ಬಸ್‌ ಬಿಡಲು ಜ್ಯೋತಿಷ್ಯ ಕೇಳಿದ : 15 ಜನರ ಜೀವ ಉಳಿಸಿದ್ದೇನೆಂದ

By Web DeskFirst Published Oct 9, 2018, 9:50 AM IST
Highlights

ಬಸ್‌ ಚಾಲಕ, ಬಸ್‌ ಚಾಲನೆಗೂ ಜ್ಯೋತಿಷ್ಯ ಕೇಳುತ್ತಾರೆ ಮತ್ತು ಜ್ಯೋತಿಷಿ ಮಾತು ಕೇಳಿ ಒಂದು ತಾಸಿಗೂ ಮೀರಿ ವಿಳಂಬವಾಗಿ ಬಸ್‌ ಚಾಲನೆ ಮಾಡಿದ್ದರಿಂದ 15 ಜನರ ಜೀವ ಉಳಿಸಿದ್ದಾರಂತೆ!

ಬೆಂಗಳೂರು :  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ, ಬಜೆಟ್‌ ಮಂಡನೆಗೆ, ಸಂಪುಟ ವಿಸ್ತರಣೆಗೆ. ಹೀಗೆ ನಾನಾ ಕಾರಣಗಳಿಗೆ ರಾಜಕಾರಣಿಗಳು ಜ್ಯೋತಿಷಿಗಳ ಮೊರೆ ಹೋಗಿ ಮಹೂರ್ತ ನಿಗದಿ ಮಾಡಿಕೊಳ್ಳುವುದು ನಿಮಗೆ ಗೊತ್ತೇ ಇದೆ. ಆದರೆ, ಇಲ್ಲೊಬ್ಬ ಬಸ್‌ ಚಾಲಕ, ಬಸ್‌ ಚಾಲನೆಗೂ ಜ್ಯೋತಿಷ್ಯ ಕೇಳುತ್ತಾರೆ ಮತ್ತು ಜ್ಯೋತಿಷಿ ಮಾತು ಕೇಳಿ ಒಂದು ತಾಸಿಗೂ ಮೀರಿ ವಿಳಂಬವಾಗಿ ಬಸ್‌ ಚಾಲನೆ ಮಾಡಿದ್ದರಿಂದ 15 ಜನರ ಜೀವ ಉಳಿಸಿದ್ದಾರಂತೆ!

ಹೀಗೆ, 15 ಮಂದಿಯ ಜೀವ ಉಳಿಸಿದ್ದಾಗಿ ಹೇಳಿಕೊಂಡ ಈ ಚಾಲಕನಿಗೆ ಬಿಎಂಟಿಸಿ ಈಗ ದಂಡ ವಿಧಿಸಲು ಸಜ್ಜಾಗಿದೆ.

ಇದೆಲ್ಲ ನಡೆದಿರುವುದು ನಗರದ ಪೂರ್ಣಪ್ರಜ್ಞಾ ಲೇಔಟ್‌ನ ಬಿಎಂಟಿಸಿ ಘಟಕ 33ರಲ್ಲಿ. ಈ ಘಟಕದ ಮೆಜೆಸ್ಟಿಕ್‌-ಚನ್ನಮ್ಮನಕೆರೆ ಅಚ್ಚುಕಟ್ಟು ಮಾರ್ಗದಲ್ಲಿ (ಮಾರ್ಗ ಸಂಖ್ಯೆ 45 ಜೆ/1) ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಕಂ ನಿರ್ವಾಹಕ ಯೋಗೇಶ್‌ ಗೌಡ ಅವರೇ ಜ್ಯೋತಿಷಿ ಮಾತು ಕೇಳಿ 15 ಜನರ ಜೀವ ಉಳಿಸಿದ ಬಿಎಂಟಿಸಿ ಚಾಲಕ!

ಜ್ಯೋತಿಷ್ಯ ನಂಬುವ ಚಾಲಕ ಯೋಗೇಶ್‌ ಗೌಡ ಚಾಲನೆ ಮಾಡುವ ಬಸ್‌ ಸೆಪ್ಟೆಂಬರ್‌ 1ರಂದು ಬೆಳಗ್ಗೆ 6.15ಕ್ಕೆ ಬಸ್‌ ಘಟಕದಿಂದ ಹೋರಡಬೇಕಿತ್ತು. ಆದರೆ, 1 ಗಂಟೆ 20 ನಿಮಿಷ ತಡವಾಗಿ ಹೊರಟಿದೆ. ಇದರಿಂದ ಸಹಜವಾಗಿಯೇ ಪ್ರಯಾಣಿಕರಿಗೆ ತೊಂದರೆ ಹಾಗೂ ನಿಗಮಕ್ಕೆ ನಷ್ಟಎರಡೂ ಆಗಿದೆ. ಪರಿಣಾಮವಾಗಿ ಘಟಕದ ವ್ಯವಸ್ಥಾಪಕ ಹರೀಶ್‌ಕುಮಾರ್‌ ಅವರು, ತಡವಾಗಿ ಬಸ್‌ ಚಾಲನೆ ಮಾಡಿದ್ದರಿಂದ ಮಾರ್ಗದ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಿದೆ. ನಿಗಮದ ಆದಾಯಕ್ಕೂ ನಷ್ಟವಾಗಿದೆ. ಹೀಗಾಗಿ ನಿಯಮದ ಪ್ರಕಾರ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಚಾಲಕ ಯೋಗೇಶ್‌ಗೆ ನೋಟಿಸ್‌ ನೀಡಿದ್ದರು.

ಈ ನೋಟಿಸ್‌ಗೆ ಯೋಗೇಶ್‌ಗೌಡ ನೀಡಿದ ಉತ್ತರ ಕಂಡು ವ್ಯವಸ್ಥಾಪಕ ಹರೀಶ್‌ಕುಮಾರ್‌ ಹೌಹಾರುವಂತಾಗಿದೆ. ಯೋಗೇಶ್‌ ಗೌಡ ನೋಟಿಸ್‌ಗೆ ನೀಡಿದ ಪ್ರತಿಕ್ರಿಯೆ- ‘ಆಗಸ್ಟ್‌ 31ರಂದು ಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿದ್ದೆ. ಅವರು ಸೆ.1ರಂದು ಬೆಳಗ್ಗೆ ರಾಹುಕಾಲ ಇರುವುದರಿಂದ ಆ ಸಮಯದಲ್ಲಿ ಘಟಕದಿಂದ ಬಸ್‌ ಹೊರತೆಗೆಯಬಾರದು. ಒಂದು ವೇಳೆ ಬಸ್‌ ಕಾರ್ಯಾಚರಣೆ ಮಾಡಿದರೆ ಅಪಘಾತವಾಗಿ 15 ಮಂದಿ ಮೃತಪಡುತ್ತಾರೆ ಎಂದು ಹೇಳಿದ್ದರು. ಹಾಗಾಗಿ ಅಂದು ರಾಹುಕಾಲ ಕಳೆದ ಬಳಿಕ ಬೆಳಗ್ಗೆ 7.35ಕ್ಕೆ ಬಸ್‌ ಹೊರಗೆ ತೆಗೆದಿದ್ದೇನೆ. ವಿಳಂಬ ಕಾರ್ಯಾಚರಣೆಯ ಹಿಂದೆ ನಿಗಮಕ್ಕೆ ಆರ್ಥಿಕ ನಷ್ಟಉಂಟುಮಾಡುವ ಯಾವುದೇ ದುರುದ್ದೇಶವಿಲ್ಲ.’

ಬಿಎಂಟಿಸಿ ನಿಗಮದ ಕೇಂದ್ರ ಕಚೇರಿ ಮತ್ತು ಘಟಕಗಳಲ್ಲಿ ಕನಕ ಜಯಂತಿ, ಬಸವ ಜಯಂತಿ, ಗಣೇಶೋತ್ಸವ, ಪೂಜೆ, ಹೋಮ-ಹವನ ಮಾಡುವುದು ಎಷ್ಟುಸತ್ಯವೋ, ನಮ್ಮ ಜ್ಯೋತಿಷಿ ಹೇಳಿಕೆಯೂ ಅಷ್ಟೇ ಸತ್ಯ ಎಂದು ಪ್ರಸ್ತಾಪಿಸುವ ಮೂಲಕ ಬಸ್‌ ಕಾರ್ಯಾಚರಣೆ ವಿಳಂಬವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಈ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಆದರೆ, ಈ ಮನವಿಗೆ ಸ್ಪಂದಿಸುವ ಮೂಡ್‌ನಲ್ಲಿ ನಿಗಮದ ಅಧಿಕಾರಿಗಳಿಲ್ಲ. ಜ್ಯೋತಿಷ್ಯ ನಂಬಿ ಬಸ್‌ ಚಾಲನೆ ವಿಳಂಬ ಮಾಡಿದ್ದಕ್ಕೆ ಯೋಗೇಶ್‌ ಗೌಡ ಅವರಿಗೆ ದಂಡ ವಿಧಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬದಂದಿದೆ.

ಅಧಿಕಾರಿಗಳಿಗೇ ಪ್ರಶ್ನೆ ಹಾಕುವ ಡ್ರೈವರ್‌

ತನ್ನಿಂದ ಆಗುವ ತಪ್ಪನ್ನು ಪ್ರಶ್ನಿಸಿದವರಿಗೆ ಸರಣಿ ಪ್ರಶ್ನೆ ಹಾಕುವುದು ಚಾಲಕ ಯೋಗೇಶ್‌ಗೌಡ ಅವರ ಸ್ವಭಾವ ಎನ್ನುತ್ತಾರೆ ಅವರ ಮೇಲಧಿಕಾರಿಗಳು. ಕಳೆದ ವರ್ಷ ನಿಗದಿತ ಮಾರ್ಗದಲ್ಲಿ ನಿಗದಿತ ಆದಾಯ ತಂದಿಲ್ಲವೆಂದು ಘಟಕದ ವ್ಯವಸ್ಥಾಪಕರು ಚಾಲಕ ಯೋಗೇಶ್‌ ಗೌಡಗೆ ನೋಟಿಸ್‌ ನೀಡಿದ್ದರು. ಈ ನೋಟಿಸ್‌ಗೆ ಉತ್ತರಿಸುವ ಮುನ್ನ ಯೋಗೇಶ್‌ ಅಧಿಕಾರಿಗಳಿಗೆ ಸರಣಿ ಪ್ರಶ್ನೆ ಕೇಳಿದ್ದರು.

ಅದು- ಸದರಿ ಮಾರ್ಗದಿಂದ ಇಂತಿಷ್ಟೇ ಆದಾಯ ಬರುತ್ತದೆ ಎಂದು ನೀವು ನಿರ್ಧರಿಸಲು ಬಳಸಿದ ವೈಜ್ಞಾನಿಕ ಆಧಾರ ಯಾವುದು? ಪ್ರಯಾಣಿಕರ ಕೊರತೆ ಇದ್ದಾಗ ನಿಗದಿತ ಆದಾಯ ತರುವುದು ಹೇಗೆ? ಪಾಸ್‌ ಹೊಂದಿದ ಪ್ರಯಾಣಿಕರೇ ಹೆಚ್ಚಿದ್ದಾಗ ಆದಾಯ ತರುವುದು ಹೇಗೆ? ಬಹು ಸಂಖ್ಯೆಯ ಹಿಂದುಗಳು ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ದಿನಗಳಲ್ಲಿ ಪ್ರಯಾಣಿಸುವುದು ಕಡಿಮೆ.

 ಹೀಗಿರುವಾಗ ನಿಗದಿತ ಆದಾಯ ಸಂಗ್ರಹಿಸುವುದು ಹೇಗೆ? ನಗರದ ಮಾರ್ಗಗಳಲ್ಲಿ ಅನಧಿಕೃತ ವಾಹನಗಳು ಪ್ರಯಾಣಿಕರ ಸಾಗಣೆಯಲ್ಲಿ ತೊಡಗಿರುವಾಗ ಆದಾಯ ತರುವುದು ಹೇಗೆ? ತನಿಖಾಧಿಕಾರಿಗಳ ಕರ್ತವ್ಯವೇನು ಎಂದು ಘಟಕದ ವ್ಯವಸ್ಥಾಪಕರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದರಂತೆ.

ಮೋಹನ ಹಂಡ್ರಂಗಿ

click me!