ಚಂಡಮಾರುತ ದುರಂತವನ್ನು ಒಡಿಶಾ ದುರ್ಬಲಗೊಳಿಸಿದ್ಹೇಗೆ?

By Web DeskFirst Published Oct 13, 2018, 10:38 AM IST
Highlights

ಪದೇಪದೇ ಚಂಡಮಾರುತ ಎದುರಿಸುವ ರಾಜ್ಯಗಳಲ್ಲಿ ಒಡಿಶಾ ಯಾವಾಗಲೂ ಮುಂದು. 1999ರಲ್ಲಿ ಈ ರಾಜ್ಯಕ್ಕೆ ಅಪ್ಪಳಿಸಿದ್ದ ಚಂಡಮಾರುತವೊಂದು ಬರೋಬ್ಬರಿ 10 ಸಾವಿರ ಮಂದಿಯ ಪ್ರಾಣ ತೆಗೆದಿತ್ತು. ಅದೆಲ್ಲಾ ಈಗ ಇತಿಹಾಸ. ಮೊನ್ನೆಯಷ್ಟೇ ‘ತಿತಿಲಿ’ ಎಂಬ ಪ್ರಬಲ ಚಂಡಮಾರುತ ಒಡಿಶಾ ಕರಾವಳಿಗೆ ಶರವೇಗದಲ್ಲಿ ಬಂದು ಅಪ್ಪಳಿಸಿದ್ದರೂ ಘೋರ ಎನ್ನುವಂತಹ ಹಾನಿ ಏನೂ ಆಗಿಲ್ಲ. ಈ ಬದಲಾವಣೆ ಆಗಿದ್ದು ಹೇಗೆ? ಚಂಡಮಾರುತ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಕಲೆಯನ್ನು ಸಿದ್ಧಿಸಿಕೊಂಡಿದ್ದು ಹೇಗೆ ಎಂಬ ವಿವರ ಇಲ್ಲಿದೆ.

ಬೆಂಗಳೂರು(ಅ.13):  ಅದು 1999ರ ಅಕ್ಟೋಬರ್‌ 29-30ನೇ ತಾರೀಕು. ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಿದ ಚಂಡ ಮಾರುತದ ಹೊಡೆತ ಅಸಾಮಾನ್ಯವಾದದ್ದು. ಗಂಟೆಗೆ 281 ಕಿ.ಮೀ. ವೇಗದ ಗಾಳಿಯೊಂದಿಗೆ ನುಗ್ಗಿ ಬಂದ ‘ಸೂಪರ್‌ ಸೈಕ್ಲೋನ್‌’ ಎಂಬ ಚಂಡಮಾರುತ 48 ತಾಸು ಧಾರಾಕಾರ ಮಳೆ ಸುರಿಸಿತ್ತು. ಅದರ ಆರ್ಭಟಕ್ಕೆ ಬರೋಬ್ಬರಿ 10 ಸಾವಿರ ಜನರು ಮೃತಪಟ್ಟಿದ್ದರು. ಕೋಟ್ಯಂತರ ಜನ ಮನೆ ಕಳೆದುಕೊಂಡು ಬೀದಿಗೆ ಬಿದ್ದರು. ಬೆಳೆಗಳು ಸಂಪೂರ್ಣ ನಾಶವಾದವು. ವಿಶ್ವ ಸಮುದಾಯದ ಒಡಿಶಾಕ್ಕೆ ನೆರವಿನ ಹಸ್ತ ಚಾಚಿತು. ಅಂದೇ ಒಡಿಶಾ ಪಾಠ ಕಲಿಯಿತು. ಭವಿಷ್ಯದಲ್ಲಿ ಇಂತಹ ಚಂಡಮಾರುತ ಎದುರಿಸಲು ತಯಾರಿ ಮಾಡಲು ಆರಂಭಿಸಿತು.

ಆಗಿನ ದುಸ್ಥಿತಿಗೆ ಕಾರಣ ಏನು?
1999ರಲ್ಲಿ ಭಾರತೀಯ ಹವಾಮಾನ ಇಲಾಖೆ ಹೆಚ್ಚು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ, ದೇಶದ ರಾಜಧಾನಿ ದೆಹಲಿಯಿಂದ ಮಾಹಿತಿ ಹವಾಮಾನ ಮುನ್ಸೂಚನೆ ಪಡೆಯಬೇಕಿತ್ತು. ಸರ್ಕಾರಿ ಇಲಾಖೆಗಳ ನಡುವೆ ಸರಿಯಾದ ಸಂವಹನ ವ್ಯವಸ್ಥೆ ಇರಲಿಲ್ಲ. 

 ಸರ್ಕಾರೇತರ ಸಂಸ್ಥೆಗಳೂ ಕೂಡ ಎಲ್ಲದಕ್ಕೂ ಸರ್ಕಾರದ ಅಣತಿಗಾಗಿ ಕಾಯಬೇಕಾದ ಸ್ಥಿತಿ ಇತ್ತು. ಇದರ ಒಟ್ಟಾರೆ ಪರಿಣಾಮ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಸೂಕ್ತ ಕಾಲದಲ್ಲಿ ಚಂಡ ಮಾರುತದ ಮಾಹಿತಿ ಲಭ್ಯವಾಗದೇ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದು ಕಷ್ಟವಾಗುತ್ತಿತ್ತು. ಸೈಕ್ಲೋನ್‌ಗೆ ಜನರು ಬಲಿಯಾಗುವುದು ಸಾಮಾನ್ಯ ಎನ್ನುವಂತಾಗಿತ್ತು.

ಈಗ ಏಕೆ ಒಡಿಶಾದಲ್ಲಿ ಹಾನಿ ಆಗುತ್ತಿಲ್ಲ?
1999ರ ನಂತರ ಒಡಿಶಾ ಸರ್ಕಾರ ವಿಶ್ವವೇ ಮೆಚ್ಚುವ ರೀತಿ ಚಂಡ ಮಾರುತವನ್ನು ಎದುರಿಸಲು ಸಿದ್ಧತೆ ನಡೆಸಿತು. ಒಡಿಶಾ ಸರ್ಕಾರ ಹೊಸದಾಗಿ ವಿಪತ್ತು ನಿರ್ವಹಣಾ ವ್ಯವಸ್ಥೆಯೊಂದನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸಿತು. ಅದಕ್ಕಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಹವಾಮಾನ ಇಲಾಖೆ ಮತ್ತು ತೊಂದರೆಗೆ ಒಳಗಾಗುವ ಜನರ ನಡುವೆ ಸಂವಹನವನ್ನು ಉತ್ತಮ ಪಡಿಸಿತು. 

ಈ ನಡುವೆ ಹವಾಮಾನ ಇಲಾಖೆ ಫ್ರಾನ್ಸ್‌ ದೇಶದ ಅಂತಾರಾಷ್ಟ್ರೀಯ ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯ ಹೊಂದಿದ ಕಂಪ್ಯೂಟರ್‌, ಉಪಗ್ರಹಗಳ ಸಹಾಯದಿಂದ ವಾತಾವರಣ ಬದಲಾವಣೆಯನ್ನು ಅರಿಯುವ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿತು. ಈ ನಡುವೆ ಕೇಂದ್ರ ಸರ್ಕಾರ ಮೊದಲ ವಿಪತ್ತು ನಿರ್ವಹಣೆ ಕಾಯ್ದೆಯನ್ನು ಜಾರಿಗೆ ತಂದಿತು. ಅಷ್ಟೇ ಅಲ್ಲದೇ ಭಾರತೀಯ ಹವಾಮಾನ ಇಲಾಖೆ, ಭೂ ವಿಜ್ಞಾನ ವೀಕ್ಷಣೆ, ಇಸ್ರೋ, ಕೇಂದ್ರ ಜಲ ಸಂಪನ್ಮೂಲ ಆಯೋಗ, ಸರ್ವೇ ಇಲಾಖೆ, ರಾಷ್ಟ್ರೀಯ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ ಒಳಗೊಂಡಂತೆ ಮಾಹಿತಿ ರವಾನೆಯಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ಬಲಪಡಿಸಿತು. 

ಈ ಎಲ್ಲ ವ್ಯವಸ್ಥೆಗಳ ದಕ್ಷತೆಯ ಕೆಲಸ ಚಂಡಮಾರುತದ ದುರಂತ ತಡೆಯಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿತು. ಚಂಡ ಮಾರುತದಿಂದ ತೊಂದರೆಗೆ ಒಳಗಾಗುವ ಜನರಿಗೆ ಮಾಧ್ಯಮದ ಮೂಲಕ ಮಾಹಿತಿ ರವಾನೆಯಾಯಿತು. ಮಾಹಿತಿ ಮತ್ತು ಸಂವಹನವನ್ನು ಮಾಧ್ಯಮಗಳು, ಮೊಬೈಲ್‌, ಹಾಟ್‌ಲೈನ್‌ ಮತ್ತು ವಿಸ್ಯಾಟ್‌ಗಳ ಮೂಲಕ ನಿರ್ವಹಣೆ ಮಾಡಲಾಯಿತು. ಮಾಹಿತಿ ಪಡೆದ ಜನರು ತಕ್ಷಣವೇ 15 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು. ಇದು ಅತೀ ದೊಡ್ಡ ಮಟ್ಟದಲ್ಲಿ ನಡೆದ ಕಾರ‍್ಯಚಾರಣೆ. ಇದರಿಂದ ಸಾವಿರಾರು ಜನರ ಜೀವ ಉಳಿಯಿತು. ಅಲ್ಲದೇ ತೊಂದರೆ ಸಿಲುಕುವುದನ್ನು ತಪ್ಪಿಸಿತು. ಅಲ್ಲಿಂದ ಹಲವು ಚಂಡಮಾರುತಗಳು ಅಪ್ಪಳಿಸಿದ್ದರೂ ಅವೆಲ್ಲವನ್ನೂ ಸಮರ್ಥವಾಗಿ ಎದುರಿಸುವಲ್ಲಿ ಒಡಿಶಾ ಶಕ್ತವಾಯಿತು.

ನಾಲ್ಕಂಕಿಯಿಂದ 2 ಅಂಕಿಗಿಳಿದ ಸಾವಿನ ಪ್ರಮಾಣ:
ಸೂಪರ ಸೈಕ್ಲೋನ್‌ ಆರ್ಭಟದಿಂದ ಪಾಠ ಕಲಿತಿದ್ದ ಒಡಿಶಾದಲ್ಲಿ ಮತ್ತೆ 2013ರ ಅ.12ರಲ್ಲಿ ಚಂಡ ಮಾರುತ (ಸೈಕ್ಲೋನ್‌ ಫೈಲಿನ್‌) ಅಪ್ಪಳಿಸಿತು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ, 24 ಗಂಟೆ ಸುರಿದ ಮಳೆಗೆ ಬಲಿಯಾದವರು ಕೇವಲ 45 ಮಂದಿ ಮಾತ್ರ. (44 ಒಡಿಶಾ, 1 ಆಂಧ್ರ ಪ್ರದೇಶದಲ್ಲಿ ಸಾವು) 5 ಅಡಿ ಎತ್ತರಕ್ಕೆ ಎದ್ದ ಸಮುದ್ರದ ಅಲೆಗಳು ಎದ್ದರೂ ಸಾವಿನ ಸಂಖ್ಯೆ ಮಾತ್ರ ಅಗಾಧವಾಗಿರಲಿಲ್ಲ. ಅನಂತರದಲ್ಲಿ ಮತ್ತೊಂದು ಚಂಡ ಮಾರುತ ಹುಡ್‌ಹುಡ್‌ಗೆ ಬಲಿಯಾದವರ ಸಂಖ್ಯೆ ಕೇವಲ 38 ಮಂದಿ ಮಾತ್ರ. ಸದ್ಯ ತಿತಲಿ ಚಂಡಮಾರುತ ಅಪ್ಪಳಿಸಿದೆ. ಅದರಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಒಡಿಶಾದ ಮುನ್ನೆಚ್ಚರಿಕಾ ಕ್ರಮದಿಂದ ಕ್ರಮೇಣ ನೈಸರ್ಗಿಕ ವಿಕೋಪಕ್ಕೆ ಬಲಿಯಾಗುವವರ ಸಂಖ್ಯೆ ನಾಲ್ಕಂಕಿಯಿಂದ ಎರಡಂಕಿಗೆ ಇಳಿಯುತ್ತಿದೆ.

120 ಗಂಟೆಗಳ ಮೊದಲೇ ಒಡಿಶಾಗೆ ಸೈಕ್ಲೋನ್‌ ಅಲರ್ಟ್‌:
ಒಡಿಶಾ ಹವಾಮಾನ ಮುನ್ಸೂಚನೆಗೆ ಮೊದಲ ಆದ್ಯತೆ ನೀಡಿ ರಾಜ್ಯಾದ್ಯಂತ ಹವಾಮಾನ ಮುನ್ಸೂಚನಾ ಡೊಪ್ಲರ್‌ ರೆಡಾರ್‌ ಜಾಲ ರಚಿಸಲು ಚಿಂತಿಸಿದೆ. ಅವುಗಳಲ್ಲಿ ಹಲವು ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಮೀನುಗಾರರಿಗೆ ಒಂದು ವಾರ ಮೊದಲೇ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ 120 ಗಂಟೆಗಳ ಮೊದಲೇ ಒಡಿಶಾ ಸೈಕ್ಲೋನ್‌ ಅಪ್ಪಳಿಸುವ ಮಾಹಿತಿ ಲಭ್ಯವಾಗುತ್ತದೆ. ಇತ್ತೀಚೆಗೆ ಒಡಿಶಾ ಅರ್ಲಿ ವಾರ್ನಿಂಗ್‌ ಡಿಸ್ಸೆಮಿನೇಶನ್‌ ಸಿಸ್ಟಮ್‌ (ಇಡಬ್ಲ್ಯೂಡಿಎಸ್‌)ಅನ್ನು ಅನುಷ್ಠಾನಗೊಳಿಸಿದೆ. ಇನ್ನು ಒಡಿಶಾ ವಿಪತ್ತು ನಿರ್ವಹಣಾ ಸಂಸ್ಥೆ ಕರಾವಳಿ ತೀರ ಪ್ರದೇಶದ ಸುಮಾರು 480 ಕಿ.ಮೀ ಪ್ರದೇಶದಲ್ಲಿ 122 ಟವರ್‌ಗಳ ಮುಖಾಂತರ ಸೈರನ್‌ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ.

ಬಹುಮುಖಿ ಗಂಜಿಕೇಂದ್ರಗಳು ಸದಾ ಸಿದ್ಧ:
ಒಡಿಶಾ ವಿಪತ್ತು ನಿರ್ವಹಣೆಯ ಮತ್ತೊಂದು ಗುಟ್ಟು ಎಂದರೆ ಸದಾ ಕಾಲ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಅಪಾಯವಿರುವ ಒಡಿಶಾ ರಾಜದಲ್ಲಿ ಸುಮಾರು 800 ಬಹುಮುಖಿ ಗಂಜಿ ಕೇಂದ್ರ(ಆಹಾರ ಕೇಂದ್ರ)ಗಳು ನಿರ್ಮಾಣಗೊಂಡಿವೆ. ಚಂಡಮಾರುತ ಅಪ್ಪಳಿಸುವ ಅಪಾಯಕಾರಿ ಪ್ರದೇಶಗಳ ಗ್ರಾಮಪಂಚಾಯಿತಿಗಳಲ್ಲಿ ಯಾವಾಗಲೂ ಆಹಾರ ಸಾಮಗ್ರಿಗಳನ್ನು ಸಂಗ್ರಹ ಮಾಡಿರುತ್ತಾರೆ. ಅಲ್ಲದೆ ಒಡಿಶಾದಲ್ಲಿ ಅಪಾಯಕಾರಿ ​ಪ್ರದೇಶಗಳಲ್ಲಿ ಸಕ್ರಿಯ ಸೈಕ್ಲೋನ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ಗಳಿವೆ. ಗ್ರಾಮಪಂಚಾಯಿತಿಗಳೇ ಇದರ ಮುಖ್ಯ ಕಾರ್ಯಾಲಯ. 

ಪ್ರತಿಯೊಂದು ಕೇಂದ್ರದಲ್ಲಿಯೂ ರಕ್ಷಣೆಗಾಗಿ ತರಬೇತಿ ಪಡೆದ ಯುವಪಡೆಗಳನ್ನು ನಿಯೋಜಿಸಲಾಗುತ್ತದೆ. ರಕ್ಷಣಾ ಸಾಮಗ್ರಿಗಳನ್ನು ಕೂಡ ವಿತರಿಸಲಾಗಿರುತ್ತದೆ. ಅದಕ್ಕಾಗಿಯೇ ಒಡಿಶಾ ಡಿಸಾಸ್ಟರ್‌ ರಾರ‍ಯಪಿಡ್‌ ಆ್ಯಕ್ಷನ್‌ ಗ್ರೂಪ್‌ನ 20 ಘಟಕಗಳನ್ನು ಸ್ಥಾಪಿಸಿದ್ದು, ಆ ಪಡೆಗಳು ಚಂಡಮಾರುತ, ಕಟ್ಟಡಗಳು ಬಿದ್ದಾಗ, ಪ್ರವಾಹ ಮುಂತಾದ ಸಂದರ್ಭಗಳನ್ನು ಎದುರಿಸುವ ತರಬೇತಿ ಪಡೆದಿರುತ್ತಾರೆ. ಸರ್ಕಾರ ಕೂಡ ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಹಾಗೂ ರಕ್ಷಣೆಗೆ ಸಕ್ರಿಯವಾಗಿ ಕೆಲಸ ಮಾಡುತ್ತದೆ.

ಒಡಿಶಾ ಮುನ್ನೆಚ್ಚರಿಕಾ ಕ್ರಮಕ್ಕೆ ವಿಶ್ವಸಂಸ್ಥೆಯಿಂದಲೇ ಶ್ಲಾಘನೆ:
1999ರಲ್ಲಿ ಅಪ್ಪಳಿಸಿದ ಸೂಪರ್‌ ಸೈಕ್ಲೋನ್‌ನಿಂದ ಆದ ಅನಾಹುತದ ಬಳಿಕ ಎಚ್ಚೆತ್ತ ಒಡಿಶಾ ವಿಪತ್ತಿಗೆ ಹೇಗೆ ಸನ್ನದ್ಧವಾಗಿರಬೇಕು ಎಂಬುದಕ್ಕೆ ವಿಶ್ವಕ್ಕೇ ಮಾದರಿಯಾಗಿದೆ. 1999ರ ಬಳಿಕ ಒಡಿಶಾಕ್ಕೆ 2011ರಲ್ಲಿ ಪೇಲನ್‌ ಚಂಡಮಾರುತ ಅಪ್ಪಳಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 15 ಲಕ್ಷ ಜನರುನ್ನು ಅಲ್ಲಿನ ಸರ್ಕಾರ ಸುರಕ್ಷಿತ ಸ್ಥಳಕ್ಕೆ ಸ್ಥಾಳಾಂತರಿಸಿ ದೊಡ್ಡ ಅನಾಹುತವನ್ನು ತಪ್ಪಿಸಿತ್ತು. ಅಲ್ಲದೆ ಅಪಾಯಕಾರಿ ಪ್ರದೇಶಗಳಲ್ಲಿ ಒಡಿಶಾ ಸರ್ಕಾರ ಮಣ್ಣಿನ ಮನೆಗಳ ಬದಲಿಗೆ ಕಾಂಕ್ರಿಟ್‌ ಮನೆಗಳನ್ನು ಕಟ್ಟಿಕೊಟ್ಟಿದೆ. ಬಹು ಉಪಯೋಗಿ ಸೈಕ್ಲೋನ್‌ ಶೆಲ್ಟ​ರ್‍ಸ್ ನಿರ್ಮಿಸಿದೆ. ಒಡಿಶಾದ ಚಂಡಮಾರುತ ಅಪ್ಪಳಿಸುವ ಜಿಲ್ಲೆಗಳಲ್ಲಿ ಉತ್ತಮ ರಸ್ತೆ, ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ತಕ್ಷಣವೇ ಸೈಕ್ಲೋನ್‌ ಶೆಲ್ಟರ್‌ಗಳಿಗೆ ಜನರು ತೆರಳುವುದು ಸುಲಭವಾಗುತ್ತದೆ. ಸರ್ಕಾರದ ಮುನ್ನೆಚ್ಚರಿಕಾ ಕ್ರಮ, ರಾಜ್ಯದ ಸಿವಿಲ್‌ ಸೊಸೈಟಿ ಗ್ರೂಪ್‌ಗಳು, ಸರ್ಕಾರೇತರ ಸಂಘಟನೆಗಳನ್ನು ವಿಶ್ವಸಂಸ್ಥೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳೇ ಶ್ಲಾಘಿಸಿವೆ.

ಆಂಧ್ರ, ಒಡಿಶಾ, ತಮಿಳುನಾಡಿನಲ್ಲಿ ಏಕೆ ಹೆಚ್ಚು ಚಂಡ ಮಾರುತ?
ಭಾರತ ದೇಶ ಪರಾರ‍ಯಯ ಪ್ರಸ್ಥಭೂಮಿಯಾಗಿದೆ. ಅಂದರೆ ದೇಶದ ಮೂರು ಭಾಗಗಳಲ್ಲಿ ನೀರು ಆವರಿಸಿದೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ದಕ್ಷಿಣ ತುದಿಯಲ್ಲಿ ಹಿಂದೂ ಮಹಾಸಾಗರವಿದೆ. ಆದರೂ ಪೂರ್ವ ಭಾಗದ (ಬಂಗಾಳ ಕೊಲ್ಲಿ) ವ್ಯಾಪ್ತಿಯ ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಹೆಚ್ಚು ಚಂಡ ಮಾರುತದ ಪ್ರಕ್ಷೋಭೆಗೆ ಒಳಗಾಗುತ್ತವೆ. ಇದಕ್ಕೆ ಕಾರಣ ಹೆಚ್ಚು ಉಷ್ಣಾಂಶ. ಹೌದು ಒಡಿಶಾ, ಆಂಧ್ರ, ತಮಿಳುನಾಡು ಬಂಗಾಳ ಕೊಲ್ಲಿ ವ್ಯಾಪ್ತಿಯಲ್ಲಿವೆ. ಒಂಗಾಳ ಕೊಲ್ಲಿಯಲ್ಲಿನ ಉಷ್ಣಾಂಶ ಅರಬ್ಬಿ ಸಮುದ್ರಕ್ಕಿಂತ ಹೆಚ್ಚಿರುತ್ತದೆ. ಈ ಉಷ್ಣಾಂಶವು ತೇವಾಂಶ ಉಳಿಸಿಕೊಳ್ಳಲು ಮತ್ತು ಸೈಕ್ಲೋನ್‌ ಸೃಷ್ಟಿಗೆ ಕಾರಣವಾಗುತ್ತದೆ. ಅಲ್ಲದೆ ದಕ್ಷಿಣ ಚೀನಾ ಸಮುದ್ರದಲ್ಲಿ ಏಳುವ ಟೈಫೂನ್‌ಗಳು ಬಂಗಾಳ ಕೊಲ್ಲಿ ಮೂಲಕ ಹಾದು ಹೋದಾಗಲೂ ಗಾಳಿಯ ತೇವಾಂಶದಲ್ಲಿ ಏರಿಳಿತಗಳಾಗಿ ಸೈಕ್ಲೋನ್‌ ಸೃಷ್ಟಿಯಾಗುತ್ತದೆ.

ಪ್ರಶಾಂತ್‌ ಕೆ.ಪಿ

click me!