ಜೀವನದ ಜಂಜಾಟಕ್ಕೂ ಜೈ ಎಂದ ಜಲೀಲನಿಗೆ ಕರುನಾಡ ವಿದಾಯ

Published : Nov 26, 2018, 05:58 PM ISTUpdated : Nov 26, 2018, 08:53 PM IST
ಜೀವನದ ಜಂಜಾಟಕ್ಕೂ ಜೈ ಎಂದ ಜಲೀಲನಿಗೆ ಕರುನಾಡ ವಿದಾಯ

ಸಾರಾಂಶ

ಹುಟ್ಟೂರಿನಿಂದಲೇ ಕೊನೆಯ ವಿದಾಯ ಹೇಳಿದ ಮಂಡ್ಯದ ಗಂಡು ಅಂಬಿ ಅಂತಿಮ ಸಂಸ್ಕಾರಕ್ಕೆ ಇಡೀ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಪಾಲ್ಗೊಂಡಿತ್ತು. ಯಾವುದೇ ಸಂಪ್ರದಾಯಗಳಿಲ್ಲದೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂಬರೀಶ್ ಮೃತದೇಹಕ್ಕೆ ಪುತ್ರ ಅಭಿಷೇಕ್ ಗೌಡ ಅಗ್ನಿಸ್ಪರ್ಶ ಮಾಡಿದ್ದು, ’ಮಂಡ್ಯದ ಗಂಡು’ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. 

ಬೆಂಗಳೂರು[ನ.26]: ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದ ಎಲ್ಲರಿಗೂ ಸ್ನೇಹಿತರಾಗಿದ್ದ ಕಲಿಯುಗದ ಕರ್ಣ ಅಂಬರೀಶ್ 66 ವರ್ಷ ಪ್ರಾಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹುಟ್ಟೂರಿನಿಂದಲೇ ಕೊನೆಯ ವಿದಾಯ ಹೇಳಿದ 'ಮಂಡ್ಯದ ಗಂಡು' ಅಂಬಿ ಅಂತಿಮ ಸಂಸ್ಕಾರಕ್ಕೆ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಪಾಲ್ಗೊಂಡಿತ್ತು. ಯಾವುದೇ ಸಂಪ್ರದಾಯಗಳಿಲ್ಲದೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಅಂಬಿಯ ಪಾರ್ಥೀವ ಶರೀರಕ್ಕೆ ಮಗ ಅಭಿಷೇಕ್ ಗೌಡ ಅಗ್ನಿಸ್ಪರ್ಶ ಮಾಡಿದ್ದು, ಮಂಡ್ಯದ ಗಂಡು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. 

ಇದನ್ನೂ ಓದಿ: ಅಂಬಿ ಅಂತಿಮ ಸಂಸ್ಕಾರಕ್ಕೆ ಸ್ವೀಡನ್‌ನಿಂದ ದರ್ಶನ್ ಆಗಮನ

ಭಾವೋದ್ವೇಗಕ್ಕೆ ಸಾಕ್ಷಿಯಾದ ಮಂಡ್ಯ

'ಮಂಡ್ಯದ ಗಂಡು’ ಎಂದೇ ಕರೆಯಲಾಗುತ್ತಿದ್ದ ಅಂಬರೀಶ್ ಪಾರ್ಥೀವ ಶರೀರವನ್ನು ಭಾನುವಾರ ಸಂಜೆ ಹುಟ್ಟೂರು ಮಂಡ್ಯಕ್ಕೆ ಕೊಂಡೊಯ್ದಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಂಡ್ಯ ಜನತೆ, ತಮ್ಮ ನಾಡಿನ ನಾಯಕನ ಅಂತಿಮ ದರ್ಶನ ಪಡೆದರು. ಬೆಳಗ್ಗೆ 10.30ಕ್ಕೆ ಅಂಬರೀಶ್ ಮೃತದೇಹವನ್ನು ಬೆಂಗಳೂರಿಗೆ ಕರೆತರುವುದಕ್ಕೂ ಮೊದಲು ಮೈದಾನದಲ್ಲಿ ನೆರೆದಿದ್ದ, ಮಂಡ್ಯ ಜನತೆಗೆ ಪುತ್ರ ಅಭಿಷೇಕ್ ಧನ್ಯವಾದ ತಿಳಿಸಿದ್ದಾರೆ. ಬಳಿಕ ಅಂಬಿ ಮೃತದೇಹವನ್ನು ಹೆಲಿಕಾಪ್ಟರ್‌ನೊಳಗೆ ಇರಿಸುವುದಕ್ಕೂ ಮೊದಲು ಅಭಿಷೇಕ್ ಹಾಗೂ ಪತ್ನಿ ಸುಮಲತಾ ಇಬ್ಬರೂ 'ಮಂಡ್ಯದ ಗಂಡು' ಅಂಬರೀಶ್ ಹಣೆಗೆ ಮಂಡ್ಯದ ಮಣ್ಣಿನ ತಿಲಕ ಇಟ್ಟಿದ್ದಾರೆ. ಅಷ್ಟರಲ್ಲಾಗಲೇ ನೆರೆದಿದ್ದ ಮಂಡ್ಯ ಜನತೆಯ ಕಣ್ಣಾಲಿಗಳು ತುಂಬಿ ಬಂದಿದ್ದವು.

ದನ್ನೂ ಓದಿ: ಕಾವೇರಿಗಾಗಿ ಮಂತ್ರಿ ಪದವಿ ತ್ಯಜಿಸಿದ್ದ ಅಂಬಿ

ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋಗೆ ಶವಯಾತ್ರೆ

ಬಳಿಕ ಅಂಬರೀಶ್ ಪಾರ್ಥೀವ ಶರೀರವನ್ನು ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಕರೆತಂದಿದ್ದು, ಎಚ್‌ಎಎಲ್ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂವರೆಗೆ ಆ್ಯಂಬುಲೆನ್ಸ್‌ಲ್ಲಿ ಕರೆದೊಯ್ದರು. ಈ ವೇಳೆ ಕೊನೆಯ ಸಮಯದಲ್ಲಿ ಬೆಂಗಳೂರಿಗೆ ತಲುಪಿದ್ದ ದರ್ಶನ್ ಮೃತದೇಹಕ್ಕೆ ಹೆಗಲು ನೀಡಿದರು.

ಇದನ್ನೂ ಓದಿ: ಅಂಬಿ ಮಾಮನಿಗೆ ಸು'ದೀಪು' ನಮನ...!: ವೈರಲ್ ಆಯ್ತು ಕಿಚ್ಚನ ಪತ್ರ

ಸ್ಟೇಡಿಯಂನಿಂದ ಪುಪ್ಷಾಲಂಕೃತಗೊಂಡ ಚಿರಶಾಂತಿ ವಾಹನದಲ್ಲಿ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಠಾಣೆ, ಕೆಜಿ ರೋಡ್, ಮೈಸೂರು ಬ್ಯಾಂಕ್ ಸರ್ಕಲ್, ಪ್ಯಾಲೇಸ್ ರೋಡ್, ಕಾವೇರಿ ಜಂಕ್ಷನ್,  ಭಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಯಶವಂತಪುರ ಫ್ಲೈ ಓವರ್, ಗೊರಗುಂಟೆ ಪಾಳ್ಯ ರಸ್ತೆ ಮೂಲಕ ಸುಮಾರು 13 ಕಿ. ಮೀಟರ್ ಮೆರವಣಿಗೆಯಲ್ಲಿ ಸಾಗಿದ ತಮ್ಮ ನೆಚ್ಚಿನ ನಾಯಕನ ಅಂತಿಮ  ದರ್ಶನ ಪಡೆಯಲು ರಸ್ತೆಯ ಇಕ್ಕೆಲಗಳಲ್ಲಿ ಕರುನಾಡ ಮಂದಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. 

ಅಂಬಿ ಶವಯಾತ್ರೆಗಾಗಿ ಜೀರೋ ಟ್ರಾಫಿಕ್ ಮಾಡಲಾಗಿದ್ದು, ಸಹಸ್ರಾರು ಮಂದಿ ಈ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ಹಿರಿಯರು, ಕಿರಿಯರು ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದ ಅಂಬಿಯನ್ನು ಕಳೆದುಕೊಂಡಿದ್ದ ನೋವು ಪ್ರತಿಯೊಬ್ಬರ ಕಣ್ಣಂಚಿನಲ್ಲೂ ಕಂಬನಿಯಾಗಿ ಜಿನುಗುತ್ತಿತ್ತು. ಕಲಿಯುಗದ ಕರ್ಣನ  ಅಂತಿಮ ಯಾತ್ರೆಯಲ್ಲಿ ದರ್ಶನ್, ಅರ್ಜುನ್ ಸರ್ಜಾ, ಪ್ರಣಮ್, ಧೃವ ಸರ್ಜಾ, ರವಿಶಂಕರ್ ಸೇರಿದಂತೆ ದಕ್ಷಿಣ ಭಾರತ ಸಿನಿ ಕ್ಷೇತ್ರದ ಹಲವಾರು ನಟರು ಪಾಲ್ಗೊಂಡಿದ್ದರು. 

ರಾಜಕೀಯ ರಂಗ, ಸ್ಯಾಂಡಲ್‌ವುಡ್, ಕಾಲಿವುಡ್ ಟಾಲಿವುಡ್ ಕಂಬನಿಯ ವಿದಾಯ

ಕಂಠೀರವ ಸ್ಟುಡಿಯೋದಲ್ಲಿ 'ಜಲೀಲಾ' ಅಂತಿಮ ಕ್ರಿಯೆಗೆ ಸುಮಾರು 6 ಸಾವಿರ ಆಸನಗಳನ್ನು ಸಿದ್ದಪಡಿಸಲಾಗಿದ್ದು, ಒಂದು ಸಾವಿರ ಆಸನಗಳನ್ನು ಕುಟುಂಬಸ್ಥರು, ವಿಐಪಿ ಹಾಗೂ ಸಿನಿಮಾ ನಟ/ನಟಿಯರಿಗಾಗಿ ಮೀಸಲಿರಿಸಲಾಗಿತ್ತು. ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಅಂಬಿ ರಾಜಕೀಯ ಗುರು ಎಸ್. ಎಂ. ಕೃಷ್ಣಾ, ಡಿಸಿಎಂ ಡಾ. ಜಿ. ಪರಮೆಶ್ವರ್, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಡಿಕೆಶಿ, ದಿನೆಶ್ ಗುಂಡೂರಾವ್, ಬಿ. ಎಸ್ ಯಡಿಯೂರಪ್ಪ, ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ನಟ ದೊಡ್ಡಣ್ಣ, ಜಗ್ಗೇಶ್, ಶಿವರಾಜ್ ಕುಮಾರ್, ಸುದೀಪ್, ರಜನೀಕಾಂತ್, ಪುನೀತ್ ರಾಜ್‌ಕುಮಾರ್ ಜಯಮಾಲಾ, ರವಿಚಂದ್ರನ್, ಅಪೇಂದ್ರ ತೆಲುಗು ನಟ ಮೋಹನ್ ಬಾಬು, ಸುಮನ್, ಚಿರಂಜೀವಿ ಸೇರಿದಂತೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಸ್ಟಾರ್ ನಟರು ಅಂಬಿ ಅಂತಿಮ ಕ್ರಿಯೆಯಲ್ಲಿ ಭಾಗಿಯಾಗಿ ಅಂತಿಮ ವಿದಾಯ ಕೋರಿದರು.

ಇದನ್ನೂ ಓದಿ: ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

ಸಂಪ್ರದಾಯದಂತೆ ನಡೆಯಲಿಲ್ಲ ಅಂತಿಮ ಸಂಸ್ಕಾರ

ರಾಜಕಾರಣಿ ಹಾಗೂ ಕನ್ನಡ ಸಿನಿ ಕ್ಷೇತ್ರದ ದಿಗ್ಗಜ ನಟರಾಗಿದ್ದ ಅಂಬರೀಶ್‌ಗೆ ಮೊದಲು ಖಾಕಿ ಪಡೆಯು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡಲಾಯಿತು. ಬಳಿಕ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಅದರೆ ಖ್ಯಾತ ವೈದಿಕ ಡಾ. ಭಾನುಪ್ರಕಾಶ್‌ರವರು ಸುಮಲತಾ ಮತ್ತು ಅಭಿಶೇಕ್ ಬಳಿ ಮಾಡಿದ ಮನವಿ ಮೇರೆಗೆ ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದ ಅಂಬಿ ಅಂತ್ಯಸಂಸ್ಕಾರವನ್ನು ಆದಿ ಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿಗಳಂತೆ ಯಾವುದೇ ಸಂಪ್ರದಾಯಗಳಿಲ್ಲದೆ ನಡೆಸಿದ್ದು ವಿಶೇಷವಾಗಿತ್ತು.

ಅಗ್ನಿ ಸ್ಪರ್ಶಕ್ಕೆ 500 ಕೆಜಿಯ 300 ಗಂಧದ ಮರಗಳ ತುಂಡುಗಳು ಸೇರಿದಂತೆ 7 ರೀತಿಯ ಸೌದೆ, ಬೆರಣಿ, ತುಪ್ಪ, ಬೆಣ್ಣೆ, ಧೂಪಗಳನ್ನು ಬಳಸಲಾಯಿತು. ಮದ್ದೂರು ಮೂಲದ ಹುಚ್ಚಯ್ಯ ಕೋಣಪ್ಪ ಅಂತಿಮ ವಿಧಿ ವಿಧಾನಗಳನ್ನು ನಡೆಸಿದ್ದು, ಮಗ ಅಭಿಷೇಕ್ ಗೌಡ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾರೆ.

ಇದನ್ನೂ ಓದಿ: ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ!

ಒರಟಾಗಿ ಮಾತನಾಡುತ್ತಿದ್ದರೂ, ಮೃದು ಮನಸ್ಸು ಹೊಂದಿದ್ದ, ಎಲ್ಲರ ಸ್ನೇಹಿತರಾಗಿದ್ದ ಅಂಬರೀಶ್ ಅಸ್ತಂಗತರಾಗಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿದ್ದ  ಮಳವಳ್ಳಿ ಹುಚ್ಚೇಗೌಡ ಅಮರನಾಥ ಕೊನೆಗೂ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಸ್ಯಾಂಡಲ್‌ವುಡ್‌ ಅಂಬಿ ಅಗಲುವಿಕೆಯಿಂದ ಭರಿಸಲಾಗದ ನಷ್ಟ ಎದುರಿಸಿದರೆ, ಇತ್ತ ಪತ್ನಿ ಸುಮಲತಾ 27 ವರ್ಷಗಳಿಂದ ಒಟ್ಟಾಗಿದ್ದ ಪ್ರಾಣಕ್ಕಿಂತ ಹೆಚ್ಚಾಗಿದ್ದ ಗಂಡನನ್ನು ಕಳೆದುಕೊಂಡು ಸಂಕಟಪಡುತ್ತಿದ್ದಾರೆ. ಮಗ ಅಭಿಷೇಕ್ ತನ್ನ ಪ್ರೀತಿಯ ಅಪ್ಪಾಜಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಒಟ್ಟಾರೆಯಾಗಿ ಅಂಬಿಯ ಅಗಲುವಿಕೆಯಿಂದ ಕರುನಾಡಿನಾದ್ಯಂತ ಶೋಕ ಮಡುಗಟ್ಟಿದೆ. ’ಜಲೀಲ’ ಇಹಲೋಕಕ್ಕೆ ವಿದಾಯ ಹೇಳಿದರೂ ಅವರ ನೆನಪು ಅಜರಾಮರ.

ಅಂಬರೀಶ್ ಅಸ್ತಂಗತ: ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ RIP Ambareesh

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ