ದೇಶಕ್ಕೆ ಹೊಸ ದಿಕ್ಕು ತೋರಿಸಿದ ಸ್ವತಂತ್ರ ಭಾರತದ 7 ಆಂದೋಲನಗಳು!: ಸರ್ಕಾರಕ್ಕೇ ಬೆವರಿಳಿಸಿದ ಪ್ರಜಾಶಕ್ತಿ!

By Suvarjna Web DeskFirst Published Aug 15, 2017, 3:57 PM IST
Highlights

ಬ್ರಿಟಿಷರನ್ನು ಭಾರತದಿಂದ ಹೊರಗೋಡಿಸಿ, ದೇಶವನ್ನು ಸ್ವತಂತ್ರಗೊಳಿಸಲು ಸ್ವಾತಂತ್ರ್ಯ ಸೇನಾನಿಗಳು ವಿವಿಧ ಆಂದೋಲನಗಳನ್ನು ಕೈಗೊಂಡಿದ್ದರು. ಧ್ವನಿಯೆತ್ತಿ ತಮ್ಮ ಬೇಡಿಕೆಗಳನ್ನು ಪೂರೈಸಲು ಆಂದೋಲನಗಳನ್ನು ಕೈಗೊಳ್ಳುವ ಸಂಸ್ಕೃತಿ ಈಗಲೂ ಜಾರಿಯಲ್ಲಿದೆ. ದೇಶದಲ್ಲಿ ಪ್ರತಿ ಬಾರಿ ಚಿಕ್ಕ ಪುಟ್ಟ ಪ್ರದೇಶದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೂ ಸಾವಿರಾರು ಮಂದಿ ಆಂದೋಲನಗಳಲ್ಲಿ ಕೈ ಜೋಡಿಸುತ್ತಾರೆ. 71ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇಂತಹ ಕೆಲವು ಹೆಸರುವಾಸಿಯಾದ ಆಂದೋಲನಗಳನ್ನು ನೆನಪಿಸಿಕೊಳ್ಳುವುದು ಸೂಕ್ತ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ಅಪಾರ ಪ್ರಮಾಣದಜನರು ಬೀದಿಗಿಳಿದು ಒಂದಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು, ಸರ್ಕಾರಕ್ಕೇ ಬಿಸಿ ಮುಟ್ಟಿಸಿದ 7 ಆಂದೋಲನಗಳ ಪಟ್ಟಿ ಇಲ್ಲಿದೆ.

ನವದೆಹಲಿ(ಆ.15): ಬ್ರಿಟಿಷರನ್ನು ಭಾರತದಿಂದ ಹೊರಗೋಡಿಸಿ, ದೇಶವನ್ನು ಸ್ವತಂತ್ರಗೊಳಿಸಲು ಸ್ವಾತಂತ್ರ್ಯ ಸೇನಾನಿಗಳು ವಿವಿಧ ಆಂದೋಲನಗಳನ್ನು ಕೈಗೊಂಡಿದ್ದರು. ಧ್ವನಿಯೆತ್ತಿ ತಮ್ಮ ಬೇಡಿಕೆಗಳನ್ನು ಪೂರೈಸಲು ಆಂದೋಲನಗಳನ್ನು ಕೈಗೊಳ್ಳುವ ಸಂಸ್ಕೃತಿ ಈಗಲೂ ಜಾರಿಯಲ್ಲಿದೆ. ದೇಶದಲ್ಲಿ ಪ್ರತಿ ಬಾರಿ ಚಿಕ್ಕ ಪುಟ್ಟ ಪ್ರದೇಶದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೂ ಸಾವಿರಾರು ಮಂದಿ ಆಂದೋಲನಗಳಲ್ಲಿ ಕೈ ಜೋಡಿಸುತ್ತಾರೆ. 71ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇಂತಹ ಕೆಲವು ಹೆಸರುವಾಸಿಯಾದ ಆಂದೋಲನಗಳನ್ನು ನೆನಪಿಸಿಕೊಳ್ಳುವುದು ಸೂಕ್ತ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ಅಪಾರ ಪ್ರಮಾಣದಜನರು ಬೀದಿಗಿಳಿದು ಒಂದಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು, ಸರ್ಕಾರಕ್ಕೇ ಬಿಸಿ ಮುಟ್ಟಿಸಿದ 7 ಆಂದೋಲನಗಳ ಪಟ್ಟಿ ಇಲ್ಲಿದೆ.

1. ಸೇವ್ ಸೈಲೆಂಟ್ ವ್ಯಾಲಿ ಆಂದೋಲನ(Save Silent Valley Movement):

Latest Videos

ಈ ಆಂದೋಲನ ಸ್ವತಂತ್ರ ಭಾರತದ ಮೊದಲ ಅತಿ ದೊಡ್ಡ ಆಂದೋಲನವೆಂದೇ ಹೆಸರುವಾಸಿಯಾಗಿದೆ. ಈ ಆಂದೋಲನವನ್ನು ಕಾನನದ ಜಲಧಾರೆ ಎಂದೇ ಪ್ರಸಿದ್ಧವಾಗಿರುವ ಸೈಲೆಂಟ್ ವ್ಯಾಲಿ(ಕಣಿವೆ)ಯನ್ನು ರಕ್ಷಿಸಲು ನಡೆದಿತ್ತು. ಕೇರಳದ ಪ್ರಭಾವಿ ನಾಯಕರಾದ ಕರುಣಾಕರನ್ ಮತ್ತು ಸಂಸದ ವೆ. ಎಸ್. ವಿಜಯ್ ರಾಘವ್ ಅಲ್ಲಿ ಹೈಡ್ರೋಪವರ್ ಯೋಜನೆಯನ್ನು ಜಾರಿಗೊಳಿಸುವ ಪರವಾಗಿದ್ದರು. ಆದರೆ ಕಾಡನ್ನು ರಕ್ಷಿಸಲು ನೀರಿನ ಆಂದೋಲನ ಹಮ್ಮಿಕೊಳ್ಳಲಾಯಿತು. ಇದನ್ನು 'ಸೇವ್ ಸೈಲೆಂಟ್ ವ್ಯಾಲಿ ಆಂದೋಲನ' ಎಂದು ನಾಮಕರಣ ಮಾಡಲಾಯಿತು. ಹೀಗಾಗಿ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಈ ಯೋಜನೆಗೆ ತಮ್ಮ ಅನುಮತಿ ನೀಡದೆ ತಿರಸ್ಕರಿಸಿದ್ದರು.

2. ಅಪ್ಪಿಕೋ/ಚಿಪ್ಕೋ ಆಂದೋಲನ:

70ರ ದಶಕದಲ್ಲಿ ದೇಶದಾದ್ಯಂತ ಮರಗಳನ್ನು ಕಡಿಯುವ ವಿರುದ್ಧ ಆಂದೋಲನವೊಂದು ಆರಂಭವಾಯಿತು, ಅದನ್ನು ಅಪ್ಪಿಕೋ/ಚಿಪ್ಕೋ ಚಳುವಳಿ ಎಂದು ಕರೆಯಲಾಗುತ್ತದೆ. ಈ ಆಂದೋಲನದಲ್ಲಿ ಜನರು ಮರಗಳನ್ನು ರಕ್ಷಿಸಲು ಅವುಗಳನ್ನು ಅಪ್ಪಿಕೊಂಡು ನಿಲ್ಲುತ್ತಿದ್ದರು ಈ ಮೂಲಕ ಮರಕಡಿಯುವವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು ಹೀಗಾಗಿ ಈ ಆಂದೋಲನಕ್ಕೆ ಅಪ್ಪಿಕೋ/ಚಿಪ್ಕೋ ಎಂಬ ಹೆಸರು ಬಂತು. 1974ರಲ್ಲಿ ವಿಶ್ವವಿಖ್ಯಾತ 'ಅಪ್ಪಿಕೋ/ಚಿಪ್ಕೋ' ಆರಂಭವಾಯಿತು. ಇದೇ ಚಳುವಳಿಯಿಂದಾಗಿ ಗೌರಾದೇವಿಯವರಿಗೆ 'ಚಿಪ್ಕೋ ವುಮನ್' ಎಂಬ ಹೆಸರು ಪಡೆದಿದ್ದಾರೆ. 1973ರ ಎಪ್ರಿಲ್ ತಿಂಗಳಲ್ಲಿ ಅಲಕನಾಂದ ಕಣಿವೆಯ ಉತ್ತರದಲ್ಲಿರುವ ಮಂಡಲ ಹಳ್ಳಿಯಲ್ಲಿ ಶುರುವಾದ ಆಂದೋಲನ ನಿಧಾನವಾಗಿ ಉತ್ತರಪ್ರದೇಶ ಹಿಮಾಲಯದ ಜಿಲ್ಲೆಗಳಿಗೆ ವ್ಯಾಪಿಸಿತು. ಬಳಿಕ ಚಂಡೀ ಪ್ರಸಾದ್ ಭಟ್, ಗೋವಿಂದ್ ಸಿಂಹ್ ರಾವತ್, ವಾಸವಾನಂದ್ ನೌಟಾಲಿಯಾ ಹಾಗೂ ಹಯಾತ್ ಸಿಂಗ್'ನಂತಹ ವ್ಯಕ್ತಿಗಳು ಈ ಆಂದೋಲನವನ್ನು ಬೆಂಬಲಿಸಿದರು.

3. ಜೆಪಿ ಆಂದೋಲನ

ಇಡೀ ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಆಂದೋಲನವಿದು. 1974ರಲ್ಲಿ ಬಿಹಾರದ ವಿದ್ಯಾರ್ಥಿಗಳು, ಅಲ್ಲಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿ ಆರಂಭಿಸಿದ ಆಂದೋಲನ ಇದಾಗಿದೆ. ಬಳಿಕ ಈ ಆಂದೋಲನ ಇಂದಿರಾ ಗಂಧಿ ನೇತೃತ್ವದ ಕೇಂದ್ರ ಸರ್ಕಾರದೆಡೆ ತಿರುಗಿತು. ಈ ಆಂದೋಲನದ ನೇತೃತ್ವವನ್ನು ಪ್ರಸಿದ್ಧ ಗಾಂಧೀವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ನಾರಾಯಣ್ ವಹಿಸಿಕೊಂಡಿದ್ದರು, ಇವರನ್ನು ಜೆ. ಪಿ ಎಂದೂ ಕರೆಯಲಾಗುತ್ತಿತ್ತು. ಇನ್ನು ಈ ಆಂದೋಲನವನ್ನು 'ಸಂಪೂರ್ಣ ಕ್ರಾಂತಿ ಆಂದೋಲನ' ಎಂದೂ ಕರೆಯುತ್ತಾರೆ. ಈ ಚಳುವಳಿಯಲ್ಲಿ ಅಂದು ಬಿಹಾರದ ಮುಖ್ಯಮಂತ್ರಿಯಾಗಿದ್ದ ಅಬ್ದುಲ್ ಗಫೂರ್'ರನ್ನು ಪದಚ್ಯುತಿಗೊಳಿಸಬೇಕೆಂಬ ಬೇಡಿಕೆ ಇಟ್ಟಿದ್ದರು, ಆದರೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಆಂದೋಲನ ಸತ್ಯಾಗ್ರದ ರೂಪ ಪಡೆದಿತ್ತು. ದೇಶವಿಡೀ ಸಂಚರಿಸಿದ ಜೆಪಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಿ, ಎಲ್ಲಾ ವಿಪಕ್ಷಗಳನ್ನು ಒಂದುಗೂಡಿಸಿದ್ದರು. ಇದರ ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಕಾಂಗ್ರೆಸೇತರ, ಜನತಾದಳ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

4. ಕಾಡು ಉಳಿಸಿ ಆಂದೋಲನ:

ಈ ಆಂದೋಲನವೂ 1980ರಲ್ಲಿ ಬಿಹಾರದಲ್ಲೇ ಆರಂಭವಾಯಿತು. ಬಳಿಕ ಇದು ಝಾರ್ಖಂಡ್ ಮತ್ತು ಒಡಿಸ್ಸಾಗೂ ವ್ಯಾಪಿಸಿತು. 1980ರಲ್ಲಿ ಬಿಹಾರ ಸರ್ಕಾರ ರಾಜ್ಯದಲ್ಲಿದ್ದ ಅಮೂಲ್ಯವಾದ ತೇಗದ ಮರಗಳನ್ನು ಕಡಿಯುವ ನಿರ್ಧಾರ ಪ್ರಕಟಿಸಿತು, ಹೀಗಾಗಿ ಈ ಯೋಜನೆಯ ವಿರುದ್ಧ ಬಿಹಾರದ ಆದಿವಾಸಿ ಜನರು ಒಂದಾಗಿ ತಾವಿದ್ದ ಕಾಡನ್ನು ರಕ್ಷಿಸಲು ಆಂದೋಲನವನ್ನು ಆರಂಭಿಸಿದರು, ಇದಕ್ಕೆ 'ಕಾಡು ಉಳಿಸಿ' ಎಂದು ನಾಮಕರಣ ಮಾಡಿದರು.

5. ನರ್ಮದಾ ಉಳಿಸಿ ಆಂದೋಲನ:

ನರ್ಮದಾ ನದಿಯಲ್ಲಿ ನಿರ್ಮಾಣವಾಗುತ್ತಿದ್ದ ಅನೇಕ ಅಣೆಕಟ್ಟುಗಳ ವಿರುದ್ಧ 1985ರಲ್ಲಿ ಆರಂಭವಾದ ಚಳುವಳಿಯೇ 'ನರ್ಮದಾ ಉಳಿಸಿ ಆಂದೋಲನ'. ಈ ಆಂದೋಲನದಲ್ಲಿ ರೈತರು, ಆದಿವಾಸಿಗಳು, ಪರಿಸರಪ್ರೇಮಿಗಳೆಲ್ಲರೂ ಸೇರಿ ಅಣೆಕಟ್ಟು ನಿರ್ಮಿಸುವ ವಿರುದ್ಧ ಆಂದೋಲನ ಆರಂಭಿಸಿದರು. ಬಳಿಕ ಈ ಆಂದೋಲನದಲ್ಲಿ ಹಲವಾರು ಪ್ರಸಿದ್ಧ ಗಣ್ಯರೂ ಪಾಲ್ಗೊಂಡರು ಅಲ್ಲದೇ ಹರತಾಳದ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಬಳಿಕ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಾಲಯ ಇದರಿಂದ ನಷ್ಟ ಅನುಭವಿಸುವವರಿಗೆ ಪರಿಹಾರ ನೀಡದ ಬಳಿಕವಷ್ಟೇ ಅಣೆಕಟ್ಟು ನಿರ್ಮಾಣ ಕಾರ್ಯ ಮುಂದುವರೆಸಲು ಸರ್ಕಾರಕ್ಕೆ ಆದೇಶ ನೀಡಿತ್ತು.

6. ಜನಲೋಕಪಾಲ್ ಬಿಲ್- ಭ್ರಷ್ಟಾಚಾರ ನಿಗ್ರಹ ಆಂದೋಲನ:

2011ರಲ್ಲಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ದೆಹಲಿಯ ಜಂತರ್ ಮಂತರ್ ಜನಲೋಕಪಾಲ್ ಬಿಲ್ ಜಾರಿಗೊಳಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಅವರನ್ನು ಸಮರ್ಥಿಸಲು ಇಡೀ ದೇಶವೇ ಒಂದುಗೂಡಿತ್ತು. ಈ ಆಂದೋಲನಕ್ಕೆ ಅದೆಷ್ಟು ಯಶಸ್ಸು ಪಡೆದಿತ್ತೆಂದರೆ ಇದು ಕಳೆದ 2 ದಶಕದ ಪ್ರಸಿದ್ಧ ಆಂದೋಲನವೆಂಬ ಪ್ರಸಿದ್ಧಿ ಗಳಿಸಿತು. ಬಳಿಕ ಇದೇ ಆಂದೋಲನದ ಫಲಿತಾಂಶವೆಂಬಂತೆ ಅರವಿಂದ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾದರು. ಆದರೆ ಯಾವ ಶಕ್ತಿಶಾಲಿ ಜನಲೋಕಪಾಲ್ ವಿಧೇಯ ಮಂಡಿಸಲು ಈ ಆಂದೋಲನ ನಡೆಯಿತೋ ಅದು ಇವತ್ತಿಗೂ ಕನಸಾಗಿಯೇ ಉಳಿದಿದೆ.

7. ನಿರ್ಭಯಾ ಆಂದೋಲನ: 

2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ದೇಶದಾದ್ಯಂತ ಜನರೆಲ್ಲರೂ ಇದನ್ನು ಖಂಡಿಸಿ ಬೀದಿಗಿಳಿದಿದ್ದರು. ಸಾಮಾಜಿಕ ಜಾಲಾತಾಣಗಳಲ್ಲೂ ಈ ಆಂದೋನ ಭಾರೀ ಸದ್ದು ಮಾಡಿತ್ತು. ಇದಾದ ಬಳಿಕ ಿಡೀ ದೇಶದ ಪ್ರತಿಯೊಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಹಿಳಾ ಸುರಕ್ಷತೆಗಾಗಿ ವಿಭಿನ್ನ ಹೆಜ್ಜೆಗಳನ್ನಿಟ್ಟರು. ಸರ್ಕಾರ ನಿರ್ಭಯಾ ಫಂಡ್ ಕೂಡಾ ನಿರ್ಮಿಸಿತು ಅಲ್ಲದೇ 1090 ಸಹಾಯವಾಣಿಗಳನ್ನೂ ಜಾರಿಗೊಳಿಸಿತು

click me!