8 ಲಕ್ಷ ಆದಾಯ ಮಿತಿ ಅಂತಿಮ ಅಲ್ಲ: ಕೇಂದ್ರ

By Web DeskFirst Published Jan 12, 2019, 9:14 AM IST
Highlights

ಮೇಲ್ವರ್ಗ ಮೀಸಲಿಗೆ 8 ಲಕ್ಷ ಆದಾಯ ಮಿತಿ ಅಂತಿಮ ಅಲ್ಲ |  ನಿಯಮ ರೂಪಿಸುವಾಗ ಇದು ಬದಲಾಗಬಹುದು: ಕೇಂದ್ರ

ನವದೆಹಲಿ (ಜ. 12):  ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ನೀಡಲು ಸೂಚಿಸಲಾಗಿರುವ 8 ಲಕ್ಷ ರು. ವಾರ್ಷಿಕ ಆದಾಯ ಮಿತಿ ಹಾಗೂ 5 ಎಕರೆ ಜಮೀನಿನಂತಹ ಮಾನದಂಡಗಳು ಅಂತಿಮವಲ್ಲ. ನಿಯಮಗಳನ್ನು ರೂಪಿಸುವಾಗ ಅದರಲ್ಲಿ ಬದಲಾವಣೆಯೂ ಆಗಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಸ್ಪಷ್ಟಪಡಿಸಿದ್ದಾರೆ.

ವಾರ್ಷಿಕ 8 ಲಕ್ಷ ರು. ಆದಾಯ ಹೊಂದಿರುವವರಿಗೂ ಮೀಸಲು ನೀಡುವ ಪ್ರಸ್ತಾವ ತುಸು ಧಾರಾಳತನದಿಂದ ಕೂಡಿದೆಯಲ್ಲವೇ ಎಂಬ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ಅವರು, 8 ಲಕ್ಷ ಆದಾಯ ಮಿತಿ, 5 ಎಕರೆ ಜಮೀನಿನ ಮಿತಿ ಹಾಗೂ ಇನ್ನಿತರೆ ಮಾನದಂಡಗಳು ಪರಿಶೀಲನೆಯಲ್ಲಿವೆ ಅಷ್ಟೆ. ಅವು ಅಂತಿಮವಾಗಿಲ್ಲ. ಅವುಗಳಲ್ಲಿ ಹೆಚ್ಚು ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ.

ಉಭಯ ಸದನಗಳಲ್ಲೂ ಮೀಸಲು ಮಸೂದೆ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ಇನ್ನೊಂದು ವಾರದಲ್ಲಿ ಸಾಮಾಜಿಕ ನ್ಯಾಯ ಸಚಿವಾಲಯ ನಿಯಮಗಳನ್ನು ರೂಪಿಸಲಿದೆ. ಇದೇ ವೇಳೆ, ತಮ್ಮದೇ ಆದ ಮಾನದಂಡ ರೂಪಿಸಲು ರಾಜ್ಯಗಳಿಗೂ ಸೂಚಿಸಲಾಗಿದೆ. ರಾಜ್ಯಗಳು ಹೇಗೆ ನಿಯಮ ರೂಪಿಸುತ್ತೇವೆ ಎಂಬುದನ್ನು ಗಮನಿಸಿ, ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಇತರೆ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ರೂಪಿಸಲಾಗಿರುವ ಕೆನೆಪದರ ಮಿತಿಯಲ್ಲಿ 8 ಲಕ್ಷ ರು. ವಾರ್ಷಿಕ ಆದಾಯ ಹಾಗೂ ಜಮೀನಿನ ಪ್ರಸ್ತಾಪವಿದೆ. ಅದನ್ನೇ ಇಲ್ಲೂ ಬಳಸಿಕೊಳ್ಳಲಾಗಿದೆ. ಆದರೆ ಮಸೂದೆಯಲ್ಲಿ ಈ ಅಂಶಗಳು ಇಲ್ಲ ಎಂದು ಹೇಳಿದ್ದಾರೆ. 

click me!