ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಒಬಾಮಾ ಬಂದಿದ್ದೇಕೆ?: ಬಯಲಾಯ್ತು ರಹಸ್ಯ!

By Web DeskFirst Published May 8, 2019, 8:47 AM IST
Highlights

ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಒಬಾಮಾ ಬಂದಿದ್ದೇಕೆ?| ಅಮೆರಿಕ ಅಧ್ಯಕ್ಷರ ಆಗಮನ ಹಿಂದಿನ ರಹಸ್ಯ ಬಯಲು ಮಾಡಿದ ಮಾಜಿ ಆಪ್ತ| ಗುರಿ ಈಡೇರಿಕೆಗೆ ಮೋದಿ ಆಪ್ಯತೆ, ವರ್ಣವನ್ನೇ ದಾಳವಾಗಿ ಬಳಸಿಕೊಂಡ ಒಬಾಮಾ

ವಾಷಿಂಗ್ಟನ್‌[ಮೇ.08]: 2015ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಮ್‌ ಒಬಾಮಾ ಬಂದಿದ್ದರ ಹಿಂದೆ, ದೊಡ್ಡ ಯೋಜನೆಯೊಂದು ಅಡಗಿತ್ತು ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಭಾರತದ ಜೊತೆಗಿನ ಸಂಬಂಧ ವೃದ್ಧಿಯ ಜೊತೆಗೆ ತಮ್ಮ ಗುರಿ ಈಡೇರಿಸಿಕೊಳ್ಳಲು ಒಬಾಮಾ ಅವರು ರಾಜ್ಯೋತ್ಸವ ಕಾರ್ಯಕ್ರಮವನ್ನು ದಾಳವಾಗಿ ಬಳಸಿಕೊಂಡರು ಎಂದು ಒಬಾಮಾಗೆ ರಾಷ್ಟ್ರೀಯ ಭದ್ರತಾ ಅಧಿಕಾರಿಯಾಗಿದ್ದ ಬೆಂಜಮಿನ್‌ ರೋಡ್ಸ್‌ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಪ್ಯಾರಿಸ್‌ ಒಪ್ಪಂದ: ಜಾಗತಿಕ ತಾಪಮಾನ ಏರಿಕೆ ತಡೆಯಲು, ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ರಾಷ್ಟ್ರಗಳನ್ನು ಇಂಗಾಲ ಬಿಡುಗಡೆ ಕಡಿತ ಮಾಡುವ ಕುರಿತ ಒಪ್ಪಂದಕ್ಕೆ ಸಹಿ ಹಾಕಿಸಲು ವಿಶ್ವದ ಹಲವು ರಾಷ್ಟ್ರಗಳು ಮುಂದಾಗಿದ್ದವು. ಅಮೆರಿಕ ಇದರ ನೇತೃತ್ವ ವಹಿಸಿತ್ತು. ಈ ಒಪ್ಪಂದಕ್ಕೆ ಸಹಿ ಹಾಕಲು ವಿಶ್ವದ ಬಹುತೇಕ ದೇಶಗಳು ಒಪ್ಪಿಕೊಂಡಿದ್ದವು. ಆದರೆ ಈ ಹಾದಿಯಲ್ಲಿ ಅಮೆರಿಕಕ್ಕೆ ಅಡ್ಡಗಾಲಾಗಿದ್ದು ಚೀನಾ ಮತ್ತು ಭಾರತ. ಆದರೆ 2014ರಲ್ಲಿ ಚೀನಾ ಜೊತೆ ಮಾತುಕತೆ ನಡೆಸಿದ್ದ ಒಬಾಮಾ, ಪರಸ್ಪರ ಇಂಗಾಲ ಕಡಿತಕ್ಕೆ ಸಮ್ಮತಿ ಸೂಚಿಸಿದ್ದರು. ಹೀಗಾಗಿ ಒಬಾಮಾ ಹಾದಿಯಲ್ಲಿ ಉಳಿದಿದ್ದು ಭಾರತ ಮಾತ್ರ.

ಈ ವೇಳೆ ಅವರ ಆಪ್ತರು, ಅಮೆರಿಕಕ್ಕೆ ಪ್ಯಾರಿಸ್‌ ಒಪ್ಪಂದಕ್ಕಿಂತ, ಭಾರತದ ಜೊತೆಗಿನ ಸಂಬಂಧ ಮುಖ್ಯ. ಆದರೆ ಪ್ಯಾರಿಸ್‌ ಒಪ್ಪಂದವನ್ನೂ ಕೈಬಿಡುವಂತಿಲ್ಲ. ಹೀಗಾಗಿ ಮೋದಿ ಜೊತೆಗಿನ ನಿಮ್ಮ ಆಪ್ತ ಸಂಬಂಧವನ್ನ ಇನ್ನಷ್ಟುಗಾಢ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರಂತೆ.

ಈ ಹಿನ್ನೆಲೆಯಲ್ಲಿ ಮೋದಿ ಅವರು ನೀಡಿದ ಆಹ್ವಾನದಂತೆ ಒಬಾಮಾ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು, ಗೌರವ ಸ್ವೀಕರಿಸಿ ಹೋಗಿದ್ದರು. ಈ ವೇಳೆ ಇಬ್ಬರ ನಡುವಣ ಸಂಬಂಧ ಮತ್ತಷ್ಟುಹತ್ತಿರವಾಗಿತ್ತು. ಈ ಮೂಲಕ ತಮ್ಮ ಗುರಿ ಈಡೇರಿಸಿಕೊಳ್ಳುವಲ್ಲಿ ಒಬಾಮಾ ಒಂದು ಹಂತ ದಾಟಿದ್ದರು.

ಈ ನಡುವೆ 2016ರಲ್ಲಿ ಪ್ಯಾರಿಸ್‌ನಲ್ಲಿ ಸಮ್ಮೇಳನ ಆಯೋಜನೆಗೊಂಡಿತ್ತು. ಆದರೆ ಅಭಿವೃದ್ದಿ ಹೊಂದುತ್ತಿರುವ ದೇಶವಾದ ಭಾರತ, ತನ್ನ ಇಂಗಾಲ ಬಿಡುಗಡೆ ಪ್ರಮಾಣ ಕಡಿತ ಮಾಡಲು ಸುಲಭವಾಗಿ ಒಪ್ಪಿರಲಿಲ್ಲ. ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಧಿಕಾರಿಗಳ ಜೊತೆ ಸ್ವತಃ ಒಬಾಮಾ ಅವರೇ ನಿಂತು ಚೌಕಾಸಿ ನಡೆಸಿದರೂ, ಭಾರತ ತನ್ನ ನಿಲುವು ಸಡಿಲಿಸಿರಲಿಲ್ಲ. ಈ ಹಂತದಲ್ಲಿ ಮಾತುಕತೆಯ ವೇದಿಕೆಗೆ ಪ್ರವೇಶ ಮಾಡಿದ ಮೋದಿ, ‘ನಮ್ಮ ದೇಶದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದ 30 ಕೋಟಿ ಜನರಿದ್ದಾರೆ. ಹೀಗಿರುವಾಗ ನಮಗೆ ನೀವು ಕಲ್ಲಿದ್ದಲು, ಮತ್ತಿತರೆ ವಸ್ತುಗಳನ್ನು ಇಂಧನವಾಗಿ ಬಳಸಬೇಡಿ ಎನ್ನುತ್ತೀರಿ. ಇದು ಹೇಗೆ ಸಾಧ್ಯ’ ಎಂದು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದರು.

ಈ ಹಂತದಲ್ಲಿ ಒಬಾಮಾ ಅವರು ತಮ್ಮ ಕಪ್ಪು ಜನಾಂಗದ ಹಿನ್ನೆಲೆಯನ್ನೇ ಅಂತಿಮ ದಾಳವಾಗಿ ಬಳಸಿದರು.‘ನೋಡಿ, ನಾನೊಬ್ಬ ಕಪ್ಪು ಜನಾಂಗದ, ಆಫ್ರಿಕನ್‌ ಮೂಲದ ಅಮೆರಿಕ ವ್ಯಕ್ತಿ. ಶ್ರೀಮಂತ ವ್ಯಕ್ತಿಗಳ ಗುಂಪು ನಿಮ್ಮ ಬೆನ್ನ ಮೇಲೆ ಕುಳಿತು, ನಿಮಗೆ ಅನ್ಯಾಯ ಮಾಡುತ್ತಿದ್ದಾಗ ಅಂಥವರ ಪರಿಸ್ಥಿತಿ ಏನಾಗಿರುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ಅದೇ ಸಿಟ್ಟಿನಲ್ಲಿ ಈ ತೀರ್ಮಾನ ತೆಗೆದುಕೊಂಡೇ ಎಂದಾದಲ್ಲಿ ಎಂದಿಗೂ ನಿಮ್ಮ ಮನವೊಲಿಕೆ ಸಾಧ್ಯವಿಲ್ಲ. ಆದರೆ ನಾನಿರುವ ಭೂಮಿಯಲ್ಲೇ ನಾನು ಬದುಕಬೇಕು. ಇದಕ್ಕಾಗಿ ಒಂದಷ್ಟುತ್ಯಾಗ ಅನಿವಾರ್ಯ. ನೀವು ಒಪ್ಪಂದಕ್ಕೆ ಸಹಿ ಹಾಕಿ. ನಿಮ್ಮ ಸೌರ ವಿದ್ಯುತ್‌ ಯೋಜನೆಗಳಿಗೆ ಅಮೆರಿಕ ಬೆಂಬಲ ನೀಡಲಿದೆ’ ಎಂದು ಭರವಸೆ ನೀಡಿದರು. ಇದಕ್ಕೆ ಮೋದಿ ಕೂಡಾ ಒಪ್ಪಿ, ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕಿದರು.

ಹೀಗೆ ಮೋದಿ ಜೊತೆಗಿನ ಆಪ್ತತೆ, ತನ್ನ ಜನಾಂಗೀಯ ವರ್ಣವನ್ನೂ ಬಳಸುವ ಮೂಲಕ ಒಮಾಮಾ ತಮ್ಮ ಗುರಿ ಈಡೇರಿಸಿಕೊಂಡರು ಎಂದು ರೋಡ್ಸ್‌ ಹೇಳಿದರು.

click me!