ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಸಿಯಂ: ಯೋಗಿ ಆದಿತ್ಯನಾಥ್ ಘೋಷಣೆ

By Suvarna Web DeskFirst Published Mar 21, 2017, 5:38 PM IST
Highlights

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿವಾದವನ್ನು ಎಲ್ಲ ಪಕ್ಷಗಾರರೂ ಮಾತುಕತೆ ಮೂಲಕ ಬಗೆಹರಿಸಿ​ಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಸಲಹೆ ಮಾಡಿದೆ. ಅಲ್ಲದೆ, ಈ ಬಗ್ಗೆ ಮಾ.31ರೊಳಗೆ ನಿಲು​ವು ಪ್ರಕಟಿಸುವಂತೆಯೂ ಸೂಚಿಸಿದೆ.

ನವದೆಹಲಿ(ಮಾ.22): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿವಾದವನ್ನು ಎಲ್ಲ ಪಕ್ಷಗಾರರೂ ಮಾತುಕತೆ ಮೂಲಕ ಬಗೆಹರಿಸಿ​ಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಸಲಹೆ ಮಾಡಿದೆ. ಅಲ್ಲದೆ, ಈ ಬಗ್ಗೆ ಮಾ.31ರೊಳಗೆ ನಿಲು​ವು ಪ್ರಕಟಿಸುವಂತೆಯೂ ಸೂಚಿಸಿದೆ.

ಅಯೋಧ್ಯೆ ವಿವಾದ ಕುರಿತಾದ ಅರ್ಜಿಯ ತ್ವರಿತ ವಿಚಾರಣೆ ನಡೆಸಬೇಕು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಕೋರಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಪೀಠ, ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದವು ‘ಸೂಕ್ಷ್ಮ' ಹಾಗೂ ‘ಭಾವ​ನಾತ್ಮಕ' ವಿಷಯವಾಗಿದೆ. ಈ ವಿಷಯ​ವನ್ನು ಸಂಬಂಧಿಸಿದ ಎಲ್ಲ ಪಕ್ಷಗಾರರು ಸೇರಿಕೊಂಡು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವತ್ತ ಪ್ರಯತ್ನಗಳು ನಡೆಯಬೇಕು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

Latest Videos

ಒಂದು ವೇಳೆ ಸಂಬಂಧಿಸಿದ ಪಕ್ಷಗಾರರ ನಡುವೆ ವಿವಾದ ಇತ್ಯರ್ಥಗೊಳ್ಳದೇ ಹೋ​ದರೆ ತಾನು ಈ ವಿಷಯ​ದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದೂ ನ್ಯಾ| ಜೆ.ಎಸ್‌. ಖೇಹರ್‌ ಅವರ ಪೀಠ ತಿಳಿಸಿತು. ‘ಇಂಥ ಧಾರ್ಮಿಕ ವಿಷಯ​ಗಳನ್ನು ಪರಸ್ಪರ ಮಾತು​ಕತೆಗೆ ಕುಳಿತು ಇತ್ಯರ್ಥ​ಪಡಿಸಿ​​ಕೊಳ್ಳಬಹುದು. ನೀವೆಲ್ಲ ಕುಳಿತು ಸಂಧಾನಕ್ಕೆ ಯತ್ನಿಸಬೇಕು' ಎಂದು ಅದು ಕಿವಿಮಾತು ಹೇಳಿತು. ಅಲ್ಲದೆ, ‘ಸಂಬಂಧಿಸಿದವರೊಂದಿಗೆ ಮಾತನಾಡಿ ಈ ಬಗ್ಗೆ ಮಾ.31ರಂದು ನಿರ್ಧಾರ ತಿಳಿಸಿ' ಎಂದು ನಿರ್ದೇಶಿಸಿತು.

ಕೋರ್ಟ್‌ ಅಭಿಪ್ರಾಯಗಳನ್ನು ಬಿಜೆಪಿ ನಾಯಕರು, ಅರ್ಜಿದಾರ ಸುಬ್ರಮಣಿ​ಯನ್‌ ಸ್ವಾಮಿ, ಉತ್ತರಪ್ರದೇಶ ಮುಖ್ಯ​ಮಂತ್ರಿ ಯೋಗಿ ಆದಿತ್ಯನಾಥ್‌ ಆದಿಯಾಗಿ ಹಲವರು ಸ್ವಾಗತಿಸಿದ್ದಾರೆ.ಆದರೆ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಸಂಚಾಲಕ ಜಫರ್ಯಾಬ್‌ ಜಿಲಾನಿ ಹಾಗೂ ಘಿಮಜ್ಲಿಸ್‌ ಪಕ್ಷದ ನೇತಾರ ಅಸಾದುದ್ದೀನ್‌ ಒವೈಸಿ ಅವರು, ‘ಮಾತುಕತೆಯ ಸಮಯ ಮುಗಿದಿದೆ. ಕೋರ್ಟ್‌ನಲ್ಲೇ ವಿವಾದ ಇತ್ಯರ್ಥವಾಗಲಿ' ಎಂದಿದ್ದಾರೆ. 

ಮಹತ್ವದ ಅಭಿಪ್ರಾಯ: ತ್ವರಿತ ವಿಚಾರಣೆ ಕೋರಿದ್ದ ಸುಬ್ರಮಣಿಯನ್‌ ಸ್ವಾಮಿ ವಾದ ಮಂಡಿಸಿ, ‘ನಾನು ಮುಸ್ಲಿಂ ಸಮುದಾಯದ ಸದಸ್ಯರನ್ನು ಸಂಪರ್ಕಿಸಿದೆ. ವಿಷಯದ ಇತ್ಯರ್ಥಕ್ಕೆ ನ್ಯಾಯಾಂಗದ ಮಧ್ಯಪ್ರವೇಶ ಅಗತ್ಯ ಎಂದು ಅವರು ತಿಳಿಸಿದರು' ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ| ಖೇಹರ್‌, ‘ಸಂಧಾನಕ್ಕೆ ಹೊಸ ಯತ್ನಗಳನ್ನು ನೀವು ನಡೆಸಬೇಕು. ಅಗತ್ಯಬಿದ್ದರೆ ಒಬ್ಬ ಮಧ್ಯಸ್ಥಿಕೆದಾರನನ್ನು ಆಯ್ಕೆ ಮಾಡಿಕೊಳ್ಳಬೇಕು. ಮಧ್ಯಸ್ಥಿಕೆದಾರರ ಜೊತೆ ನೀವೂ ಕುಳಿತುಕೊಳ್ಳಿ ಎಂದು ಪಕ್ಷಗಾರರು ಬಯಸಿದರೆ, ಅದಕ್ಕೆ ನಾನು ಸಿದ್ಧನಿದ್ದೇನೆ. ನನ್ನ ಸಹೋದರ ನ್ಯಾಯಾಧೀಶರ (ನ್ಯಾ| ಡಿ.ವೈ. ಚಂದ್ರಚೂಡ ಮತ್ತು ನ್ಯಾ| ಎಸ್‌.ಎಸ್‌. ಕೌಲ್‌) ಸೇವೆಯನ್ನೂ ಬಳಸಿಕೊಳ್ಳಬಹುದು' ಎಂದು ಹೇಳಿದರು.
ಪಕ್ಷಗಾರರು ಬಯಸಿದರೆ ಮಧ್ಯಸ್ಥಿಕೆಗಾರರನ್ನು ನೇಮಿಸಲು ಉನ್ನತ ನ್ಯಾಯಾಲಯ ಸಿದ್ಧವಿದೆ ಎಂದು ಇದೇ ವೇಳೆ ನ್ಯಾ| ಖೇಹರ್‌ ನುಡಿದರು.

ಏನಿದು ಪ್ರಕರಣ?: ರಾಮ ಜನ್ಮಭೂಮಿ ಹಕ್ಕುಸ್ವಾಮ್ಯಕ್ಕಾಗಿ ಹಿಂದು-ಮುಸ್ಲಿಂ ಪಂಗಡಗಳು ದಾವೆ-ಪ್ರತಿದಾವೆ ಹೂಡಿದ್ದವು. 2010ರ ಸೆ.30ರಂದು ತೀರ್ಪು ಪ್ರಕಟಿಸಿದ ಅಲಹಾಬಾದ್‌ ಹೈಕೋರ್ಟ್‌, ಈ ಜಾಗೆಯನ್ನು ರಾಮಮಲ್ಲಾ, ನಿರ್ಮೋಹಿ ಅಖಾಡಾ ಹಾಗೂ ಸುನ್ನಿ ವಕ್ಫ್ ಬೋರ್ಡ್‌ಗೆ ಜಾಗೆ ಹಂಚಿತ್ತು. ಬಳಿಕ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಹಲ ವರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ವಿಚಾರಣೆ ತೀವ್ರಗೊಳಿಸಲು ಸ್ವಾಮಿ ಕೋರಿದ್ದಾರೆ.

ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಸಿಯಂ: ಯೋಗಿ ಆದಿತ್ಯನಾಥ್‌ ಘೋಷಣೆ

ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮಹತ್ವದ ನಿರ್ಧಾರ ಪ್ರಕಟಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಮಾಯಣ ಮ್ಯೂಸಿಯಂ ಸ್ಥಾಪಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಮ್ಯೂಸಿಯಂ ಸ್ಥಾಪನೆಗೆ ಅಯೋಧ್ಯೆಯಲ್ಲಿ 20 ಎಕರೆ ಒದಗಿಸುವುದಾಗಿ ಹೇಳಿದ್ದಾರೆ. 154 ಕೋಟಿ ರು. ವೆಚ್ಚದಲ್ಲಿ ರಾಮಾಯಣ ಮ್ಯೂಸಿಯಂ ನಿರ್ಮಾಣವಾಗಲಿದೆ.

ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಸಿಯಂ ನಿರ್ಮಿಸುವ ಸಂಬಂಧ ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್‌ ಶರ್ಮಾ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮ್ಯೂಸಿಯಂ ನಿರ್ಮಾಣ ಮಾಡಲಾ ಗುವುದು. ಇದೊಂದು ಪ್ರಮುಖ ಪ್ರವಾಸಿ ತಾಣವಾಗ ಲಿದೆ ಎಂದು ಹೇಳಿದ್ದರು.

ಆದರೆ ಇದು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಹಿಂದಿನ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸರ್ಕಾರ ಮ್ಯೂಸಿಯಂ ಸ್ಥಾಪನೆಗೆ ತಡೆ ನೀಡಿತ್ತು. ರಾಮಾಯಣ ಮ್ಯೂಸಿಯಂಗೆ ಪರ್ಯಾಯವಾಗಿ ಅಯೋಧ್ಯೆಯಲ್ಲಿ ರಾಮಲೀಲಾ ಪಾರ್ಕ್ ನಿರ್ಮಿಸುವುದಾಗಿ ಪ್ರಕಟಿಸಿತ್ತು.

ಏನಿದು ರಾಮಾಯಣ ಮ್ಯೂಸಿಯಂ?: ರಾಮನ ಜೀವನ ಮತ್ತು ಆದರ್ಶ ಚಿಂತನೆಗಳನ್ನು ಲೇಸರ್‌ ಶೋ, ವರ್ಚುವಲ್‌ ಸ್ಟೋರಿ ಟೆಲ್ಲಿಂಗ್‌, ಇಲೆಕ್ಟ್ರಾನಿಕ್‌ ವಾಲ್‌ಗಳ ಮೂಲಕ ಸಾದರಪಡಿಸುವುದಾಗಿದೆ. ತಮಿಳುನಾಡಿ ನಿಂದ ಅಯೋಧ್ಯೆಯ ವರೆಗೆ ಹರಡಿಕೊಂಡಿರುವ ರಾಮಾಯಣ ಸಕ್ರ್ಯೂಟ್‌ನ ಭಾಗವಾಗಿ ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದೆ. ಮ್ಯೂಸಿಯಂನಲ್ಲಿ 10 ಗ್ಯಾಲರಿ (ಕಲಾಶಾಲೆ)ಗಳು ಇರಲಿದ್ದು, ರಾಮಾಯಣದ ಸಪ್ತಕಾಂಡಗಳ ಬಗ್ಗೆ ವಿವರಣೆ ನೀಡಲಿವೆ. 

ವರದಿ: ಕನ್ನಡ ಪ್ರಭ

click me!