ಫೋನ್ ರಿಸೀವ್ ಮಾಡಬಹುದುದಾದ ವಿಶಿಷ್ಟ ಪೆನ್

By Kannadaprabha NewsFirst Published Dec 15, 2018, 11:27 AM IST
Highlights

ಈ ಪೆನ್ ಅನ್ನು ಮೊಬೈಲ್ ಜೊತೆ ಬ್ಲೂಟೂತ್ ಕನೆಕ್ಟ್ ಮಾಡಿಕೊಂಡರೆ ಫೋನ್ ರಿಸೀವ್ ಮಾಡಬಹುದು. ಅಲ್ಲದೇ ಫ್ಯಾನ್ ಕೂಡ ಅಳವಡಿಸಿರುವುದರಿಂದ ಪೋರ್ಟೆಬಲ್ ಫ್ಯಾನ್ ಆಗಿ ಬಳಸಬಹುದು. ಈ ಅದ್ಭುತ ಪೆನ್ ಕಂಡು ಹಿಡಿದಿದ್ದು ವಿಜಯಪುರದ ಚಿತ್ರಕಲಾವಿದ ಅಮೀನ್‌ಸಾಬ್ ಹಜರತ್‌ಸಾಬ್ ರೂಗಿ. ಮಲ್ಟಿನ್ಯಾಷನಲ್ ಕಂಪನಿಗಳು ಸಂಶೋಧನೆ ಮಾಡಬೇಕಾಗಿದ್ದನ್ನು ಮಧ್ಯಮ ವರ್ಗದ ನಮ್ಮೂರ ವ್ಯಕ್ತಿ ತಯಾರಿಸಿದ್ದಾರೆ ಅನ್ನುವುದೇ ನಮ್ಮ ಹೆಮ್ಮೆ.

ಮೊಬೈಲ್ ಬಂದ ಬಳಿಕ ಜಗತ್ತೇ ಅಂಗೈಯಲ್ಲಿದೆ ಎನ್ನುತ್ತಿರುವಾಗಲೇ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ರೀತಿಯ ಪೆನ್ ಆವಿಷ್ಕಾರ ಮಾಡುವ ಮೂಲಕ ಪೆನ್‌ನಲ್ಲಿಯೇ ಜಗತ್ತು ಇದೆ ಎಂಬುದನ್ನು ಸಾಕ್ಷೀಕರಿಸಲು ಚಿತ್ರಕಲಾವಿದರೊಬ್ಬರು ಅಪರೂಪದ ಪೆನ್ ತಯಾರಿಸಿದ್ದಾರೆ. 

ನಾವು ಇದುವರೆಗೆ ಸಾಕಷ್ಟು ಪೆನ್ ನೋಡಿದ್ದೇವೆ. ಆದರೆ ಭಾರೀ ಮೌಲ್ಯದ ಪೆನ್ ಗಳನ್ನು ಕಂಪನಿಗಳು ಅಭಿವೃದ್ಧಿಪಡಿಸಿವೆ. ಆದರೆ ಈ ಎಲ್ಲಾ ಕಂಪನಿಗಳು ತಯಾರಿಸಿದ ಪೆನ್ ಬರೀ ಬರೆಯಲಿಕ್ಕೆ ಮಾತ್ರ ಉಪಯೋಗವಾಗುತ್ತವೆ. ಅಮೀನ್‌ಸಾಬ್ ಹಜರತ್ ಸಾಬ್ ರೂಗಿ ಎಂಬುವವರೇ ಈ ವಿಶಿಷ್ಟ ಪೆನ್ ಆವಿಷ್ಕಾರ ಮಾಡಿದವರು. ಪೆನ್ ಒಂದು, ಕೆಲಸ ಹನ್ನೊಂದು ಆಗುವುದೇ ಈ ಪೆನ್ನಿನ ವಿಶೇಷತೆ. ಆಕಾರವನ್ನು ಸ್ವಲ್ಪ ಅಭಿವೃದ್ಧಿ ಪಡಿಸಿದರೆ ಜಗತ್ತನ್ನೇ ಬೆರಗುಗೊಳಿಸಬಹುದಾದ ಈ ಪೆನ್ ತಯಾರಿಸಿದ್ದು ನಮ್ಮವರು ಅನ್ನುವುದು ನಮ್ಮ ಹೆಮ್ಮೆ.

ರೂಗಿ ಹಿನ್ನೆಲೆ:ಅಮೀನ್ ಸಾಬ್ ಹಜರತ್‌ಸಾಬ್ ರೂಗಿ(57) ಮೂಲತಃ ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದವರು. ರೂಗಿ ಅವರದು ಬಡ ಕುಟುಂಬ. ಇಬ್ಬರು ಪುತ್ರರು, ಒಬ್ಬ ಪುತ್ರಿ, ಪತ್ನಿ ಇದ್ದಾರೆ. ಸದ್ಯಕ್ಕೆ ಯೋಗಾಪುರ ಕಾಲೋನಿಯಲ್ಲಿ ಚಪ್ಪರ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ರೂಗಿ ಅವರು ಡಿಎಂಸಿ ಮುಗಿಸಿದ್ದು, ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ನಾಮಫಲಕ, ಮಹಾತ್ಮರ ಚಿತ್ರ ಬರೆಯುತ್ತಾರೆ. 

ಪೆನ್‌ನಲ್ಲಿ ಏನೇನಿದೆ?: ಈ ಪೆನ್ ತಯಾರಿಕೆಗೆ ಅಷ್ಟಾಗಿ ಖರ್ಚಾಗುವುದಿಲ್ಲ. ಕೇವಲ 3 ಸಾವಿರದಲ್ಲಿ ಈ ಪೆನ್ ತಯಾರಿಸಬಹುದು. ಪೆನ್‌ನಲ್ಲಿ ಅಳವಡಿಸಿದ ಫ್ಯಾನ್ ಸುಮಾರು 5 ರಿಂದ 6 ಗಂಟೆಗಳವರೆಗೆ ತಂಪಾದ ಗಾಳಿ ಬೀಸುತ್ತದೆ. ಎಲ್‌ಇಡಿ ಬಲ್ಬ್, ಬಟನ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಇದರಲ್ಲಿ ಆವಿಷ್ಕರಿಸಲಾಗಿದೆ.

ಪೆನ್‌ನ ವಿಶೇಷತೆ: ಈ ಪೆನ್‌ನ ನಿಬ್ಬಿನ ಬಳಿ ಒಂದು ಚಿಕ್ಕ ಬಲ್ಬ್ ಇದೆ. ರಾತ್ರಿ ಬರೆಯುವಾಗ ಈ ಬಲ್ಬ್ ಬೆಳಕು ಚೆಲ್ಲುತ್ತದೆ. ರಾತ್ರಿ ವಿದ್ಯುತ್ ಕೈ ಕೊಟ್ಟರೆ ಪುಸ್ತಕ, ಪತ್ರಿಕೆ ಮತ್ತಿತರ ಅಕ್ಷರ ಓದಲು ಮೇಲ್ಭಾಗದಲ್ಲಿ ಒಂದು ಚಿಕ್ಕ ಟ್ಯೂಬ್‌ಲೈಟ್ ಆಕಾರದ ಬಲ್ಬ್ ಇದೆ. ಕರೆಂಟ್ ಇಲ್ಲದಿದ್ದರೂ ಓದಲು ಸಹಕಾರಿ. 

ಕರೆ ಬಂದರೆ ಪೆನ್‌ನಲ್ಲೇ ಮಾತನಾಡಿ: ಮೊಬೈಲ್‌ಗೆ ಕರೆ ಬಂದರೆ ಪೆನ್‌ನಲ್ಲಿಯೇ ರಿಸೀವ್ ಮಾಡಿ ಮಾತನಾಡಬಹುದು. ಇದಕ್ಕೆ ಬ್ಲೂಟೂಥ್ ಅಳವಡಿಸಲಾಗಿದೆ. ವಿಪರೀತ ಸೆಖೆ ಎನಿಸಿದಾಗ ಈ ಪೆನ್‌ನಿಂದಲೇ ಗಾಳಿ ಬೀಸಿಕೊಳ್ಳಬಹುದು. ಪೆನ್ ಮೇಲ್ಭಾಗದಲ್ಲಿ ಒಂದು ಚಿಕ್ಕ ಫ್ಯಾನ್ ಅಳವಡಿಸಲಾಗಿದೆ.

ಮುಖ ನೋಡಿಕೊಳ್ಳಲು ಕನ್ನಡಿ: ಮೊಬೈಲ್ ಬ್ಯಾಟರಿ ಇಲ್ಲದಿದ್ದರೆ ಮೊಬೈಲ್ ಚಾರ್ಜ್ ಮಾಡಬಹುದು. ಚಾರ್ಜ್ ಮಾಡಿಕೊಳ್ಳಲು ಚಾರ್ಜ್ ಕಿಟ್ ಕೂಡ ಅಳವಡಿಸಲಾಗಿದೆ. ಮುಖ ನೋಡಿಕೊಳ್ಳಲು ಚಿಕ್ಕದೊಂದು ಕನ್ನಡಿ ಕೂಡ ಇದೆ.

ಶಿವಣಗಿಯ ವಿಜ್ಞಾನಿಗೆ ನಮಸ್ಕಾರ: ಶಾಲೆ- ಕಾಲೇಜಿಗೆ ಹೋಗಿ ಕಲಿಯದ ಹಳ್ಳಿಯ ವ್ಯಕ್ತಿಯೊಬ್ಬರು ಈ ಥರ ಯೋಚನೆ ಮಾಡುವುದೇ ಯುವ ಜನಾಂಗಕ್ಕೆ ಪ್ರೇರಣೆ. ಏನಾದರೂ ಹೊಸತು ಮಾಡಬೇಕು ಅನ್ನುವ ತುಡಿತ ಇರುವ ಈ ಶಿವಣಗಿಯ ವಿಜ್ಞಾನಿಯ ಆಸಕ್ತಿ ಎಲ್ಲರೂ ಮೆಚ್ಚಬಹುದಾದದ್ದು. ದೂ: 8150035577

ದೇಶದಲ್ಲೆಲ್ಲೂ ಈ ತರಹದ ಪೆನ್ ತಯಾರಿಸಿಲ್ಲ. ಸಮಾಜಕ್ಕೊಂದು ಹೊಸ ಕೊಡುಗೆ ನೀಡಬೇಕೆಂದು ಈ ಪೆನ್ ತಯಾರಿಸಿದ್ದೇನೆ. ಇದಕ್ಕೂ ಮೊದಲು ಮೊಬೈಲ್ ತಯಾರಿ ಸಿದ್ದೆ. ಪ್ರೊಜೆಕ್ಟರ್, ತ್ರಿಡಿ ಸೌಂಡ್ ವ್ಯವಸ್ಥೆ ಇತ್ತು. ಒಂದೇ ಬಾರಿ 5 ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಬಹುದಾಗಿತ್ತು. ಈಗ ಪೆನ್ ತಯಾರಿಕೆ ನನ್ನ ಎರಡನೇ ಆವಿಷ್ಕಾರವಾಗಿದೆ.ಪೇಟೆಂಟ್‌ಗಾಗಿ ಶ್ರಮಿಸುತ್ತಿದ್ದೇನೆ. ಖಾಸಗಿ ಸಂಘ-ಸಂಸ್ಥೆ ಈ ಪೆನ್ ತಯಾರಿಸುವ ಘಟಕ ಆರಂಭವಾದರೆ ನಿರುದ್ಯೋಗಿಗಳಿಗೆ
ಉದ್ಯೋಗಾವಕಾಶ ಲಭಿಸುತ್ತವೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. - ಅಮೀನ್‌ಸಾಬ್ ಹಜರತ್‌ಸಾಬ್ ರೂಗಿ, ಶಿವಣಗಿ

 

click me!