ಸಾಲಮನ್ನಾಗೆ ವರವಾಯ್ತು ಮಳೆ

By Web DeskFirst Published Aug 27, 2018, 8:19 AM IST
Highlights

ಅತಿವೃಷ್ಟಿಯಿಂದ ಕೊಡಗು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅಪಾರ ಆಸ್ತಿಪಾಸ್ತಿ, ಸಾವು ನೋವು ಸಂಭವಿಸಿದ್ದರೆ ಮತ್ತೊಂದೆಡೆ ಇದೇ ಮಹಾಮಳೆಯಿಂದ ಕನಿಷ್ಠ 10 ಸಾವಿರ ಕೋಟಿ ರು. ಆದಾಯ ವೃದ್ಧಿಯಾಗುವ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರವಿದೆ. 

ಬೆಂಗಳೂರು : ರಾಜ್ಯದ ಮಲೆನಾಡು ಭಾಗದ ಮೇಲೆ ಕರಾಳ ಛಾಯೆ ಬೀರಿದ್ದ ಅತಿವೃಷ್ಟಿಯು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರದಾನವಾಗಿ ಪರಿಣಮಿಸಿದೆ. ಕಳೆದ ಎರಡು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಸಾವಿರಾರು ಕೋಟಿ ರು. ಆದಾಯ ಹರಿದುಬರಲಿದೆ. 

ಹೌದು, ಒಂದು ಕಡೆ ಅತಿವೃಷ್ಟಿಯಿಂದ ಕೊಡಗು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅಪಾರ ಆಸ್ತಿಪಾಸ್ತಿ, ಸಾವು ನೋವು ಸಂಭವಿಸಿದ್ದರೆ ಮತ್ತೊಂದೆಡೆ ಇದೇ ಮಹಾಮಳೆಯಿಂದ ಕನಿಷ್ಠ 10 ಸಾವಿರ ಕೋಟಿ ರು. ಆದಾಯ ವೃದ್ಧಿಯಾಗುವ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿಯೇ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಹಾಗೂ ಕೊಡಗು ನಷ್ಟದ ಹೊರತಾಗಿಯೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಘೋಷಣೆ ಮಾಡಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಭಾರಿ ಮಳೆಯಿಂದಾಗಿ ಕೊಡಗು ಭಾಗದಲ್ಲಿ ತೀವ್ರ ನಷ್ಟ ಉಂಟಾಗಿದೆ. ಇಲ್ಲಿನ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರಕ್ಕೆ ಕನಿಷ್ಠ ಎರಡು ಸಾವಿರ ಕೋಟಿ ರು. ಹೊರೆ ಬೀಳಲಿದೆ. ಇದರ ಹೊರತಾಗಿ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಾಗಲಿರುವ ಕೃಷಿ ಉತ್ಪಾದನೆ, ವಿದ್ಯುತ್ ಉತ್ಪಾದನೆ, ವಿದ್ಯುತ್ ಖರೀದಿ ಹೊರೆ ಕಡಿತ, ಕೈಗಾರಿಕೆಗಳ ಉತ್ಪಾದನೆ ಹೆಚ್ಚಳ, ಬರ ನಿರ್ವಹಣೆ ವೆಚ್ಚ ಕಡಿತ ಹಾಗೂ ಪ್ರವಾಸೋದ್ಯಮ ಆದಾಯ ಹೆಚ್ಚಳ ಸೇರಿದಂತೆ ವಿವಿಧ ಮೂಲಗಳಿಂದ ಭಾರಿ ಆದಾಯ ನಿರೀಕ್ಷಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.

ವಿದ್ಯುತ್ ಖರೀದಿಸದಂತೆ ಆದೇಶ: ಜೂನ್ 10ರಿಂದ ಆಗಸ್ಟ್ 10ರವರೆಗೆ ರಾಜ್ಯದಲ್ಲಿ ಆದ ಭಾರಿ ಮಳೆಯಿಂದಾಗಿ ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸುಪಾ, ಮಾಣಿ ಜಲಾಶಯಗಳಿಗೆ ಮೂರು ಪಟ್ಟು ನೀರಿನ ಹರಿವು ಹೆಚ್ಚಾಗಿದೆ. ರಾಜ್ಯದ ಜಲಾಶಯಗಳು ಭರ್ತಿ ಜತೆಗೆ ಪವನ, ಸೌರ ಹಾಗೂ ಕಿರು ವಿದ್ಯುತ್ ಘಟಕಗಳ ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ತನ್ನು ಸರ್ಕಾರವೇ ಉತ್ಪಾದಿಸಲಿ ಮೊದಲ ಪುಟದಿಂದ ಹೀಗಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ಖರೀದಿ ಮಾಡದಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಆದೇಶ ಮಾಡಿದ್ದಾರೆ. 

ಪ್ರತಿ ವರ್ಷ ಖಾಸಗಿ ಕಂಪನಿಗಳು ಹಾಗೂ ಗ್ರಿಡ್‌ನಿಂದ ಕನಿಷ್ಠ ಒಂದು ಸಾವಿರ ಮೆ.ವ್ಯಾ.ವಿದ್ಯುತ್ ಖರೀದಿ ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ವಿದ್ಯುತ್ ಖರೀದಿ ನಷ್ಟ ತಪ್ಪಿದೆ. ಇಂಧನ ಇಲಾಖೆ ಅಂದಾಜು ಪ್ರಕಾರ 2019 ರ ಸಾಲಿಗೆ ಬೇಕಿರುವ 29 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ನಮ್ಮಲ್ಲೇ ಲಭ್ಯವಿರಲಿದೆ.

ವಿದ್ಯುತ್ ದರ ಹೆಚ್ಚಳವಿಲ್ಲ: ವಿದ್ಯುತ್ ಉತ್ಪಾದನೆಯಿಂದಾಗಿ ಕನಿಷ್ಠ ವಿದ್ಯುತ್ ಖರೀದಿಗೆ ಆಗುತ್ತಿದ್ದ 3,200 ಕೋಟಿ ರು. ಉಳಿತಾಯ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಕಳೆದ ವರ್ಷಕ್ಕೆ ಹೋಲಿಸಿದರೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಮೂರು ಪಟ್ಟು ಹೆಚ್ಚಾಗಿದೆ. ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ ಉತ್ಪಾದನೆಯಲ್ಲೂ ಮೂರು ಪಟ್ಟು ಏರಿಕೆಯಾಗಿದೆ. 

ಹೀಗಾಗಿ, ಈ ವರ್ಷಾಂತ್ಯದವರೆಗೂ ವಿದ್ಯುತ್‌ಗೆ ಬರ ಬರುವ ಸಾಧ್ಯತೆಯಿಲ್ಲ. ಜಲಾಶಯಗಳ ಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ವರ್ಷ ವಿದ್ಯುತ್ ದರ ಪರಿಷ್ಕರಣೆ ಮಾಡುವ ಅನಿವಾರ್ಯತೆಯೂ ಸೃಷ್ಟಿಯಾಗದು ಎನಿಸುತ್ತಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

"

ಬೇಡಿಕೆಗಿಂತ ಪೂರೈಕೆ ಹೆಚ್ಚಳ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ವಿದ್ಯುತ್ ಬೇಡಿಕೆ ಪ್ರಮಾಣವೂ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರು  ತುಂಬಿರುವುದರಿಂದ ವಿದ್ಯುತ್ ಬೇಡಿಕೆ ಜಾಸ್ತಿಯಾಗುತ್ತಿಲ್ಲ. ಜತೆಗೆ ನೀರು ಹೆಚ್ಚಳದಿಂದಾಗಿ ಈವರೆಗೆ ಸ್ಥಗಿತಗೊಂಡಿದ್ದ ಸರ್ಕಾರಿ ಹಾಗೂ ಖಾಸಗಿ ಜಲವಿದ್ಯುತ್ ಘಟಕಗಳು ಪುನರ್ ಆರಂಭವಾಗುತ್ತಿವೆ. ಜೋಗ ಜಲಪಾತ ಸೇರಿದಂತೆ ಕೆಲವು ಕಡೆ ಇನ್ನೂ ನೆರೆ ಹಾವಳಿಯಿಂದ ವಿದ್ಯುತ್ ಉತ್ಪಾದನೆ ಶುರುವಾಗಿಲ್ಲ. ಇದರ ಹೊರತಾಗಿಯೂ ನಿತ್ಯ ಸರಾಸರಿ 250 ದಶಲಕ್ಷ ಯೂನಿಟ್ ವಿದ್ಯುತ್ ಹಂಚಿಕೆಯಾಗುತ್ತಿದ್ದರೆ, ಶೇ.62 ರಷ್ಟು ಮಾತ್ರ ಬಳಕೆಯಾಗುತ್ತಿದೆ. ನಿತ್ಯ 7,500ರಿಂದ 8 ಸಾವಿರ ಮೆ.ವ್ಯಾ. ವಿದ್ಯುತ್  ಅಗತ್ಯವಿರುವ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದಲೇ ಶೆ. 65ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೀಗಾಗಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೃಷಿ ಉತ್ಪಾದನೆ ಹೆಚ್ಚಳ ನಿರೀಕ್ಷೆ: ಕೃಷಿ ಇಲಾಖೆ ಪ್ರಕಾರ ಕಳೆದ ಮೂರು ವರ್ಷದಲ್ಲೇ ಈ ಬಾರಿ ಹೆಚ್ಚು ಬಿತ್ತನೆ ಆಗಿದೆ. 13 ಜಿಲ್ಲೆಗಳಲ್ಲಿ ಬರ ಉಂಟಾಗಿದ್ದರೂ, ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಶೇ.98 ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಆದರೆ, ಹೈ-ಕ ಭಾಗದಲ್ಲಿ 60 ತಾಲೂಕು ಸೇರಿದಂತೆ ಬರ ಉಂಟಾಗಿರುವ ಕಡೆ ಶೇ.30ರಿಂದ 45 ರಷ್ಟು ಬಿತ್ತನೆ ವ್ಯರ್ಥವಾಗಿದೆ. ಆದರೂ, ಅಂಕಿ ಅಂಶಗಳ ಪ್ರಕಾರ ರಾಜ್ಯದ ಸರಾಸರಿ ಗಮನಿಸಿದರೆ ಕಳೆದ ಮೂರು ವರ್ಷದಲ್ಲಿಯೇ ಅತಿ ಹೆಚ್ಚು ಬೆಳೆ ಕೈಸೇರುವ ಸಾಧ್ಯತೆ ಇದೆ. ಮಳೆಯು ಇದೇ ರೀತಿ ಸಹಕರಿಸಿದರೆ ಕೃಷಿ ಉತ್ಪಾದನೆ ಕನಿಷ್ಠ ಶೇ. 20 ರಷ್ಟು ಹೆಚ್ಚಾಗಲಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳುತ್ತಾರೆ. 

ಕೊಡಗು ಭಾಗದಲ್ಲಿ ವಾಣಿಜ್ಯ ಬೆಳೆಗೆ ಪೆಟ್ಟಾಗಿದೆ. ಆದರೆ, ಕಾವೇರಿ ತುಂಬಿ ಹರಿಯುತ್ತಿರುವುದರಿಂದ ಮಂಡ್ಯ, ಹಾಸನ ಭಾಗದಲ್ಲಿ ಒಂದು ಬೆಳೆ ಹೆಚ್ಚು ಬರುವ ಸಾಧ್ಯತೆ ಇದೆ. ಮಳೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ತೋಟಗಾರಿಕೆ ಉತ್ಪಾದನೆಯೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ, ಹೈ-ಕ ಹಾಗೂ ಬಯಲುಸೀಮೆ ಪ್ರದೇಶಗಳ ನಿರ್ವಹಣೆಯೇ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಾಗಲಿದೆ ಕೈಗಾರಿಕೆ ಉತ್ಪಾದನೆ: ಸ್ಟೀಲ್, ವಿದ್ಯುತ್, ಕಬ್ಬಿಣ ಅದಿರು ಸೇರಿದಂತೆ ವಿವಿಧ ಉತ್ಪಾದನಾ ಕ್ಷೇತ್ರದಲ್ಲಿ 52,545 ಕೈಗಾರಿಕೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಕರ್ನಾಟಕದಲ್ಲಿ ವಾರ್ಷಿಕ 22 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆಯಾಗುತ್ತಿದೆ. ಇದೀಗ ಅಗತ್ಯ ನೀರು ಲಭ್ಯತೆಯಿಂದಾಗಿ ಉತ್ಪಾದನೆ 
ಮತ್ತಷ್ಟು ಹೆಚ್ಚಳವಾಗಬಹುದು. ಜತೆಗೆ, ಉದ್ಯೋಗ ಸೃಷ್ಟಿಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಐರನ್ ಓರ್ ಅಂಡ್ ಸ್ಟೀಲ್ ಅಸೋಸಿಯೇಷನ್ ಅಧ್ಯಕ್ಷ ಕಿಶೋರ್ ಆಳ್ವ ಹೇಳುತ್ತಾರೆ.

ನೀರು ಪೂರೈಕೆಯಿಂದ ಆದಾಯ: ರಾಜ್ಯ ಸರ್ಕಾರವು ಜಲಸಂಪನ್ಮೂಲ ಇಲಾಖೆಯಿಂದ ಕಬ್ಬಿಣದ ಅದಿರು ಹಾಗೂ ಉಕ್ಕು ಉತ್ಪಾದನೆ, ವಿದ್ಯುತ್  ಉತ್ಪಾದನೆ ಮಾಡುವ ಕಾರ್ಖಾನೆ ಸೇರಿದಂತೆ ನೂರಾರು ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡುತ್ತಿದೆ. ಇದೀಗ ಅಣೆಕಟ್ಟುಗಳು ಹಾಗೂ ನದಿ ಮೂಲಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವುದರಿಂದ ಕಾರ್ಖಾನೆಗಳು ಬೇಡಿಕೆ ಇಟ್ಟಷ್ಟೂ ನೀರು ಸರಬರಾಜು ಮಾಡಬಹುದು. 

ಅಲ್ಲದೆ, ಕೈಗಾರಿಕೆಗಳಿಗೆ ನೀರು ಪೂರೈಸುವ ದರವನ್ನು 100 ಪಟ್ಟು ಹೆಚ್ಚಳ ಮಾಡಿ ಜೂನ್‌ನಲ್ಲಿ ಆದೇಶಿಸಲಾಗಿದೆ. ಹೀಗಾಗಿ ಅಣೆಕಟ್ಟು ಹಾಗೂ ಜಲಾಶಯದಿಂದ ಪಡೆಯುವ ನೀರಿಗೆ ಪ್ರತಿ ಎಂಸಿಎಫ್‌ಟಿಗೆ 3 ಲಕ್ಷ ರು. ಹಾಗೂ ಪ್ರಾಕೃತಿಕ ಮೂಲಗಳಿಂದ ಪಡೆಯುವ ನೀರಿಗೆ ಪ್ರತಿ ಘನ ಅಡಿಗೆ 1.50  ಲಕ್ಷ ರು. ಶುಲ್ಕ ವಿಧಿಸಲಿದ್ದು, ನೂರಾರು ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿ, ಜಲಮಂಡಳಿಗೂ ಉಳಿತಾಯ: ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ನದಿ ನೀರು ಸಂಗ್ರಹಿಸುವ ಕೆಆರ್‌ಎಸ್, ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಮುಂದಿನ ಏಪ್ರಿಲ್‌ವರೆಗೆ ನಗರಕ್ಕೆ ಕುಡಿವ ನೀರಿನ ಸಮಸ್ಯೆಯಿಲ್ಲ. ಹೀಗಾಗಿ ಪ್ರತಿ ವರ್ಷ ಟ್ಯಾಂಕರ್, ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆಗೆ ಖರ್ಚು ಮಾಡುತ್ತಿದ್ದ ಮೊತ್ತದಲ್ಲಿ 150 ಕೋಟಿ ರು.ಗೂ ಅಧಿಕ ಹಣ ಉಳಿಯಬಹುದು. ಪ್ರತಿ ವರ್ಷ ವಾರ್ಡ್‌ಗೆ 10 ಲಕ್ಷ ರು.ಗಳಂತೆ ಹಣ ನೀಡಲಾಗುತ್ತಿತ್ತು. ಇದು ಕಡಿಮೆಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಕಾಂತ್ ಎನ್.ಗೌಡಸಂದ್ರ

click me!