Kodagu: ಬಿಜೆಪಿ ಮೈತ್ರಿ ಬಿಟ್ಟು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಸಿದ್ಧತೆ ನಡೆಸಿತ್ತಾ ಜೆಡಿಎಸ್?

By Govindaraj SFirst Published Sep 25, 2024, 8:44 PM IST
Highlights

ಲೋಕಸಭಾ ಚುನಾವಣೆಯ ಬಳಿಕ ಮುಂದಿನ ಎಲ್ಲಾ ಚುನಾವಣೆಯಲ್ಲೂ ಮೈತ್ರಿ ಪಾಲಿಸುತ್ತೇವೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೇನೋ ಒಪ್ಪಂದ ಮಾಡಿಕೊಂಡಿವೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.25): ಲೋಕಸಭಾ ಚುನಾವಣೆಯ ಬಳಿಕ ಮುಂದಿನ ಎಲ್ಲಾ ಚುನಾವಣೆಯಲ್ಲೂ ಮೈತ್ರಿ ಪಾಲಿಸುತ್ತೇವೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೇನೋ ಒಪ್ಪಂದ ಮಾಡಿಕೊಂಡಿವೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಮಾತ್ರ ಜೆಡಿಎಸ್ ಮೈತ್ರಿ ಧರ್ಮ ಪಾಲಿಸದೆ ತಟಸ್ಥಗೊಂಡಿದ್ದರಿಂದ ಕಾಂಗ್ರೆಸ್ಗೆ ಬೆಂಬಲ ಕೊಟ್ಟಂತಾಗಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದಂತೆ ಆಗಿದೆ. ಹೀಗಾಗಿ ಬಿಜೆಪಿ ಜೆಡಿಎಸ್ಗೆ ಅಧಿಕಾರ ನಡೆಸಲು ಬೇಕಾದ ಅಗತ್ಯದಷ್ಟು ಬಹುಮತವಿದ್ದರೂ ಅಧಿಕಾರದಿಂದ ವಂಚಿತವಾಗುವಂತೆ ಆಗಿದೆ. ಒಟ್ಟು 16 ಸ್ಥಾನಬಲ ಹೊಂದಿರುವ ಕುಶಾಲನಗರ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು. 

Latest Videos

ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಜಯಲಕ್ಷ್ಮಿ ಮತ್ತು ಉಪಾಧ್ಯಕ್ಷರಾಗಿ ಪುಟ್ಟಲಕ್ಷ್ಮಿ ಆಯ್ಕೆಯಾದರು. 16 ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 6 ಸ್ಥಾನಗಳನ್ನು ಹೊಂದಿದ್ದರೆ, ಜೆಡಿಎಸ್ 4 ಸ್ಥಾನಗಳನ್ನು ಹೊಂದಿತ್ತು. ಹೀಗಾಗಿ ಮೈತ್ರಿ ಧರ್ಮ ಪಾಲಿಸಿದ್ದರೆ ಬಿಜೆಪಿ, ಜೆಡಿಎಸ್ ಪುರಸಭೆಯಲ್ಲಿ ಅಧಿಕಾರ ಮಾಡಬೇಕಾಗಿತ್ತು. ಈ ನಡುವೆ ಕಳೆದ 1 ವರ್ಷದ ಹಿಂದೆಯಷ್ಟೇ ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿತು. ಹೀಗಾಗಿ ಪುರಸಭೆಯಾಗಿ ಘೋಷಣೆಯಾದ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕಾಗಿತ್ತು. ಅದರ ಬದಲು ಪಟ್ಟಣ ಪಂಚಾಯಿತಿ ಸದಸ್ಯರನ್ನೇ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ಆಯ್ಕೆ ಮಾಡುತ್ತಿರುವುದು ಕಾನೂನು ಬಾಹಿರ. ಆದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೇ ಭಾಗವಹಿಸುವುದಿಲ್ಲ, 

ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆಯಬೇಕು: ಜಗದೀಶ್ ಶೆಟ್ಟರ್

ಚುನಾವಣೆಯನ್ನು ನಡೆಸಬಾರದು ಎಂದು ಬಿಜೆಪಿ ಸದಸ್ಯರು ಪುರಸಭೆ ಕಚೇರಿ ಹೊರಗೆ ನಿಂತು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ ನಿಗಧಿಯಂತೆ ಕುಶಾಲನಗರ ತಹಶೀಲ್ದಾರ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಕಾಂಗ್ರೆಸ್ನ ಜಯಲಕ್ಷ್ಮಿ ಮತ್ತು ಪುಟ್ಟಲಕ್ಷ್ಮಿ ಇಬ್ಬರು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಆದರೆ ಬಿಜೆಪಿ ನಾಮಪತ್ರ ಸಲ್ಲಿಸುವುದಿರಲಿ, ಚುನಾವಣಾ ಪ್ರಕ್ರಿಯೆಯಲ್ಲೇ ಭಾಗವಹಿಸಲಿಲ್ಲ. ಹೀಗಾಗಿ ಚುನಾವಣಾ ಅಧಿಕಾರಿಯೂ ಆಗಿದ್ದ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗಿದೆ ಎಂದು ಘೋಷಿಸಿದರು. ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಇಬ್ಬರು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಮನೆ ಮಾಡಿತು. 

ಹಾರ ತುರಾಯಿಗಳನ್ನು ಹಾಕಿ ಮೆರವಣಿಗೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆ ಬಹಿಷ್ಕರಿಸಿದ ಬಿಜೆಪಿ ಕಾನೂನು ಬಾಹಿರವಾಗಿ ಪುರಸಭೆಗೆ ನಡೆಸಿರುವ ಚುನಾವಣೆ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ನಿರ್ಧರಿಸಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಒಂದುವರೆ ವರ್ಷದ ಹಿಂದೆಯೇ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದಾದ ಆರು ತಿಂಗಳಲ್ಲೇ ಚುನಾವಣೆ ನಡೆಸಬೇಕಾಗಿತ್ತು. ಅಲ್ಲದೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಬೇಕಾದರೆ ಉಪವಿಭಾಗಧಿಕಾರಿ ಅಥವಾ ಅದರ ಮೇಲಿನ ಹುದ್ದೆಯ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿತ್ತು. 

ಮುಡಾ ಹಗರಣದಿಂದ ಸಿದ್ದರಾಮಯ್ಯ ಭವಿಷ್ಯ ಅಂತ್ಯ: ಶಾಸಕ ಅರವಿಂದ ಬೆಲ್ಲದ

ಇದರ ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೂ ಮತದಾನದ ಹಕ್ಕು ನೀಡಲಾಗಿದೆ. ಇವೆಲ್ಲವೂ ಕಾನೂನು ಬಾಹಿರವಾಗಿದ್ದು, ಚುನಾವಣೆ ವಿರುದ್ಧ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದರು. ಆದರೆ ಮತದಾನಕ್ಕಾಗಿ ಭಾಗವಹಿಸಿದ್ದ ಮಡಿಕೇರಿ ಶಾಸಕ ಮಂತರ್ ಗೌಡ ಹೈಕೋರ್ಟ್ ನಿರ್ದೇಶನದಂತೆ ಚುನಾವಣೆ ನಡೆದಿದೆ. ಯಾವುದೇ ರೀತಿಯಿಂದಲೂ ಕಾನೂನು ಬಾಹಿರವಾಗಿ ಚುನಾವಣೆ ನಡೆದಿಲ್ಲ. ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಆರೋಪ ಮಾಡುವುದನ್ನು ಬಿಜೆಪಿ ಬಿಡಲಿ ಎಂದಿದ್ದಾರೆ. ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕುಶಾಲನಗರ ಪುರಸಭೆ ಚುನಾವಣೆಯಲ್ಲಿ ಮೈತ್ರಿ ಕೆಲಸ ಮಾಡದೆ ಕಾಂಗ್ರೆಸ್ ಅಧಿಕಾರ ಹಿಡಿದಿರುವುದು ಕಾನೂನು ಹೋರಾಟಕ್ಕೆ ಬುನಾದಿ ಹಾಕಿಕೊಟ್ಟಂತೆ ಆಗಿದೆ.

click me!