
ಚಳಿಗೂ ಹಾರ್ಟ್ ಅಟ್ಯಾಕ್‌ಗೂ ಅದೇನೋ ಸಖ್ಯ! ಚಳಿಗಾಲದಲ್ಲಿ, ಅದೂ ನಸುಕಿನಲ್ಲೇ ಹೃದಯಾಘಾತ ಘಟಿಸುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆ
ಆಗುವುದರಿಂದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚು ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದ್ರೋಗಗಳು ಉಲ್ಬಣಿಸುವ ಸಾಧ್ಯತೆ ಅಧಿಕ. ಇವೆಲ್ಲ ಕಾರಣಗಳಿಂದ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಲಭಿಸದೆ ಹೃದಯಾಘಾತ ಆಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದ ಸಿಂಥೇಜಿಕ್ ಡಿಸ್ಟಾರ್ಜ್ ಅಂದರೆ ಅಡ್ರಿನಾಲಿನ್ ಪಂಪಿಂಗ್ ಅಧಿಕವಿರುತ್ತದೆ. ಇದರಿಂದಾಗಿ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅದು ಹೆಚ್ಚು ಕಠಿಣವಾಗಿ ಕೆಲಸದಲ್ಲಿ ತೊಡಗುವಂತಾಗುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆಯುಳ್ಳ ಅಥವಾ ಈಗಾಗಲೇ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಲ್ಲಿ ಹೃದಯಾಘಾತದ ಪ್ರಮಾಣ ಇನ್ನೂ ಹೆಚ್ಚು.
ಅಲ್ಲದೆ, ಚಳಿಗಾಲದಲ್ಲಿ ಸಂಭವಿಸುವ ಹೃದಯಾಘಾತ ಹೆಚ್ಚು ಗಂಭೀರ ಸ್ವರೂಪದ್ದಾಗಿರುತ್ತದೆ. ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವುದನ್ನು ಗಮನಿಸಿದ್ದೀರಿ. ರಕ್ತದ ಚಲನೆ ಕಡಿಮೆಯಾಗಿ ಕೊಬ್ಬು ಅಧಿಕವಿದ್ದರೆ ಇಂಥ ಅಪಾಯ ದೇಹದೊಳಗೂ ಸಂಭವಿಸೀತು!
ಹೃದಯದ ಹೊರಗೆ ಗೋಡೆಗಳಲ್ಲಿ ಸೂಕ್ಷ್ಮತಿಸೂಕ್ಷ್ಮ ಕಿರುನಾಳಗಳಲ್ಲಿ ರಕ್ತ ಪ್ರವಾಹ ನಿರಂತರವಾಗಿರಬೇಕು. ಆದರೆ, ಚಳಿಯ ದಿನಗಳಲ್ಲಿ ಇದು ಸಾಧ್ಯವಾಗದೆ ಹೋಗಬಹುದು. ಕಿರುನಾಳಗಳ ಒಳಪದರ ಕಿರಿದಾಗಿದ್ದರೆ, ಕೊಬ್ಬಿನ ಕರಣೆ ಕಟ್ಟಿದರಂತೂ ಸಂಚಾರ ಕಠಿಣ. ಆಗಲೂ ಹೃದಯಾಘಾತ ಕಟ್ಟಿಟ್ಟ ಬುತ್ತಿ. ರೋಗಿಗೆ ಶೇ.30 ಮಾರ್ಗ ಕಿರಿದಾಗಿದೆ ಎಂದರೆ, ಅದು ಉಳಿದ ದಿನಗಳಂತಲ್ಲ. ಚಳಿಯಲ್ಲಿ ಅದು ಶೇ.70ಕ್ಕೆ ಸಮ!
ಹೃದಯಾಘಾತ ಸಂಭವಿಸಿದ ಕ್ಷಣಗಳಲ್ಲಿ ಹೃದಯ ಬಡಿತದ ಮೇಲೆ ವಾತಾವರಣದಲ್ಲಿ ಆಗುವ ಏರುಪೇರುಗಳೂ ಪ್ರಭಾವ ಬೀರುತ್ತವೆ. ‘ಡಿ’ ಜೀವಸತ್ವದ ಕೊರತೆಯೂ ಹಾರ್ಟ್ ಅಟ್ಯಾಕ್‌ಗೆ ಕಾರಣ ಆಗಬಹುದು. ಸೂರ್ಯನ ಕಿರಣ ‘ಡಿ’ ಜೀವಸತ್ವದ ಆಕರ. ಚಳಿಗಾಲದಲ್ಲಿ ಮನೆಯೊಳಗೇ ಇದ್ದರೆ, ದೇಹದಲ್ಲಿ ವಿಟಮಿನ್ ‘ಡಿ’ ಉತ್ಪಾದನೆ ಕಡಿಮೆಯಾಗುತ್ತದೆ. ವೈದ್ಯವಿಜ್ಞಾನದ ಸಂಶೋಧನೆಗಳ ಪ್ರಕಾರ, ಎತ್ತರ ಪ್ರದೇಶಗಳ ಜನರಿಗೆ ಹೃದಯಾಘಾತದ ರಿಸ್ಕ್ ಕಡಿಮೆಯಂತೆ.
ಏಕೆಂದರೆ ಎತ್ತರಕ್ಕೆ ಹೋದಂತೆ ಸೂರ್ಯನ ಕಿರಣಗಳಲ್ಲಿನ ಅಲ್ಟ್ರಾವೈಲೆಟ್ ಪ್ರಮಾಣ ಹೆಚ್ಚಿ, ವಿಟಮಿನ್ ‘ಡಿ’ ಉತ್ಪಾದನೆ ಪ್ರಮಾಣವೂ ಅಧಿಕವಾಗುತ್ತದೆ. ಈ ಕಾರಣದಿಂದಲೇ ರಕ್ತದೊತ್ತಡ ಇಲ್ಲದ, ಕೊಲೆಸ್ಟೆರಾಲ್ ಕಡಿಮೆ ಇರುವ ಕೆಳ ಪ್ರದೇಶದ ಜನರಲ್ಲೂ ಹೃದಯಾಘಾತದ ಪ್ರಮಾಣ ಅಧಿಕವಿರುತ್ತದೆ!
ಚಳಿಗಾಲದಲ್ಲಿ ಎಲ್ಲರೂ ಆಲಸಿಗಳೇ.
ಮಧುಮೇಹ ರೋಗವು ಈ ಕಾಲದಲ್ಲಿ ಉಲ್ಬಣಿಸುತ್ತದೆ. ಸ್ಥೂಲ ಕಾಯಗಳನ್ನು ಕಂಡರೆ ಹೃದಯಾಘಾತಕ್ಕೆ ಎಲ್ಲಿಲ್ಲದ ಪ್ರೀತಿ! ಚಳಿಗಾಲದಲ್ಲಿ ಸಾಮಾನ್ಯವಾಗಿ ಹಸಿವು ಹೆಚ್ಚಾಗುತ್ತದೆ. ವೈರಸ್‌ಗಳು ಹೆಚ್ಚು ಕ್ರಿಯಾಶೀಲಗೊಳ್ಳುವುದೂ ಇದೇ ವೇಳೆಯೇ. ಚಳಿಯಲ್ಲಿ ಕುರುಕಲು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಇದೂ ಹೃದಯದ ಆರೋಗ್ಯಕ್ಕೆ ಮಾರಕ ಆಗಬಹುದು.
"
ಆಘಾತ ತಪ್ಪಿಸಲು ಇಷ್ಟು ಮಾಡಿ
- ತೀರಾ ನಸುಕಿನಲ್ಲಿ ವಾಕಿಂಗ್‌ಗೆ ಹೋಗಬೇಡಿ. ಹಾಗೆಂದು ಸುಮ್ಮನೆ ಹೊದ್ದು ಮಲಗ್ಬೇಡಿ.
- ಚಳಿಗಾಲದಲ್ಲಿ ಹೆಚ್ಚು ಆ್ಯಕ್ಟಿವ್ ಇರಿ.
- ಬೆಚ್ಚಗಿನ ಬಟ್ಟೆ ಧರಿಸಿ.
- ಬಿಪಿ, ಶುಗರ್ ಕಂಟ್ರೋಲ್‌ನಲ್ಲಿರಲಿ.
- ಶ್ವಾಸಕೋಶದ ಸಮಸ್ಯೆ ಕಂಡು ಬಂದಲ್ಲಿ, ಸೂಕ್ತ ಚಿಕಿತ್ಸೆ ಪಡೆಯಿರಿ..
- ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ.
- ಲಘು ಆಹಾರ ಸೇವಿಸಿ. ಕೊಬ್ಬು ಹೆಚ್ಚಿರುವ, ಮದ್ಯ, ಧೂಮಪಾನ ವರ್ಜಿಸಿ.
- ಕೋಣೆಯೊಳಗೆ ತಣ್ಣನೆ ಗಾಳಿ ಸುಳಿಯದಂತೆ ಎಚ್ಚರ ವಹಿಸಿ.
- ಡಾ. ಕರವೀರಪ್ರಭು ಕ್ಯಾಲಕೊಂಡ
ಪಾಲಿಕೆ ಸಭೆಯಲ್ಲೇ ಎದೆ ನೋವಿನಿಂದ ಒದ್ದಾಡಿದ ಕಾರ್ಪೊರೇಟರ್
ಗಟಗಟ ಅಂತಾ ಎಣ್ಣೆ ಹೊಡಿತೀರಾ?: ಯುವಕರೇ ಹುಷಾರ್?
40 ವರ್ಷ ಮೇಲ್ಪಟ್ಟವರಿಗೆ ವಾರದಲ್ಲಿ 3 ದಿನ ಮಾತ್ರ ಕೆಲಸ!
ಕೊಬ್ಬು ಏರುತ್ತಿದೆ, ತೂಕ ಇಳಿಯುತ್ತಿಲ್ಲ!
ನಿಮ್ಮ ಮಗುವಿನ ಬುದ್ದಿಮತ್ತೆ ಹೆಚ್ಚಿಸಲು ಈ ಆಹಾರಗಳು ಉತ್ತಮ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.