ಬಿ ಹ್ಯಾಪಿ, ನಿಯಂತ್ರಣದಲ್ಲಿಡಬಹುದು ಹೈ ಬಿಪಿ!

By Web DeskFirst Published Jul 7, 2019, 12:17 PM IST
Highlights

ಹೈ ಬಿಪಿ ಎಂದರೆ ಹಾರ್ಟ್ ಪ್ರಾಬ್ಲಂ, ಸ್ಟ್ರೋಕ್ ಭಯ ಜೊತೆಗೇ ಬರುತ್ತದೆ. ಹೀಗಾಗಿ, ಬಿಪಿಯನ್ನು ನಿಯಂತ್ರಣದಲ್ಲಿಡುವುದು ಮುಖ್ಯ. ಬಿಪಿ ಬರುವ ಮುನ್ನವೇ ಕೆಲ ಎಚ್ಚರಿಕೆ ಕ್ರಮ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಜಾಣತನ.

ಹೆಚ್ಚಿನ ಬಾರಿ ಹೈ ಬಿಪಿ ಎಂಬುದು ಸೈಲೆಂಟ್ ಕಿಲ್ಲರ್. ಸೂಚನೆ ನೀಡದೆ ಒಳಗೆ ತೆಪ್ಪಗೆ ಕುಳಿತಿರುತ್ತದೆ. ಆದರೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ಹೃದಯ ಬಡಿತ ಜೋರಾಗಿ, ಸುಸ್ತು, ತಲೆನೋವು, ಎದೆನೋವು ಇತ್ಯಾದಿ ಅಟಕಾಯಿಸಿಕೊಳ್ಳುತ್ತದೆ. ಆಗ ಹೆದರಿ ಮುದ್ದೆಯಾಗಿ ಆಸ್ಪತ್ರೆಗೆ ಓಡುತ್ತೀರಿ. ಅಲ್ಲಿ ತೋಳಿಗೆ ಬೆಲ್ಟ್ ಸುತ್ತಿ ಮೀನಿನ ರಿಕ್ಷಾದ ಪೋಂ ಪೋಂ ಹಾರ್ನ್‌ನಂಥ ಸ್ಕ್ವೀಜಿ ಕಫ್ ಹಿಡಿದು ಪುಸ್ ಪುಸ್ ಎನಿಸಿ, ಮೆಷಿನ್‌ನಲ್ಲಿ ಕಾಣೋ ನಂಬರ್ ನೋಡ್ತಿದಾರೆ ಡಾಕ್ಟರ್ ಅಂದ್ರೆ ಆ ಟೆನ್ಷನ್‌ಗೇ ಒಂದಿಷ್ಟು ಬಿಪಿ ಏರಬಹುದು! ಗರಿಷ್ಠ ಸಂಖ್ಯೆ 120ರ ಮೇಲಿದ್ರೆ ಹೈ ಬಿಪಿ ರಿಸ್ಕ್, 130ರ ಮೇಲಿದ್ರೆ ಸಂಖ್ಯೆ ಇಳಿಸೋಕೆ ಮಾತ್ರೆ ತಗೊಳ್ಬೇಕು ಅಂತ ಹೇಳ್ಬೋದು. ಆದ್ರೆ ಒಂದೋ ಎರಡೋ ದಿನ ಮಾತ್ರೆ ತಗೋ ಅಂದ್ರೆ ತಗೋಬಹುದು. ಜೀವಮಾನ ಪೂರ್ತಿ ಮಾತ್ರೆ ತಗೋ ಅಂದ್ರೆ ಯಾರಿಗೆ ಬೇಕಪ್ಪಾ ಸಹವಾಸ? ಇದ್ರ ಬದಲಿಗೆ ಬೇರೆ ಏನಾದ್ರೂ ಹೇಳಿ ಮಾಡ್ತೀನಿ, ಮಾತ್ರೆ ಸಹವಾಸ ಮಾತ್ರ ಬೇಡ ಅನ್ನೋರು ನೀವಾಗಿದ್ರೆ ಹೀಗೆ ಮಾಡಿ.

1. ಸರಿಯಾದ ತೂಕ ಕಾಯ್ದುಕೊಳ್ಳಿ.

ರಕ್ತದೊತ್ತಡ ಕಡಿಮೆ ಮಾಡಬೇಕೆಂದರೆ ವೈದ್ಯರು ಮೊದಲು ಹೇಳುವುದೇ ತೂಕ ಇಳಿಸಿ ಎಂದು. ತೂಕ ಹೆಚ್ಚಾದಷ್ಟೂ ಬಿಪಿ ಹೆಚ್ಚುವ ಸಾಧ್ಯತೆಗಳು ಜಾಸ್ತಿ. ಹಾಗಂತ ತೂಕ ಹೆಚ್ಚಾದೊಡನೆ ಬಿಪಿ ಹೆಚ್ಚುತ್ತದೆ, ತೂಕ ಇಳಿದೊಡನೆ ಬಿಪಿ ಇಳಿಯುತ್ತದೆ ಎಂದು ಕುರುಡಾಗಿ ನಂಬಬೇಡಿ. ಹೀಗಾಗಿ, ತೂಕ ಇಳಿಸುವುದೊಂದೇ ಗುರಿ ಮಾಡಿಕೊಳ್ಳುವ ಬದಲು ಆರೋಗ್ಯಕರ ಆಹಾರ ತಿನ್ನುವುದರತ್ತ ಗಮನ ಹರಿಸಿ. 

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

2. ಪೊಟಾಶಿಯಂ ಹಾಗೂ ಮೆಗ್ನೀಶಿಯಂಯುಕ್ತ ಆಹಾರ ಸೇವಿಸಿ.

ಹೈ ಬಿಪಿ ಕಡಿಮೆ ಮಾಡಲು ಸಾಧ್ಯವಾದಷ್ಟು ಸಸ್ಯಜನ್ಯ ಆಹಾರ ಸೇವಿಸಬೇಕು. ಅದರಲ್ಲೂ ಸಾಮಾನ್ಯವಾಗಿ ತಿನ್ನುತ್ತಿದ್ದ ತರಕಾರಿಯ ಮೂರು ಪಟ್ಟು ಹೆಚ್ಚು ತರಕಾರಿ ಸೇವಿಸಬೇಕು. ಹಾಗಂತ ತಿನ್ನುವುದು ಜಾಸ್ತಿ ಮಾಡುವುದು ಬೇಡ. ಅದೇ ಸಮಯದಲ್ಲಿ ಮಾಂಸಾಹಾರ ಹಾಗೂ ಅನ್ನ ಕಡಿಮೆ ಮಾಡಿ ಬ್ಯಾಲೆನ್ಸ್ ಮಾಡಿ. ಹೀಗೆ ಸಸ್ಯಜನ್ಯ ಆಹಾರ ಸೇವಿಸುವಾಗ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ಅಧಿಕವಿರುವ ಆಹಾರ ಆಯ್ದುಕೊಳ್ಳಿ. ಗೆಣಸು, ಪಾಲಕ್, ಬೀಟ್‌ರೂಟ್, ಮೊಳಕೆಕಾಳುಗಳಲ್ಲಿ ಈ ಮಿನರಲ್ಸ್ ಹೆಚ್ಚಿರುತ್ತದೆ. ದಿನಕ್ಕೆ ಕನಿಷ್ಠ 300 ಎಂಜಿಯಂತೆ ಮೂರು ತಿಂಗಳು ಮೆಗ್ನೀಶಿಯಂ ಸೇವಿಸಿದರೂ ಹೈ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ಮೆಗ್ನೀಶಿಯಂ ಒತ್ತಡ ಕಡಿಮೆ ಮಾಡಿ ರಿಲ್ಯಾಕ್ಸೇಶನ್ ಪ್ರೋತ್ಸಾಹಿಸುತ್ತದೆ. 

3. ಡ್ಯಾಶ್ ಡಯಟ್ ಫಾಲೋ ಮಾಡಿ

ಡಯಟರಿ ಅಪ್ರೋಚ್ ಟು ಸ್ಟಾಪ್ ಹೈಪರ್‌ಟೆನ್ಷನ್(ಡ್ಯಾಶ್). ಈ ಡಯಟ್‌ನಲ್ಲಿ ಹೇರಳವಾಗಿ ಹಣ್ಣುಗಳು, ತರಕಾರಿ ಹಾಗೂ ಲೋ ಫ್ಯಾಟ್ ಡೈರಿ ಉತ್ಪನ್ನಗಳ ಸೇವನೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಪ್ರೊಸೆಸ್ಡ್ ಫುಡ್ಸ್ ಹಾಗೂ ಕೊಲೆಸ್ಟೆರಾಲ್ ಹೊಂದಿರುವ ಆಹಾರಗಳು ಸಂಪೂರ್ಣ ನಿಷಿದ್ಧ. ಈ ಡಯಟ್ ಫಾಲೋ ಮಾಡಿ, ಸೋಡಿಯಂ ಸೇವನೆ (ಉಪ್ಪು) ಕಡಿಮೆ ಮಾಡಿದವರಲ್ಲಿ ಎರಡೇ ತಿಂಗಳಲ್ಲಿ ಕೊಲೆಸ್ಟೆರಾಲ್‌ನೊಂದಿಗೆ ಬಿಪಿ ಕೂಡಾ ಕಡಿಮೆಯಾದುದು ಸಾಬೀತಾಗಿದೆ. 

4. ಪ್ರೊಸೆಸ್ಡ್ ಫುಡ್ ಬೇಡವೇ ಬೇಡ

ಅದೆಷ್ಟೋ ವರ್ಷಗಳಿಂದ ಬಿಪಿ ಜಾಸ್ತಿ ಇದ್ದವರು ಉಪ್ಪನ್ನು ಮಿತಿಗೊಳಿಸಲು ಹೇಳಿಕೊಂಡು ಬರಲಾಗುತ್ತಲೇ ಇದೆ. ಹಾರ್ವರ್ಡ್‌ನ ಅಧ್ಯಯನವೊಂದರ ಪ್ರಕಾರ, ಉಪ್ಪು ಸೇವನೆ ಕಡಿಮೆ ಮಾಡಿದರೆ ವಿಶ್ವಾದ್ಯಂತ 280,000ದಷ್ಟು ಜೀವಗಳನ್ನು ಉಳಿಸಬಹುದು! ಹಾಗಂತ ಊಟಕ್ಕೆ ಚೂರೂ ಉಪ್ಪಿಲ್ಲದೆ ತಿನ್ನಿ ಎಂದಲ್ಲ. ನಮ್ಮ ದೇಹಕ್ಕೆ ಬಹುತೇಕವಾಗಿ ಸೋಡಿಯಂ ಹೋಗುವುದೇ ಪ್ರೋಸೆಸ್ಡ್ ಆಹಾರದಿಂದ. ಈ ಚಿಪ್ಸ್, ಕುರ್‌ಕುರೆ, ಸಂಸ್ಕರಿಸಿದ ಮಾಂಸ ಇನ್ನಿತರೆ ಸಂಸ್ಕರಿತ ಆಹಾರಗಳಲ್ಲಿ ಉಪ್ಪು ಹೇರಳವಾಗಿರುತ್ತದೆ. ಆದರೆ, ಉಪ್ಪೊಂದೇ ವಿಲನ್ ಅಲ್ಲ. ಹೃದಯ ಸಮಸ್ಯೆಗಳ ವಿಷಯದಲ್ಲಿ ಸಕ್ಕರೆ ಉಪ್ಪಿಗಿಂತ ದೊಡ್ಡ ವಿಲನ್. ಹಾಗಾಗಿ, ಸಕ್ಕರೆಯುತ ಆಹಾರಗಳನ್ನು ಆದಷ್ಟು ದೂರವಿಡಿ. ಸ್ವೀಟ್‌ಗಳು, ಕೋಲಾ, ಮಿರಿಂಡಾದಂಥ ತಂಪು ಪಾನೀಯಗಳು ಮುಂತಾದವಿಂದ ದೂರವಿರಿ. 

ಬ್ರೆಸ್ಟ್ ಚೆಕ್ ಮಾಡ್ಕೊಳ್ಳಿ: ಕ್ಯಾನ್ಸರ್ ಬಾರದಂತೆ ನೋಡ್ಕೊಳ್ಳಿ!

5. ಚಾಕೋಲೇಟ್ ತಿನ್ನಿ

ಅರೆ ಸಿಹಿ ತಿನ್ನಬೇಡಿ ಎಂದು ಚಾಕೋಲೇಟ್ ತಿನ್ನಿ ಎನ್ನುತ್ತಿರುವುದರಿಂದ ಆಶ್ಚರ್ಯವಾಗುತ್ತಿದೆಯೇ?  ಇದು ಸ್ವೀಟ್ ಚಾಕೋಲೇಟ್ ಅಲ್ಲ, ಡಾರ್ಕ್ ಚಾಕೋಲೇಟ್. ಡಾರ್ಕ್ ಚಾಕೋಲೇಟ್ ಸೇವನೆಯಿಂದ ಹೈ ಬಿಪಿ ಇಳಿಯುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಹಾಗಂತ ಬೇಕಾಬಿಟ್ಟಿ ತಿನ್ನದೆ ಮಿತಿಯಲ್ಲಿ ಡಾರ್ಕ್ ಚಾಕೋಲೇಟ್ ತಿನ್ನಿ.

6. ಒತ್ತಡ ಕಡಿಮೆಗೊಳಿಸಿ

ಒತ್ತಡವು ಬಿಪಿ ಹೆಚ್ಚು ಮಾಡುವುದರಲ್ಲಿ ಒಂದೇ ನಂಬರ್. ಹೀಗಾಗಿ, ಒತ್ತಡವನ್ನು ನಿಯಂತ್ರಿಸುವ ಮಾರ್ಗಗಳ ಮೊರೆ ಹೋಗಿ. ಮೆಡಿಟೇಶನ್, ವಾಕಿಂಗ್, ಯೋಗ ಮುಂತಾದ ತಂತ್ರಗಳಿಂದ ರಿಲ್ಯಾಕ್ಸ್ ಆಗುವುದನ್ನು ಅಭ್ಯಾಸ ಮಾಡಿ. ಉತ್ತಮ ನಿದ್ದೆ ಕೂಡಾ ಒತ್ತಡ ನಿಯಂತ್ರಿಸುತ್ತದೆ. ಇನ್ನು ಡ್ರಾಯಿಂಗ್, ಓದು, ಕ್ರಾಫ್ಟ್ ಇಂಥ ಹವ್ಯಾಸಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸುವುದಾದರೆ ಧ್ಯಾನದ ಬದಲಿಗೆ ಅವನ್ನೇ ಟ್ರೈ ಮಾಡಬಹುದು. 

click me!