
ಬೆಂಗಳೂರು (ಮಾ. 14): ಬೆಂಗಳೂರು ವಿವಿಯ ಕೋಲಾರದ ಕನ್ನಡ ಸ್ಟಡಿ ಸೆಂಟರ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಡಿ.ಡಾಮಿನಿಕ್ ಎನ್ನುವವರು ಅಲ್ಲಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ೨೦೦೮ರಲ್ಲಿಯೇ ಉಳಿತಾಯ ಖಾತೆಯನ್ನು ತೆರೆದಿದ್ದರು. ಅವರ ಬಳಿ ಡೆಬಿಟ್ ಕಾರ್ಡ್ ಕೂಡ ಇತ್ತು. ಈ ಖಾತೆಯಲ್ಲಿಯೇ ಅವರ ಸಂಬಳದ ಹಣ ಜಮಾ ಆಗುತ್ತಿತ್ತು. ಇವರು ವಾಸ್ತವ್ಯ ಮಾಡುವುದು ಬೆಂಗಳೂರಿನಲ್ಲಿ. ಅವರು ಬೆಂಗಳೂರು ನಗರದಲ್ಲಿರುವ ಗ್ರಾಹಕ
ವೇದಿಕೆಯಲ್ಲಿ ಗ್ರಾಹಕ ರಕ್ಷಣೆ ಕಾಯ್ದೆ ಸೆಕ್ಷನ್ 12 ರ ಅಡಿಯಲ್ಲಿ ಎಸ್‌ಬಿಎಂ ವಿರುದ್ಧ ದೂರೊಂದನ್ನು ದಾಖಲಿಸುತ್ತಾರೆ. ತಮಗೆ ಅರಿವಿಲ್ಲದೆ ತಮ್ಮ ಖಾತೆಯಿಂದ ತೆಗೆದಿರುವ 80, 080 ರುಪಾಯಿಗಳನ್ನು ತಮಗೆ ಬಡ್ಡಿ ಸಹಿತ ಕೊಡಿಸಬೇಕು. ಬ್ಯಾಂಕಿನಿಂದ ಸೇವಾ ನ್ಯೂನತೆ ಆಗಿದೆ. ತಮಗಾಗಿರುವ ಮಾನಸಿಕ ಕಿರಿಕಿರಿಗೆ 10 ಸಾವಿರ ರು.ಮತ್ತು ಇತರ ವೆಚ್ಚವನ್ನು ಕೊಡಿಸಬೇಕು ಎಂದು ಕೋರುತ್ತಾರೆ.
ಅಪರಿಚಿತರು ಯಾರೋ ಇವರ ಖಾತೆಯಿಂದ ಹಣ ತೆಗೆದಿದ್ದರು. ಆಘಾತಗೊಂಡ ಅವರು ತಕ್ಷಣವೇ ಬ್ಯಾಂಕ್'ಗೆ ಇಂಟರ್‌ನೆಟ್ ಮೂಲಕ ದೂರನ್ನು ದಾಖಲಿಸಿದರು. ಅದೇ ದಿನ ಬ್ಯಾಂಕ್ ಶಾಖೆಗೂ ತೆರಳಿ ಮ್ಯಾನೇಜರ್‌ಗೆ ತಮ್ಮ
ಖಾತೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಬ್ಯಾಂಕ್‌ನಿಂದ ಹಣವನ್ನು ಹಿಂದಕ್ಕೆ ಪಡೆದ ದಾಖಲೆಯ ಪ್ರತಿಯನ್ನು ಡಾಮಿನಿಕ್ ಪಡೆದುಕೊಂಡರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಪ್ರತಿವಾದಿ ಬ್ಯಾಂಕ್ ದೂರುದಾರ ಡಾಮಿನಿಕ್ ಅವರಿಗೆ ಪತ್ರವೊಂದನ್ನು ಬರೆದು ಹಣವನ್ನು ಮರಳಿಸುವ ಸಂಬಂಧದಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿತು. ಈಗಾಗಲೇ ಬ್ಯಾಂಕ್ ತನಿಖೆ ನಡೆಸಿದೆ ಮತ್ತು ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ಇದುವರೆಗಿನ ಪತ್ತೇದಾರಿಯಿಂದ ನಕಲಿ ಕಾರ್ಡ್ ಬಳಸಿ ಹಣವನ್ನು ತೆಗೆಯಲಾಗಿದೆ ಎಂಬುದು ಸಾಬೀತಾಗಿಲ್ಲ. ಪೊಲೀಸರ ತನಿಖೆಯಿಂದ ಯಾವ ವರದಿ ಬರುತ್ತದೋ ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತು.
ಬ್ಯಾಂಕ್ ಸಾರ್ವಜನಿಕ ಕ್ಷೇತ್ರದ್ದು, ಭಾರತ ಸರಕಾರದ ಸ್ವಾಮಿತ್ವಕ್ಕೆ ಒಳಪಟ್ಟಿದ್ದು. ಸಾರ್ವಜನಿಕರು ಅದರ ಮೇಲೆ ವಿಶ್ವಾಸವಿಟ್ಟು ತಮ್ಮ ಹಣವನ್ನು ಅದರಲ್ಲಿಟ್ಟಿರುತ್ತಾರೆ. ಪ್ರಶ್ನೆಗೊಳಗಾಗಿರುವ ಹಿಂಪಡೆದ ಹಣವನ್ನು ತಾನು ಇಟ್ಟುಕೊಳ್ಳುವುದರಿಂದ ಅದರ ಶ್ರಿಮಂತಿಕೆಯೇನು ಹೆಚ್ಚುವುದಿಲ್ಲ. ಅವರ ಪಾಲಿನ ಯಾವುದೇ ನಿರ್ಲಕ್ಷ್ಯ ಅಥವಾ ಸೇವಾ ನ್ಯೂನತೆ ಇಲ್ಲದೆ ಅವರಿಗೆ ದಂಡ ವಿಧಿಸಲು ಬರುವುದಿಲ್ಲ. ಅಲ್ಲದೆ ಯಾವ ಎಟಿಎಂನಿಂದ ಹಣವನ್ನು ಹಿಂದಕ್ಕೆ ಪಡೆಯಲಾಗಿದೆಯೋ ಆ ಎರಡು ಬ್ಯಾಂಕ್’ಗಳನ್ನು ಇದರಲ್ಲಿ ಪ್ರತಿವಾದಿ ಮಾಡದೆ ಇರುವುದರಿಂದ ದೂರನ್ನು ವಜಾಗೊಳಿಸಬೇಕು ಎಂದು ವಾದಿಸಿತು.
ಈಗ ವೇದಿಕೆಯು ಬ್ಯಾಂಕ್‌ನಿಂದ ಸೇವಾ ನ್ಯೂನತೆ ತಲೆದೋರಿರುವುದನ್ನು ದೂರುದಾರರು ಸಾಬೀತುಪಡಿಸಿದ್ದಾರೆಯೆ, ಹಾಗಿದ್ದರೆ ಏನು ಪರಿಹಾರ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾಯಿತು. ವಾದಿ ಮತ್ತು ಪ್ರತಿವಾದಿಗಳು ಮಂಡಿಸಿದ ಪ್ರಮಾಣಪತ್ರ ಮತ್ತು ಖುದ್ದು ಹೇಳಿಕೆಗಳಿಂದ ವೇದಿಕೆಯು ಪ್ರತಿವಾದಿ ಬ್ಯಾಂಕ್‌ನಿಂದ ಸೇವಾ ನ್ಯೂನತೆ ತಲೆದೋರಿದೆ ಎಂಬ ನಿರ್ಣಯಕ್ಕೆ ಬಂತು. ಆರ್‌ಬಿಐನಿಂದ ಮಾರ್ಗಸೂಚಿ ಇಲ್ಲ ಎಂಬ ಕಾರಣ ನೀಡಿ ಬ್ಯಾಂಕ್ ಹಣ ನೀಡಿರಲಿಲ್ಲ. ಹಣ
ಕಳೆದುಕೊಂಡಿರುವುದರಲ್ಲಿ ದೂರುದಾರರ ತಪ್ಪೇನೂ ಇಲ್ಲ. ಹಣ ತೆಗೆದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೀಗಿರುವಾಗ ದೂರುದಾರರಿಗೆ ನಷ್ಟವನ್ನು ಹೊರಿಸುವುದು ಹೇಗೆ? ಇದು ಮೂರನೆ
ವ್ಯಕ್ತಿಯ ಕೃತ್ಯ. ಬ್ಯಾಂಕ್‌ನಲ್ಲಿ ಹಣವನ್ನು ಇಡುವುದು ವಿಶ್ವಾಸದ ಮೇಲೆ. ಕಾರಣ ಬ್ಯಾಂಕ್ ಮಾತ್ರ ಈ ಹಣಕ್ಕೆ ಹೊಣೆ. ದೂರುದಾರರು ತಮ್ಮ ಪಿನ್ ನಂಬರ್ ಅಥವಾ ಒಟಿಪಿಯನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಇಲ್ಲ.
ಆದರೆ ಬ್ಯಾಂಕ್ ಇಂದು ಆರ್‌ಬಿಐನ ಕೆಲವು ಮಾರ್ಗಸೂಚಿಗಳ ಪಟ್ಟಿಯನ್ನು ನೀಡಿದೆ.
ಅದರ ಪ್ರಕಾರ ಗ್ರಾಹಕನ ಶೂನ್ಯ ಬಾಧ್ಯತೆ ಯಾವಾಗ?
1. ಬ್ಯಾಂಕಿನಿಂದಲೇ ಮೋಸ, ನಿರ್ಲಕ್ಷ್ಯ, ಸೇವಾ ನ್ಯೂನತೆ ತಲೆದೋರಿದಾಗ (ಇದನ್ನು ಗ್ರಾಹಕ ಬ್ಯಾಂಕಿನ ಗಮನಕ್ಕೆ ತಂದರೂ ಸರಿ ತರದಿದ್ದರೂ ಸರಿ).
2. ಮೂರನೆ ವ್ಯಕ್ತಿ ಹಣ ಎತ್ತಿದ್ದರೆ, ದೋಷ ಬ್ಯಾಂಕಿನದೂ ಅಲ್ಲ ಗ್ರಾಹಕನದೂ ಅಲ್ಲ, ವ್ಯವಸ್ಥೆಯ ಇನ್ನೆಲ್ಲಿಯೋ ಇರುತ್ತದೆ. ಆಗ ಹಣ ಕಳೆದುಕೊಂಡ ಗ್ರಾಹಕ ಮೂರು ದಿನಗಳೊಳಗೆ ಬ್ಯಾಂಕಿಗೆ ತಿಳಿಸಬೇಕು ಮತ್ತು ಬ್ಯಾಂಕಿನಿಂದ
ಪ್ರತಿಕ್ರಿಯೆ ಪಡೆದುಕೊಳ್ಳಬೇಕು. ಆರ್‌ಬಿಐನ ಈ ಸುತ್ತೋಲೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದಲ್ಲಿ ಎಸ್‌ಬಿಎಂ ಗ್ರಾಹಕ ಡಾಮಿನಿಕ್ ಅವರಿಗೆ ೮೦೦೮೦ ರು.ಗಳನ್ನು ಶೇ.೯ರ ಬಡ್ಡಿಯೊಂದಿಗೆ (ಅವರ ಖಾತೆಯಿಂದ ಹಣ ಕಡಿತವಾದ ದಿನದಿಂದ ಸಂದಾಯ ಮಾಡುವ ದಿನದ ವರೆಗೆ) ನಾಲ್ಕು ವಾರಗಳೊಳಗೆ ನೀಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.