ಪ್ರಧಾನಿ ಮೋದಿ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ

By Suvarna Web DeskFirst Published Mar 16, 2018, 10:00 AM IST
Highlights

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಾಲ್ಕು ವರ್ಷಗಳ ನಂತರ ಮೊದಲ ಬಾರಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ.

ನವದೆಹಲಿ/ಹೈದರಾಬಾದ್: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಾಲ್ಕು ವರ್ಷಗಳ ನಂತರ ಮೊದಲ ಬಾರಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಶುಕ್ರವಾರ ಅವಿಶ್ವಾಸ ಗೊತ್ತುವಳಿ ಮಂಡಿಸುವ ನಿರೀಕ್ಷೆ ಇದ್ದು, ಅದಕ್ಕೆ ಆಂಧ್ರದ ಆಡಳಿತಾರೂಢ ತೆಲುಗುದೇಶಂ ಪಕ್ಷ ಎನ್‌ಡಿಎದಿಂದ ಹೊರಬಂದು ಬೆಂಬಲ ನೀಡಲಿದೆ ಎನ್ನಲಾಗುತ್ತಿದೆ.

ಅವಿಶ್ವಾಸ ನಿಲುವಳಿ ಮಂಡಿಸಲು 54 ಸಂಸದರ ಸಹಿ ಬೇಕು. ವೈಎಸ್‌ಆರ್ ಕಾಂಗ್ರೆಸ್ ಬಳಿ ಆರು ಸಂಸದರು ಮಾತ್ರ ಇದ್ದಾರೆ. ಹೀಗಾಗಿ ಪಕ್ಷದ ಅಧ್ಯಕ್ಷ ಜಗನ್ಮೋಹನ ರೆಡ್ಡಿ ಅವರು ಎಲ್ಲಾ ಪಕ್ಷಗಳೂ ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಬೆಂಬಲಿಸಿ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಬೇಕು ಎಂದು ಮನವಿ ಮಾಡಿದ್ದಾರೆ.  ವೈಎಸ್‌ಆರ್ ಸಂಸದ ವೈ.ವಿ.ಸುಬ್ಬಾರೆಡ್ಡಿ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿ ಮಂಡಿಸಲಿದ್ದಾರೆ.

ಸರ್ಕಾರ ಬೀಳದು: ಲೋಕಸಭೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತವಿರುವುದರಿಂದ ಅವಿಶ್ವಾಸ ಗೊತ್ತುವಳಿಯ ಮೂಲಕ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಹೀಗಾಗಿ ವೈಎಸ್‌ಆರ್ ಕಾಂಗ್ರೆಸ್‌ನ ಅವಿಶ್ವಾಸ ಗೊತ್ತುವಳಿಗೆ ವಿಶೇಷ ಮಹತ್ವ ಇಲ್ಲವಾದರೂ, ಗೊತ್ತುವಳಿ ಮಂಡನೆಯ ನಂತರ ಅದರಲ್ಲಿನ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಾಗುತ್ತದೆ. ಆದ್ದರಿಂದ ಆಂಧ್ರಪ್ರದೇಶದ ವಿಶೇಷ ಸ್ಥಾನಮಾನ ಬೇಡಿಕೆಯ ಬಗ್ಗೆ ಚರ್ಚೆ ನಡೆಯುತ್ತದೆ. ಇದು ಆಂಧ್ರಪ್ರದೇಶದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ವೈಎಸ್ ಆರ್ ಪಕ್ಷಕ್ಕೆ ರಾಜಕೀಯ ಮೈಲೇಜ್ ತಂದುಕೊಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಇದು ರಾಜಕೀಯ ನಾಟಕ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಟೀಕಿಸಿದೆ.

ಆದರೂ ಬೆಂಬಲಿಸದೇ ಹೋದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಭಯದಿಂದ ಅವಿಶ್ವಾಸ ನಿಲುವಳಿಯನ್ನು ಟಿಡಿಪಿ ಬೆಂಬಲಿಸಲಿದೆ. ಆದರೆ ಎನ್ ಡಿಎನಿಂದ ಹೊರಬೀಳುವ ಬಗ್ಗೆ ಈಗಲೇ ನಿರ್ಧಾರ ಕೈಗೊಳ್ಳದು ಎಂದು ಹೇಳಲಾಗಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಅವಿಶ್ವಾಸ ನಿಲುವಳಿ ನಂತರ ನಡೆದ ಮತದಾನದಲ್ಲಿ ಒಂದು ಮತದಿಂದ ಸೋಲು ಅನುಭವಿಸಿ ಪತನಗೊಂಡಿತ್ತು.

click me!