ಜನಾರ್ದನ ರೆಡ್ಡಿ ಇಷ್ಟು ದಿನ ಎಲ್ಲಿದ್ದರು?

By Web DeskFirst Published Nov 11, 2018, 8:51 AM IST
Highlights

ರಾಜ್ಯದ ಗಡಿ ಭಾಗದ ಆಂಧ್ರಪ್ರದೇಶದ ರಾಜಕೀಯ ನಾಯಕರ ಆಶ್ರಯದಲ್ಲಿ ರೆಡ್ಡಿ ಇದ್ದರು. ನಮಗೆ ಅವರ ಇರುವಿಕೆ ಗೊತ್ತಾಗಿ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದಾರೆ ಎನ್ನುತ್ತಾರೆ ಪೊಲೀಸರು. ಆದರೆ ಜನಾರ್ದನ ರೆಡ್ಡಿ ಮಾತ್ರ ನಾನು ಎಲ್ಲಿಗೂ ಹೋಗಿರಲಿಲ್ಲ, ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೆ ಎನ್ನುವ ಮೂಲಕ ಮತ್ತಷ್ಟು ಕೌತುಕ ಹೆಚ್ಚಿಸಿದ್ದಾರೆ.

ಬೆಂಗಳೂರು[ನ.11]: ‘ಇ.ಡಿ. ಡೀಲ್‌’ ಪ್ರಕರಣದಲ್ಲಿ ಸಿಸಿಬಿ ಬೆನ್ನುಹತ್ತಿದ ಕೂಡಲೇ ಭೂಗತರಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಶನಿವಾರ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಅವರು ಇಷ್ಟುದಿನ ಎಲ್ಲಿದ್ದರು? ಅವರಿಗೆ ಆಶ್ರಯದಾತರು ಯಾರು? ಅವರು ಎಲ್ಲಿದ್ದರು ಎಂಬುದು ಪೊಲೀಸರಿಗೆ ಮೊದಲೇ ಗೊತ್ತಿತ್ತೇ ಎಂಬಿತ್ಯಾದಿ ಪ್ರಶ್ನೆಗಳು ಕೇಳಿ ಬಂದಿವೆ.

ರಾಜ್ಯದ ಗಡಿ ಭಾಗದ ಆಂಧ್ರಪ್ರದೇಶದ ರಾಜಕೀಯ ನಾಯಕರ ಆಶ್ರಯದಲ್ಲಿ ರೆಡ್ಡಿ ಇದ್ದರು. ನಮಗೆ ಅವರ ಇರುವಿಕೆ ಗೊತ್ತಾಗಿ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದಾರೆ ಎನ್ನುತ್ತಾರೆ ಪೊಲೀಸರು. ಆದರೆ ಜನಾರ್ದನ ರೆಡ್ಡಿ ಮಾತ್ರ ನಾನು ಎಲ್ಲಿಗೂ ಹೋಗಿರಲಿಲ್ಲ, ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೆ ಎನ್ನುವ ಮೂಲಕ ಮತ್ತಷ್ಟು ಕೌತುಕ ಹೆಚ್ಚಿಸಿದ್ದಾರೆ.

ಕೋರ್ಟ್‌ನಲ್ಲಿ ಶುಕ್ರವಾರ ನಿರೀಕ್ಷಣಾ ಜಾಮೀನು ನಿರೀಕ್ಷೆಯಲ್ಲಿದ್ದ ರೆಡ್ಡಿ ಅವರಿಗೆ ನಿರಾಸೆಯಾಗಿತ್ತು. ನ್ಯಾಯಾಲಯವು ಸಿಸಿಬಿ ವಿಚಾರಣೆಗೆ ಹಾಜರಾಗಿ ಆಮೇಲೆ ಜಾಮೀನು ಕೋರಿ ಎನ್ನುವ ಧಾಟಿಯಲ್ಲಿ ಹೇಳಿದ್ದು ರೆಡ್ಡಿ ಅವರು ಸ್ವಯಂ ಸಿಸಿಬಿ ಮುಂದೆ ಹಾಜರಾಗಲು ಕಾರಣವಾಗಿದೆ ಎನ್ನಲಾಗಿದೆ. ಇನ್ನೊಂದೆಡೆ ಅವರ ವಕೀಲರು ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿ ವಿಚಾರಣೆಗೆ ಕರೆತಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ಇದನ್ನೂ ಓದಿ: ರೆಡ್ಡಿ ಇನ್ ಸಿಸಿಬಿ: ಗಣಿಧಣಿಗೆ ಮುಳುವಾಗುತ್ತಾ 57 ಕೆ.ಜಿ ಚಿನ್ನ?

ಪೊಲೀಸರ ಮುಂದೆ ದಿಢೀರ್‌ ಹಾಜರಾಗಿದ್ದಕ್ಕೆ ಕಾರಣವೇನು?

ಜನಾರ್ದನ ರೆಡ್ಡಿ ಶನಿವಾರ ದಿಢೀರನೇ ವಿಚಾರಣೆಗೆ ಹಾಜರಾಗುವ ಹಿಂದೆ ಕಾನೂನು ಹೋರಾಟದಲ್ಲಿ ಪೊಲೀಸರನ್ನೇ ಕಟ್ಟಿಹಾಕುವ ಪರಿಣತರ ಸಲಹೆ ಅಡಗಿದೆ ಎನ್ನಲಾಗಿದೆ. ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಸಿಸಿಬಿ ವಿಚಾರಣೆಗೆ ಹಾಜರಾಗಲು ಜನಾರ್ದನ ರೆಡ್ಡಿಗೇಕೆ ಭಯ ಎಂದು ರೆಡ್ಡಿ ವಕೀಲರನ್ನು ಪ್ರಶ್ನಿಸಿತ್ತು. ಹೀಗಾಗಿ ಸೋಮವಾರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಕಾರಣ ವಕೀಲರು ಸಿಸಿಬಿ ವಿಚಾರಣೆಗೆ ರೆಡ್ಡಿ ಅವರನ್ನು ಕರೆತಂದಿದ್ದಾರೆ. ಈ ಮೂಲಕ ನ್ಯಾಯಾಲಯದ ಮಾತಿಗೆ ಬೆಲೆ ಕೊಟ್ಟು ತಮ್ಮ ಕಕ್ಷಿದಾರರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಯೋಜನೆ ವಕೀಲರದ್ದಾಗಿ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಬಂಧಿಸಿದರೆ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆಗ ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದು ರೆಡ್ಡಿ ಪರ ವಕೀಲರು ಜಾಮೀನು ಕೋರಬಹುದು. ಅಲ್ಲದೆ ಈಗಾಗಲೇ ಪ್ರಕರಣದ ಇತರೆ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಕೊಟ್ಟಿರುವ ಅಂಶವು ರೆಡ್ಡಿಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಂಬಿಡೆಂಟ್ ಹಗರಣದ ಬಗ್ಗೆ ಜನಾರ್ದನ ರೆಡ್ಡಿ ಬಾಯ್ಬಿಟ್ಟ ಸತ್ಯ..!

ಅರ್ಧ ಗಂಟೆ ಕಾದ ರೆಡ್ಡಿ?

ಮೂರು ದಿನಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ ಸಿಗದೆ ತಪ್ಪಿಸಿಕೊಂಡಿದ್ದ ಜನಾರ್ದನ ರೆಡ್ಡಿ ಅವರು ಶನಿವಾರ ತಾವಾಗಿಯೇ ವಿಚಾರಣೆಗೆ ಬಂದಾಗ ಸಿಸಿಬಿ ಪೊಲೀಸರು ಅರ್ಧ ತಾಸು ಕಾಯಿಸಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದಲೇ ರೆಡ್ಡಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಸಿಸಿಬಿ ಕಚೇರಿಗೆ ಆಗಮಿಸಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರು, ಡಿಸಿಪಿ ಎಸ್‌.ಗಿರೀಶ್‌ ಹಾಗೂ ತನಿಖಾಧಿಕಾರಿ ಎಸಿಪಿ ವೆಂಕಟೇಶ್‌ ಪ್ರಸನ್ನ ಜತೆ ಮಾತುಕತೆ ನಡೆಸಿದರು. ಮಧ್ಯಾಹ್ನ 2.30ರ ಸುಮಾರಿಗೆ ರೆಡ್ಡಿ ‘ಈಗ ಸಿಸಿಬಿ ಕಚೇರಿಗೆ ಹೋಗುತ್ತೇನೆ’ ಎಂದು ವ್ಯಾಟ್ಸ್‌ ಆ್ಯಪ್‌ನಲ್ಲಿ ವಿಡಿಯೋ ಹರಿಬಿಟ್ಟರು. ಈ ವಿಷಯ ತಿಳಿದ ಅಧಿಕಾರಿಗಳು ಕೆಲ ಹೊತ್ತು ರೆಡ್ಡಿ ನಿರೀಕ್ಷೆಯಲ್ಲಿದ್ದರು. ನಂತರ ರೆಡ್ಡಿ ಸಿಸಿಬಿ ಕಚೇರಿಗೆ ಬರುವ ವೇಳೆಗೆ ಅಲೋಕ್‌ ಕುಮಾರ್‌ ಹಾಗೂ ಗಿರೀಶ್‌ ಅವರು ಊಟಕ್ಕೆ ಹೋದರು. ಹೀಗಾಗಿ ಅಧಿಕಾರಿಗಳ ಬರುವಿಕೆಗೆ ರೆಡ್ಡಿ ಅರ್ಧ ತಾಸು ಕಾಯುವಂತಾಯಿತು.

click me!