Council Election Karnataka : ‘ಸೋಲದ’ ಜೆಡಿಎಸ್‌ಗೆ ಈ ಬಾರಿ ‘ಗೆಲುವು’ ಸವಾಲು

Kannadaprabha News   | Asianet News
Published : Dec 08, 2021, 11:18 AM IST
Council Election Karnataka : ‘ಸೋಲದ’ ಜೆಡಿಎಸ್‌ಗೆ ಈ ಬಾರಿ ‘ಗೆಲುವು’ ಸವಾಲು

ಸಾರಾಂಶ

ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಗೆಲ್ಲುವುದು JDSಗೆ ಸವಾಲು

ವರದಿ : ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಡಿ.08):  ಮೈಸೂರು- ಚಾಮರಾಜನಗರ (Mysuru - Chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ (MLC Election) ನಡೆಯುವ ಚುನಾವಣೆಯಲ್ಲಿ ಜನತಾ ಪರಿವಾರ ಈವರೆಗೆ ಎಂದೂ ಸೋತಿಲ್ಲ. ಆದರೆ ಬದಲಾದ ರಾಜಕೀಯ (Politics) ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಗೆಲ್ಲುವುದು ಅದಕ್ಕೆ ಸವಾಲು. 1988 ರಿಂದ ಈವರೆಗೆ ಈ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ ಆರು ಚುನಾವಣೆಗಳು ನಡೆದಿವೆ. ಉಪ ಚುನಾವಣೆಯಲ್ಲಿ ಜೆಡಿಎಸ್‌ (JDS) ಸ್ಪರ್ಧಿಸಿರಲಿಲ್ಲ. 2015ರ ಚುನಾವಣೆಯಲ್ಲಿ ಮಾತ್ರ ಜೆಡಿಎಸ್‌ ಎರಡನೇ ಸುತ್ತಿನಲ್ಲಿ ಗೆಲವು ಸಾಧಿಸಿತ್ತು. ಉಳಿದ ನಾಲ್ಕು ಚುನಾವಣೆಗಳಲ್ಲೂ ಪ್ರಥಮ ಸುತ್ತಿನಲ್ಲಿಯೇ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ (Congress) ಸೋತರೂ ಜೆಡಿಎಸ್‌ ಸೋಲದಿರುವುದಕ್ಕೆ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಸಂಘಟನೆ ಬಲವಾಗಿದ್ದುದು ಇದಕ್ಕೆ ಕಾರಣ.

ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ಹೊರತುಪಡಿಸಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಸಂಘಟನೆ ಸೊರಗಿದೆ. ಮೈಸೂರು (Mysuru)  ಜಿಲ್ಲೆಯಲ್ಲಿ ಚಾಮುಂಡೇಶ್ವರಿ, ಕೆ.ಆರ್‌. ನಗರ, ಪಿರಿಯಾಪಟ್ಟಣ, ಟಿ. ನರಸೀಪುರದಲ್ಲಿ ಪಕ್ಷದ ಶಾಸಕರಿದ್ದಾರೆ. ಆದರೆ ಚಾಮುಂಡೇಶ್ವರಿಯ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ( Assembly Election) ಸೋತರೂ ಎಚ್‌.ಡಿ. ಕೋಟೆ ಹಾಗೂ ಹುಣಸೂರಿನಲ್ಲಿ ಸಂಘಟನೆ ಪರವಾಗಿಲ್ಲ. ನಂಜನಗೂಡು, ವರುಣ ಕ್ಷೇತ್ರದಲ್ಲಿ ಪಕ್ಷದ ಪ್ರಾಬಲ್ಯ ಅಷ್ಟಾಗಿ ಇಲ್ಲ. ಮೈಸೂರು ನಗರದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಸಂಘಟನೆ ಅತ್ಯಂತ ದುರ್ಬಲವಾಗಿದೆ. ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಪರವಾಗಿಲ್ಲ.

ಜನತಾ ಪರಿವಾರ ಹಾಗೂ ಅದರ ಪ್ರಾತಿನಿಧಿಕ ಸ್ವರೂಪವಾದ ಜೆಡಿಎಸ್‌ (JDS) 2003 ರಲ್ಲಿ ವೀರಶೈವ- ಲಿಂಗಾಯತ ಜನಾಂಗಕ್ಕೆ ಟಿಕೆಟ್‌ ನೀಡಿತ್ತು. ಉಳಿದೆಲ್ಲಾ ಚುನಾವಣೆಗಳಲ್ಲೂ ಒಕ್ಕಲಿಗ ಜನಾಂಗಕ್ಕೆ ಮಣೆ ಹಾಕಿದೆ. ಈ ಬಾರಿ ಬಿಜೆಪಿಯತ್ತ ಮುಖ ಮಾಡಿದ್ದ ಹಾಲಿ ಸದಸ್ಯ ಸಂದೇಶ್‌ ನಾಗರಾಜ್‌ ಅವರಿಗೆ ಟಿಕೆಟ್‌ ನಿರಾಕರಿಸಿ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಗ್ರಾಪಂ, ತಾಪಂ ಮಾಜಿ ಸದಸ್ಯ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡರನ್ನು ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ನೀಡಿದೆ.

ಪಕ್ಷದಿಂದ ದೂರವಿರುವ ಜಿ.ಟಿ. ದೇವೇಗೌಡರ ಕುಟುಂಬಕ್ಕೆ ಟಿಕೆಟ್‌ ನೀಡುವ ‘ಆಫರ್‌’ ನೀಡಲಾಗಿತ್ತು. ಆದರೆ ಅವರು ‘ಆಸಕ್ತಿ’ ತೋರಿಸಲಿಲ್ಲ. ಕೆ.ಆರ್‌. ನಗರದ ಮಾಜಿ ಸಚಿವ ಎಸ್‌. ನಂಜಪ್ಪ ಅವರ ಪುತ್ರ, ನವನಗರ ಅರ್ಬನ್‌ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್‌. ಬಸಂತ್‌, ಕಳೆದ ಬಾರಿ ವರುಣದಿಂದ ಅಭ್ಯರ್ಥಿಯಾಗಿದ್ದ ಎಂ.ಎಸ್‌. ಅಭಿಷೇಕ್‌, ಅರಣ್ಯವಿಹಾರಧಾಮದ ಮಾಜಿ ಅಧ್ಯಕ್ಷ ವಿವೇಕಾನಂದ, ಎಚ್‌.ಡಿ. ಕೋಟೆಯ ಕೃಷ್ಣನಾಯಕ, ಜಿಪಂ ಮಾಜಿ ಸದಸ್ಯರಾದ ಸಾ.ರಾ. ನಂದೀಶ್‌, ಅಚ್ಯುತಾನಂದ ಮೊದಲಾದವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಈ ಚುನಾವಣೆಯಲ್ಲಿ ‘ಸಂಪನ್ಮೂಲ‘ವೇ ಪ್ರಧಾನ. ಹೀಗಾಗಿ ಅದಕ್ಕೆ ‘ಕೊರತೆ’ ಆಗಬಾರದೆಂದು ಎಚ್ಚರಿಕೆ ವಹಿಸಿದೆ.

ಮಂಜೇಗೌಡರಿಗೆ ಚುನಾವಣೆ ಹೊಸತಲ್ಲ. 2008 ರಲ್ಲಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು. 2013 ರಲ್ಲಿ ಜೆಡಿಎಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದರು. ಹುಣಸೂರಿನಿಂದ ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿಗೆ ವಲಸೆ ಬಂದಿದ್ದರಿಂದ ಮಂಜೇಗೌಡರು ಕಾಂಗ್ರೆಸ್‌ಗೆ ಹೋಗಿದ್ದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಈಗಾಗಲೇ ಎರಡು ಬಾರಿ ಬಂದು ಹೋಗಿದ್ದಾರೆ. ಎರಡನೇ ಬಾರಿ ಬಂದಾಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಪಕ್ಷದ ಚುನಾಯಿತ ಪ್ರತಿಧಿಗಳ ಸಭೆ ನಡೆಸಿ, ಗೆಲುವಿಗೆ ಮಾರ್ಗದರ್ಶನ ಮಾಡಿದ್ದಾರೆ.

ಈವರೆಗೆ ಗೆದ್ದ ಜನತಾ ಪರಿವಾರದವರು

1988- ವಿ.ಎಚ್‌.ಗೌಡ (ಪ್ರಥಮ ಸುತ್ತಿನಲ್ಲಿ ಜಯ)

1997- ವೈ. ಮಹೇಶ್‌ (ಪ್ರಥಮ ಸುತ್ತಿನಲ್ಲಿ ಜಯ)

2003- ಬಿ. ಚಿದಾನಂದ (ಪ್ರಥಮ ಸುತ್ತಿನಲ್ಲಿ ಜಯ)

2009- ಸಂದೇಶ್‌ ನಾಗರಾಜ್‌ (ಪ್ರಥಮ ಸುತ್ತಿನಲ್ಲಿ ಜಯ)

2013- ಉಪ ಚುನಾವಣೆ- ಸ್ಪರ್ಧಿಸಿರಲಿಲ್ಲ

2015- ಸಂದೇಶ್‌ ನಾಗರಾಜ್‌ (ಎರಡನೇ ಸುತ್ತಿನಲ್ಲಿ ಜಯ)

‘ತ್ರಿಮೂರ್ತಿ’ಗಳ ಸಾಥ್‌

 ಸಾ.ರಾ. ಮಹೇಶ್‌. ಕೆ. ಮಹದೇವ್‌, ಎಂ. ಅಶ್ವಿನ್‌ಕುಮಾರ್‌

ಜಿ.ಟಿ. ದೇವೇಗೌಡರ ಅನುಪಸ್ಥಿತಿಯಲ್ಲಿಯೂ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವರೂ ಆದ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌, ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್‌ ಹಾಗೂ ಟಿ. ನರಸೀಪುರ ಶಾಸಕ ಎಂ. ಅಶ್ವಿನ್‌ಕುಮಾರ್‌ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಮಾಜಿ ಶಾಸಕ ಎಚ್‌.ಡಿ. ಕೋಟೆಯ ಚಿಕ್ಕಣ್ಣ, ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ವರುಣದ ಅಭಿಷೇಕ್‌, ಹುಣಸೂರಿನ ದೇವರಹಳ್ಳಿ ಸೋಮಶೇಖರ್‌, ಕೃಷ್ಣರಾಜದ ಕೆ.ವಿ. ಮಲ್ಲೇಶ್‌, ನರಸಿಂಹರಾಜದ ಅಬ್ದುಲ್ಲಾ, ಹನೂರಿನ ಆರ್‌. ಮಂಜುನಾಥ್‌ ಮತ್ತಿತರರು ಸಾಥ್‌ ನೀಡುತ್ತಿದ್ದಾರೆ.

‘ಪಂಚಪಾಂಡವ’ರಿಗೆ ಪ್ರತಿಷ್ಠೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜೆಡಿಎಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿ, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕೆಲಸ ಮಾಡಿದ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ ಕಡೆಗೆ ಮುಖ ಮಾಡಿರುವುದು, ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಕೆಲವರಿಗೆ ಇರಿಸುಮುರಿಸು ಉಂಟು ಮಾಡಿದೆ. ಅವರಿಗೆ ಬುದ್ಧಿ ಕಲಿಸಬೇಕು ಎಂದು ಕ್ಷೇತ್ರದ ಮುಖಂಡರಾದ ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್‌. ಮಾದೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಭಾಗ್ಯ ಅವರ ಪತಿ ಬೆಳವಾಡಿ ಶಿವಮೂರ್ತಿ, ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ವಕೀಲ ಗಂಗಾಧರ ಗೌಡ ಅವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇವರೆಲ್ಲಾ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಮೇಲೆ ಕಣ್ಣಿಟ್ಟವರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ