ಮದುವೆಯಾದ ಮೇಲೆ ಕಿತ್ತಾಟ ಹೆಚ್ಚಾಗುವುದು ಯಾಕೆ?

By Kannadaprabha NewsFirst Published Sep 3, 2018, 12:58 PM IST
Highlights

ಮರದ ಟೊಂಗೆಯಲ್ಲಿ ಹಣ್ಣು ಕೆಳ ಬಾಗಿರುತ್ತದೆ. ಇದರರ್ಥ ಹಣ್ಣು ಟೊಂಗೆಗೆ ಭಾರವಾಗಿದೆ ಅಂತಲ್ಲ. ಈ ಹಣ್ಣನ್ನು ತೆಗೆದುಕೋ ಎಂಬ ಮರದ ನಮ್ರತೆಯದು...ಸಂಬಂಧದ ಪಾಠ ಹೇಳುವ ಓಂ ಸ್ವಾಮಿ 

- ನಮ್ಮನ್ನು ಖುಷಿ ಪಡಿಸೋ ಸಂಗಾತಿ
ನಿರೀಕ್ಷೆಗಳು ಕಡಿಮೆ ಇದ್ದಷ್ಟೂ ನಮ್ಮ ಖುಷಿ ಹೆಚ್ಚಾಗುತ್ತದೆ. ಇದು ದಾಂಪತ್ಯದ ವಿಷಯದಲ್ಲೂ ಸತ್ಯ. ಸಾಮಾನ್ಯವಾಗಿ ನಾವು ರಿಲೇಶನ್‌ಶಿಪ್‌ನಲ್ಲಿ ಬಿದ್ದಾಗ ಯೋಚಿಸೋದು ಸಂಗಾತಿ ಜೀವನ ಪರ್ಯಂತ ನಮ್ಮನ್ನು ಖುಷಿ ಖುಷಿಯಾಗಿರುವಂತೆ ಮಾಡಬೇಕು ಅಂತ. ಆದರೆ ನಮ್ಮನ್ನು ಲೈಫ್‌ಲಾಂಗ್ ಖುಷಿಯಲ್ಲಿಡುವ ವ್ಯಕ್ತಿ ಸಿಗಲಾರ. ಏಕೆಂದರೆ ಅಂಥವರು ಇರುವುದಿಲ್ಲ.

- ನೋವು ಬರುವುದಲ್ಲ, ಪಟ್ಟುಕೊಳ್ಳುವುದು
ನಮಗೆ ಖುಷಿ, ನೋವುಗಳ ಬಗ್ಗೆ ನಮ್ಮದೇ ಕಲ್ಪನೆ ಇದೆ. ಹೀಗಿದ್ದರೇ ಖುಷಿಯಾಗಿರಬೇಕು, ಹೀಗಿದ್ದರೆ ನಮ್ಮ ಕಣ್ಣಲ್ಲಿ ನೀರು ಸುರಿಸಬೇಕು ಅನ್ನುವುದು ನಮ್ಮ ಮೈಂಡ್‌ಸೆಟ್‌ನಲ್ಲಿರುತ್ತವೆ. ಖುಷಿ, ದುಃಖಗಳು ಇರುವುದಿಲ್ಲ. ಶಾಪಿಂಗ್ ಮಾಡಿದಾಗ ಖುಷಿಯಾಗುತ್ತೆ ಅಂದುಕೊಂಡರೆ ಖುಷಿಯಾಗುತ್ತೆ, ಇನ್ನೊಮ್ಮೆ ಕಾಡಲ್ಲಿ ಸುತ್ತಾಡೋದರಿಂದ ಅದೇ ಸಂತೋಷ ಸಿಗಬಹುದು. ನಮ್ಮಂತೆಯೇ ಇರುವ ಇನ್ನೊಬ್ಬ ವ್ಯಕ್ತಿ ಸದಾ ಬದಲಾಗುವ ನಮ್ಮನ್ನು ಖುಷಿಯನ್ನು ಗ್ರಹಿಸಿ ಜೀವನಪರ್ಯಂತ ಚೆನ್ನಾಗಿ ನೋಡಿಕೊಳ್ಳುವುದು ಸಾಧ್ಯವಾ, ಯೋಚಿಸಿ.

- ಮಕ್ಕಳಾದ್ಮೇಲೆ ಖುಷಿ ಸಿಗುತ್ತಾ?
ಗಂಡ ಹೆಂಡತಿ ನಡುವೆ ಎಷ್ಟೇ ವೈಮನಸ್ಯಗಳಿದ್ದರೂ ಮಕ್ಕಳಾದ ಮೇಲೆ ಸರಿಯಾಗುತ್ತೆ ಅನ್ನೋ ಮಾತು ಸತ್ಯ ಅಂತ ನನಗನಿಸುವುದಿಲ್ಲ. ಆಗಲೂ ನಮ್ಮನ್ನು ಖುಷಿ ಪಡಿಸುವವರಿಗೋಸ್ಕರ ನಾವು ಹುಡುಕುತ್ತಲೇ ಇರುತ್ತೇವೆ. ಕೆಲವೊಮ್ಮೆ ಮಕ್ಕಳಲ್ಲಿ ಅದನ್ನು ನಿರೀಕ್ಷಿಸಿ ಬೇಜಾರಾಗುವುದೂ ಇದೆ.

- ಗಂಡ ಹೆಂಡತಿ ನಡುವೆ ಪ್ರಮಾಣಿಕತೆ ಇರುತ್ತಾ?
ಪರಸ್ಪರ ಪ್ರಾಮಾಣಿಕರಾಗಬೇಕು ಅನ್ನೋದು ಹೆಚ್ಚಿನ ಗಂಡ ಹೆಂಡತಿಗಿರುತ್ತದೆ. ಆದರೆ ಅದು ಸಾಧ್ಯವಾಗಲ್ಲ. ಅಪ್ರಾಮಾಣಿಕರಾಗಲು ಏನೂ ಅವಕಾಶ ಇಲ್ಲದರವರು ಪ್ರಾಮಾಣಿಕರಾಗಿ ಉಳಿಯುವುದು ಸುಲಭ. ಅದೇ ಅಪ್ರಾಮಾಣಿಕರಾಗಲು ಎಲ್ಲ ಆಕರ್ಷಣೆಗಳೂ ಇರುವವರು ಪ್ರಾಮಾಣಿಕರಾಗಿ ಉಳಿಯೋದು ಅಷ್ಟು ಸುಲಭವಲ್ಲ. ಇದು ಯಾಕೆಂದರೆ ಮನುಷ್ಯ ಪ್ರಕೃತಿಯಲ್ಲೇ ಆ ಗುಣವಿಲ್ಲ. ಅದನ್ನು ಬಲವಂತವಾಗಿ ಬಹಳ ಕಾಲ ರೂಪಿಸಿಕೊಂಡಿರುವುದು ಕಷ್ಟ.

- ಪ್ರೀತಿಯ ಬಂಧನದಲ್ಲಿ ಸ್ವಾತಂತ್ರ್ಯ ಎಲ್ಲಿರುತ್ತೆ?
‘ನನಗೆ ಸಂಪೂರ್ಣ ಸ್ವಾತಂತ್ರ್ಯ ಇದೆ, ಬೇಕಾದಲ್ಲಿ ಹೋಗ್ತೇನೆ. ಬೇಕಾದ ಹಾಗೆ ಇರುತ್ತೇನೆ’ ಅನ್ನುವುದು ವಿವಾಹವಾದ ಬಳಿಕ ಕೇಳಿಬರುವ ಮಾತು. ಎಷ್ಟೋ ಸಲ ಅವರು ತನಗೆ ಇನ್ನೊಬ್ಬನಿಂದ ಸಿಕ್ಕ ಸ್ವಾತಂತ್ರ್ಯವನ್ನು ತಾನು ಆತನಿಗೂ ನೀಡಬೇಕು ಅನ್ನೋದನ್ನು ಗ್ರಹಿಸೋದೇ ಇಲ್ಲ. ಸೂಕ್ಷ್ಮವಾಗಿ ಹೇಳಬೇಕೆಂದರೆ, ಸಂಗಾತಿಯ ಬಗ್ಗೆ ಜಡ್ಜ್ ಮಾಡದೇ ಇರೋದೆ ನಾವು ಅವರಿಗೆ ನೀಡುವ ಸ್ವಾತಂತ್ರ್ಯ.

- ಸಂಬಂಧಗಳು ಚೆನ್ನಾಗಿರುವುದು ಹೇಗೆ?
ನಿರೀಕ್ಷೆಗಳು ಕಡಿಮೆ ಇದ್ದಾಗ, ಕಲ್ಪನೆಗಿಂತ ಹೆಚ್ಚು ಪ್ರಾಕ್ಟಿಕಲ್ ಅಂಶಗಳಿಗೆ ಒತ್ತುಕೊಟ್ಟಾಗ ಸಂಬಂಧ ಚೆನ್ನಾಗಿರುತ್ತದೆ. ನೀವು ಗಮನಿಸಿ, ಮದುವೆಯಾದ ಮೇಲೆ ಇರೋದಕ್ಕಿಂತ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಾಗ ಸಂಬಂಧ ಚೆನ್ನಾಗಿರುತ್ತದೆ. ಬರೀ ಪ್ರೀತಿಸುತ್ತಿರುವಾಗ ಇನ್ನೂ ಚೆನ್ನಾಗಿರುತ್ತದೆ. ಮದುವೆ ಆದ ಮೇಲೆ ಎಲ್ಲವನ್ನೂ ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋ ಮನಸ್ಥಿತಿ ಹೆಚ್ಚು. ಅದು ಹಿಂದಿನ ಎರಡು ಸಂಬಂಧಗಳಲ್ಲಿ ಇರೋದಿಲ್ಲ. ಅಲ್ಲಿ ಸಂಬಂಧವನ್ನು ಜತನದಿಂದ ಕಾಯ್ದು ಕಾಪಾಡಿಕೊಳ್ಳುವ ಬಗ್ಗೆ ಕಾಳಜಿ ಇರುತ್ತದೆ. ಆದರೆ ಮದುವೆಯ ಬಳಿಕ ಆ ಬಂಧ ಸಡಿಲವಾದ ಹಾಗಾಗುತ್ತದೆ. ಮದುವೆ ಅಂದರೆ ಪ್ರೀತಿಯಿಂದ ಬದುಕಲು ಇರುವ ಪರ್ಮೀಶನ್. ಆ ಪ್ರೀತಿಯಲ್ಲಿ ಸಂಬಂಧ ಹಳಸದಂತೆ ಕಾಪಿಡುವ ಹೊಣೆಗಾರಿಕೆಯೂ ಇದೆ ಅನ್ನೋದನ್ನು ಮರೆಯದಿರೋಣ. 

click me!