡಿಯೂರಪ್ಪ ಎಷ್ಟುತಲೆ ಕೆಡಿಸಿಕೊಂಡಿದ್ದಾರೋ ಗೊತ್ತಿಲ್ಲ, ಉಳಿದ ಲಿಂಗಾಯತ ನಾಯಕರಿಗಂತೂ ಟೆನ್ಷನ್‌ ಆಗಿದೆ.

ಬಿಜೆಪಿಯೊಳಗಿನ ಅಸಮಾಧಾನ ಈಗ ಹೈಕಮಾಂಡ್ ಅಂಗಳಕ್ಕೆ

ಶಾಸಕರ ನಿಷ್ಠೆ ಯಾರಿಗೆ?

ರಾಜಕಾರಣದಲ್ಲಿ ಬಹುತೇಕರ ನಿಷ್ಠೆ ರಾಜನಿಗಾದರೆ, ಕೆಲವರ ನಿಷ್ಠೆ ರಾಜ ಕೂರುವ ಕುರ್ಚಿಗೆ. ಇನ್ನೂ ಕೆಲವರ ನಿಷ್ಠೆ ರಾಜನ ವಂಶಕ್ಕಾದರೆ, ಮತ್ತೆ ಕೆಲವರದು ಖಡ್ಗ ಹಿಡಿಯುವ ತಾಕತ್ತು ಇರುವ ಸಾಮ್ರಾಜ್ಯದ ಅ​ಧಿಪತಿಗೆ. ಅರುಣ್‌ ಸಿಂಗ್‌ರನ್ನು ಭೇಟಿಯಾಗಲು ಹೋದ ಬಹುತೇಕ ಶಾಸಕರು,‘ಒಂದೋ ಬೇಗ ಹೊಸ ನಾಯಕನನ್ನು ತಂದು ಕೂರಿಸಿ. ಇಲ್ಲವೇ ಇವರನ್ನೇ ಇರಿಸಿ ಹೊಸಬರನ್ನು ಸಂಪುಟಕ್ಕೆ ಸೇರಿಸಿ. ಹೀಗೆ ನಡು ನೀರಿನಲ್ಲಿ ಬಿಡಬೇಡಿ. ಯಾರೇ ಇದ್ದರೂ, ಬಿಟ್ಟರೂ 2023ಕ್ಕೆ ನಾವು ಗೆಲ್ಲೋದು ವೈಯಕ್ತಿಕವಾಗಿ ಮುಖ್ಯ’ ಎಂದು ಸ್ಪಷ್ಟವಾಗಿ ಹೇಳಿ ಬಂದಿದ್ದಾರೆ.

ಬಹುತೇಕ ಅರುಣ್‌ ಸಿಂಗ್‌ರನ್ನು ಭೇಟಿಯಾಗಿದ್ದ ಶಾಸಕರಿಗೆ ಇಷ್ಟವಾದ ಅಂಶ ಎಂದರೆ, ಸಿಂಗ್‌ ತಾವು ಹೇಳಿದ್ದನ್ನು ಶಾಂತವಾಗಿ ಆಲಿಸಿ, ಮುಖ್ಯವಾದದ್ದು ಏನಾದರೂ ಹೇಳಿದರೆ ಬರೆದುಕೊಳ್ಳುತ್ತಾರೆ ಎನ್ನುವುದು. ಮೋದಿ ಮತ್ತು ಶಾ ಅವರನ್ನಂತೂ ಹೋಗಿ ಭೇಟಿಯಾಗಿ ಅಭಿಪ್ರಾಯ ಹೇಳೋದು ಸಾಧ್ಯವಿಲ್ಲ. ಇವರಾದರೂ ಕೇಳುತ್ತಾರಲ್ಲ ಅನ್ನೋದೇ ಕೆಲವರಿಗೆ ಖುಷಿ. ನಮ್ಮ ದೇಶದ ರಾಜಕಾರಣದ ಒಂದು ವೈಚಿತ್ರ್ಯ ಎಂದರೆ, ದಿಲ್ಲಿಯಿಂದ ಒಂದು ಲಕೋಟೆಯೇ ಬರಲಿ ಅಥವಾ ಒಬ್ಬ ನಾಯಕನೇ ಬರಲಿ ಅದು ಮಾಡುವ ಪರಿಣಾಮವೇ ಬೇರೆ. ಅಂದಹಾಗೆ ಅರುಣ್‌ ಸಿಂಗ್‌ ಇಲ್ಲಿವರೆಗೆ ಒಂದೇ ಒಂದು ನೇರ ಚುನಾವಣೆ ಗೆದ್ದಿಲ್ಲ.

click me!