ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರವಾಹ: ವಿಮಾನ ಹಾರಾಟ ರದ್ದು?

By Web DeskFirst Published Jul 14, 2018, 2:19 PM IST
Highlights
  • ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಮುಂಬೈನದ್ದೇ ಅಲ್ಲ
  •  2013 ಅಗಸ್ಟ್ 31ರಂದು ಮೆಕ್ಸಿಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಘಟನೆ

ಬೆಂಗಳೂರು[ಜು.14]: ‘ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಕೆಲವು ವಿಮಾನಗಳು ತಡವಾಗಿ ಹಾರಾಟ ಆರಂಭಿಸಿದರೆ, ಕೆಲವು ವಿಮಾನಗಳು ರದ್ದಾಗಿವೆ. ಹಾಗಾಗಿ ವಿಮಾನ ಪ್ರಯಾಣ ಆರಂಭಿಸುವ ಮುನ್ನ ಆನ್‌ಲೈನ್‌ನಲ್ಲಿ ಪರಿಶೀಲಿಸಿ ನಂತರ ಹೊರಡಿ’ ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ.

ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ಸುದ್ದಿಯನ್ನು ನಿಜವೆಂದು ನಂಬಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಆದರೆ ನಿಜಕ್ಕೂ ಮುಂಬೈ ವಿಮಾನ ನಿಲ್ದಾಣದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತೇ,ವಿಮಾನಗಳು ರದ್ದಾಗಿದ್ದವೇ ಎಂದು ಹುಡುಕ ಹೊರಟಾಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಮುಂಬೈನದ್ದೇ ಅಲ್ಲ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ಮುಂಬೈ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. 

ಅಲ್ಲದೆ ಮುಂಬೈ ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ ಹಾಗೂ ಟ್ವೀಟರ್ ಖಾತೆಯಲ್ಲಿ ಈ ರೀತಿಯ ಯಾವುದೇ ಎಚ್ಚರಿಕೆ ಸಂದೇಶವೂ ಇಲ್ಲ. ‘ಆಲ್ಟ್ ನ್ಯೂಸ್’ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮುಂಬೈ ವಿಮಾನ ನಿಲ್ದಾಣದ ಹೆಸರಿನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಮೆಕ್ಸಿಕೋ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ್ದು ಎಂಬುದು ಪತ್ತೆಯಾಗಿದೆ. 2013 ಅಗಸ್ಟ್ 31ರಂದು ಈ ವಿಡಿಯೋವನ್ನು ಅನೇಕ ಮೆಕ್ಸಿಕನ್ನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮೆಕ್ಸಿಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ ಕೂಡ ಪೋಸ್ಟ್ ಮಾಡಿ ಕೆಲ ವಿಮಾನ ಹಾರಾಟ ರದ್ದಾಗಿದೆ ಎಂದು ಹೇಳಿತ್ತು. ಹಾಗಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರವಾಹ ಎಂದು ಹರಿದಾಡುತ್ತಿರುವ ವಿಡಿಯೋ ಸುಳ್ಳು.

[ಕನ್ನಡಪ್ರಭ ವೈರಲ್ ಚೆಕ್ ಅಂಕಣ]

ಪೊಲೀಸ್ ಅಧಿಕಾರಿ ಮನೆಗೇ ಕನ್ನ

click me!