ಇಂದು ವಿಶ್ವ ಪತ್ರಿಕಾ ವಿತರಕರ ದಿನ: ಪತ್ರಿಕೆ ಹಂಚುವ ಕಾಯಕನಿಷ್ಠ ಸೇನಾನಿಗಳಿಗೊಂದು ಸಲಾಂ..!

Kannadaprabha News   | Asianet News
Published : Sep 04, 2020, 02:21 PM IST
ಇಂದು ವಿಶ್ವ ಪತ್ರಿಕಾ ವಿತರಕರ ದಿನ: ಪತ್ರಿಕೆ ಹಂಚುವ ಕಾಯಕನಿಷ್ಠ ಸೇನಾನಿಗಳಿಗೊಂದು ಸಲಾಂ..!

ಸಾರಾಂಶ

ಮಳೆ, ಚಳಿ, ಗಾಳಿ ಎನ್ನದೆ ದುಡಿಯುವ ಪತ್ರಿಕಾ ಯೋಧರು ಈಗ ಕೊರೋನಾ ಸಂಕಷ್ಟದಲ್ಲೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಸೋಂಕು ಹರಡುತ್ತದೆ ಎಂಬ ವದಂತಿಗಳು ಹರಡಿದರೂ ಎದೆಗುಂದದೆ ಪತ್ರಿಕೆ ಹಂಚಿ ವದಂತಿಗಳು ಸುಳ್ಳು ಎಂಬುದನ್ನು ತೋರಿಸಿಕೊಟ್ಟರು. ಮಾಧ್ಯಮಗಳು ಮತ್ತು ಜನರ ನಡುವಿನ ಸೇತುವೆಯಾಗಿರುವ ಪತ್ರಿಕಾ ವಿತರಕರು ಸದಾ ಸ್ಮರಣೀಯರು. ಇಂದು ಜಗತ್ತಿನಾದ್ಯಂತ ವಿಶ್ವ ಪತ್ರಿಕಾ ವಿತರಕರ ದಿನ ಆಚರಿಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಸೆ.04): ಊರೆಲ್ಲ ಇನ್ನೂ ಗಾಢ ನಿದ್ದೆಯಲ್ಲಿರುವಾಗಲೇ ಇವರು ಲಗುಬಗೆಯಿಂದ ಎದ್ದು ಯಾವುದೋ ಬೀದಿಯ ಮೂಲೆಯಲ್ಲಿ ಪತ್ರಿಕೆಗಳನ್ನು ಜೋಡಿಸುತ್ತಿರುತ್ತಾರೆ. ಮಳೆಯಿರಲಿ, ಚಳಿಯಿರಲಿ ಇವರ ಸೈಕಲ್ಲು ಅಥವಾ ಸ್ಕೂಟರ್‌ಗಳು ಪ್ರತಿದಿನ ಕರಾರುವಾಕ್ಕಾಗಿ ಒಂದೇ ಸಮಯಕ್ಕೆ ಪತ್ರಿಕೆಗಳನ್ನು ಹೊತ್ತು ಮನೆಮನೆಗೆ ಧಾವಿಸುತ್ತವೆ. ಜನರು ಬೆಳಿಗ್ಗೆ ಎದ್ದು ಮನೆಯ ಮುಂದೆ ನೀರು ಹಾಕುವುದಕ್ಕಿಂತ ಮೊದಲು ಗೇಟಿನೊಳಗೆ ಇವರು ಎಸೆದ ದಿನಪತ್ರಿಕೆ ಬಂದು ಬಿದ್ದಿರುತ್ತದೆ. ಇವರು ಇಲ್ಲದೆ ದಿನಪತ್ರಿಕೆಗಳಿಲ್ಲ. ಇವರು ಇಲ್ಲದೆ ಜನರ ಕೈಗೆ ದಿನಪತ್ರಿಕೆ ಸಿಗುವುದಿಲ್ಲ. ಇವರು ಪತ್ರಿಕಾ ವಿತರಕರು. ಒಂದು ದಿನವೂ ತಪ್ಪದೆ ಜನರಿಗೆ ಸುದ್ದಿಯನ್ನು ಹಂಚುವ ಕಾಯಕನಿಷ್ಠೆಯ ಶ್ರಮಜೀವಿಗಳು. ಇಂದು ಜಗತ್ತಿನೆಲ್ಲೆಡೆ ಈ ಪತ್ರಿಕಾಯೋಧರನ್ನು ನೆನೆಯುವ ದಿನ. ದಿನಪತ್ರಿಕೆಗಳು ಹಾಗೂ ಓದುಗರ ಪರವಾಗಿ ಅವರಿಗೊಂದು ಸಲಾಂ. 

ಮಳೆ, ಚಳಿ, ಗಾಳಿ ಎನ್ನದೆ ದುಡಿಯುವ ಪತ್ರಿಕಾ ಯೋಧರು ಈಗ ಕೊರೋನಾ ಸಂಕಷ್ಟದಲ್ಲೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಸೋಂಕು ಹರಡುತ್ತದೆ ಎಂಬ ವದಂತಿಗಳು ಹರಡಿದರೂ ಎದೆಗುಂದದೆ ಪತ್ರಿಕೆ ಹಂಚಿ ವದಂತಿಗಳು ಸುಳ್ಳು ಎಂಬುದನ್ನು ತೋರಿಸಿಕೊಟ್ಟರು. ಮಾಧ್ಯಮಗಳು ಮತ್ತು ಜನರ ನಡುವಿನ ಸೇತುವೆಯಾಗಿರುವ ಪತ್ರಿಕಾ ವಿತರಕರು ಸದಾ ಸ್ಮರಣೀಯರು. 

ಬೆಳಿಗ್ಗೆ ಕಾಫಿ ಕುಡಿಯುವಾಗ ಕೈಯಲ್ಲಿ ದಿನಪತ್ರಿಕೆ ಇಲ್ಲ ಅಂದರೆ ಬಹಳ ಜನರಿಗೆ ಕಾಫಿ ರುಚಿಸುವುದಿಲ್ಲ. ಸಾಕಷ್ಟು ಜನರಿಗೆ ದಿನಪತ್ರಿಕೆಯ ಮೇಲೆ ಕಣ್ಣಾಡಿಸದೆ ಅಂದಿನ ದಿನವೇ ಆರಂಭವಾಗುವುದಿಲ್ಲ. ಆದರೆ ಹೀಗೆ ಬೆಳ್ಳಂಬೆಳಿಗ್ಗೆ ಪ್ರತಿ ಮನೆಗೂ ದಿನಪತ್ರಿಕೆಗಳು ತಲುಪಬೇಕು ಅಂದರೆ ಅದರ ಹಿಂದೆ ಪತ್ರಿಕಾ ವಿತರಕರು ಪಡುವ ಶ್ರಮ ಸಣ್ಣದಲ್ಲ. ಇವತ್ತೊಂದು ದಿನ ಸ್ವಲ್ಪ ಹೊತ್ತು ಜಾಸ್ತಿ ಮಲಗೋಣ ಎಂಬ ಸುಖವನ್ನು ಯಾವತ್ತೂ ಅನುಭವಿಸಲು ಆಗದವರು ಯಾರಾದರೂ ಇದ್ದರೆ ಅವರು ಪತ್ರಿಕೆ ಹಂಚುವವರು ಮಾತ್ರ. ಪ್ರತಿದಿನ ಹೊರಜಗತ್ತಿನಲ್ಲಿ ಲೋಕವ್ಯಾಪಾರ ಆರಂಭವಾಗುವುದಕ್ಕೂ ಮೊದಲೇ ಇವರು ತಮ್ಮ ಕೆಲಸ ಮುಗಿಸಿರುತ್ತಾರೆ. ಹೀಗಾಗಿ ಇವರ ಶ್ರಮ ಯಾರ ಕಣ್ಣಿಗೂ ಬೀಳುವುದಿಲ್ಲ. ಒಂದು ದಿನ ಮನೆಗೆ ಪತ್ರಿಕೆ ಬಂದಿಲ್ಲ ಅಂದಾಗ ಮಾತ್ರ ಪತ್ರಿಕೆ ಹಂಚುವವರು ನಮಗೆ ನೆನಪಾಗುತ್ತಾರೆ. ಒಂದರ್ಥದಲ್ಲಿ ಇವರು ತಮ್ಮ ಕೆಲಸಕ್ಕೆ ಮಾನ್ಯತೆ ಕೇಳದ ನಿಸ್ವಾರ್ಥ ಸೈನಿಕರಿದ್ದಂತೆ.

ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!

ಎಲ್ಲ ನೌಕರಿಯವರಿಗೂ ವಾರಕ್ಕೆ ಒಂದು-ಎರಡು ರಜೆ ಸಿಕ್ಕರೆ ಇವರಿಗೆ ಇಡೀ ವರ್ಷಕ್ಕೆ ಸಿಗುವುದು ನಾಲ್ಕು ರಜೆ! ಪತ್ರಿಕಾರಂಗವನ್ನು ಸಂವಿಧಾನದ ನಾಲ್ಕನೆಯ ಆಧಾರ ಸ್ತಂಭ ಎನ್ನುತ್ತೇವೆ. ಆದರೆ, ಪತ್ರಿಕೆಗಳ ವಿತರಕರು ಪತ್ರಿಕಾರಂಗದ ಮೊದಲನೇ ಆಧಾರ ಸ್ತಂಭವಿದ್ದಂತೆ. ಕಳೆದ ನಾಲ್ಕೈದು ದಶಕಗಳಲ್ಲಿ ಪತ್ರಿಕೋದ್ಯಮದಲ್ಲಿ ಸಾಕಷ್ಟು ತಾಂತ್ರಿಕ ಸುಧಾರಣೆಗಳು ಆಗಿವೆ. ಆದರೆ, ಪತ್ರಿಕೆ ಹಂಚುವ ವಿಧಾನ ಮಾತ್ರ ಜಗತ್ತಿನಲ್ಲೆಲ್ಲೂ ಬದಲಾಗಿಲ್ಲ. ಅದು ಸಂಪೂರ್ಣವಾಗಿ ಪತ್ರಿಕಾ ವಿತರಕರ ಶ್ರಮವನ್ನೇ ಅವಲಂಬಿಸಿದೆ. ಕೆಲ ದೇಶಗಳಲ್ಲಿ ಪತ್ರಿಕಾ ವಿತರಕರ ಕೊರತೆಯಿಂದ ಪತ್ರಿಕೆಗಳೇ ಬಂದ್ ಆಗಿರುವುದೂ ಇದೆ. 

ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಪತ್ರಿಕಾ ವಿತರಕರಿದ್ದಾರೆ. ಇವರ ಸಂಖ್ಯೆ ನಮ್ಮ ರಾಜ್ಯದಲ್ಲಿ 40,000ಕ್ಕೂ ಹೆಚ್ಚಿದೆ. ಇವರಲ್ಲಿ 40-50 ವರ್ಷಗಳಿಂದ ಒಂದು ದಿನವೂ ತಪ್ಪದೆ ಇದೇ ಕಾಯಕ ಮಾಡಿಕೊಂಡು ಬಂದಿರುವವರೂ ಇದ್ದಾರೆ. ಹೆಚ್ಚಿನವರು ಬೆಳಿಗ್ಗೆ ಪತ್ರಿಕೆ ಹಾಕುವ ಕೆಲಸ ಮಾಡಿ, ನಂತರ ಬೇರೆ ಬೇರೆ ಉದ್ಯೋಗಗಳನ್ನು ಮಾಡುತ್ತಾರೆ. ಅನೇಕ ಹುಡುಗರು ಮನೆಮನೆಗೆ ಪತ್ರಿಕೆ ಹಾಕಿದ ಹಣದಲ್ಲಿ ಓದಿ ಬದುಕು ಕಟ್ಟಿಕೊಳ್ಳುತ್ತಾರೆ. 

ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಬಾಲ್ಯದಲ್ಲಿ ಪತ್ರಿಕೆ ಹಾಕುತ್ತಿದ್ದರು. ಪತ್ರಿಕಾ ವಿತರಕರದು ಇಂದಿಗೂ ಅಸಂಘಟಿತ ಉದ್ಯೋಗ. ಇವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿಲ್ಲ. ಪಿಂಚಣಿ, ವಿಮೆ, ಅನಾರೋಗ್ಯಗಳ ಚಿಕಿತ್ಸೆಗೆ ನೆರವು ಹೀಗೆ ಯಾವುದೇ ಸೌಕರ್ಯಗಳು ಇವರಿಗಿಲ್ಲ. ಪತ್ರಿಕಾರಂಗದ ಅವಿಭಾಜ್ಯ ಅಂಗವಾಗಿರುವ ಇವರು ದಿನಪತ್ರಿಕೆಗಳು ನೀಡುವ ಕಮಿಷನ್ ಒಂದನ್ನೇ ಅವಲಂಬಿಸಿದ್ದಾರೆ. ಇವರನ್ನು ಸಂಘಟಿತ ವಲಯಕ್ಕೆ ತಂದು, ಅಗತ್ಯ ಭದ್ರತೆ ಹಾಗೂ ಸೌಕರ್ಯಗಳನ್ನು ನೀಡಲು ಸರ್ಕಾರ ಮುಂದಾಗಬೇಕಿದೆ. ಜನಸಾಮಾನ್ಯರೂ ಇವರ ಕಾಯಕನಿಷ್ಠೆಯನ್ನು ಕೃತಜ್ಞತೆಯಿಂದ ಸ್ಮರಿಸಬೇಕಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?