ರೈಜೋಬಿಯಂ ಅಣುಜೀವಿ ಗೊಬ್ಬರದ ಪ್ರಯೋಜನವೇನು?

By Suvarna News  |  First Published Mar 17, 2020, 10:46 AM IST

ಯಾವುದೇ ಪ್ರಯೋಗಾಲಯ, ಯಾವುದೇ ಸಂಶೋಧನೆ ಅಥವಾ ಯಾವುದೇ ಕೃಷಿ ವಿಜ್ಞಾನಿಯ ಸಲಹೆ ಇರದಿದ್ದರೂ ನಮ್ಮ ಪೂರ್ವಜರಿಗೆ ಮಣ್ಣಿನ ಬಗ್ಗೆ, ಬೆಳೆಯ ಬಗ್ಗೆ, ಪೋಷಕಾಂಶಗಳ ಬಗ್ಗೆ ಅಪಾರವಾದ ಜ್ಞಾನವಿತ್ತು. ಉದಾಹರಣೆಗೆ : ಬೂದಿಯಲ್ಲಿ ಏನಿದೆ ಅಂತ ಅವರಿಗೆ ಗೊತ್ತಿರಲಿಲ್ಲ, ಆದರೆ ತಪ್ಪದೇ ಒಲೆಬೂದಿಯನ್ನು ತಂದು ತಿಪ್ಪೆಗೆ ಹಾಕುತ್ತಿದ್ದರು. ಹಾಗೆಯೇ ಮಿಶ್ರಬೆಳೆ, ಅಕ್ಕಡಿ ಬೆಳೆ, ಬೆಳೆ ಪರಿವರ್ತನೆ ಇವೆಲ್ಲ ಅವರು ಅನುಭವದ ಮೂಲಕ ಕಂಡುಕೊಂಡಂಥವುಗಳು.


ಏಕಬೆಳೆ ತೆಗೆದಾದ ಮೇಲೆ ಆ ಜಮೀನಿನಲ್ಲಿ ದ್ವಿದಳ ದಾನ್ಯದ ಬೆಳೆ ಬೆಳೆಯುತ್ತಿದ್ದರು. ಯಾವ ಕಾರಣಕ್ಕೂ ಮತ್ತೆ ಏಕದಳ ಹಾಕುತ್ತಿರಲಿಲ್ಲ. ಇದರರ್ಥ, ಅವರಿಗೆ ದ್ವಿದಳ ದಾನ್ಯದ ಬೆಳೆ ಜಮೀನನ್ನು ಫಲವತ್ತುಗೊಳಿಸುತ್ತದೆ ಎಂಬುದು ಗೊತ್ತಿತ್ತು. ಆದರೆ ಅದರ ಬೇರುಗಳಲ್ಲಿನ ರೈಜೋಬಿಯಂ ಗಂಟುಗಳಿಂದ ಭೂಮಿಗೆ ಹಾಗೂ ಮುಂದಿನ ಬೆಳೆಗೆ ಸಾರಜನಕ ಲಭ್ಯವಾಗುತ್ತದೆ ಮತ್ತು ಆ ಬೆಳೆಯ ಉದುರಿದ ಎಲೆಗಳು ಸಾವಯವ ಗೊಬ್ಬರವಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಒಟ್ಟಿನಲ್ಲಿ ದ್ವಿದಳ ಬೆಳೆ ಹೊಲಕ್ಕೆ ಹಿತ ಎಂಬುದನ್ನು ಅರಿತುಕೊಂಡಿದ್ದರು.

ನಮಗೆಲ್ಲ ಗೊತ್ತಿರುವಂತೆ ವಾತಾವರಣದಲ್ಲಿ ಶೆಕಡಾ 78 ರಷ್ಟುಸಾರಜನಕ ಇರುತ್ತದೆ. ಅಲ್ಲದೇ ಭೂಮಿಯ ಮೇಲ್ಭಾಗದಲ್ಲಿ ಸಾಕಷ್ಟುಸಾರಜನಕ ಅನಿಲ ಇರುತ್ತದೆ…. ಆದರೆ ಇದಾವುದೂ ನಮಗಾಗಲಿ ಅಥವಾ ಬೆಳೆಗಾಗಲಿ ಪ್ರಯೋಜನವಾಗುವುದಿಲ್ಲ. ಹೀಗಿರುವ ಸಾರಜನಕ ಅಂಶವನ್ನು ದ್ವಿದಳ ಧಾನ್ಯದ ಬೇರುಗಳಲ್ಲಿರುವ ರೈಜೋಬಿಯಂ ಏಕಾಣುಜೀವಿ ಮತ್ತು ಇನ್ನಿತರ ಸ್ವತಂತ್ರ ಜೀವಿ ಏಕಾಣುಗಳು ಇದ್ದು, ಅವು ವಾತಾವರಣದಲ್ಲಿರುವ ಹಾಗೂ ಭೂಮಿಯ ಮೇಲ್ಮæೖನಲ್ಲಿರುವ ಸಾರಜನಕವನ್ನು ಸೆಳೆದು ಹಿಡಿದಿಟ್ಟುಕೊಳ್ಳುತ್ತವೆ. ಇದಕ್ಕೇ ನಾವು ಸಾರಜನಕ ಸ್ಥೀರೀಕರಣಗೊಳಿಸುವುದು ಎನ್ನುತ್ತೇವೆ.

Latest Videos

undefined

ಹೀಗೆ ಬೇರಿನ ಗಂಟುಗಳಲ್ಲಿ ಸ್ಥಿರೀಕರಣಗೊಂಡ ಸಾರಜನಕದಲ್ಲಿ ಬೇಕಾದಷ್ಟನ್ನು ಬಳಸಿಕೊಂಡು ಉಳಿದಿದ್ದನ್ನು ಪಕ್ಕದಲ್ಲಿರುವ ಏಕದಳದ ಸಸ್ಯಕ್ಕೆ ಬೇಕಾದರೆ ಸರಬರಾಜು ಮಾಡುತ್ತದೆ. ಇಲ್ಲದಿದ್ದರೆ ಅಲ್ಲಿಯೇ ಉಳಿದು ಮುಂದಿನ ಬೆಳೆಗೆ ಒದಗಿಸುತ್ತದೆ…. ಈ ಕ್ರಿಯೆ ಹೆಚ್ಚಿದಷ್ಟೂಭೂಮಿಗೆ ಅಥವಾ ಬೆಳೆಗೆ ಒಳ್ಳೆಯದು, ಆದ್ದರಿಂದ ಈ ಕ್ರೀಯೆಯನ್ನು ಹೆಚ್ಚಿಸಲು ದ್ವಿದಳ ಧಾನ್ಯ ಬಿತ್ತುವ ಮುಂಚೆ ಬೀಜೋಪಚಾರದ ಮೂಲಕ ಅದಕ್ಕೆ ಲೇಪನ ಮಾಡುವ ಪದಾರ್ಥವೇ ರೈಜೋಬಿಯಂ ಅಣುಜೀವಿ ಗೊಬ್ಬರ.

ಅಧಿಕಗೊಂಡಿರುವ ರಾಸಾಯನಿಕ ಗೊಬ್ಬರದ ಬೆಲೆ, ಅದರ ಬಳಕೆಯಿಂದ ಹಾಳಾಗುತ್ತಿರುವ ಭೂಮಿ ಮತ್ತು ಬೇಸಾಯದ ಖರ್ಚನ್ನು ಕಡಿಮೆ ಮಾಡಲು ಪ್ರತಿಯೊಬ್ಬರೂ ವಿವಿಧ ಅಣುಜೀವಿ ಗೊಬ್ಬರಗಳನ್ನು ಬಳಸಲೇಬೇಕು. ಇವುಗಳ ಬೆಲೆ ಅತ್ಯಂತ ಕಡಿಮೆ ಇದ್ದು, ನೂರಕ್ಕಿಂತ ಕಡಿಮೆ ದುಡ್ಡಿನಲ್ಲಿ ಒಂದು ಎಕರೆಗೆ ಬೇಕಾದಷ್ಟುಅಣುಜೀವಿ ಗೊಬ್ಬರ ದೊರಕಿಸಬಹುದು. ರೈತಸಂಪರ್ಕ ಕೇಂದ್ರದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಇವುಗಳು ಸಿಗುತ್ತವೆ.

ಪ್ರತಿ ಪ್ಯಾಕೇಟ್‌ ಮೇಲೂ ಅದನ್ನು ಯಾವ ಬೆಳೆಗೆ ಬಳಸಬೇಕು ಎಂಬುದು ನಮೂದಾಗಿರುತ್ತದೆ, ಅದನ್ನು ಸರಿಯಾಗಿ ಪರಿಶೀಲಿಸಿ ಬಳಸಬೇಕು. ರೈತಸಂಪರ್ಕ ಕೇಂದ್ರದಲ್ಲಿ ಸಿಗದಿದ್ದರೆ ಹೊರ ಮಾರುಕಟ್ಟೆಯಲ್ಲಾದರೂ ಕೊಂಡು ತಂದು ಬೀಜೋಪಚಾರ ಮಾಡಬೇಕು. ಸಾರಜನಕ ಸ್ಥಿರೀಕರಣ ಮಾಡುವ ಗುಣ ಕೇವಲ ರೈಜೋಬಿಯಂಗೆ ಮಾತ್ರವಲ್ಲದೇ, ಅಜಿಟೊಬ್ಯಾಕ್ಟರ್‌, ಅಜೋಸ್ಪಿರಿಲ್ಲಂ, ಅಸಿಟೊಬ್ಯಾಕ್ಟರ್‌ ಅಲ್ಲದೇ ನೀಲಿ ಹಸಿರು ಪಾಚಿ ಮತ್ತು ಅಝೊಲಾದಲ್ಲಿ ಕೂಡ ಸಾರಜನಕ ಸ್ಥಿರೀಕರಣಗೊಳಿಸಿ ಭೂಮಿಯ ಫಲವತ್ತತೆ ಕಾಪಾಡುವ ಗುಣ ಇರುತ್ತವೆ.

ಬಳಸುವುದು ಕೂಡ ತುಂಬ ಸುಲಭ, ಒಂದು ಕಪ್‌ನಷ್ಟುಬೆಲ್ಲ ತಗೆದುಕೊಂಡು ನೀರು ಹಾಕಿ ಕುದಿಸಿ, ಅದು ತಣ್ಣಗಾದ ಮೇಲೆ ಅದಕ್ಕೆ 150 ಗ್ರಾಂ. ನಷ್ಟುಅಣುಜೀವಿ ಗೊಬ್ಬರವನ್ನು ಬೆರೆಸಿ ಕಲಸಿ. ನಂತರ ಒಂದು ಎಕರೆಗೆ ಬಿತ್ತಬೇಕಾದ ಬೀಜಗಳನ್ನು ಒಂದು ಪ್ಲಾಸ್ಟಿಕ… ಹಾಳೆಯ ಮೇಲೆ ಹಾಕಿ ಅದರ ಮೇಲೆ ಈ ದ್ರಾವಣವನ್ನು ಸುರುವಿ ಚೆನ್ನಾಗಿ ಎಲ್ಲ ಬೀಜಗಳಿಗೆ ಅಂಟುವಂತೆ ಕಲಸಬೇಕು. ನಂತರ ಅರ್ದ ಗಂಟೆ ಮಾತ್ರ ನೆರಳಲ್ಲಿ ಒಣಗಿಸಿ ಬಿತ್ತನೆಗೆ ಬಳಸಬೇಕು. ಬಿತ್ತನೆಯ ದಿನವೇ ಹೀಗೆ ಮಾಡಿಕೊಳ್ಳಬೇಕಿರುವುದು ನೆನಪಿಡಬೇಕಾದ ಸಂಗತಿ.

ಮಾಮೂಲಾಗಿ ಎಲ್ಲ ದ್ವಿದಳ ದಾನ್ಯದ ಬೆರುಗಳಲ್ಲಿ ಆಯಾ ಮಣ್ಣಿನ ಗುಣ, ವಾತಾವರಣಕ್ಕನುಗುಣವಾಗಿ ರೈಜೋಬಿಯಂ ಗಂಟುಗಳಿರುತ್ತವೆ, ಈ ಗಂಟುಗಳ ಸಂಖ್ಯೆಯನ್ನು ಹೆಚ್ಚು ಮಾಡುವುದಕ್ಕಾಗಿಯೇ ರೈಜೋಬಿಯಂ ಹಾಗೂ ಇತರೆ ಸಾರಜನಕ ಸ್ಥಿರೀಕರಣ ಮಾಡುವ ಅಣುಜೀವಿ ಗೊಬ್ಬರಗಳನ್ನು ಸಂಶೋಧಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಷ್ಟೆ.

click me!