ಗರ್ಭಿಣಿಗೆ ಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಡ್ರಾಪ್‌ ಕೊಟ್ಟ ರಾಜ್ಯಪಾಲ

By Web DeskFirst Published Dec 1, 2018, 8:03 AM IST
Highlights

ಮಾನವೀಯತೆ ಮೆರೆದ ರಾಜ್ಯಪಾಲ | ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ತಮ್ಮ ಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಸೇರಿಸಿದ ರಾಜ್ಯಪಾಲ | ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಯ್ತು ಈ ನಡೆ 

ಇಟಾನಗರ (ಡಿ. 01): ತಮ್ಮ ಪ್ರತಿಷ್ಠೆ ಹಾಗೂ ಸ್ಥಾನಮಾನ ಬದಿಗೊತ್ತಿದ್ದ ಅರುಣಾಚಲಪ್ರದೇಶದ ರಾಜ್ಯಪಾಲ ಬಿ.ಡಿ.ಮಿಶ್ರಾ, ನೋವಿನಿಂದ ನರಳುತ್ತಿದ್ದ ಗರ್ಭಿಣಿಯೊಬ್ಬಳನ್ನು ತಮ್ಮ ಹೆಲಿಕಾಪ್ಟರ್‌ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.

ಕಳೆದ ಬುಧವಾರ ಅಧಿಕೃತ ಕಾರ್ಯಕ್ರಮ ನಿಮಿತ್ತ, ಮಿಶ್ರಾ ಅವರು ತವಾಂಗ್‌ಗೆ ಆಗಮಿಸಿದ್ದರು. ಈ ವೇಳೆ ಗರ್ಭಿಣಿಯೊಬ್ಬರು ತುರ್ತಾಗಿ ಆಸ್ಪತ್ರೆ ಸೇರಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿರುವ ವಿಷಯವನ್ನು ಸಿಎಂ ಪೆಮಾ ಖಂಡು ಮತ್ತು ಸ್ಥಳೀಯ ಶಾಸಕರೊಬ್ಬರು ಚರ್ಚಿಸಿದ್ದರು. 200 ಕಿ.ಮೀ ದೂರದ ಇಟಾನಗರಕ್ಕೆ ಬಸ್‌ನಲ್ಲಿ ತೆರಳಲು 15 ಗಂಟೆ ಬೇಕು. ಮತ್ತೊಂದೆಡೆ ಇನ್ನು 3 ದಿನ ಸುತ್ತಮುತ್ತ ಯಾವುದೇ ಪ್ರದೇಶಕ್ಕೂ ಕಾಪ್ಟರ್‌ ಆಗಮಿಸುವುದು ಅಸಾಧ್ಯ ಎಂದು ಇಬ್ಬರೂ ಚರ್ಚಿಸಿದ್ದರು.

ಈ ವಿಷಯ ಕೇಳಿಸಿಕೊಂಡ ಮಿಶ್ರಾ, ತಾವು ಕರೆತಂದಿದ್ದ ಇಬ್ಬರು ಸಿಬ್ಬಂದಿಯನ್ನು ತವಾಂಗ್‌ನಲ್ಲೇ ಬಿಟ್ಟು ಗರ್ಭಿಣಿ ಮತ್ತು ಆಕೆಯ ಪತಿಯನ್ನು ಕಾಪ್ಟರ್‌ನಲ್ಲಿ ಇಟಾನಗರಕ್ಕೆ ಕರೆದೊಯ್ದರು. ಆದರೆ ಮಾರ್ಗಮಧ್ಯದಲ್ಲಿ ತೇಜ್‌ಪುರದಲ್ಲಿ ಇಂಧನ ತುಂಬಿಸಿಕೊಳ್ಳಲು ಇಳಿಸಿದ್ದ ವೇಳೆ ಕಾಪ್ಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.

ಈ ವೇಳೆ ಸ್ಥಳೀಯ ವಾಯುನೆಲೆಯಲ್ಲಿ ಅಧಿಕಾರಿಗಳಿಗೆ ಕರೆ ಮಾಡಿದ ಮಿಶ್ರಾ, ಅಲ್ಲಿಂದ ತುರ್ತಾಗಿ ಬೇರೊಂದು ಕಾಪ್ಟರ್‌ ತರಿಸಿ, ಅದರ ಮೂಲಕ ಮಹಿಳೆಯನ್ನು ಇಟಾನಗರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಮಹಿಳೆ ಇಟಾನಗರದಲ್ಲಿ ಇಳಿಯುತ್ತಲೇ ಆಕೆಯ ನೆರವಿಗೆಂದು ಆ್ಯಂಬುಲೆನ್ಸ್‌ ಮತ್ತು ವೈದ್ಯರನ್ನು ನಿಯೋಜಿಸುವ ಮೂಲಕ ಆಕೆಗೆ ಸಾಧ್ಯವಿದ್ದ ಎಲ್ಲಾ ನೆರವು ನೀಡಿದ್ದಾರೆ. ಹೀಗೆ ಆಸ್ಪತ್ರೆ ಸೇರಿದ್ದ ಮಹಿಳೆಗೆ ಸುರಕ್ಷಿತ ಹೆರಿಗೆ ಆಗಿದ್ದು, ಮಿಶ್ರಾ ಅವರ ವರ್ತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

click me!