ಕೇಶವನ್ನು ಕೇರ್‌ಫುಲ್‌ ಆಗಿ ಕಾಪಾಡಿಕೊಳ್ಳೋದು ಹೇಗೆ?

First Published Jun 19, 2018, 10:06 AM IST
Highlights

ಕಾಲಕ್ಕೆ ತಕ್ಕಂತೆ ಕೂದಲ ಪೋಷಣೆ ಅಗತ್ಯ. ಇಲ್ಲದಿದ್ದರೆ ಸುಖಾ ಸುಮ್ಮನೆ ಕೂದಲು ಉದುರುತ್ತದೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಸಮಸ್ಯೆ. ಅದರಲ್ಲಿಯೂ ಒಣಗಿದ ಹಾಗೂ ತುರಿಕೆ ಸಮಸ್ಯೆ ಎದುರಿಸುತ್ತಿರುವವರಿಗೆ ಇದೊಂದು  ದೊಡ್ಡ ತಲೆಬೇನೆ. ಅದರಲ್ಲಿಯೂ ಬಿಳಿ ಹೊಟ್ಟಿನ ಸಮಸ್ಯೆ ಇದ್ದರಂತೂ ಮುಗೀತು. ಸಿಕ್ಕಾಪಟ್ಟೆ ರಗಳೆ ಎನಿಸುತ್ತದೆ. 

ಚರ್ಮ ಒಣಗಲು ವಾತಾವಾರಣ ಹಾಗೂ ತೇವಾಂಶದಲ್ಲಿನ ವ್ಯತ್ಯಾಸವೇ ಕಾರಣ. ಇದರಿಂದಾಗಿ ತಲೆಯ ಭಾಗದ ಚರ್ಮ ಒಣಗಿ, ಬಿಳಿ ಹೊಟ್ಟಿನ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ಕಾರಣದಿಂದಲೇ ಕೂದಲಿನ ಬುಡ ದುರ್ಬಲಗೊಂಡು, ಕೂದಲು ಉದುರುತ್ತದೆ.

ತಡೆಯೋದು ಹೇಗೆ?

- ತಲೆ ಶುಚಿತ್ವ ಕಾಪಾಡಿಕೊಳ್ಳಲು ಮೊದಲು ಆದ್ಯತೆ ನೀಡಬೇಕು. ಇದರಿಂದ ಹೊಟ್ಟು ಹಾಗೂ ಕೂದಲುದುರುವುದನ್ನು ತಡೆಯಬಹುದು. ಬೇಸಿಗೆಯಲ್ಲಿ ಬಳಸುವಂಥ ಬಹುತೇಕ ಶಾಂಪೂಗಳು ಚಳಿಗಾಲಕ್ಕೆ ಒಗ್ಗುವುದಿಲ್ಲ. ಚಳಿಗಾಲದಲ್ಲಿ ಕಡಿಮೆ ಸಾಂದ್ರತೆ ಇರುವಂಥ ಹಾಗೂ ತಲೆ ಭಾಗಕ್ಕೆ ತೇವಾಂಶ ಒದಗಿಸಬಲ್ಲ ಶಾಂಪೂ ಬಳಕೆ ಉತ್ತಮ.

- ಒಂದು ವೇಳೆ ಅತಿಯಾದ ತಲೆಹೊಟ್ಟು ಇದ್ದಲ್ಲಿ ಡ್ಯಾಂಡ್ರಫ್ ಶಾಂಪೂ ಬಳಸಿ. ಇದರಿಂದಾಗಿ ತುರಿಕೆ, ಶುಷ್ಕತನ ದೂರವಾಗುತ್ತದೆ. ಕೆಲವು ಗೃಹ ಬಳಕೆಯ ಸಾಮಗ್ರಿಗಳಾದ ತೈಲ ಹಾಗೂ ಮೊಟ್ಟೆಯ ಬಿಳಿ ಭಾಗವೂ ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ನೆರವಾಗುತ್ತದೆ.

- ಈ ರೀತಿಯ ಸರಳ, ಸುಲಭದ ವಿಧಾನಗಳನ್ನು ಅನುಸರಿಸುವ ಮೂಲಕ ತಿಂಗಳುಗಳ ಅವಧಿಯಲ್ಲಿ ನಿಧಾನವಾಗಿ ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತರಾಗಬಹುದು. ಒಂದು ವೇಳೆ ಹೊಟ್ಟು, ತುರಿಕೆ ಮುಂದುವರಿದಲ್ಲಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.

- ಚರ್ಮದ ಶುಷ್ಕತನಕ್ಕೆ ನಾನಾ ಕಾರಣಗಳು. ಇವುಗಳನ್ನು ಸ್ಪಷ್ಟವಾಗಿ ಗುರುತಿಸಿ, ಕೇವಲ ವೈದ್ಯರು ಮಾತ್ರ ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಸ್ವಯಂವೈದ್ಯರಾಗಬೇಡಿ.

ವಿವಿಧ ಬಗೆಯ ಹೊಟ್ಟು...

ಸೆರ್ಬೋಹೆಕ್ ಡರ್ಮಟೈತಿಸ್

- ಕೆಂಪು ಹಾಗೂ ತೈಲಯುಕ್ತವಾದ ಚರ್ಮದಲ್ಲಿವು ಕಾಣಿಸುತ್ತದೆ. ಜತೆಗೆ ಬಿಳಿ ಅಥವಾ ಹಳದಿ ಬಣ್ಣದ ಹೊಟ್ಟು ಉದುರಲು ಶುರುವಾಗುತ್ತದೆ. ಇದು ಕೇವಲ ತಲೆಯ ಭಾಗವನ್ನಷ್ಟೇ ಅಲ್ಲ. ಕಣ್ಣಿನ ಉಬ್ಬು, ಮೂಗಿನ ಬದಿಯಲ್ಲಿ, ಕಿವಿ ಹಿಂಭಾಗದಲ್ಲಿ, ತೊಡೆ ಸಂದುಗಳಲ್ಲಿ ಹಾಗೂ ಕಂಕುಳಿನಲ್ಲೂ ಕಾಣಿಸಿಕೊಳ್ಳುತ್ತದೆ.

- ಸೋರಿಯಾಸಿಸ್: ಈ ಚರ್ಮದ ಸಮಸ್ಯೆಯು ಡೆಡ್‌ಸ್ಕಿನ್ ಸೆಲ್ಸ್‌ನಿಂದ ಕಾಣಿಸಿಕೊಳ್ಳುತ್ತದೆ. ತಲೆ ಭಾಗದಲ್ಲಿನ ಸೊರಿಯಾಸಿಸ್ ಕೆಂಪು ಬಣ್ಣಕ್ಕೆ ತಿರುಗಿ ಹಣೆ ಹಾಗೂ ಕುತ್ತಿಗೆ ಮತ್ತು ಬೆನ್ನಿನ ಭಾಗದವರೆಗೂ ಹರಡುತ್ತದೆ.

- ಫಂಗಲ್ ಇನ್ಫೆಕ್ಷನ್:  ವಯಸ್ಕರಲ್ಲಿ ನೈಸರ್ಗಿಕವಾಗಿಯೇ ಕಾಣಿಸಿಕೊಳ್ಳುವ ಮಲಸೇಝಿಯಾ ಪ್ರಭೇದ ಫಂಗಸ್ ತಲೆ ಭಾಗದ ಎಣ್ಣೆ ಅಂಶವನ್ನು ಬಳಸಿಕೊಂಡು ಬೆಳೆಯುತ್ತದೆ. ಇದು ಅಷ್ಟೇನೂ ಹಾನಿಕಾರಕ ಅನಿಸದೇ ಇದ್ದರೂ, ಫಂಗಸ್ ಹೆಚ್ಚಾದಂತೆ ತಲೆ ಭಾಗದಲ್ಲಿ ತುರಿಕೆ ಹೆಚ್ಚಾಗಿ ಹೊಟ್ಟನ್ನೂ ವೃದ್ಧಿಸುತ್ತದೆ.

ಎಕ್ಜೇಮಾ: ಈ ಗುಣಲಕ್ಷಣ ಕಾಣಿಸಿಕೊಂಡಲ್ಲಿ ತಲೆಯ ಭಾಗದ ಚರ್ಮ ಬಹುಬೇಗ ತೇವಾಂಶ ಕಳೆದುಕೊಂಡು ಕೆಂಬಣ್ಣಕ್ಕೆ ತಿರುಗಿ, ಒಡೆದು ಕೊಳ್ಳುತ್ತದೆ. ತಲೆಯ ಭಾಗವಲ್ಲದೇ, ಮುಖ, ಕಿವಿ, ಎದೆ ಹಾಗೂ ಇತರೆ ಭಾಗಗಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

click me!