ನಮ್ಮನ್ನು ಸಂತೋಷದಿಂದ ದೂರ ಕೊಂಡೊಯ್ಯುವ ಫೋಮೋ

By Suvarna NewsFirst Published Jun 9, 2020, 2:52 PM IST
Highlights

ಫೋಮೋ ಎಂಬುದು ಹೊಸತೇನಲ್ಲ, ಆದರೆ, ಸೋಷ್ಯಲ್ ಮೀಡಿಯಾ ಹಾವಳಿಯಲ್ಲಿ ತನ್ನ ಹಾವಳಿ ಹೆಚ್ಚಿಸಿರುವಂಥದ್ದು. ಜನರ ಸಂತೋಷ ಕಸಿಯುತ್ತಿರುವಂಥದ್ದು. ಏನಪ್ಪಾ ಈ ಫೋಮೋ ಎಂದರೆ? 

ಸಮಯ ಕಳೆಯಲು, ಬ್ಯುಸಿ ಇದ್ದಾಗ್ಲೂ, ನಿದ್ರೆ ನಡುವೆಯೂ ನಮಗೆಲ್ಲರಿಗೂ ಅಂಟಿರುವ ಚಟವೆಂದರೆ ಸೋಷ್ಯಲ್ ಮೀಡಿಯಾ ಚೆಕ್ ಮಾಡುತ್ತಿರುವುದು. ಹಾಗೆ ಚೆಕ್ ಮಾಡಿದಾಗಲೆಲ್ಲ ಕಾಡುವ ಭಾವವೇ ಫೋಮೋ. 

ಫೋಮೋನಾ ಏನಪ್ಪಾ ಹಂಗಂದ್ರೆ
ಇದೇ ಫಿಯರ್ ಆಫ್ ಮಿಸ್ಸಿಂಗ್ ಔಟ್. ಅಂದರೆ, ಉಳಿದವರೆಲ್ಲರಿಗೂ ಸಿಕ್ಕ ಖುಷಿ, ರೆಕಗ್ನಿಶನ್, ಅವಕಾಶಗಳು, ಪ್ರೀತಿ- ಇವೆಲ್ಲವುಗಳಿಂದ ತಾನು ವಂಚಿತನಾಗಿದ್ದೇನೆ ಎಂಬ ಭಾವ. ಎಲ್ಲರ ಜೀವನವೂ ಚೆನ್ನಾಗಿದೆ, ಎಲ್ಲರೂ ಹೊಸತನ್ನು ಅನುಭವಿಸುತ್ತಿದ್ದಾರೆ, ಆದರೆ ನನ್ನ ಜೀವನ ಮಾತ್ರ ಇದಾವುದೂ ಇಲ್ಲದೆ ಬೋರಿಂಗ್ ಆಗಿದೆ ಎಂದುಕೊಳ್ಳುವುದು. ಇದು ನಮ್ಮಲ್ಲಿನ ಹೊಟ್ಟೆಕಿಚ್ಚು, ಕೀಳರಿಮೆಗಳನ್ನು ಬಡಿದೆಬ್ಬಿಸಿ ಅವಕ್ಕೆ ಮತ್ತಷ್ಟು ಇಂಧನ ತುಂಬುತ್ತದೆ. 

ಸೋಷ್ಯಲ್ ಮೀಡಿಯಾಕ್ಕೆ ಅಂಟಿಕೊಂಡವರಲ್ಲಿ ಈ ಭಾವ ಹೆಚ್ಚು. ಎಲ್ಲರೂ ಸುಖವಾಗಿದ್ದಾರೆ, ಎಲ್ಲರೂ ಏನೋ ಮಾಡಿಕೊಂಡಿದ್ದಾರೆ ಆದರೆ ನನ್ನ ಬದುಕಿನಲ್ಲಿ ಮಾತ್ರ ಇದಾವುದೂ ಇಲ್ಲ ಎಂಬ ಭಾವನೆ ತರುವುದೇ ಫೋಮೋ. ಇನ್ನೊಬ್ಬರ ಫ್ರೈಡೇ ನೈಟ್ ಪಾರ್ಟಿಯಿಂದ ಹಿಡಿದು, ಅವರಿಗೆ ಸಿಗುವ ಪ್ರಮೋಶನ್, ಮತ್ಯಾರೋ ಕಟ್ಟಿಸಿದ ಮನೆ, ಅವರು ನೋಡಿದ ಚಿತ್ರಗಳ ಪಟ್ಟಿ- ಎಲ್ಲವೂ ತಮಗಿದು ಸಿಗುತ್ತಿಲ್ಲ ಎಂಬ ಯೋಚನೆ ಹುಟ್ಟಿಸುವ ಜೊತೆಗೇ ಇದಕ್ಕಾಗಿ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯನ್ನೂ ಒಳಗೊಂಡಿರುತ್ತದೆ. 

ಇದರಿಂದ ಹೆಚ್ಚಿನವರು ಒತ್ತಡಕ್ಕೊಳಗಾದರೆ, ಮತ್ತೆ ಕೆಲವರು ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಈ ಫೋಮೋವನ್ನು ಗುರುತಿಸುವುದು ಹೇಗೆ, ನಿಯಂತ್ರಿಸುವುದು ಹೇಗೆ ಎಲ್ಲ ತಿಳ್ಕೋಳೋಕೆ ಮುಂದೆ ಓದಿ.

ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚು ...

ಹೊಸತಲ್ಲ
ಫೋಮೋ ಏನು ಹೊಸತಲ್ಲ. ಪಕ್ಕದ ಮನೆಯ ಹೆಂಗಸು ಹೊಸ ಸೀರೆ ತೆಗೆದುಕೊಂಡು ಪ್ರದರ್ಶಿಸಿದಾಗ, ಮತ್ತೊಬ್ಬರ ಮನೆಯಲ್ಲಿ ಗ್ರೈಂಡರ್ ತಂದಾಗ, ಇನ್ನೊಬ್ಬರು ತೀರ್ಥಯಾತ್ರೆ ಮಾಡಿಬಂದ ಸುದ್ದಿಗಳನ್ನು ಕೇಳಿದಾಗ- ಹಿಂದಿನ ತಲೆಮಾರಿನವರಲ್ಲೂ ಈ ಭಾವಗಳು ಹುಟ್ಟುತ್ತಿದ್ದವು. ಆದರೆ, ಆಗಿನವರು ಅವನ್ನೆಲ್ಲ ತಮ್ಮ ಹಣೆಬರಹ ಎಂದೋ, ದೇವರು ನೀಡಿದ್ದು ಎಂದೋ ನಂಬಿಕೆಗನುಗುಣವಾಗಿ ನಿಭಾಯಿಸಿಬಿಡುತ್ತಿದ್ದರು. ಈಗ ಹಾಗಲ್ಲ, ಈಗಿನ ತಲೆಮಾರಿನವರಿಗೆ ಇಂಥ ಯಾವುದೇ ನಂಬಿಕೆಗಳಿಲ್ಲ. ಜೊತೆಗೆ, ಆಗಿನಂತೆ ಇನ್ನೊಬ್ಬರ ಜೀವನದ ಇಂಥ ಹ್ಯಾಪಿ ಟೈಂಗಳು ಅಲ್ಲೊಂದು ಇಲ್ಲೊಂದು ಕಾಣಿಸದೆ ಫೇಸ್‌ಬುಕ್, ಇನ್ಸ್ಟಾ‌ಗಳನ್ನು ಸ್ಕ್ರಾಲ್ ಮಾಡಿದಷ್ಟೂ ಕಾಣಿಸುತ್ತಲೇ ಹೋಗುತ್ತವೆ. ನೋಡಿದಷ್ಟೂ ಮುಗಿಯದ ಇವು ನಮ್ಮ ಜೀವನ ಮಾತ್ರ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿರುವಂಥ ಭ್ರಮೆ ಹುಟ್ಟು ಹಾಕುತ್ತದೆ. 

ಕಾಣುವುದು ಹೈಲೈಟ್ ಮಾತ್ರ
ನಾವು ಕಡೆಗಣಿಸುವುದೇನೆಂದರೆ ಸೋಷ್ಯಲ್ ಮೀಡಿಯಾದಲ್ಲಿ ಎಲ್ಲರ ಜೀವನದ ಪೂರ್ತಿ ಭಾಗವಲ್ಲದೆ ಹೈಲೈಟ್ ಮಾತ್ರ ಅಲ್ಲಿ ಕಾಣಿಸುತ್ತಿರುತ್ತದೆ. ಹ್ಯಾಪಿ ಟೈಂ ಮಾತ್ರ ಶೇರ್ ಆಗಿರುತ್ತದೆ. ಅವೆಲ್ಲವೂ ಒಬ್ಬರದಲ್ಲದೆ, ಒಬ್ಬೊಬ್ಬರದು ಒಂದೊಂದು ಹ್ಯಾಪಿ ಟೈಂ ಇರುತ್ತದಷ್ಟೇ. ತಾವು ತಮ್ಮ ಜೀವನದ ಯಾವ ಭಾಗ ತೋರಿಸಲು ಬಯಸಿರುತ್ತಾರೋ ಅದಷ್ಟೇ ಕಾಣುತ್ತಿರುತ್ತದೆ. ಸೋಷ್ಯಲ್ ಮೀಡಿಯಾಗಳು ಜನರಿಗೆ ಕೊಚ್ಚಿಕೊಳ್ಳಲು ವೇದಿಕೆ ಒದಗಿಸುತ್ತವೆ. ಸಂತೋಷವೆಂಬುದು ಅಲ್ಲಿ ಸ್ಪರ್ಧೆಗೆ ಬಿದ್ದಂತೆ ಕಾಣಿಸುತ್ತದೆ. ಉಳಿದಂತೆ ಅವರ ಜೀವನದಲ್ಲಿ ಕೂಡಾ ಬೆಳಗಿನಿಂದ ರಾತ್ರಿವರೆಗೆ ಏಕತಾನತೆಯ ದುಡಿತ, ದುಃಖ, ಬೇಜಾರು, ಜಗಳ, ನಿರಾಶೆ ಎಲ್ಲವೂ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ಫೋಮೋ ಅನುಭವಿಸಬೇಕಿಲ್ಲ, ವೃಥಾ ಒತ್ತಡ, ಹತಾಶೆ, ಆತಂಕ, ಹೊಟ್ಟೆಕಿಚ್ಚುಗಳಿಗೆ ಅವಕಾಶ ನೀಡಬೇಕಿಲ್ಲ. 

ಈ ಅಭ್ಯಾಸಗಳಿಗೆ ಬೈ‌, ಸೆಕ್ಸ್‌ಗೆ ಹಾಯ್‌ ! ಏನಿದು ಟ್ರೆಂಡ್!

ಫೋಮೋದಿಂದ ಹೊರಬರುವುದು ಹೇಗೆ?

- ಎಲ್ಲಕ್ಕಿಂತ ಮೊದಲು ಸೋಷ್ಯಲ್ ಮೀಡಿಯಾ ಬಳಕೆಯನ್ನು ಕಡಿಮೆಗೊಳಿಸುವುದೇ ಉತ್ತಮ ಮಾರ್ಗ. ಇದರಿಂದ ಸಮಯದ ಉಳಿತಾಯವಷ್ಟೇ ಅಲ್ಲದೆ, ಪರಿಚಿತರ, ಅಪರಿಚಿತರ ಜೀವನದೊಳಕ್ಕೆಲ್ಲ ಹಣಕಿ ನೋಡಿ ಸುಳ್ಳುಸುಳ್ಳೇ ಕಲ್ಪಿಸಿಕೊಂಡು ಕೊರಗುವುದರಿಂದ ತಪ್ಪಿಸಿಕೊಳ್ಳಬಹುದು. 

- ಸಾಧ್ಯವಾದಷ್ಟು ವಾಸ್ತವವನ್ನು ಒಪ್ಪಿಕೊಂಡು ಗುರಿಗಳನ್ನು ಸಾಧಿಸಲು ಏನು ಮಾಡಬಹುದೋ ಅದರತ್ತ ಗಮನ ಹರಿಸಿ. ಜೀವನದ ಬಗ್ಗೆ ಅತೃಪ್ತಿ ಇದ್ದರೆ, ನಿಮ್ಮ ಕನಸಿನ ಜೀವನ ನಡೆಸಲು ಬೇಕಾದ ಸಿದ್ಧತೆಗಳನ್ನು ಮಾಡುವತ್ತ ಪ್ರಯತ್ನ ಹಾಕಿ. 

- ಸೋಷ್ಯಲ್ ಮೀಡಿಯಾದಲ್ಲಿರುವುದಷ್ಟೇ ಜೀವನವಲ್ಲ, ಎಲ್ಲರ ಜೀವನವೂ ನಿಮ್ಮದರಂತೆಯೇ ಸಾಗುತ್ತಿರುತ್ತದೆ, ಪಾಸಿಟಿವ್ ಔಟ್‌ಲುಕ್ ಅಥವಾ ನೆಗೆಟಿವ್ ಔಟ್‌ಲುಕ್ ಮಾತ್ರ ನಿಮ್ಮ ಸಂತೋಷ, ದುಃಖಗಳನ್ನು ನಿರ್ಧರಿಸುತ್ತದೆ ಎಂಬುದನ್ನು ನೆನಪಿಡಿ. 

- ನಿಮ್ಮ ಸಂತೋಷಗಳನ್ನು ಸೋಷ್ಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಬದಲು ಆ ಬಗ್ಗೆ ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮೆಲ್ಲ ವಿಷಯಗಳನ್ನು ಸಾರ್ವಜನಿಕರು ಅನುಮೋದಿಸಬೇಕು ಎನ್ನುವ ಹಪಹಪಿ ಹೋಗಿ ವೈಯಕ್ತಿಕವಾಗಿ ಸಂತೋಷ ಅನುಭವಿಸುವುದು ಕಲಿಯುವಿರಿ. 

- ಸೋಷ್ಯಲ್ ಮೀಡಿಯಾದಲ್ಲಲ್ಲ, ನಿಜ ಜೀವನದಲ್ಲಿ ಹೆಚ್ಚು ಹೆಚ್ಚು ಜನರನ್ನು ಪರಿಚಯ ಮಾಡಿಕೊಳ್ಳಿ. ಅವರೊಂದಿಗೆ ಮಾತನಾಡಿ, ಗೆಳೆತನ ಬೆಳೆಸಿ. ಎಲ್ಲರ ಜೀವನದ ನೋವುನಲಿವುಗಳನ್ನು ಆಲಿಸಿ. ಇದರಿಂದ ಮನಸ್ಸು ಆರೋಗ್ಯಕರವಾಗಿರುತ್ತದೆ. ಜೊತೆಗೆ, ಅರೊಂದಿಗೆ ಪ್ರವಾಸ, ಹರಟೆ, ಆಟ ಎಂದು ಹಲವು ಅನುಭವಗಳಿಗೆ ತೆರೆದುಕೊಳ್ಳಬಹುದು. 

click me!