ಪೀರಿಯಡ್ಸ್‌ಗೂ ಐದಾರು ದಿನ ಮೊದಲೇ ಕೆಲವು ಹೆಣ್ಮಕ್ಕಳು ಮಂಕಾಗಿರೋದ್ಯಾಕೆ?

By Suvarna Web DeskFirst Published Mar 10, 2018, 6:48 PM IST
Highlights

ಋತುಸ್ರಾವದ ಮುನ್ನಾದಿಗಳಲ್ಲಿ ಕಾಣಿಸುವ ಮನಸ್ಸಿಗೆ ಕಿರಿಕಿರಿ, ಬೇಸರ, ಮೈ ಬಾತಿದೆ ಎಂಬ ಭಾವನೆ, ಸ್ತನದ ನೋವು, ಈ ಎಲ್ಲಾ ಲಕ್ಷಣಗಳಿಗೆ Pre menstrual Syndrome ಎಂದು ಹೇಳುತ್ತೇವೆ. ಒಂದು ಅಧ್ಯಯನದ ಪ್ರಕಾರ ಶೇ.75ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಇದು ಕಾಣಿಸುತ್ತದೆ.

- ಡಾ.ಕೆ.ಎಸ್.ಶುಭ್ರತಾ, ಮನೋವೈದ್ಯೆ, ಶಿವಮೊಗ್ಗ

ಸತೀಶ್ ಮತ್ತು ಗೀತಾರ ದಾಂಪತ್ಯ ಜೀವನ ಈಗ ಆರನೆಯ ವರ್ಷಕ್ಕೆ ಕಾಲಿಟ್ಟಿದೆ. ಎರಡು ವರ್ಷದ ಪುಟ್ಟ ಮಗನೂ ಇದ್ದಾನೆ. ಆರು ವರ್ಷಗಳಾದರೂ ಸತೀಶನಿಗೆ ಗೀತಾಳ ಕೆಲವು ವರ್ತನೆಗಳು ಪ್ರಶ್ನೆಯಾಗಿಯೇ ಉಳಿದಿವೆ. ತಿಂಗಳ ಬಹಳಷ್ಟು ದಿನ ಗೀತಾ ಚೆನ್ನಾಗಿಯೇ ಇರುತ್ತಾಳೆ. ಎಲ್ಲರ ಮನೆಯಲ್ಲಿಯ ಹಾಗೆ ಸಣ್ಣಪುಟ್ಟ ಜಗಳಗಳು ಇವರ ಮಧ್ಯೆಯೂ ಆಗುತ್ತದೆ. ಆದರೆ ಇನ್ನು ಕೆಲವು ದಿನಗಳು ತುಂಬಾ ಕಿರಿಕಿರಿ ಮಾಡುತ್ತಾಳೆ. ಏನು ಹೇಳಿದರೂ ಸಿಟ್ಟು, ಮಂಕಾಗಿರುವುದು, ಸರಿಯಾಗಿ ನಿದ್ರೆ ಮಾಡದಿರುವುದು, ಸುಮ್ಮಸುಮ್ಮನೇ ಅಳು.'ಯಾಕೋ ಇವಳ ಮೂಡ್ ಸರಿಯಾಗಿಲ್ಲ' ಎಂದು ಸತೀಶನೇ ಆ ನಾಲ್ಕೈದು ದಿನಗಳು ಸುಮ್ಮನಾಗುತ್ತಾನೆ'. ಗೀತಾಳ ಸಮಸ್ಯೆ ಜಗತ್ತಿನ ಬಹಳಷ್ಟು ಮಹಿಳೆಯರ ಸಮಸ್ಯೆಯೂ ಹೌದು. 

ಋತುಸ್ರಾವದ ಮುನ್ನಾದಿಗಳಲ್ಲಿ ಕಾಣಿಸುವ ಮನಸ್ಸಿಗೆ ಕಿರಿಕಿರಿ, ಬೇಸರ, ಮೈ ಬಾತಿದೆ ಎಂಬ ಭಾವನೆ, ಸ್ತನದ ನೋವು, ಈ ಎಲ್ಲಾ ಲಕ್ಷಣಗಳಿಗೆ Pre menstrual Syndrome ಎಂದು ಹೇಳುತ್ತೇವೆ. ಒಂದು ಅಧ್ಯಯನದ ಪ್ರಕಾರ ಶೇ.75ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಇದು ಕಾಣಿಸುತ್ತದೆ. ಶೇ.10 ರಷ್ಟು ಮಹಿಳೆಯರಲ್ಲಿ ಈ ಲಕ್ಷಣಗಳು ತೀವ್ರತರವಾಗಿ ಕಾಣಿಸಿಕೊಂಡು, ಖಿನ್ನತೆ /ಆತಂಕದ ಲಕ್ಷಣಗಳು ಹೆಚ್ಚಾಗಿರುತ್ತದೆ. ಅದಕ್ಕೆ Pre MenstrualDysphoric Disorder ಎಂದು ಕರೆಯುತ್ತೇವೆ. ಋತುಸ್ರಾವಕ್ಕೆ ಮುಂಚೆ ಏಳರಿಂದ ಹತ್ತು ದಿನಗಳ ಅವಧಿಯಲ್ಲಿ ಪ್ರಾರಂಭವಾಗುವ ಈ ಲಕ್ಷಣಗಳು ಋತುಸ್ರಾವ ಆರಂಭವಾಗುತ್ತಿದ್ದ ಹಾಗೆ ಮಾಯವಾಗುತ್ತವೆ. ಸಮಸ್ಯೆ ಅತೀ ತೀವ್ರವಾದಾಗ ಖಿನ್ನತೆಯ ಲಕ್ಷಣದ ಜೊತೆ ಆತ್ಮಹತ್ಯೆಯಂಥ ಯೋಚನೆಗಳೂ ಕಾಡಬಹುದು.

ಯಾಕೆ ತಿಳಿಯಬೇಕು?

Pre Menstrual Dysphoric Disorder / PMDDಯಿಂದ ದೈಹಿಕವಾಗಿ ಏನೂ ತೊಂದರೆಯಿಲ್ಲ ದಿದ್ದರೂ, ಮಹಿಳೆಗೆ ಆ ದಿನಗಳಲ್ಲಿ ಮನಸ್ಥಿತಿ ಚೆನ್ನಾ ಗಿಲ್ಲದ ಕಾರಣ, ದಿನನಿತ್ಯದ ಕೆಲಸ ಕಾರ್ಯಗಳನ್ನುಮಾಡಲಿಕ್ಕಾಗದೇ ಹೋಗುತ್ತದೆ. ಹಾಗೆಯೇ ಕುಟುಂಬದಲ್ಲಿನ ಇತರ ಸದಸ್ಯರೊಂದಿಗಿನ ಸಂಬಂಧ ಗಳಲ್ಲೂ ಸಮಸ್ಯೆ ಉಂಟಾಗುತ್ತದೆ. ಪರಿಹಾರ ಈ ಸಮಸ್ಯೆಯ ಚಿಕಿತ್ಸೆಯಲ್ಲಿ ಪ್ರಥಮ ಹೆಜ್ಜೆ, ಸಮಸ್ಯೆಯನ್ನುಅರಿಯುವುದು. ಒಂದು ಪುಸ್ತಕ/ ಡೈರಿಯಲ್ಲಿ / ಕ್ಯಾಲೆಂಡರ್‌ನಲ್ಲಿ ನಿಮ್ಮ ಋತುಸ್ರಾವದ ದಿನಗಳು ಮತ್ತು ಮನಸ್ಸಿಗೆ ಕಿರಿಕಿರಿ ಉಂಟಾಗುವ ದಿನಗಳನ್ನು ಗುರುತು ಮಾಡಿಕೊಳ್ಳಿ. ಆಗ ಸರಿಯಾಗಿ ತಿಂಗಳಿನಲ್ಲಿ ಯಾವ ದಿನಗಳಲ್ಲಿ ಈ ಸಮಸ್ಯೆ ಆಗಬಹುದೆಂದು ತಿಳಿಯುತ್ತದೆ. ಇದು ಮಾನಸಿಕವಾಗಿ ಈ ಸಮಸ್ಯೆಎದುರಿಸುವುದಕ್ಕೆ ನೀವು ಸಿದ್ಧರಾಗಲು ಸಹಾಯಕ.

ಜೀವನಶೈಲಿಯ ಬದಲಾವಣೆಗಳು ಖಂಡಿತವಾಗಿ ಈ ಸಮಸ್ಯೆ ಕಡಿಮೆ ಮಾಡಲು ಸಹಾಯಕ. ದಿನನಿತ್ಯ ೪೫ ನಿಮಿಷವಾದರೂ ವ್ಯಾಯಾಮ ಮಾಡಿ. ಕೊಬ್ಬಿನ ಅಂಶ ಕಡಿಮೆ ಇರುವ ಆಹಾರ ಸೇವಿಸಿ. ನೀರು ಸಾಕಷ್ಟು ಕುಡಿಯಿರಿ. ಒತ್ತಡ ರಹಿತ ಜೀವನ ಶೈಲಿ ರೂಢಿಸಿಕೊಳ್ಳಿ.ನಿಮ್ಮ ಸಂಗಾತಿಗೆ ಈ ಸಮಸ್ಯೆಯ ಬಗ್ಗೆ ತಿಳಿಸುವುದು ಅವಶ್ಯಕ. ನಿಮ್ಮೊಂದಿಗೆ ಸಹಕರಿಸಲು ವಿನಂತಿಸಿ.

ನೋವು ಶಮನ ಮಾಡುವಂತ ಮಾತ್ರೆಗಳು, ಸ್ತನದ ಬಳಿಯ ನೋವು, ಮೈಕೈ ನೋವಿಗೆ ಸಹಕಾರಿ. ಇದು ಕೂಡ ವೈದ್ಯರ ಸಲಹೆಯ ನಂತರ. ಇಷ್ಟಾದರೂ ಕಡಿಮೆಯಾಗದಿದ್ದರೆ, ಮನೋವೈದ್ಯರನ್ನು ಕಂಡರೆ, ಆಪ್ತ ಸಮಾಲೋಚನೆ ಮತ್ತು ಬೇಕಾದಲ್ಲಿ ಮಾತ್ರೆಗಳನ್ನು ನೀಡುತ್ತಾರೆ. 

ಯಾಕೆ ಹೀಗೆ?

ಈ ಸಮಸ್ಯೆಗೆ ಕಾರಣಗಳನ್ನು ಹುಡುಕಿದಾಗ, ಋತುಚಕ್ರದ ಸಮಯದಲ್ಲಿ ಆಗುವ ಹಾರ್ಮೋನು ವ್ಯತ್ಯಾಸದಿಂದ ಮಿದುಳಿನಲ್ಲಿಯ 'ಸೆರೆಟೋನಿನ್' ಎಂಬ ನರವಾಹಕದ ಏರುಪೇರು ಉಂಟಾಗಿ ಅದರಿಂದ ಈ ಲಕ್ಷಣಗಳು ಆಗುತ್ತದೆಂಬುದು ತಿಳಿದುಬರುತ್ತದೆ.
 

click me!