ಸ್ಯಾಮ್ ಪಿತ್ರೋಡಾರಿಂದ ಮತ್ತೊಂದು ವಿವಾದ : ದಕ್ಷಿಣ ಭಾರತೀಯರ ಆಫ್ರಿಕನರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ

Published : May 08, 2024, 02:54 PM ISTUpdated : May 08, 2024, 02:56 PM IST
ಸ್ಯಾಮ್ ಪಿತ್ರೋಡಾರಿಂದ ಮತ್ತೊಂದು ವಿವಾದ : ದಕ್ಷಿಣ ಭಾರತೀಯರ ಆಫ್ರಿಕನರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ

ಸಾರಾಂಶ

ಕೆಲ ವಾರಗಳ ಹಿಂದಷ್ಟೇ ಪಿತ್ರಾರ್ಜಿತ ಆಸ್ತಿಯ ಹಕ್ಕಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಈಗ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ. 

ನವದೆಹಲಿ: ಕೆಲ ವಾರಗಳ ಹಿಂದಷ್ಟೇ ಪಿತ್ರಾರ್ಜಿತ ಆಸ್ತಿಯ ಹಕ್ಕಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಈಗ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಬಾರಿ ಅವರು ಜನಾಂಗೀಯ ವಿಚಾರಕ್ಕೆ ಕೈ ಹಾಕಿದ್ದು, ಅವರ ಮಾತುಗಳು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ದಕ್ಷಿಣ ಭಾರತೀಯರನ್ನು ಆಫ್ರಿಕನರಿಗೆ ಹೊಲಿಸಿದ ಸ್ಯಾಮ್ ಪಿತ್ರೋಡಾ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ದಕ್ಷಿಣ ಭಾರತೀಯರನ್ನು ಆಫ್ರಿಕ ಜನರಿಗೆ ಹೋಲಿಕೆ ಮಾಡಿದ್ದಾರೆ.  ಹಾಗೆಯೇ ಈಶಾನ್ಯ ಭಾರತೀಯರನ್ನು ಚೀನಿಯರಿಗೆ ಹೋಲಿಕೆ ಮಾಡಿದ್ದಾರೆ. ಮೇ 2 ರಂದು ಪ್ರಸಾರವಾದ ಈ ರೀತಿಯ ವಿವಾದಾತ್ಮಕ ಅಂಶಗಳಿರುವ ಅವರ ಸಂದರ್ಶನದ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ದಿ ಸ್ಟೇಟ್ಮನ್‌ಗೆ ನೀಡಿದ ಸಂದರ್ಶನದಲ್ಲಿ ಭಾರತೀಯರ ವಿರುದ್ಧ ಅವರು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ವೀಡಿಯೋ ನೋಡಿದವರು ಆರೋಪ ಮಾಡುತ್ತಿದ್ದಾರೆ.  ಭಾರತದ ವೈವಿಧ್ಯತೆಯನ್ನು ವಿವರಿಸುವ ಭರದಲ್ಲಿ ಈ ಕಾಂಗ್ರೆಸ್ ನಾಯಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. 

ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.45 ಮಕ್ಕಳಿಗೆ, ಶೇ.55 ಸರ್ಕಾರಕ್ಕೆ, ಸ್ಯಾಮ್ ಪಿತ್ರೋಡಾ ಸಂಪತ್ತಿನ ಮರು ಹಂಚಿಕೆ ವಿವಾದ

ನಾವು ಭಾರತದಂತಹ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು, ಅಲ್ಲಿ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ಅರಬರಂತೆ ಕಾಣುತ್ತಾರೆ, ಉತ್ತರದ ಜನರು ಬಹುಶಃ ಬಿಳಿಯರಂತೆ ಮತ್ತು ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ.  ಆದರೆ ಈ ವಿಚಾರಗಳು ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಏಕೆಂದರೆ ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು ಎಂದು ಅವರು ಸ್ಟೇಟ್ಸ್ಮನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಆದರೆ ಪಿತ್ರೋಡಾ ಅವರು ಈ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಸರ್ಮಾ ಅವರು ಕೂಡ ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು,  ಸ್ಯಾಮ್ ಭಾಯ್ ನಾನು ಈಶಾನ್ಯದವ ಹಾಗೂ ನಾನು ನೋಡುವುದಕ್ಕೆ ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯದ ದೇಶ ನಾವು ನೋಡುವುದಕ್ಕೆ ಸ್ವಲ್ಪ ವಿಭಿನ್ನವಾಗಿ ಕಾಣಿಸಬಹುದು. ಆದರೆ ನಾವೆಲ್ಲರೂ ಒಂದೇ ನಮ್ಮ ದೇಶದ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ.  ಇದರ ಜೊತೆಗೆ ಮಣಿಪುರ ಮುಖ್ಯಮಂತ್ರಿ ಎಸ್ ಬಿರೇನ್ ಸಿಂಗ್ ಅವರು  ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಯಾಮ್ ಪಿತ್ರೋಡಾ ತಮ್ಮ ಈ ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. 

ಪಿತ್ರೋಡಾ ಹೇಳಿಕೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ: ಡಿ.ಕೆ.ಶಿವಕುಮಾರ್

ಈ ಹಿಂದೆ ಸ್ಯಾಮ್ ಪಿತ್ರೋಡಾ ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.45 ಮಕ್ಕಳಿಗೆ, ಶೇ.55 ಸರ್ಕಾರಕ್ಕೆ ಸಿಗುವಂತಹ ಕಾನೂನು ಬರಬೇಕು ಎಂಬ ಹೇಳಿಕೆ ನೀಡಿದ್ದರು. ಸಂಪತ್ತಿನ ಮರು ಹಂಚಿಕೆಯ ಈ ವಿವಾದವೂ ಕೂಡ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.  ಅಮೆರಿಕದ ಉತ್ತರಾಧಿಕಾರ ತೆರಿಗೆ (Inheritance Tax) ಬಗ್ಗೆ ಪ್ರಸ್ತಾಪಿಸಿದ್ದ ಪಿತ್ರೋಡಾ, ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ವ್ಯಕ್ತಿಯ ಸಂಪತ್ತಿನ ಮೇಲೆ 55% ತೆರಿಗೆ ಹಾಕಲಾಗುತ್ತದೆ. ವ್ಯಕ್ತಿಯ ಮಕ್ಕಳು, ಕುಟುಂಬಕ್ಕೆ ಕೇವಲ 45 ಪ್ರತಿಶತ  ಆಸ್ತಿಯನ್ನು ಹಂಚಲಾಗುತ್ತದೆ. 

'ರಾಮ, ಹನುಮಂತ, ದೇವಸ್ಥಾನ ನಿಮಗೆ ಕೆಲ್ಸ ಕೊಡಿಸೋದಿಲ್ಲ..' ವಿವಾದ ಎಬ್ಬಿಸಿದ ಸ್ಯಾಮ್‌ ಪಿತ್ರೋಡಾ ಹೇಳಿಕೆ!

ಓರ್ವ ವ್ಯಕ್ತಿ 100 ಮಿಲಿಯನ್‌ ಡಾಲರ್‌ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಆತನ 45 ಪ್ರತಿಶತ ಸಂಪತ್ತು ಮಾತ್ರ ಆತನ ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ಮಿಕ್ಕಿರುವ 55% ಸಂಪತ್ತು ಸರ್ಕಾರಕ್ಕೆ ಹೋಗುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು. ಇಂತಹ ಯಾವುದೇ ಕಾನೂನು ಭಾರತದಲ್ಲಿ ಇಲ್ಲ. ಯಾರಾದರೂ 10 ಶತಕೋಟಿ ಮೌಲ್ಯದವರು ಮೃತಪಟ್ಟರೆ ಅವರ ಮಕ್ಕಳು ಕೂಡ 10 ಶತಕೋಟಿ ಪಡೆಯುತ್ತಾರೆ. ಮತ್ತು ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಈ ರೀತಿಯ ವಿಷಯಗಳ ಬಗ್ಗೆ ಜನ  ಚರ್ಚಿಸಬೇಕಾದ ಅಗತ್ಯ ಇದೆ ಎಂದು ಹೇಳಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ