ನವೆಂಬರ್‌ನಲ್ಲಿ ಅಮಿತ್ ಶಾ ಶಬರಿಮಲೆ ಯಾತ್ರೆ?

By Web DeskFirst Published Oct 30, 2018, 7:54 AM IST
Highlights

ನ. 17 ರಿಂದ ಅಮಿತ್ ಶಾ ವಾರ್ಷಿಕ ಯಾತ್ರೆ |  ಬಿಜೆಪಿಗೆ ಹಿಂದೂ ಮತ ಗಳಿಕೆಯಲ್ಲಿ ಲಾಭವಾಗುತ್ತಾ? ಕುತೂಹಲ ಮೂಡಿಸಿದೆ ಅಮಿತ್ ಶಾ ಭೇಟಿ 

ಶಬರಿಮಲೆ (ಅ. 30): ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಅಯ್ಯಪ್ಪ ಭಕ್ತರ ಹೋರಾಟಕ್ಕೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನವೆಂಬರ್ 17 ರಿಂದ ಆರಂಭವಾಗುವ ಶಬರಿಮಲೆ ಅಯ್ಯಪ್ಪನ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ಮಹಿಳಾ ಪ್ರವೇಶ ವಿವಾದವು ದಕ್ಷಿಣ ಭಾರತದಲ್ಲಿ ಬಿಜೆಪಿಯ ರಂಗಪ್ರವೇಶಕ್ಕೆ ಅನುಕೂಲ ಮಾಡಿಕೊಡಬಹುದು ಎಂಬ ವಿಶ್ಲೇಷಣೆಗಳ ಸಂದರ್ಭದಲ್ಲೇ, ಶಾ ಅವರ ದೇಗುಲ ಭೇಟಿ ಇರಾದೆ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶಾನುಸಾರ ಅಯ್ಯಪ್ಪನ ದೇವಾಲಯಕ್ಕೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರನ್ನು ಬಿಡುವ ಸಂಬಂಧ ಸಂಘರ್ಷದ ವಾತಾವರಣ ಉಂಟಾಗಿ ಶಬರಿಮಲೆ ಅಗ್ನಿಕುಂಡವಾಗಿದೆ.

ಇಂತಹ ಸಂದರ್ಭದಲ್ಲಿಯೇ ಶಾ ಅವರು ಭೇಟಿ ನೀಡುವ ಇರಾದೆ ವ್ಯಕ್ತಪಡಿಸಿರುವುದು ಇನ್ನೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆಯೂ ಇದೆ. ‘ಬಿಜೆಪಿ ಅಧ್ಯಕ್ಷರು ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ.  ಆದರೆ ಈವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದು ಕೇರಳದ ಬಿಜೆಪಿ ಮುಖಂಡರೊಬ್ಬರು ಸೋಮವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.

ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ಶಾ, ಶಬರಿಮಲೆ ವಿವಾದಕ್ಕೆ ಕೇರಳ ಸರ್ಕಾರವೇ ಕಾರಣ ಎಂದು ಆರೋಪಿಸಿ ಎಡರಂಗ ಸರ್ಕಾರ ಪದಚ್ಯುತಿಗೊಳಿಸುವ ಬೆದರಿಕೆ ಹಾಕಿದ್ದರು. ಅಲ್ಲದೆ, ನ್ಯಾಯಾಲಯಗಳು ಜಾರಿ ಮಾಡಬಲ್ಲಂಥ ಆದೇಶ ನೀಡಬೇಕೇ ವಿನಾ ಅನಗತ್ಯ ಆದೇಶಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟನ್ನೂ ತರಾಟೆಗೆ ತೆಗೆದುಕೊಂಡಿದ್ದರು.

click me!