ಇಂಡಿಯಾ ಗೇಟ್: ಸಿದ್ದು ಸಿಎಂ ಆಗಿರುವಾಗ ನಾನೇಕೆ ಅಧ್ಯಕ್ಷನಾಗ್ಲಿ?

By Suvarna Web DeskFirst Published May 16, 2017, 6:36 AM IST
Highlights

ಏನ್ಮಾಡೋದು, ಶರದ್‌ ಪವಾರ್‌ 50 ವರ್ಷದಿಂದ ಗೆಲ್ಲುತ್ತಿದ್ದರೂ ಪ್ರಧಾನಿಯಾಗಲಿಲ್ಲ. ನಾನು 45 ವರ್ಷದಿಂದ ಗೆಲ್ಲುತ್ತಿದ್ದರೂ ಸಿಎಂ ಆಗಲಿಲ್ಲ. ನೀವು ಶಾಸಕನೇ ಆಗದೆ ಸಿಎಂ ಆದಿರಿ. ಮೊದಲ ಸಲ ಸಂಸತ್ತಿಗೆ ಆಯ್ಕೆಯಾಗಿ ಪ್ರಧಾನಿಯೇ ಆದಿರಿ. ಸಬ್‌ ನಸೀಬ್‌ ಮೇ ರೆಹೆನಾ ಸಾಹಬ್‌!

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ದಿಲ್ಲಿ ಬಿಡಲು ಖರ್ಗೆ ಅರೆ ಮನಸ್ಸು
ಇನ್ನೇನು ಡಿ.ಕೆ.ಶಿವಕುಮಾರ್‌ ಅಥವಾ ಎಂ.ಬಿ.ಪಾಟೀಲ್‌ ಇಬ್ಬರಲ್ಲಿ ಒಬ್ಬರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಸ್ಥಿತಿ ಏಕ್‌'ದಂ ಬದಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ದೆಹಲಿಯಲ್ಲಿ ಓಡಾಡುತ್ತಿದ್ದಂತೆ ಲೆಕ್ಕಾಚಾರಗಳೆಲ್ಲಾ ತಿರುವುಮುರುವಾದವು. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮತ್ತು ಟೀಮ್‌ ಬೆಂಗಳೂರಿ​ನಿಂದ ವಾಪಸ್ಸಾದ ನಂತರ ಇನ್ನಷ್ಟು ಕನ್'ಫ್ಯೂಸ್ ಆದಂತೆ ಕಂಡು​ಬರು​ತ್ತಿ​ದ್ದು, ಎರಡು ಬಾರಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದರೂ ಕೂಡ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಸ್ಪಷ್ಟ​ವಾಗುತ್ತಿಲ್ಲ. ಖರ್ಗೆ ಅವರ ಹೆಸರು ಕಳೆದ ಒಂದು ವಾರದಿಂದ ಕೇಳಿ ಬರುತ್ತಿದೆಯಾದರೂ ಖರ್ಗೆ ಸಾಹೇಬರಿಗೆ ದೆಹಲಿ ರಾಜಕಾರಣದಿಂದ ಬೆಂಗಳೂರಿಗೆ ಹೋಗಲು ಇಷ್ಟವಿದ್ದಂತಿಲ್ಲ. ಆದರೆ ಖರ್ಗೆ ಅವರನ್ನು ರಾಜ್ಯದಲ್ಲಿ ನಿರ್ಣಯ ಪ್ರಕ್ರಿಯೆಯಲ್ಲಿ ಶಾಮೀಲು ಮಾಡಲು ರಾಹುಲ್‌ ಗಾಂಧಿ ಯೋಚಿಸುತ್ತಿದ್ದು, ಹೇಗೆ ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಒಂದು ವೇಳೆ ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಕಮಲನಾಥ್‌ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕನ ಸ್ಥಾನ ಕೊಡುವುದು ಫೈನಲ್‌ ಆದರೆ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ​ರನ್ನಾಗಿ ಮಾಡುವುದು ಅನಿವಾರ್ಯವಾಗಬಹುದು ಎನ್ನ​ಲಾ​ಗು​ತ್ತಿದೆ. ಆದರೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿ ಕೂರಿಸಿ​ರು​ವಾಗ ನಾನೇಕೆ ಈಗ ಪಕ್ಷದ ಜವಾಬ್ದಾರಿ ಹೊರಲಿ ಎಂದು ಹೈಕಮಾಂಡ್‌'ನ ಕೆಲ ನಾಯಕರ ಪ್ರಸ್ತಾವನೆಗೆ ಖರ್ಗೆ ಅಸಮ್ಮತಿ ಸೂಚಿಸಿ​ದ್ದಾರಂತೆ. ದೆಹಲಿಯಲ್ಲಿ ಪತ್ರಕರ್ತರು ಎಷ್ಟೇ ಕೇಳಿದರೂ ಕೂಡ ತಾನು ಅಧ್ಯಕ್ಷನಾಗುವ ಬಗ್ಗೆ ಮಾತನಾಡದ ಖರ್ಗೆ, ಪಕ್ಷ ಏನೇ ಹೇಳಿದರೂ 45 ವರ್ಷದಿಂದ ಕೇಳುತ್ತ ಬಂದಿದ್ದೇನೆ ಎಂದು ಮಾತ್ರ ಹೇಳು​ತ್ತಾರೆ. ಆದರೆ ಖರ್ಗೆ ಆಪ್ತರು ಮಾತ್ರ ‘ಲೋಕಸಭೆಯಲ್ಲಿ ಜೂನಿ​ಯರ್‌ ಆಗಿರುವ ವೇಣುಗೋಪಾಲ್‌ ಉಸ್ತುವಾರಿ​ಯಾಗಿ​ರುವಾಗ, ಬೇರೆ ಪಕ್ಷದಿಂದ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುತ್ತಿರುವಾಗ ಸಾಹೇಬರು ಅಧ್ಯಕ್ಷರಾಗಿ ಚಾಕರಿ ಏಕೆ ಮಾಡಬೇಕು' ಎಂದು ಪ್ರಶ್ನಿಸುತ್ತಾರೆ. 

ಅಯ್ಯೋ ಪಾಪ ಈಶ್ವರಪ್ಪ:
ಈಶ್ವರಪ್ಪ ಆರಂಭಿಸಿದ್ದ ಭಿನ್ನಮತ ಠುಸ್‌ ಅಂದಿದ್ದು, ಮೊದಲಿಗೆ ಸ್ವಲ್ಪ ಅನುಕಂಪ ತೋರಿಸುತ್ತಿದ್ದ ದೆಹಲಿಯ ಬಿಜೆಪಿ ನಾಯಕರು ಈಗ ಈಶ್ವರಪ್ಪ ಮೇಲೆಯೇ ಸಂಪೂರ್ಣ ಬೇಸರಗೊಂಡಿದ್ದಾರೆ. ಟೀವಿ ಕ್ಯಾಮೆರಾಗಳ ಎದುರು ಈಶ್ವರಪ್ಪ ಬೆಂಗಳೂರಿನಲ್ಲಿ ಭಿನ್ನರ ಸಭೆ ನಡೆಸಿದ್ದುದು ಸ್ವತಃ ಅಮಿತ್‌ ಶಾ ಅವರನ್ನು ಕೆರಳಿಸಿತ್ತಂತೆ. ಒಂದು ವೇಳೆ ಈಶ್ವರಪ್ಪ ಬಿಜೆಪಿ ಕಾರ್ಯಕಾರಿಣಿಗೆ ಬರದಿದ್ದಲ್ಲಿ ಶಿಸ್ತುಕ್ರಮ ತೆಗೆದು​ಕೊಳ್ಳಿ ಎಂದು ಶಾ ಹೇಳಿಬಿಟ್ಟಿದ್ದರಂತೆ. ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ಸ್ವಲ್ಪ ಮಧ್ಯಪ್ರವೇಶ ಮಾಡಿದ್ದರಿಂದ ಈಶ್ವರಪ್ಪ ಬಚಾ​ವಾಗಿದ್ದಾರೆ. ಆದರೆ ಎಷ್ಟೇ ಕೇಳಿಕೊಂಡರೂ ಕೂಡ ಯಾವುದೇ ಕಾರಣಕ್ಕೂ ಕೂಡ ಈಶ್ವರಪ್ಪನವರನ್ನು ದೆಹಲಿಗೆ ಕರೆಸಿ ಮಾತನಾಡುವ ಮನಸ್ಥಿತಿಯಲ್ಲಿ ಅಮಿತ್‌ ಶಾ ಇರುವಂತೆ ಕಾಣುತ್ತಿಲ್ಲ. ಪದಾಧಿಕಾರಿಗಳ ಬೇಡಿಕೆ ಹೋಗಲಿ, ಶಿವಮೊಗ್ಗದ ಟಿಕೆಟ್‌ ಬಗ್ಗೆಯೂ ಈಗಲೇ ಯಾವು​ದೇ ಭರವಸೆ ಕೊಡಲು ದೆಹಲಿ ನಾಯಕರು ತಯಾರಿಲ್ಲ. ಹೀಗಿ​ರು​ವಾಗ ಈಶ್ವರಪ್ಪರನ್ನು ಅಯ್ಯೋ ಪಾಪ ಎನ್ನದೆ ಬೇರೆ ಗತಿಯಿಲ್ಲ. 

ಡ್ರೈವರ್‌ ಹೇಳಿದ ರಹಸ್ಯ:
ದೆಹಲಿಯ ಕೇಜ್ರಿವಾಲ್‌ ಸಂಪುಟದಲ್ಲಿ ಸಚಿವರಾಗಿದ್ದ ಕಪಿಲ್‌ ಮಿಶ್ರಾರನ್ನು ಏಕಾಏಕಿ ಮಂತ್ರಿ ಸ್ಥಾನದಿಂದ ತೆಗೆಯಲು ಮುಖ್ಯ ಕಾರಣ ಬಂಡಾಯದ ಹೆದರಿಕೆಯಂತೆ. ಕಥೆ ಏನಪ್ಪಾ ಅಂದರೆ, ಕಪಿಲ್‌ ಮಿಶ್ರಾ ಅವರ ಡ್ರೈವರ್‌ ಮತ್ತು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಡ್ರೈವರ್‌ ಇಬ್ಬರೂ ರಾತ್ರಿಯ ತೀರ್ಥ ಮಿತ್ರರಂತೆ. ಮಹಾನಗರ ಪಾಲಿಕೆ ಚುನಾವಣೆ ಸೋತ ನಂತರ ದಿನವೂ ಕಪಿಲ್‌ ಮಿಶ್ರಾ ಡ್ರೈವರ್‌ ‘ನೋಡ್ತಾ ಇರು, ಇನ್ನು ಒಂದು ತಿಂಗಳಲ್ಲಿ ನಮ್ಮ ಬಾಸ್‌ ಸಿಎಂ ಆಗ್ತಾರೆ' ಎಂದು ಹೇಳುತ್ತಿದ್ದನಂತೆ. ಇದನ್ನು ಸಿಸೋಡಿಯಾ ಡ್ರೈವರ್‌ ಬಂದು ಅರವಿಂದ್‌ ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಮುಂದೆ ಹೇಳಿದಾಗ ‘ಅವನ ಮೇಲೆ ಕಣ್ಣಿಟ್ಟಿರು' ಎಂದು ಹೇಳಿ ಕಪಿಲ್‌ ಮಿಶ್ರಾ ಚಲನವಲನಗಳ ಮೇಲೆ ನಿಗಾ ಇಡಲು ಖಾಸಗಿ ಏಜೆನ್ಸಿ ಒಂದಕ್ಕೆ ಹೇಳಲಾಯಿತಂತೆ. ಕಪಿಲ್‌ ಮಿಶ್ರಾ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಆಪ್‌ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಗೊತ್ತಾದ ತಕ್ಷಣವೇ ಅವರನ್ನು ಸಂಪುಟದಿಂದ ಹೊರ ಹಾಕಲಾಯಿತಂತೆ. ಒಂದು ವೇಳೆ ಒಂದು ವಾರ ತಡವಾಗಿದ್ದರೂ ಕೂಡ ಕೇಜ್ರಿ ಸರ್ಕಾರ ಉಳಿಯುತ್ತಿರಲಿಲ್ಲ ಎನ್ನುತ್ತಾರೆ ಕೇಜ್ರಿವಾಲ್‌ ಆಪ್ತರು. 

ಮಹಾರಾಣಿಯ ಗತ್ತು! 
ಕಳೆದ ಮೂರು ವರ್ಷಗಳಲ್ಲಿ ಬಹುತೇಕ ದೇಶದ ಎಲ್ಲ ರಾಜ್ಯ ಘಟಕಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಹೇಳಿದಂತೆ ಕೇಳುತ್ತಿವೆ. ಆದರೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಮಾತ್ರ ಇಲ್ಲಿಯವರೆಗೆ ದೆಹಲಿಯಿಂದ ಯಾವುದೇ ಆರ್ಡರ್‌ ತೆಗೆದುಕೊಳ್ಳಲು ಸ್ಪಷ್ಟವಾಗಿ ನೋ ಎನ್ನುತ್ತಾರಂತೆ. ಆದರೆ ಮುಂದಿನ ವರ್ಷ ಚುನಾವಣೆ ಇರುವಾಗ ರಾಜಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಲು ಮೋದಿ ಮತ್ತು ಶಾರಿಗೆ ಇಷ್ಟವಿಲ್ಲವಂತೆ. ಸಂಪುಟ ವಿಸ್ತರಣೆ ಇರಲಿ, ಇತರೆ ವಿಷಯವಿರಲಿ, ವಸುಂಧರಾ ಸೌಜನ್ಯಕ್ಕೂ ಅಮಿತ್‌ ಶಾ ಜೊತೆ ಮಾತನಾಡೋಲ್ಲವಂತೆ. ಮಹಾರಾಣಿ ಅಷ್ಟಕ್ಕೇ ಸುಮ್ಮನಿಲ್ಲ. ಸ್ಥಳೀಯ ಆರ್‌ಎಸ್‌ಎಸ್‌ ನಾಯಕರನ್ನೂ ಕ್ಯಾರೇ ಅನ್ನೋದಿಲ್ಲ. ಒಬ್ಬ ಹಿರಿಯ ಆರ್‌ಎಸ್‌ಎಸ್‌ ಪ್ರಚಾರಕರು ವಸುಂಧರಾಗೆ ಬುದ್ಧಿ ಹೇಳಲು ಹೋದಾಗ ‘ನಾನು ಮಹಾರಾಣಿ, ರಾಜವಂಶಸ್ಥೆ, ಆಡಳಿತ ಹೇಗೆ ನಡೆಸಬೇಕು ಎಂಬುದು ನನಗೆ ರಕ್ತಗತವಾಗಿ ಬಂದಿದೆ' ಎಂದು ಹೇಳಿದರಂತೆ. 

ಕುರ್ಚಿ ಸಿಗದ ನೋವು:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಶರದ್‌ ಪವಾರ್‌, ಮಲ್ಲಿಕಾರ್ಜುನ ಖರ್ಗೆ, ಅನಂತ್‌ ಕುಮಾರ್‌ ಎಲ್ಲರೂ ಒಟ್ಟಿಗೆ ಕುಳಿತುಕೊಂಡಾಗ ಮೋದಿ ಅವರು ‘ಶರದ್‌ ಪವಾರ್‌ 50 ವರ್ಷ ಶಾಸಕರಾಗಿ, ಸಂಸದರಾಗಿ ಅವ್ಯಾಹತವಾಗಿ ಆಯ್ಕೆಯಾಗಿದ್ದು ಸಾಧನೆ' ಎಂದರಂತೆ. ಆಗ ಪಕ್ಕದಲ್ಲಿಯೇ ಕುಳಿತಿದ್ದ ಅನಂತ್‌ ಕುಮಾರ್‌ ‘ಖರ್ಗೆ ಸಾಹೇಬರು ಕೂಡ 1972ರಿಂದ ಸತತವಾಗಿ 11 ಚುನಾವಣೆಯಲ್ಲಿ ಗೆದ್ದಿದ್ದಾರೆ' ಎಂದರಂತೆ. ಆಗ ಮೋದಿ ‘ಬಹುತ್‌ ಬಡಿಯಾ ಹೈ ಖರ್ಗೆ ಜಿ' ಎಂದರಂತೆ. ಅಲ್ಲಿಯವರೆಗೆ ಸುಮ್ಮನಿದ್ದ ಮಲ್ಲಿಕಾರ್ಜುನ ಖರ್ಗೆ ‘ಏನು ಮಾಡೋದು ಪ್ರಧಾನ ಮಂತ್ರಿಗಳೇ, ಶರದ್‌ ಪವಾರ್‌ 50 ವರ್ಷದಿಂದ ಸತತವಾಗಿ ಆರಿಸಿ ಬಂದರೂ ಪ್ರಧಾನಿಯಾಗಲಿಲ್ಲ. ನಾನು 45 ವರ್ಷಗಳಿಂದ ಎಲ್ಲ ಚುನಾವಣೆ ಗೆದ್ದಿದ್ದರೂ ಮುಖ್ಯಮಂತ್ರಿಯಾಗಲಿಲ್ಲ. ನೀವು ನೋಡಿ, ಒಮ್ಮೆಯೂ ಶಾಸಕನಾಗಿ ಆಯ್ಕೆಯಾಗದಿದ್ದರೂ ನೇರವಾಗಿ ಮುಖ್ಯಮಂತ್ರಿ ಆದಿರಿ. ಮೊದಲ ಬಾರಿ ಲೋಕಸಭೆ ಪ್ರವೇಶಿಸಿದಾಗಲೇ ಪ್ರಧಾನಿಯಾದಿರಿ. ಸಬ್‌ ನಸೀಬ್‌ ಮೇ ರೆಹೆನಾ ಸಾಹಬ್‌' ಎಂದು ನೋವಿನಲ್ಲಿಯೇ ನಗೆ ಚಟಾಕಿ ಹಾರಿಸಿದರಂತೆ. 

ಬಿಲಿಯನ್‌ ಮೈಂಡ್ಸ್‌:
ಕರ್ನಾಟಕದಲ್ಲಿ ಉಪಚುನಾವಣೆಗಳನ್ನು ಸೋತ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಗೆ ಚುನಾವಣಾ ರಣತಂತ್ರ ಹೆಣೆ​ಯಲು ಸರ್ವೆ ನಡೆಸಿ ಸಹಾಯ ಮಾಡುವ ಬಿಲಿಯನ್‌ ಮೈಂಡ್ಸ್‌ ಸಂಸ್ಥೆಗೆ ಕರ್ನಾಟಕದ ಸಂಪೂರ್ಣ ರಾಜಕೀಯ ಚಿತ್ರಣದ ಬಗ್ಗೆ ಪ್ರೆಸೆಂಟೇಷನ್‌ ಕೊಡುವಂತೆ ಸೂಚಿಸಲಾಗಿದೆ. ಈಗಾಗಲೇ ದೆಹಲಿ​ಯಿಂದ ಬಿಲಿಯನ್‌ ಮೈಂಡ್ಸ್‌ ತಂಡ ಕರ್ನಾಟಕದಲ್ಲಿ ಓಡಾಡುತ್ತಿದೆ. ಪ್ರತಿ ಕ್ಷೇತ್ರದ ಜಾತಿ ಸಮೀಕರಣ, ನಾಯಕರ ಜನಪ್ರಿಯತೆ, ವಿರೋಧಿ​ಗಳ ಪಾಸಿಟಿವ್‌ ಅಂಶಗಳ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹಣೆ ಆರಂಭವಾಗಿದೆಯಂತೆ. ಬಹುತೇಕ ಜುಲೈನಲ್ಲಿ ಶಾ ಕರ್ನಾಟಕದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಪ್ರೆಸೆಂಟೇಷನ್‌ ತೆಗೆದುಕೊಳ್ಳಲಿದ್ದಾರೆ. 

ವಘೇಲಾ ಬಿಜೆಪಿಗೆ?
ಗುಜರಾತ್‌ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಹೊರಟಿರುವ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಗುಜರಾತ್‌ ಕಾಂಗ್ರೆಸ್‌ನ ಹಿರಿಯ ನಾಯಕ ಶಂಕರ ಸಿಂಗ್‌ ವಘೇಲಾರನ್ನು ಬಿಜೆಪಿಗೆ ಮರಳಿ ಕರೆ ತರಲು ಹರಸಾಹಸ ಪಡುತ್ತಿದ್ದು, ಸ್ವತಃ ಮೋದಿಯೇ ವಘೇಲಾ ಜೊತೆಗೆ ಮಾತನಾಡಿದ್ದಾರಂತೆ. ಶಂಕರ ಸಿಂಗ್‌ ವಘೇಲಾ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದರೆ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಕೇಕ್‌ ವಾಕ್‌ ಆಗಬಹುದು ಎಂದು ಹೇಳಲಾಗುತ್ತಿದ್ದು, ಸ್ವಲ್ಪ ಪ್ರತಿರೋಧ ಒಡ್ಡಬಹುದಾಗಿದ್ದ ಆಮ್‌ ಆದ್ಮಿ ಪಕ್ಷ ಕೂಡ ದೆಹಲಿಯ ಸಮಸ್ಯೆಗಳಲ್ಲಿಯೇ ಮುಳುಗಿಹೋಗಿದೆ. ಸಾಮ, ದಾನ, ದಂಡ, ಭೇದ ತಂತ್ರಗಳನ್ನು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಅಕ್ಷರಶಃ ಕರಗತ ಮಾಡಿಕೊಂಡಂತಿದೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

click me!