ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆ ಉಲ್ಬಣಿಸುವುದನ್ನು ತಪ್ಪಿಸಲು ನೇಚೋರಾಮ ಪ್ರೈವೆಟ್ ಲಿಮಿಟೆಡ್ ಕಂಪೆನಿ ಜಿಲ್ಲೆಯಲ್ಲಿ ಲಭ್ಯವಿರುವ ಔಷಧೀಯ ಸಸ್ಯಗಳನ್ನು ಉಪಯೋಗಿಸಿ ತಯಾರಿಸಿರುವ ಸಿಂಕ್‌ಕ್ಯಾನ್ ಔಷಧ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ರಾಮನಗರ (ಮೇ.18): ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆ ಉಲ್ಬಣಿಸುವುದನ್ನು ತಪ್ಪಿಸಲು ನೇಚೋರಾಮ ಪ್ರೈವೆಟ್ ಲಿಮಿಟೆಡ್ ಕಂಪೆನಿ ಜಿಲ್ಲೆಯಲ್ಲಿ ಲಭ್ಯವಿರುವ ಔಷಧೀಯ ಸಸ್ಯಗಳನ್ನು ಉಪಯೋಗಿಸಿ ತಯಾರಿಸಿರುವ ಸಿಂಕ್‌ಕ್ಯಾನ್ ಔಷಧ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಔಷಧ ಆವಿಷ್ಕರಿಸಿದ ಔಷಧ ತಜ್ಞರು, ಕ್ಯಾನ್ಸರ್ ತಜ್ಞ ವೈದ್ಯರು, ಆರ್ಯುವೇದ ತಜ್ಞರು, ನಿವೃತ್ತ ಉಪ ಔಷಧ ನಿಯಂತ್ರಕರನ್ನು ಅಭಿನಂದಿಸಿ ಮಾತನಾಡಿ,
ಈ ಹಿಂದಿನಿಂದಲೂ ಮನುಷ್ಯರಿಗೆ ಕ್ಯಾನ್ಸರ್ ಬರುತ್ತಿತ್ತು. ಆದರೆ, ಅದು ಕ್ಯಾನ್ಸರ್ ರೋಗ ಎಂದು ಗೊತ್ತಾಗುತ್ತಿರಲಿಲ್ಲ. ಈಗ ವೈದ್ಯಕೀಯ ಕ್ಷೇತ್ರ ಬೆಳೆದಂತೆ ರೋಗಗಳನ್ನು ಪತ್ತೆ ಹಚ್ಚುವುದರ ಜೊತೆಗೆ ಔಷಧಗಳನ್ನು ಸಂಶೋಧನೆ ಮಾಡಲಾಗುತ್ತಿದೆ. ಪ್ರತಿನಿತ್ಯ ಕಿದ್ವಾಯಿ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ಜನ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ರೋಗ ಉಲ್ಪಣ ನಿಯಂತ್ರಿಸಲು ಸಂಶೋಧಿಸಿರುವ ಸಿಂಕ್ ಕ್ಯಾನ್ ಔಷಧದ ಬಗ್ಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಬೇಕಿತ್ತು. ಕ್ಯಾನ್ಸರ್ ಪೀಡಿತ ಜನರ ಕೈಗೆ ತಲುಪಿಸುವ ಕೆಲಸವಾಗಲಿ ಎಂದು ರಾಮಲಿಂಗಾರೆಡ್ಡಿ ಹೇಳಿದರು.
Kodagu: ನಾಲ್ಕು ವರ್ಷ ಕಳೆದರೂ ಜಲಜೀವನ್ ಮಿಷನ್ ಕಾಮಗಾರಿ ಅಪೂರ್ಣ!
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಕ್ಯಾನ್ಸರ್ ರೋಗ ಉಲ್ಬಣವಾಗದಂತೆ ನಿಯಂತ್ರಿಸುವ ಔಷಧ ಸಂಶೋಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇದು ವಿಶ್ವ ವೇ ತಿರುಗಿ ನೋಡುವಂತಹ ಕಾರ್ಯವಾಗಿದೆ. ರಾಜ್ಯ ಮತ್ತು ದೇಶಕ್ಕೆ ಮಾತ್ರವಲ್ಲ ವಿದೇಶಕ್ಕೆ ಔಷಧ ರಫ್ತು ಆಗುವಂತಾಗಲಿ ಎಂದು ತಿಳಿಸಿದರು. ನಗರಸಭೆ ಸದಸ್ಯ ಕೆ.ಶೇಷಾದ್ರಿ ಮಾತನಾಡಿ, ಉಪಔಷಧ ನಿಯಂತ್ರಕರಾಗಿ ಎಚ್.ಶ್ರೀನಿವಾಸ್ ಉತ್ತಮ ಸೇವೆ ಸಲ್ಲಿಸಿದವರು. ಸೇವೆಯಿಂದ ನಿವೃತ್ತಿಯಾದ ನಂತರವೂ ಸಮಾಜಕ್ಕೆ ಅನುಕೂಲ ಆಗುವಂತೆ ಬಡವರಿಗೆ ಕೈಗೆಟುಕುವ ದರದಲ್ಲಿ ಸಿಂಕ್ ಕ್ಯಾನ್ ಔಷಧ ಸಂಶೋಧನೆ ಮಾಡಿದ್ದಾರೆ.
ಇಂದು ಕೋಟ್ಯಂತರ ಜನರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಒಬ್ಬ ವ್ಯಕ್ತಿ ಕ್ಯಾನ್ಸರ್ ಪೀಡಿತನಾಗಿದ್ದರೆ ದುಬಾರಿ ಚಿಕಿತ್ಸೆ ವೆಚ್ಚ ಭರಿಸಿ ಆ ಮನೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುತ್ತದೆ. ಅಂತಹ ಜನರಿಗೆ ಔಷಧಿ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದರು. ಸಮಾರಂಭದಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ , ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ನಿವೃತ್ತ ಉಪಔಷಧ ನಿಯಂತ್ರಕರಾದ ಎಚ್.ಶ್ರೀನಿವಾಸ್ ಉಪಸ್ಥಿತರಿದ್ದರು.
ಸ್ಥಳೀಯ ಸಸ್ಯಗಳಿಂದ ತಯಾರಿಸಿರುವ ಸಿಂಕ್‌ಕ್ಯಾನ್ ಔಷಧ: ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಾಯಿಲೆಯನ್ನು ಉಲ್ಬಣಿಸುವುದನ್ನು ತಪ್ಪಿಸಲು ಇದೀಗ ರಾಮನಗರದ ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ನೇಚೋರಾಮ ಪ್ರೈವೇಟ್ ಲಿಮಿಟೆಡ್ ಎಂಬ ಔಷಧ ತಯಾರಿಕಾ ಕಂಪನಿ ಜಿಲ್ಲೆಯಲ್ಲಿ ಲಭ್ಯವಿರುವ ಔಷಧೀಯ ಸಸ್ಯಗಳನ್ನು ಉಪಯೋಗಿಸಿ ಸಿಂಕ್‌ಕ್ಯಾನ್ ಎಂಬ ಔಷಧವನ್ನು ತಯಾರಿಸಿದೆ.
ಸರ್ಕಾರದಿಂದ ಅನುಮತಿ: ಔಷಧ ತಜ್ಞರು, ಕ್ಯಾನ್ಸರ್ ತಜ್ಞ ವೈದ್ಯರು, ಆರ್ಯುವೇದ ತಜ್ಞರು ಜಂಟಿಯಾಗಿ ಅವಿಷ್ಕರಿಸಿ, ಪ್ರಯೋಗ ಯಶಸ್ವಿಯಾದ ನಂತರ ಸರ್ಕಾರದ ಆಯುಷ್ ಇಲಾಖೆಯಿಂದ ಪರಿವಾನಗಿ ಪಡೆದ ಔಷಧ ಇದಾಗಿದೆ. ಕ್ಯಾನ್ಸರ್ ರೋಗಿಗಳು ತಾವು ಪಡೆಯುವ ಕೀಮೋಥೆರಪಿ, ರೇಡಿಯೋಥೆರಪಿಗಳಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ನೋವು ತೋಡಿಕೊಳ್ಳುವುದುಂಟು. ಕ್ಯಾನ್ಸರ್ ರೋಗಿಗಳು ತಾವು ಸೇವಿಸುತ್ತಿರುವ ಅಲೋಪಥಿ ಔಷಧಗಳೊಂದಿಗೆ ಸಿಂಕ್‌ಕ್ಯಾನ್ ಔಷಧವನ್ನು ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮತ್ತು ದೇಹದಲ್ಲಿನ ಪ್ರತಿರಕ್ಷಣಾ (ಇಮ್ಯೂನ್ ಮಾಡ್ಯುಲೇಟರ್) ಕ್ರಿಯೆಯನ್ನು ವೃದ್ಧಿಸುವ ಮೂಲಕ ಅಡ್ಡಪರಿಣಾಮಗಳಿಗೆ ಕಡಿವಾಣ ಹಾಕಲು ಸಾಧ್ಯ. ಅಲ್ಲದೆ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ಈ ಔಷಧಿಯ ತಯಾರಕರು.
ಈ ಅವಿಷ್ಕಾರದ ಹಿಂದೆ ಯಾರಿದ್ದಾರೆ?: ಎಚ್‌ಸಿಜಿ ಆಸ್ಪತ್ರೆಯ ಸಂಶೋಧನಾ ವಿಭಾಗದ ಕ್ಯಾನ್ಸರ್ ತಜ್ಞ ಡಾ.ವಿಶಾಲ್‌ರಾವ್ ಮತ್ತು ರಾಮನಗರದ ನೇಚೋರಾಮ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ - ನಿವೃತ್ತ ಉಪ ಔಷಧ ನಿಯಂತ್ರಕರಾದ ಎಚ್.ಶ್ರೀನಿವಾಸ್ ಜಂಟಿಯಾಗಿ ಜಿಲ್ಲೆಯಲ್ಲಿ ಲಭ್ಯವಾಗುವ ಔಷಧೀಯ ಸಸ್ಯಗಳನ್ನು ಬಳಸಿ ಈ ಸಂಶೋಧನೆ ನಡೆಸಿದ್ದಾರೆ. ಈ ಔಷಧಿ ಪರಿಣಾಮಕಾರಿಯನ್ನು ಹಲವಾರು ಅಲೋಪತಿ ಔಷಧಿಗಳ ಜೊತೆಗೆ ಹೋಲಿಸಿ ಸಂಶೋಧನೆ ನಡೆಸಲಾಗಿದೆ. ಬ್ರೆಸ್ಟ್, ಕರುಳು, ಬಾಯಿ, ಕತ್ತು, ರಕ್ತ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗುವ ಜೀವಕೋಶಗಳ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ. ಹೀಗೆ ಪ್ರಯೋಗಿಸಿದ್ದರಿಂದ ಉತ್ತೇಜನಕಾರಿ ಅಂಶಗಳು ಕಂಡು ಬಂದಿದೆ.
ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲು ಉಪಯೋಗಿಸುವ ಅಲೋಪತಿ ಔಷಧಿ ಸಿಸ್ಪ್ಲಾಟಿನ್ ಔಷಧದೊಂದಿಗೆ ಹೋಲಿಸಿ ಸಂಶೋಧನೆ ನಡೆಸಲಾಗಿದೆ. ನೂತನವಾಗಿ ಆವಷ್ಕರಿಸಲಾದ ಸಿಂಕ್‌ಕ್ಯಾನ್ ಔಷಧದ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂದು ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಲ್ಲಿ ಕೀಮೋಥೆರಪಿ ಮತ್ತು ರೇಡಿಯೋಥೆರಪಿ ನೀಡಿದಾಗ ಕ್ಯಾನ್ಸರ್ ಜೀವಕೋಶಗಳ ಜೊತೆಯಲ್ಲಿ ಹಲವಾರು ಸಾಮಾನ್ಯ ಜೀವಕೋಶಗಳು ಸಹ ಸಾಯುತ್ತವೆ. ಆದರೆ ಸಿಂಕ್‌ಕ್ಯಾನ್ ಔಷಧಿಯು ಕ್ಯಾನ್ಸರ್ ಜೀವಕೋಶಗಳನ್ನು ಮಾತ್ರ ಕೊಲ್ಲುತ್ತದೆ ಎಂದಿದ್ದಾರೆ. ಕ್ಯಾನ್ಸರ್ ರೋಗಿಗಳಲ್ಲಿ ಆಶಾಕಿರಣದ ಭರವಸೆಯೊಂದು ಉದಯಿಸಿದೆ.
ಭೂ ಸುರಕ್ಷಾ ವೆಬ್‌ಸೈಟ್‌ಗೆ ರೆಕಾರ್ಡ್ ರೂಂ ದಾಖಲೆ ಪತ್ರ: ಮಂಗಳೂರು ತಾಲೂಕೇ ಯಾಕೆ?
ಬ್ರೆಸ್ಟ್ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಕತ್ತಿನ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಹೀಗೆ ಹಲವು ಕ್ಯಾನ್ಸರ್ ರೋಗಗಳಿವೆ. ಇದಕ್ಕೆಲ್ಲ ಅಲೋಪತಿಯಲ್ಲಿ ಚಿಕಿತ್ಸೆಗಾಗಿ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಆಯುರ್ವೇದದಲ್ಲಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಔಷಧ ಸಿಗುವಂತೆ ಸಂಶೋಧನೆ ಮಾಡುತ್ತೇವೆ.
- ಎಚ್.ಶ್ರೀನಿವಾಸ್, ನಿರ್ದೇಶಕರು, ನೇಚೋರಾಮ ಪ್ರೈವೆಟ್ ಲಿಮಿಟೆಡ್, ರಾಮನಗರ