ಸಿಎಂ ದೂರದೃಷ್ಟಿಯಿಂದ ಒಡಿಶಾ ಬಚಾವ್‌ : ಆ ಪ್ಲಾನ್ ಏನು?

By Web DeskFirst Published May 4, 2019, 7:37 AM IST
Highlights

ಒಡಿಶಾದಲ್ಲಿ ಭೀಕರ ಚಂಡಮರುತ ಅಪ್ಪಳಿಸದರೂ ಕೂಡ ತಮ್ಮ ಜನರ ರಕ್ಷಣೆಗಾಗಿ ದೂರದೃಷ್ಟಿಯ ಯೋಜನೆಯನ್ನು ರೂಪಿಸಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಜನರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಭುವನೇಶ್ವರ: ವಿಶ್ವದ ಹಲವಾರು ದೇಶಗಳು ಸಣ್ಣ ಚಂಡಮಾರುತ ಬಂದರೂ ತಪರುಗುಟ್ಟುತ್ತವೆ. ಅಂಥದ್ದರಲ್ಲಿ 175ರಿಂದ 200 ಕಿ.ಮೀ. ವೇಗದ ಬಿರುಗಾಳಿ ಮಳೆಯೊಂದಿಗೆ ಫನಿ ಚಂಡಮಾರುತ ಅಪ್ಪಳಿಸಿದ್ದರೂ, ಒಡಿಶಾದಲ್ಲೇಕೆ ಭಾರಿ ಪ್ರಮಾಣದ ಸಾವು- ನೋವು ಆಗಿಲ್ಲ?

ಇದಕ್ಕೆಲ್ಲಾ ಕಾರಣ- ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ದೂರದೃಷ್ಟಿತ್ವ.

ದೇಶದಲ್ಲೇ ಅತಿ ಹೆಚ್ಚು ಚಂಡಮಾರುತಕ್ಕೆ ತುತ್ತಾಗುವ ರಾಜ್ಯ ಒಡಿಶಾ. 1999ರಲ್ಲಿ ಈ ರಾಜ್ಯಕ್ಕೆ ಸೂಪರ್‌ ಸೈಕ್ಲೋನ್‌ ಹೆಸರಿನ ಚಂಡಮಾರುತ ಅಪ್ಪಳಿಸಿ ಬರೋಬ್ಬರಿ 10 ಸಾವಿರ ಮಂದಿ ಸಾವನ್ನಪ್ಪಿದ್ದರು. ಇದರಿಂದ ಪಾಠ ಕಲಿತ ಒಡಿಶಾ ಸರ್ಕಾರ, ಚಂಡಮಾರುತ ಎದುರಿಸಲು ದೂರದೃಷ್ಟಿಯ ಶಾಶ್ವತ ಕ್ರಮಗಳನ್ನು ಕೈಗೊಂಡಿತು. ಇದರ ಫಲವಾಗಿ 2014ರಲ್ಲಿ ಹುಡುಡ್‌ ಚಂಡಮಾರುತ ಉಂಟಾದಾಗ ಸಾವಿನ ಸಂಖ್ಯೆ 2ಕ್ಕೆ ಇಳಿಕೆಯಾಗಿತ್ತು.

ಒಡಿಶಾದ ಪ್ರತಿ ಜಿಲ್ಲೆಗಳಲ್ಲೂ ಚಂಡಮಾರುತ ನಿರ್ವಹಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದೆಲ್ಲೆಡೆ 879 ಬಹುಉದ್ದೇಶಿತ ಚಂಡಮಾರುತ ಮತ್ತು ಪ್ರವಾಹ ಶಿಬಿರಗಳನ್ನು ನಿರ್ಮಿಸಲಾಗಿದೆ. ಹೆಚ್ಚೂಕಡಿಮೆ ಇವು ಲಕ್ಷಾಂತರ ಮಂದಿಗೆ ಆಶ್ರಯ ನೀಡುವ ನಿರಾಶ್ರಿತ ಶಿಬಿರಗಳಂತೆ. ಪ್ರವಾಹ ಮುನ್ಸೂಚನೆ ದೊರೆತ ಸಂದರ್ಭದಲ್ಲಿ ಜನರನ್ನು ಈ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತದೆ. ಅವರಿಗೆ ಸರ್ಕಾರದಿಂದಲೇ ಆಹಾರ ಒದಗಿಸಲಾಗುತ್ತದೆ. ಇದಕ್ಕಾಗಿ ವರ್ಷವಿಡೀ ಈ ಕೇಂದ್ರಗಳಲ್ಲಿ ಪಡಿತರ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ.

ಒಡಿಶಾ ವಿಪತ್ತು ನಿರ್ವಹಣೆ ಕ್ಷಿಪ್ರ ಪಡೆಯ 20 ಘಟಕಗಳನ್ನು ರಚಿಸಲಾಗಿದೆ. ಪ್ರವಾಹ, ಚಂಡಮಾರುತ ಹಾಗೂ ಇತರ ಯಾವುದೇ ದುರಂತಗಳು ಆದರೂ ಅವುಗಳನ್ನು ನಿರ್ವಹಿಸುವ ಕೌಶಲ್ಯಗಳನ್ನು ಸಿಬ್ಬಂದಿಗೆ ನೀಡಲಾಗಿದೆ. ನವೀನ್‌ ಪಟ್ನಾಯಕ್‌ ಅವರು ಒಡಿಶಾದಲ್ಲಿ ಚಂಡಮಾರುತ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಸಂಸ್ಥೆ ಕೂಡ ಶ್ಲಾಘಿಸಿದೆ.

2013 ಫೈಲಿನ್‌ ಚಂಡಮಾರುತ ಅಪ್ಪಳಿಸಿದಾಗ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿತ್ತು. ಆ ಚಂಡಮಾರತದಲ್ಲಿ ಕæೕವಲ 21 ಮಂದಿ ಸಾವಿಗೀಡಾಗಿದ್ದರು. 2014ರಲ್ಲಿ ಹುಡುಡ್‌ ಚಂಡಮಾರುತ ಅಪ್ಪಳಿಸಿದಾಗ ಸಾವಿನ ಸಂಖ್ಯೆ 2ಕ್ಕೆ ಇಳಿಕೆಯಾಗಿತ್ತು. ಈ ಬಾರಿ ಕೇವಲ 24 ತಾಸಿನಲ್ಲಿ 900 ಗರ್ಭಿಣಿಯರು ಸೇರಿದಂತೆ 12 ಲಕ್ಷ ಜನರನ್ನು ಸ್ಥಳಾಂತರಿಸಿ ಘೋರ ಸಾವು- ನೋವನ್ನು ಒಡಿಶಾ ಸರ್ಕಾರ ತಪ್ಪಿಸಿದೆ. ಚಂಡಮಾರುತ ನಿರ್ವಹಣೆಯಲ್ಲಿ ಒಡಿಶಾ ಸರ್ಕಾರ ಒಂದು ರೀತಿ ವಿಶ್ವಕ್ಕೇ ಮಾದರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

click me!