ರಾಜ್ಯ ಬಜೆಟ್ ರೈತರ ಪರವಾಗಿರಬೇಕು..!

By Web DeskFirst Published Jan 26, 2019, 10:48 AM IST
Highlights

ಸಾಲ ಮನ್ನಾ ಯೋಜನೆಯ ಷರತ್ತುಗಳನ್ನು ಕೈಬಿಡಬೇಕು. ರೈತರಿಗೆ ಕನಿಷ್ಠ ಆದಾಯ ಖಾತ್ರಿ ಭದ್ರತೆ ಯೋಜನೆ ಜಾರಿಗೆ ತರಬೇಕು. ರೈತ ಮುಖಂಡರು ಸಿಎಂಗೆ ನೀಡಿರುವ ಸಲಹೆಗಳಿವು.

ಬೆಂಗಳೂರು (ಜ. 26): ಸಾಲ ಮನ್ನಾ ಯೋಜನೆಯ ಷರತ್ತುಗಳನ್ನು ಕೈಬಿಡಬೇಕು. ರೈತರಿಗೆ ಕನಿಷ್ಠ ಆದಾಯ ಖಾತ್ರಿ ಭದ್ರತೆ ಯೋಜನೆ ಜಾರಿಗೆ ತರಬೇಕು. ಕಬ್ಬಿನ ಬೆಳೆಗೆ ಹಾಗೂ ರೇಷ್ಮೆ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಬೆಳೆ ವಿಮೆ ಯೋಜನೆ ಜಾರಿ ಮಾಡಬೇಕು. ಒಟ್ಟಾರೆ ರಾಜ್ಯ ಬಜೆಟ್ ರೈತರ ಪರವಾಗಿರಬೇಕು..!

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ ರೈತ ಮುಖಂಡರು ನೀಡಿರುವ ಸಲಹೆಗಳಿವು. ಸಾಲಮನ್ನಾ ಯೋಜನೆ ಸಂಬಂಧ ವಿಧಿಸಿರುವ ಷರತ್ತುಗಳನ್ನು ಸರ್ಕಾರ ಕೈಬಿಡಬೇಕು. ಯಾವುದೇ ಷರತ್ತು ಇಲ್ಲದೆ ಸಾಲಮನ್ನಾ ಮಾಡಬೇಕು ಮತ್ತು ಅದು ಪ್ರತಿಯೊಬ್ಬ ರೈತರಿಗೂ ಅನ್ವಯವಾಗಬೇಕು. ಸಿರಿಧಾನ್ಯಗಳನ್ನು ಹೆಚ್ಚು ಬೆಳೆಸಲು ರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಸಲಾಗುತ್ತಿದೆ.

ಆದರೆ ಸಿರಿಧಾನ್ಯಗಳಿಗೆ ನ್ಯಾಯಯುತವಾದ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಮೂಲಕ ರೈತರಿಗೆ ಹೊಸ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಕೇಂದ್ರ ಸರ್ಕಾರ ಕಬ್ಬಿನ ಕನಿಷ್ಠ ದರ ನಿಗದಿ ಮಾಡುವಾಗ 8.5 ಇಳುವರಿಗೆ ಎಂದು ನಿಗದಿ ಮಾಡಲು ರಾಜ್ಯ ಸರ್ಕಾರ ಒತ್ತಾಯ ಮಾಡಬೇಕು.

ಸಣ್ಣ ರೈತರ ಅಭಿವೃದ್ಧಿಗೆ ಸಮಗ್ರ ಕೃಷಿ ಬೇಸಾಯ ಕೈಗೊಳ್ಳುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಯೋಜನೆ ಜಾರಿಯಾಗಬೇಕು. ಆಹಾರ ಧಾನ್ಯ, ತೋಟಗಾರಿಕೆ ಬೆಳೆ ಹಾಗೂ ಹೈನುಗಾರಿಕೆ ಕೈಗೊಳ್ಳಲು ಸಹಾಯ ಒದಗಿಸಬೇಕು ಎಂದು ರೈತರು ಮುಖ್ಯಮಂತ್ರಿಯ ಮುಂದೆ ಮನವಿ ಮಾಡಿದರು.

ಬೆಳೆ ಕುಸಿತ ಕಂಡ ಸಂದರ್ಭದಲ್ಲಿ ರೈತರಿಗೆ ಪ್ರೋತ್ಸಾಹಧನ ಪ್ರತಿ ಕೆ.ಜಿ.ಗೆ 50 ರು. ನೀಡಬೇಕು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ರೇಷ್ಮೆ ಆಮದು ಕಡಿತಗೊಳಿಸಿ ದೇಶೀಯ ರೈತರ ರಕ್ಷಣೆಗೆ ಮುಂದಾಗಲು ಒತ್ತಾಯಿಸಬೇಕು. ರೇಷ್ಮೆ ತೋಟ ಅಭಿವೃದ್ಧಿ ಮತ್ತು ನಾಟಿ ಡ್ರಿಪ್ ಅಳವಡಿಕೆಗೆ ನೀಡುವ ಅನುದಾನವನ್ನು ಹೆಚ್ಚಳ ಮಾಡಬೇಕು. ರೇಷ್ಮೆಯನ್ನು ಫಸಲ್ ಬಿಮಾ ಯೋಜನೆಯಡಿಯಲ್ಲಿ ತರಬೇಕು ಎಂದರು.

ರೈತ ಮುಖಂಡರಿಂದ ಹೋರಾಟದ ಎಚ್ಚರಿಕೆ:

ಮುಂದಿನ ತಿಂಗಳು ಮಂಡನೆಯಾಗುವ ಸಮ್ಮಿಶ್ರ ಸರ್ಕಾರದ ಬಜೆಟ್ ರೈತ ಪರವಾಗಿರುವ ಆಶಾಭಾವನೆ ಇದೆ. ಒಂದು ವೇಳೆ ರೈತ ವಿರೋಧಿಯಾದರೆ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗಾರರೆದುರು ಎಚ್ಚರಿಕೆ ನೀಡಿದರು.

ಮೀನುಗಾರರ ಪರ ನಟಿ ಭಾವನಾ ಬ್ಯಾಟಿಂಗ್:

ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಟಿ ಭಾವನಾ ಭಾಗವಹಿಸಿ ಮೀನುಗಾರರ ಸಮಸ್ಯೆ ಕುರಿತು ಗಮನ ಸೆಳೆದರು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಭಾವನಾ, ಬಜೆಟ್‌ನಲ್ಲಿ ಮೀನುಗಾರರಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಇದಲ್ಲದೇ, ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ಅನ್ನು ಸಂಬಂಧಿಸಿದ ಸಹಕಾರ ಸಂಘಗಳು ಭರಿಸಬೇಕು ಎಂಬ ಸರ್ಕಾರದ ನಿಯಮ ಸಡಿಲಿಸಲು ಒತ್ತಾಯ ಮಾಡಲಾಗಿದೆ ಎಂದರು.

ವಿವಿಧ ಇಲಾಖೆಗಳ ಜತೆ ಸಭೆ:

ಬಜೆಟ್ ಕುರಿತು ಶುಕ್ರವಾರ ವಿವಿಧ ಇಲಾಖೆಗಳೊಂದಿಗೂ ಎಚ್‌ಡಿಕೆ ಪೂರ್ವಭಾವಿ ಸಭೆ ನಡೆಸಿದರು. ಶಕ್ತಿ ಭವನದಲ್ಲಿ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾರಿಗೆ ಇಲಾಖೆಯಲ್ಲಿ ಆಗಬೇಕಿರುವ ಸುಧಾರಣೆ ಹಾಗೂ ಸಾರ್ವಜನಿಕ ಸಾರಿಗೆ ಸೇವೆ ಸುಧಾರಿಸಲು ಅಗತ್ಯವಿರುವ ಅನುದಾನದ ಬಗ್ಗೆ ಮಾಹಿತಿ ಪಡೆದರು. 


 

click me!