Vijayapura: ಕೂಡಲೇ ಮಳೆ ಸಮೀಕ್ಷೆ ನಡೆಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ

Published : Sep 25, 2024, 07:50 PM IST
Vijayapura: ಕೂಡಲೇ ಮಳೆ ಸಮೀಕ್ಷೆ ನಡೆಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ

ಸಾರಾಂಶ

ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಡೀ ಸುರಿದ ಧಾರಕಾರ ಮಳೆಯ ಹಿನ್ನೆಲೆಯಲ್ಲಿ ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ವಿಜಯಪುರ (ಸೆ.25): ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಡೀ ಸುರಿದ ಧಾರಕಾರ ಮಳೆಯ ಹಿನ್ನೆಲೆಯಲ್ಲಿ ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಎಲ್ಲ ತಾಲೂಕುಗಳ ತಹಸೀಲ್ದಾರರಿಂದ ಮಳೆಯ ಪ್ರಮಾಣ ಮತ್ತು ಅದರಿಂದ ಉಂಟಾಗಿರುವ ಆಸ್ತಿ- ಪಾಸ್ತಿ ಹಾನಿಯ ಕುರಿತು ಕೂಡಲೇ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. 

ವಿಜಯಪುರ ನಗರ ಮತ್ತು ಜಿಲ್ಲಾದ್ಯಂತ ಮಳೆಯಿಂದ ಸಮಸ್ಯೆ ಎದುರಾಗಿರುವ ಸ್ಥಳಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಬೇಕು. ಮಳೆ ನೀರಿನಿಂದ ಸಂತ್ರಸ್ತರಾದ ಜನರ ನೆರವಿಗೆ ಧಾವಿಸುವಂತೆ ಹೇಳಿದ್ದೇನೆ. ಬೆಳೆಹಾನಿ, ಆಸ್ತಿಪಾಸ್ತಿ ನಷ್ಟದ ಕುರಿತು ಕಂದಾಯ, ಕೃಷಿ, ತೋಟಗಾರಿಕೆ, ಆರೋಗ್ಯ, ಪೊಲೀಸ್ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಅಗತ್ಯ ತುರ್ತು ಕ್ರಮ ಸೇರಿದಂತೆ ಸಕಲ ರೀತಿಯಿಂದ ಕ್ರಮ ಕೈಗೊಂಡು ಸ್ಪಂದಿಸುವಂತೆ ಸೂಚನೆ ನೀಡಿದ್ದೇನೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಸಂತ್ರಸ್ತರಾದವರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಸದಾ ತಮ್ಮ ಹಿತಕಾಯಲು ಬದ್ಧವಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ಥ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಎಲ್ಲೆಡೆ ಮನೆಗಳು, ಅಂಗಡಿಗಳು, ಜಮೀನುಗಳು ಜಲಾವೃತವಾಗಿದ್ದು, ಜನಜೀವನವೇ ಅಸ್ತವ್ಯಸ್ತವಾಗಿದೆ. ರಾತ್ರಿ 8 ಗಂಟೆಗೆ ಶುರುವಾದ ಮಳೆ ಮೂರ್ನಾಲ್ಕು ಗಂಟೆಗಳ ಕಾಲ ನಿರಂತರ ಧಾರಾಕಾರವಾಗಿ ಎಡೆಬಿಡದೆ ಸುರಿದಿದೆ. ಪರಿಣಾಮ ನಗರದ ವಿವಿಧ ವಾರ್ಡ್‌ಗಳಲ್ಲಿನ ಹಲವು ಬಡಾವಣೆಗಳೇ ಜಲಾವೃತವಾಗಿವೆ. ನಗರದಲ್ಲಿ ಎಲ್ಲಿ ನೋಡಿದರೂ ನೀರು ನಿಂತಿದ್ದು, ರಸ್ತೆಗಳು ಕೂಡ ಜಲಾವೃತವಾಗಿವೆ. ಇನ್ನು, ತಗ್ಗು ಪ್ರದೇಶಗಳಲ್ಲಿರುವ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ನುಗ್ಗಿದ ನೀರನ್ನು ಹೊರಹಾಕಲು ಜನರು ಸಂಕಷ್ಟ ಪಟ್ಟರೆ, ತುಂಬಿಹೋಗಿದ್ದ ಚರಂಡಿಗಳನ್ನು ಸ್ವಚ್ಚಮಾಡಲು ಪಾಲಿಕೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ: ಸಚಿವ ಮಂಕಾಳ ವೈದ್ಯ

ಮನೆಗಳಿಗೆ ನುಗ್ಗಿದ ನೀರು: ನಿರಂತರವಾಗಿ ರಾತ್ರಿಯಿಡಿ ಸುರಿದ ಮಳೆಗೆ ಮನೆಗಳಲ್ಲಿ ನೀರು ನುಗ್ಗಿದ್ದರಿಂದ, ನೀರು ಹೊರಹಾಕುವಲ್ಲಿ ಜನರು ಹರಸಾಹಸ ಪಡಬೇಕಾಯಿತು. ನಗರದ ಬಿಲಾಲ್ ನಗರ, ಶಾಹಿ ನಗರ, ಬಾಗವಾನ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರ, ಕೆ.ಸಿ.ಮಾರುಕಟ್ಟೆಯ ರಸ್ತೆ ಜಲಾವೃತ, ಬ್ಯಾಂಕರ್ಸ್ ಕಾಲೋನಿಯ ಮನೆಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಯಿತು.

PREV
Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!