
ಬೆಂಗಳೂರು(ಜು.16): ಭಾರತದಲ್ಲಿ ಹಿಂದಿಯೇತರ ರಾಜ್ಯಗಳ ಮೇಲೆ ನಡೆಯುತ್ತಿರುವ ‘ಹಿಂದಿ ಹೇರಿಕೆ’ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳ ಚಿಂತಕರು, ರಾಜಕಾರಣಿಗಳು, ಬುದ್ಧಿಜೀವಿಗಳು, ರಾಷ್ಟ್ರಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಲು ಕಂಕಣ ತೊಟ್ಟಿದ್ದಾರೆ. ಈ ಬಗ್ಗೆ ಶನಿವಾರ ನಡೆದ ಸಭೆಯಲ್ಲಿ ಹಿಂದಿ ಹೇರಿಕೆಯ ವಿರುದ್ಧದ ದೇಶದ ಇತರ ಭಾಷಿಕರ ಆಕ್ರೋಶವನ್ನು ದೆಹಲಿಯ ಪ್ರಭುತ್ವಕ್ಕೆ ಮುಟ್ಟಿಸಲು ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.
ಅಲ್ಲದೆ, ಈ ಹೋರಾಟಕ್ಕೆ ರೂಪರೇಷೆ ರೂಪಿಸಲು ಮುಂದಿನ ತಿಂಗಳು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೇಶದ ಹಿಂದಿಯೇತರ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖಂಡರು ಹಾಗೂ ಸಾಂಸ್ಕೃತಿಕ ಬಹುಭಾಷೆಗಳ ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದಿಗೆ ಮಾತ್ರ ನೀಡಿರುವ ವಿಶೇಷ ಸ್ಥಾನಮಾನ ಹಿಂಪಡೆದು, ಎಲ್ಲ ರಾಜ್ಯಗಳ ಭಾಷೆಗಳಿಗೂ ರಾಷ್ಟ್ರಭಾಷಾ ಸ್ಥಾನಮಾನ ನೀಡಬೇಕು. ಇದಕ್ಕಾಗಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು’ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಅಷ್ಟೇ ಅಲ್ಲ, ಹಿಂದಿ ಹೇರಿಕೆ ವಿರುದ್ಧದ ಹೋರಾಟ ಕೇವಲ ಆ ಒಂದು ವಿಷಯಕ್ಕೆ ಸೀಮಿತವಾಗದೆ, ರಾಜ್ಯಗಳ ಆರ್ಥಿಕ, ಸಾಂಸ್ಕೃತಿಕ, ವೈವಿದ್ಯತೆಯ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧದ ಭಾರೀ ಹೋರಾಟವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಕರವೇ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಹೋರಾಟಕ್ಕಿಳಿಯಲು ನಾವೆಲ್ಲರೂ ಸಿದ್ಧ ಎಂದು ಘೋಷಿಸುವ ಮೂಲಕ ರಾಜ್ಯಗಳ ಸ್ವಾಯತ್ತತೆ ಕಸಿಯುವ ಪ್ರಯತ್ನ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆಯನ್ನೂ ರವಾನಿಸಿದರು. ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ದಾಮೋದರನ್, ಕೇರಳ ಪ್ರಾದೇಶಿಕ ಸಂಘದ
ಮನೋಹರ್, ಕವಿರಾಜ್, ಬನವಾಸಿ ಬಳಗದ ಆನಂದ್ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ಅನೇಕ ಭಾಷಾ ಸಂಘಟನೆಗಳ ಪ್ರತಿನಿಧಿಗಳು, ಸಾಹಿತಿಗಳು, ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
1)ನಮ್ಮ ಮೆಟ್ರೋದಲ್ಲಿ ತಕ್ಷಣ ಹಿಂದಿ ಕೈಬಿಡಬೇಕು. ರಾಜ್ಯ ಸರ್ಕಾರದ ಆಡಳಿತ ಭಾಷೆಯಾದ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತ್ರ ಬಳಸಬೇಕು. ನಗರಾಭಿವೃದ್ಧಿ ಇಲಾಖೆ ಹಿಂದಿ ಬಳಸುವಂತೆ ತನ್ನ ಕಾರ್ಯವ್ಯಾಪ್ತಿ ಮೀರಿ ಬರೆದಿರುವ ಪತ್ರವನ್ನು ತಕ್ಷಣ ಹಿಂಪಡೆಯಬೇಕು.
2) ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಮೆಟ್ರೋ ರೈಲುಗಳ ವ್ಯವಸ್ಥೆಯಲ್ಲಿ ಸಂವಿಧಾನಬಾಹಿರವಾಗಿ ಮೂಗು ತೂರಿಸುವುದರಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು.
3) ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿರುವ ಎಲ್ಲಾ ಭಾಷೆಗಳಿಗೂ ಭಾರತದ ಆಡಳಿತ ಭಾಷೆ ಸ್ಥಾನಮಾನ ನೀಡಬೇಕು.
4) ಸಂವಿಧಾನದ ಭಾಗ 17 ರ ಒಂದನೇ ಪರಿಚ್ಛೇದದಲ್ಲಿ ಆಡಳಿತ ಭಾಷೆಗಳ ಅಡಿಯಲ್ಲಿ ಬರೆಯಲಾಗಿರುವ 343ನೇ ವಿಧಿಯಿಂದ 351ನೇ ವಿಧಿಗಳನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಭಾಷಾ ಸಮಾನತೆ ಎತ್ತಿಹಿಡಿಯಲು ಹೊಸ ನಿಯಮಗಳನ್ನು ರೂಪಿಸಬೇಕು.
5) ಆಡಳಿತ ಭಾಷಾ ಸಲಹಾ ಸಂಸತ್ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು ಮತ್ತು ರಾಷ್ಟ್ರಪತಿಗಳು ಸದರಿ ಸಮಿತಿಯ ಸಲಹೆಗಳಿಗೆ ಅನುಮೋದನೆ ನೀಡುವುದನ್ನು ಹಿಂಪಡೆಯಬೇಕು.
6) ತುಳು, ಬ್ಯಾರಿ, ಕೊಡವ ಸೇರಿ ಮಹೋಪಾತ್ರ ಸಮಿತಿ ಸೂಚಿಸಿರುವ ಎಲ್ಲಾ 38 ಭಾಷೆಗಳಿಗೆ 8ನೇ ಪರಿಚ್ಛೇದದಲ್ಲಿ ಸ್ಥಾನ ನೀಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.