ತಾಂತ್ರಿಕ ಅದ್ಭುತಕ್ಕೆ ಸಾಕ್ಷಿಯಾಗಿದೆ ಸಿಕ್ಕಿಂ ಏರ್‌ಪೋರ್ಟ್; ಏನಿದರ ವಿಶೇಷ?

By Web DeskFirst Published Sep 26, 2018, 12:29 PM IST
Highlights

ವಿಮಾನ ನಿಲ್ದಾಣ ಹೊಂದಿಲ್ಲದ ದೇಶದ ಏಕೈಕ ರಾಜ್ಯ ಎಂಬ ಕೊರಗಿನಿಂದ ಹಿಮಾಲಯದ ತಪ್ಪಲಿನ ಸಿಕ್ಕಿಂ ಕೊನೆಗೂ ಹೊರಬಂದಿದೆ. ‘ಎಂಜಿನಿಯರಿಂಗ್ ಕೌಶಲ್ಯದ ಅದ್ಭುತ’ ಎಂದೇ ಕರೆಯಲಾಗುವ ಸಿಕ್ಕಿಂ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದ್ದಾರೆ. ಇದರ ವಿಶೇಷತೆಗಳೇನು? ಇಲ್ಲಿದೆ ನೋಡಿ. 

ಸಿಕ್ಕಿಂ (ಸೆ. 26): ಸಿಕ್ಕಿಂನಲ್ಲಿ ರಜಾ ಮೋಜು ಅನುಭವಿಸಲು ಪಶ್ಚಿಮ ಬಂಗಾಳದ ಬಾಗ್ಡೋಗ್ರಾಕ್ಕೋ ಅಥವಾ ಅಸ್ಸಾಂನ ಗುವಾಹಟಿಗೋ ವಿಮಾನದಲ್ಲಿ ಹೋಗಿ ಅಲ್ಲಿಂದ ರಸ್ತೆ ಮಾರ್ಗವಾಗಿ ಗಂಟೆಗಟ್ಟಲೆ ಪ್ರಯಾಣಿಸುವ ದರ್ದು ಇನ್ನಿಲ್ಲ. ಬರುವ ತಿಂಗಳಿನಿಂದ ನೇರವಾಗಿ ವಿಮಾನದಲ್ಲಿ ಸಿಕ್ಕಿಂಗೆ ಹೋಗಿ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು.

ಸಿಕ್ಕಿಂ ಏರ್‌ಪೋರ್ಟ್ ಸಾಕಾರವಾಗಿದ್ದರ ಹಿಂದೆ ದೊಡ್ಡ ಕತೆಯಿದೆ. ಆ ವಿಮಾನ ನಿಲ್ದಾಣದ ವಿಶೇಷತೆ ಏನು? ಪ್ರಯೋಜನ ಏನು? ಇದನ್ನೇಕೆ ಎಂಜಿನಿಯರಿಂಗ್ ಅದ್ಭುತ ಎನ್ನಲಾಗುತ್ತದೆ ಎಂಬುದರ ಕುರಿತು ಇಲ್ಲಿದೆ ವಿವರ.

ಸಾಕಷ್ಟು ಪ್ರವಾಸಿಗರು ಭೇಟಿ ನೀಡುವ ರಾಜ್ಯವಾಗಿದ್ದರೂ ಸಿಕ್ಕಿಂಗೆ ಈವರೆಗೆ ವಿಮಾನ ಸಂಪರ್ಕವೇ ಇರಲಿಲ್ಲ. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ಗೆ ತೀರಾ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಶ್ಚಿಮ ಬಂಗಾಳದ ಬಾಗ್ಡೋಗ್ರ. ಅಲ್ಲಿ ಇಳಿದು ರಸ್ತೆ ಮಾರ್ಗವಾಗಿ 123 ಕಿ.ಮೀ. ದೂರದ ಗ್ಯಾಂಗ್ಟಕ್‌ಗೆ ತಲುಪಲು 4 ತಾಸು ಮೀಸಲಿಡಬೇಕಿತ್ತು.

ಇನ್ನು ರೈಲಿನ ಮೂಲಕ ಹೋಗುವುದಾದರೆ ನ್ಯೂ ಜಲ್‌ಪೈಗುರಿ ತಲುಪಿ, ನಾಲ್ಕು ತಾಸು ರಸ್ತೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಸಿಕ್ಕಿಂ ಜನರು ಹಾಗೂ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಬವಣೆ ತಪ್ಪಿಸಲೆಂದೇ 2009 ರಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಆದರೆ ಪರಿಹಾರ, ಪುನರ್ವಸತಿ ವಿಚಾರವಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ 2014 ರವರೆಗೂ ಕಾಮಗಾರಿ ಸ್ಥಗಿತಗೊಂಡಿತ್ತು. 2015 ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತೆ ಕಾಮಗಾರಿ ಆರಂಭಿಸಿತು. 9 ವರ್ಷಗಳ ಹಿಂದೆ ಶಂಕುಸ್ಥಾಪನೆಯಾದ ಕಾಮಗಾರಿ ಈಗ ಪೂರ್ಣಗೊಂಡಿದೆ.

201 ಎಕರೆ ಅರಣ್ಯ ಪ್ರದೇಶವನ್ನೂ ಬಳಸಿಕೊಂಡು ‘ಟೇಬಲ್‌ಟಾಪ್’ ಏರ್‌ಪೋರ್ಟ್ ನಿರ್ಮಿಸಲಾಗಿದೆ. ರಾಜಧಾನಿ ಗ್ಯಾಂಗ್ಟಕ್‌ಗೂ ಏರ್‌ಪೋರ್ಟ್‌ಗೂ 30 ಕಿ.ಮೀ. ಅಂತರವಿದೆ. 

ಪೇಕಾಂಗ್ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಪರ್ವತದ ಮೇಲಿರುವ ವಿಮಾನ ನಿಲ್ದಾಣ ಇದಾಗಿದೆ. ಸಮುದ್ರ ಮಟ್ಟದಿಂದ ಸುಮಾರು 4,500 ಅಡಿ ಎತ್ತರದಲ್ಲಿದೆ. ಈ ವಿಮಾನ ನಿಲ್ದಾಣವನ್ನು ಎಂಜಿನಿಯರಿಂಗ್ ಅದ್ಭುತ ಎಂದೇ ಕರೆಯಲಾಗುತ್ತದೆ. ಕಾರಣ ಈ ವಿಮಾನ ನಿಲ್ದಾಣ ನಿರ್ಮಾಣವಾದ ಪ್ರದೇಶ ಸಂಪೂರ್ಣ ಗುಡ್ಡಗಾಡು ಪ್ರದೇಶ. ಇಲ್ಲಿ ನಿಲ್ದಾಣ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದಾಗ ಅಲ್ಲಿನ ಮಣ್ಣು ಹೆಚ್ಚು ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಗೊತ್ತಾಗಿತ್ತು.

ಅದಕ್ಕಾಗಿ ಗುಡ್ಡದ ತಳದಿಂದಲೇ ರಿಟೇನಿಂಗ್ ಗೋಡೆಗಳನ್ನು ಕಟ್ಟಿಕೊಂಡು ಬರಲಾಯಿತು. ಈ ಗೋಡೆಗಳ ಎತ್ತರ 80 ಮೀಟರ್. ಮಣ್ಣನ್ನು ದೃಢಗೊಳಿಸುವ ತಂತ್ರಜ್ಞಾನದ ಮೂಲಕ ಅದು ಸುಲಭವಾಗಿ ಕುಸಿಯದಂತೆ ನಿರ್ಮಾಣ ಮಾಡಲಾಗಿದೆ. ಮಳೆಯಿಂದಾಗುವ ಪ್ರವಾಹ, ಗುಡ್ಡ ಕುಸಿತ, ವಾತಾವರಣ ವೈಪರೀತ್ಯದಿಂದ ಉಂಟಾಗುವ ಪ್ರಬಲ ಗಾಳಿ ಬೀಸುವಿಕೆಯಿಂದ ರನ್‌ಗೆ ರಕ್ಷಣೆ ನೀಡುವುದು ರೀಇನ್‌ಫೋರ್ಸ್ ವಾಲ್‌ನ ಕಾರ್ಯ. ಇದು ವಿಶ್ವದಲ್ಲೇ ಅತಿ ಎತ್ತರದ ಸಶಕ್ತ ಗೋಡೆಯಾಗಿದೆ.

ವಿಮಾನ ನಿಲ್ದಾಣ ಹೇಗಿದೆ? 

ಬೆಟ್ಟಗುಡ್ಡಗಳ ನಡುವೆ ನಿರ್ಮಾಣವಾದ ವಿಮಾನ ನಿಲ್ದಾಣವು 30 ಮೀಟರ್ ಅಗಲದ 1.75 ಕಿ.ಮೀ. ರನ್ ವೇಯನ್ನು ಹೊಂದಿದೆ. ಅಲ್ಲದೆ ಏಕಕಾಲಕ್ಕೆ ಎಟಿಆರ್-72 ವಿಮಾನಗಳು ಇಳಿಯುವಂತಹ ರಚನೆಯಿದೆ. ಆದ್ದರಿಂದಾಗಿ ಸಿಕ್ಕಿಂನ ೬ ಲಕ್ಷ ಜನತೆಗೆ ಇದರ ಪ್ರಯೋಜನವಾಗಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದರ ನಿರ್ಮಾಣ ಹಾಗೂ ನಿರ್ವಹಣೆಯನ್ನು ನೋಡಿಕೊಂಡಿದೆ.

ಪೇಕಾಂಗ್ ನಿಲ್ದಾಣದಲ್ಲಿ ೫ ಚೆಕ್ ಇನ್ ಕೌಂಟರ್‌ಗಳಿವೆ. ಗೋವಾದ ಬಳಿಕ ದೇಶದ ಎರಡನೇ ಸಣ್ಣ ರಾಜ್ಯವಾಗಿರುವ ಸಿಕ್ಕಿಂಗೆ ಯಾವುದೇ ರೈಲು ಸಂಪರ್ಕವಿಲ್ಲ. ಈ ನೂತನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. 

ಎಷ್ಟು ಖರ್ಚಾಯ್ತು?

ಈ ವಿಮಾನ ನಿಲ್ದಾಣವನ್ನು 605 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ನಿಲ್ದಾಣದ ವಿಶೇಷತೆ ಎಂದರೆ ಅಗ್ನಿಶಾಮಕ ಕೇಂದ್ರ, ಪ್ರಯಾಣಿಕರಿಗಾಗಿ ಎರಡು ಅತ್ಯಾಧುನಿಕವಾದ ಸುಮಾರು 3,000 ಚ. ಮೀ. ಅಳತೆಯ ಟರ್ಮಿನಲ್ ಬಿಲ್ಡಿಂಗ್, ಹೈ ಇನ್‌ಟೆನ್‌ಸಿಟಿ ರನ್ ವೇ ಲೈಟ್‌ಗಳು, ಏಕಕಾಲಕ್ಕೆ ೫೦ ವಾಹನಗಳು ನಿಲ್ಲಬಹುದಾದ ಪಾರ್ಕಿಂಗ್ ವ್ಯವಸ್ಥೆ ಇದೆ. 

ಸ್ಪೈಸ್ ಜೆಟ್ ಮೊದಲ ವಿಮಾನ

ಪೇಕಾಂಗ್‌ಗೆ ಮೊದಲ ಪ್ರಯಾಣಿಕ ವಿಮಾನ ಹಾರಾಟವನ್ನು ಸ್ಪೈಸ್‌ಜೆಟ್ ಸಂಸ್ಥೆ ಇದೇ ಅಕ್ಟೋಬರ್ 4 ರಂದು ಕೈಗೊಳ್ಳಲಿದೆ. ದೆಹಲಿ, ಕೋಲ್ಕತಾ ಮತ್ತು ಗುವಾಹಟಿಗಳಿಂದ ವಿಮಾನಗಳು ಈ ನಿಲ್ದಾಣಕ್ಕೆ ಹಾರಾಡಲಿವೆ. ಪ್ರಪ್ರಥಮ ಬಾರಿಗೆ ವಾಣಿಜ್ಯ ವಿಮಾನಯಾನ ಸಾರಿಗೆ ಸಂಸ್ಥೆಯಾದ ಸ್ಪೈಸ್‌ಜೆಟ್‌ನ 78 ಆಸನಗಳ ಕ್ಯೂ 400 ವಿಮಾನ ಅಕ್ಟೋಬರ್ 4 ರಿಂದ ಹಾರಾಟ ಪ್ರಾರಂಭಿಸಲಿದೆ.

click me!