ಯಶವಂತಪುರ ರೈಲ್ವೆ ನಿಲ್ದಾಣ ನವೀಕರಣ ಕಾರ್ಯ ಆರಂಭ

By Kannadaprabha NewsFirst Published Nov 29, 2022, 8:00 AM IST
Highlights

ಕಳೆದ ಜೂನ್‌ನಲ್ಲಿ ಅಡಿಗಲ್ಲು ಹಾಕಿದ್ದ ಪ್ರಧಾನಿ ಮೋದಿ, ದುಪ್ಪಟ್ಟು ಪ್ರಯಾಣಿಕರ ಸಾಮರ್ಥ್ಯ, ಆಕರ್ಷಕ ವಾಸ್ತುಶಿಲ್ಪ, 380 ಕೋಟಿ ವೆಚ್ಚದ ಅಭಿವೃದ್ಧಿ, 2025ಕ್ಕೆ ಕಾಮಗಾರಿ ಪೂರ್ಣ

ಬೆಂಗಳೂರು(ನ.29):  ಯಶಂವಂತಪುರ ರೈಲ್ವೆ ನಿಲ್ದಾಣವನ್ನು ದುಪ್ಪಟ್ಟು ಪ್ರಯಾಣಿಕರ ಸಾಮರ್ಥ್ಯ, ಆಕರ್ಷಕ ವಾಸ್ತುಶಿಲ್ಪದೊಂದಿಗೆ ಹಸಿರು ನಿಲ್ದಾಣವಾಗಿ ಪುನರಾಭಿವೃದ್ಧಿಗೊಳಿಸುವ ಕಾಮಗಾರಿಗೆ ಚಾಲನೆ ದೊರೆತಿದೆ.

ಬರೋಬ್ಬರಿ 130 ವರ್ಷಗಳಷ್ಟು ಹಳೆಯದಾದ ಯಶವಂತಪುರ ರೈಲು ನಿಲ್ದಾಣ ಬೆಂಗಳೂರಿನ ಎರಡನೇ ಅತೀ ದೊಡ್ಡ ಜನನಿಬಿಡ ರೈಲ್ವೆ ಟರ್ಮಿನಲ್‌ ಆಗಿದೆ. ಕಳೆದ ಜೂನ್‌ನಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಬೈಯ್ಯಪ್ಪನಹಳ್ಳಿ ಬಳಿಯ ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ಉದ್ಘಾಟನೆ ನೆರವೇರಿಸಿ ಯಶವಂತಪುರ, ದಂಡು (ಕಂಟೋನ್ಮೆಂಟ್‌) ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಕಳೆದ ತಿಂಗಳು ಯಶವಂತಪುರ ನಿಲ್ದಾಣದ ಪುನಶ್ಚೇತನ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿಲ್ದಾಣ ಮುಂಭಾಗ ನೂತನ ಕಟ್ಟಡ ಸೇರಿದಂತೆ ಸದ್ಯ ನಿಲ್ದಾಣದ ಮಾರ್ಪಾಡು ಕಾಮಗಾರಿ ಆರಂಭವಾಗಿದೆ. ಸದ್ಯ ಗುತ್ತಿಗೆ ಪಡೆದ ಏಜೆನ್ಸಿಯೇ ಯೋಜನೆಯನ್ನು ವಿನ್ಯಾಸಗೊಳಿಸಿ, ನಿರ್ಮಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದೆ.

ರೈಲ್ವೆ ಫ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ: ಜನದಟ್ಟಣೆ ತಗ್ಗಿಸಲು ಹೆಚ್ಚಿನ ಹಣ ಕೊಡಬೇಕಾ?

ಒಟ್ಟು 380 ಕೋಟಿ ರು. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಹೊಸದಾಗಿ ನಾಲ್ಕು ಅಂತಸ್ಥಿನ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡವು ಮೆಟ್ರೋ ನಿಲ್ದಾಣದ ಕಡೆಗೆ ನಿರ್ಮಾಣಗೊಳ್ಳುತ್ತಿದೆ. ಜತೆಗೆ ನಿಲ್ದಾಣದ ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ನಿರ್ಮಿಸಲಾಗುತ್ತಿದೆ. ಪ್ಲಾಟ್‌ಫಾಮ್‌ರ್‍ಗಳ ಮೇಲಿನ ಮಹಡಿಯಲ್ಲಿ ವಾಣಿಜ್ಯಮಳಿಗೆಗಳು, ಫುಡ್‌ ಕೋರ್ಟ್‌, ಮನರಂಜನಾ ಕೇಂದ್ರಗಳು ಇತ್ಯಾದಿ ಇರಲಿವೆ. ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರಿಗೆ ಸುಲಭವಾಗಿ ಪ್ಲಾಟ್‌ಫಾರಂ ದಾರಿ ಹುಡುಕಲು ಎಲ್‌ಇಡಿ ಆಧಾರಿತ ಫಲಕಗಳನ್ನು ಒದಗಿಸಲಾಗುತ್ತಿದೆ. ಖಾಸಗಿ ವಾಹನ ಮತ್ತು ಟ್ಯಾಕ್ಸಿಗಳ ಡ್ರಾಪ್‌ ಮತ್ತು ಪಿಕ್‌-ಅಪ್‌ ಪಾಯಿಂಟ್‌ಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿದೆ. ಮೆಟ್ರೋ ನಿಲ್ದಾಣದಿಂದ ನೇರ ರೈಲ್ವೆ ಫ್ಲಾಟ್‌ಫಾರಂಗೆ ಪಾದಚಾರಿ ಮೇಲ್ಸೇತುವೆ ಇರಲಿದೆ. ಜತೆಗೆ ನಿಲ್ದಾಣ ದಿವ್ಯಾಂಗ ಸ್ನೇಹಿಯಾಗಿರಲಿದೆ. ಲಿಫ್‌್ಟಗಳು ಮತ್ತು ವಿಶೇಷಚೇತನರಿಗೆ ಅನುಕೂಲಕರ ಶೌಚಾಲಯಗಳು ಇರಲಿವೆ.

ಹಸಿರಿನ ವಿನ್ಯಾಸ: ದುಪ್ಪಟ್ಟು ಸಾಮರ್ಥ್ಯ

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ’ಹಸಿರು’ ಕಟ್ಟಡ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ನೀರನ್ನು ಸಂರಕ್ಷಿಸಲು ಮಳೆ ನೀರು ಕೊಯ್ಲು ವ್ಯವಸ್ಥೆ ಇರಲಿದೆ. ಸದ್ಯ ಪ್ರಸ್ತುತ ಪ್ರತಿದಿನ 60,000 ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಿದ್ದಾರೆ. ಪುನರಾಭಿವೃದ್ಧಿಗೊಂಡ ಬಳಿಕ ನಿಲ್ದಾಣವು ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಓಡಾಟ ಸಾಮರ್ಥ್ಯ ಹೊಂದಲಿದೆ. ಕಾಮಗಾರಿಯು 2025ಕ್ಕೆ ಪೂರ್ಣಗೊಳ್ಳಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!