ರೆಡ್ಡಿ ಡೀಲ್‌ ಹಣ ಎಲೆಕ್ಷನ್‌ಗೆ ಬಳಕೆ?

By Web DeskFirst Published Nov 9, 2018, 7:25 AM IST
Highlights

ಆ್ಯಂಬಿಡೆಂಟ್‌ ಕಂಪನಿ ಮಾಲೀಕ ಸಯ್ಯದ್‌ ಫರೀದ್‌ನಿಂದ ಪಡೆದಿದ್ದಾರೆ ಎನ್ನಲಾದ 57 ಕೆ.ಜಿ.ಚಿನ್ನವನ್ನು ಜನಾರ್ದನ ರೆಡ್ಡಿ ಅವರು ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಳಸಿಕೊಂಡಿರಬಹುದು ಎಂಬ ಗುಮಾನಿಯನ್ನು ಬೆಂಗಳೂರಿನ ನಗರ ಅಪರಾಧ ವಿಭಾಗ (ಸಿಸಿಬಿ) ವ್ಯಕ್ತಪಡಿಸಿದೆ.
 

ಬೆಂಗಳೂರು :  ‘ಇ.ಡಿ. ಡೀಲ್‌ ಪ್ರಕರಣ’ದಲ್ಲಿ ಆ್ಯಂಬಿಡೆಂಟ್‌ ಕಂಪನಿ ಮಾಲೀಕ ಸಯ್ಯದ್‌ ಫರೀದ್‌ನಿಂದ ‘ಲಂಚ ರೂಪದಲ್ಲಿ’ ಪಡೆದಿದ್ದಾರೆ ಎನ್ನಲಾದ 57 ಕೆ.ಜಿ.ಚಿನ್ನವನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಳಸಿಕೊಂಡಿರಬಹುದು ಎಂಬ ಬಲವಾದ ಗುಮಾನಿಯನ್ನು ಬೆಂಗಳೂರಿನ ನಗರ ಅಪರಾಧ ವಿಭಾಗ (ಸಿಸಿಬಿ) ವ್ಯಕ್ತಪಡಿಸಿದೆ.

ಈ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ರೆಡ್ಡಿ ಹಾಗೂ ಅವರು ಪಡೆದಿದ್ದಾರೆ ಎನ್ನಲಾದ ಚಿನ್ನಕ್ಕಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಬೇಟೆಗಿಳಿದಿರುವ ಸಿಸಿಬಿ, ಆ ಚಿನ್ನದ ಗಟ್ಟಿಗಳು ಗಟ್ಟಿಹಾಗೆಯೇ ಇದೆಯೋ ಅಥವಾ ಕರಗಿಸಿ ಮಾರಾಟ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತೀವ್ರ ಕಸರತ್ತು ನಡೆಸಿದೆ.

ಆ್ಯಂಬಿಡೆಂಟ್‌ ಕಂಪನಿ ವಿರುದ್ಧದ ಇ.ಡಿ. (ಜಾರಿ ನಿರ್ದೇಶನಾಲಯ) ತನಿಖೆ ಮೇಲೆ ಪ್ರಭಾವ ಬೀರುವ ಸಂಬಂಧ ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈ.ಲಿ. ಕಂಪನಿ ಮಾಲೀಕ ಸಯ್ಯದ್‌ ಫರೀದ್‌ ಜತೆ 20 ಕೋಟಿ ರು. ಮೊತ್ತದ ವ್ಯವಹಾರ ನಡೆಸಿದ ವಿವಾದಕ್ಕೆ ಜನಾರ್ದನ ರೆಡ್ಡಿ ತುತ್ತಾಗಿದ್ದಾರೆ. ಈ ವ್ಯವಹಾರವು ಮಾಚ್‌ರ್‍ ತಿಂಗಳಲ್ಲಿ ನಡೆದಿದ್ದು, ಇದಕ್ಕೆ ಪೂರಕವಾಗಿ ದಾಖಲೆಗಳು ಲಭ್ಯವಾಗಿವೆ ಎಂದು ಸಿಸಿಬಿ ಹೇಳಿದೆ.

ಇ.ಡಿ. ತನಿಖೆಯಿಂದ ಫರೀದ್‌ನನ್ನು ಮುಕ್ತಗೊಳಿಸಲು ‘ಡೀಲ್‌’ ಮಾಡಿಕೊಂಡ ನಂತರ ಜನಾರ್ದನ ರೆಡ್ಡಿ ಅವರು ಮೇ ತಿಂಗಳಲ್ಲಿ ಎದುರಾದ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ಇತ್ತೀಚೆಗೆ ಮುಗಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಬೆಂಬಲಿಗರ ಬೆನ್ನಿಗೆ ನಿಂತಿದ್ದರು. ಹೀಗಾಗಿ ಫರೀದ್‌ನಿಂದ ಪಡೆದ ಚಿನ್ನವನ್ನು ಚುನಾವಣಾ ಕದನದಲ್ಲಿ ರೆಡ್ಡಿ ಕರಗಿಸಿರಬಹುದು ಎಂದು ಶಂಕಿಸಲಾಗಿದೆ.

‘ಚಿನ್ನವನ್ನು ಮಾರಾಟ ಮಾಡಿ ಅಥವಾ ತನ್ನ ನಂಬಿಕಸ್ಥರಿಗೆ ಗಟ್ಟಿಯನ್ನೇ ಕೊಟ್ಟು ರೆಡ್ಡಿ ಚುನಾವಣೆ ವೆಚ್ಚ ಭರಿಸಿರಬಹುದು. ರೆಡ್ಡಿ ಸೂಚನೆಯಂತೆ 20 ಕೋಟಿ ರು. ಹಣದ ಬದಲಾಗಿ ಫರೀದ್‌ 57 ಕೆ.ಜಿ. ಚಿನ್ನವನ್ನು ಚಿನ್ನದ ವ್ಯಾಪಾರಿ ರಮೇಶ್‌ ಕೊಠಾರಿಗೆ ತಲುಪಿಸಿದ್ದರು. ಕೆಲ ದಿನಗಳ ಬಳಿಕ ಆ ಚಿನ್ನವನ್ನು ರೆಡ್ಡಿ ಅವರ ಆಪ್ತ ಸಹಾಯಕ ಆಲಿಖಾನ್‌ ತೆಗೆದುಕೊಂಡು ಹೋಗಿದ್ದಾಗಿ ಕೊಠಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಈ ಚಿನ್ನಕ್ಕಾಗಿ ಸ್ಪಷ್ಟತೆಗೆ ಆಲಿಖಾನ್‌ ವಿಚಾರಣೆ ಬಳಿಕ ಮಾಹಿತಿ ಸಿಗಲಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಚಿನ್ನದ ಗಟ್ಟಿಬೆನ್ನು ಹತ್ತಿರುವ ಸಿಸಿಬಿ ಅಧಿಕಾರಿಗಳಿಗೆ, ಚಿನ್ನವವು ಮೂಲರೂಪದಲ್ಲೇ ಸಿಕ್ಕರೆ ಚುನಾವಣೆಯಲ್ಲಿ ಬಳಕೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲದಿದ್ದರೆ ಚುನಾವಣೆಯಲ್ಲಿ ಬಳಕೆ ಮಾಡಿಕೊಂಡಿರಬಹುದು ಎಂಬ ಅನುಮಾನವೇ ಗಟ್ಟಿಯಾಗುವ ಸಾಧ್ಯತೆಯಿದೆ.

click me!